varthabharthi

ವಿಶೇಷ-ವರದಿಗಳು

ಗಾಂಧಿ ಕಗ್ಗೊಲೆ: ಕಾರಣ - ಪರಿಣಾಮ

ಗೋಡ್ಸೆಯ ಹೇಳಿಕೆಯನ್ನು ಮುದ್ರಿಸಿ ಪ್ರಚಾರ ಮಾಡಿದ ಸಂಘಪರಿವಾರ

ವಾರ್ತಾ ಭಾರತಿ : 24 Apr, 2019
ಕೋ. ಚೆನ್ನಬಸಪ್ಪ

ಭಾಗ-24

ನಾಥೂರಾಮ್ ಗೋಡ್ಸೆ ನ್ಯಾಯಾಲಯದಲ್ಲಿ 5 ಗಂಟೆ ಓದಿದ ನೂರಾರು ಪುಟಗಳ ಹೇಳಿಕೆಯನ್ನು ಯಾವ ಪತ್ರಿಕೆಯೂ ಪ್ರಕಟಿಸಬಾರದೆಂದು ಒಂದು ಆಜ್ಞೆಯನ್ನು ಹೊರಡಿಸಿತು. ಆ ಆಜ್ಞೆಯ ಸಿಂಧುತ್ವವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆಯಿಡಲಾಯಿತು. ನ್ಯಾಯಾಲಯ ಆ ಆಜ್ಞೆ ನ್ಯಾಯಬಾಹಿರವೆಂದು ತೀರ್ಮಾನಿಸಿತು. ಆದ್ದರಿಂದ ನಾಥೂರಾಮ್ ಗೋಡ್ಸೆಯ ಆ ಹೇಳಿಕೆ ಅಗತ್ಯವಾದದ್ದಕ್ಕಿಂತ ಹೆಚ್ಚು ಪ್ರಸಿದ್ಧಿ ಪಡೆಯಿತು. ಆರೆಸ್ಸೆಸ್ ಮತ್ತು ಹಿಂದೂ ಮಹಾಸಭೆಯ ದೃಷ್ಟಿಯಲ್ಲೇ ಮಹತ್ವ ಪಡೆಯಿತು. ಆ ಹೇಳಿಕೆಯ ಪೂರ್ಣ ಪಾಠವನ್ನು ಗೋಪಾಲ ಗೋಡ್ಸೆ ‘ಗಾಂಧೀಜಿಯನ್ನು ನಾನೇಕೆ ಕೊಂದೆ’ ಎಂಬ ಶೀರ್ಷಿಕೆಯಲ್ಲಿ (May it please your honour) ಪ್ರಕಟಿಸಿದ್ದಾನೆ. ಅದನ್ನು ಸಂಘಪರಿವಾರ ಮುದ್ರಿಸಿ ಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ!

ಆಪ್ಟೆಯ ಹೇಳಿಕೆಯನ್ನು ದಾಖಲಿಸಿಕೊಂಡ ಬಳಿಕ ನ್ಯಾಯಾಧೀಶ ಆತ್ಮಚರಣ ಆಪ್ಟೆಯನ್ನು ಪ್ರಶ್ನಿಸಿದರು. ಆಪ್ಟೆ ಜನವರಿ 25ರಂದು ‘ಡಿ. ನಾರಾಯಣ ರಾವ್’ ಮತ್ತು ‘ಎನ್. ವಿನಾಯಕ ರಾವ್’ ಎಂಬ ಸುಳ್ಳು ಹೆಸರಿನಿಂದ ಟಿಕೆಟ್ ತೆಗೆಸಿದ್ದು ನಿಜ ಎಂದು ಒಪ್ಪಿಕೊಂಡ. ‘‘ವಿಮಾನದ ಮೂಲಕ ಜನವರಿ 27ರಂದು ನಡುಹಗಲು ಒಂದು ಗಂಟೆಗೆ ದಿಲ್ಲಿ ತಲುಪಿದೆವು.’’ ಮತ್ತೆ ಕೇಳಿದ ಪ್ರಶ್ನೆಗಳಿಗೆ ಉತ್ತರವಾಗಿ ಆಪ್ಟೆ: ‘‘ದಿಲ್ಲಿಯಿಂದ ಗ್ವಾಲಿಯರ್‌ಗೆ ಬಂದೆ. ಡಾ.ಪರಚುರೆಯನ್ನು ಕಂಡೆ. ಅವರು ಆಯುಧ (ಪಿಸ್ತೂಲ್)ಕೊಡಿಸಿದರೆಂಬುದು ಸುಳ್ಳು. ಪ್ರದರ್ಶನಕ್ಕೆ ಸ್ವಯಂ ಸೇವಕರನ್ನು ಕಳಿಸುವರೋ ಎಂದು ಕೇಳಲು ಹೋಗಿದ್ದೆವು. ಅಲ್ಲಿ ಸಾಕಷ್ಟು ಜನ ಸಿಗಲಿಲ್ಲ. ಮುಂಬೈಗೆ ಹೋಗುವುದೇ ಒಳಿತೆಂದು ಗೋಡ್ಸೆ ಹೇಳಿದ್ದ. ನಾನು 30ರಂದು ಮುಂಬೈ ತಲುಪಿದೆ. ಜನವರಿ 31ರಂದು ಮತ್ತು ಫೆಬ್ರವರಿ 1ರಂದು ಚಂಬೂರು ನಿರಾಶ್ರಿತರ ಶಿಬಿರದಲ್ಲಿ, ಫೆಬ್ರವರಿ 2 ಮತ್ತು 3 ರಂದು ಸೀ ಗ್ರೀನ್ ಹೊಟೇಲ್‌ನಲ್ಲಿದ್ದೆ. ಫೆಬ್ರವರಿ 3ರಿಂದ 5 ರವರೆಗೆ ಎಲ್ಫಿನ್‌ಸ್ಟೋನ್ ಹೊಟೇಲಿನ ಅನೆಕ್ಸ್‌ನಲ್ಲಿದ್ದೆ. ಫೆಬ್ರವರಿ 5 ರಿಂದ 13ರವರೆಗೆ ಜಿ.ಎಂ.ಜೋಷಿಯವರ ಮನೆಯಲ್ಲಿದ್ದೆ. ಫೆಬ್ರವರಿ 13ರಂದು ಕರ್ಕರೆ ಮತ್ತು ನಾನು ಪೈರ್ಕೆಯ ಅಪೊಲೋ ಹೊಟೇಲಿನಲ್ಲಿ ಆರ್.ವಿಷ್ಣು ಮತ್ತು ಎನ್.ಕಾಶೀನಾಥ ಎಂಬ ಸುಳ್ಳು ಹೆಸರುಗಳಿಂದ ಸೇರಿಕೊಂಡೆವು. ಅಲ್ಲಿ ಸಿಐಡಿ ಪೊಲೀಸರು ನಮ್ಮನ್ನು ವಶಕ್ಕೆ ತೆಗೆದುಕೊಂಡರು.’’

ಈ ಕೊಲೆ ಮೊಕದ್ದಮೆಯ ಮತ್ತೊಬ್ಬ ಪ್ರಮುಖ ಆರೋಪಿ ಕರ್ಕರೆ.ಅವನು 37 ಪುಟಗಳ ಮರಾಠಿಯಲ್ಲಿ ಬರೆದ ತನ್ನ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಾದರಪಡಿಸಿದ. ನ್ಯಾಯಾಧೀಶರು ಕೇಳಿದ ಪ್ರಶ್ನೆಗಳಿಗೆ ಮಾತ್ರ ಉತ್ತರವಾಗಿ ಅವನೂ ಆಪ್ಟೆಯಂತೆ ಕೊಲೆಯಾದ ದಿನ ಅವನು ದಿಲ್ಲಿಯಲ್ಲಿ ಇರಲೇ ಇಲ್ಲ ಎಂದು ಉತ್ತರಿಸಿದ. ಪಿತೂರಿ ಮಾಡಿದರೆಂಬುದು ಶುದ್ಧ ಸುಳ್ಳೆಂದೂ, ಆ ಆರೋಪ ಅಸ್ಪಷ್ಟವಾಗಿದೆ ಎಂದು ಸಾಧಿಸಿದ. ಆದರೆ 1938 ರಿಂದಲೂ ಅವನು ಹಿಂದೂ ಮಹಾಸಭೆಯಲ್ಲಿ ಭಾಗವಹಿಸಿದ್ದನೆಂಬುದನ್ನು ಒಪ್ಪಿಕೊಂಡ.ಜನವರಿ 14 ರಂದು ಅವನನ್ನು ಪೊಲೀಸರು ಕೈದು ಮಾಡಿದರೆಂದು ಹೇಳಿದ.

ಈ ಮೊಕದ್ದಮೆಯ ಆರೋಪಿಗಳಲ್ಲೆಲ್ಲ ಅತ್ಯಂತ ಸಕ್ರಿಯ ಪಾತ್ರವಹಿಸಿದವನೆಂದರೆ ಈ ಕರ್ಕರೆ ಎಂಬುದು ಗಮನಕ್ಕೆ ಬಂದಿರಬಹುದು. ಇವನ ಡೆಕನ್ ಗೆಸ್ಟ್ ಹೌಸ್‌ನ ಉಪ್ಪರಿಗೆಯ ಮೇಲೆ ಶಸ್ತ್ರಸಂಗ್ರಹ ಇತ್ತೆಂದೂ ಗಾಂಧಿ ಹತ್ಯೆಯ ಸಂಚು ನಡೆದಿತ್ತೆಂದೂ ಪ್ರೊ. ಜೈನ್ ಅಂದಿನ ಗೃಹಮಂತ್ರಿ ಮೊರಾರ್ಜಿ ದೇಸಾಯಿಗೆ ದಿನಾಂಕ 21-1-48ರಂದೇ ಖುದ್ದಾಗಿ ತಿಳಿಸಿದ್ದರು. ಪ್ರೊ.ಜೈನ್ ಮತ್ತು ಸರ್ದಾರ್ ಪಟೇಲ್ ನ್ಯಾಯಾಲಯದಲ್ಲಿ ಆ ಬಗ್ಗೆ ಸಾಕ್ಷ ಹೇಳಿದ್ದರು. ಮೊರಾರ್ಜಿ ದೇಸಾಯಿ ಕೂಡ ಅದನ್ನು ಸಮರ್ಥಿಸಿದ್ದರು. ಈ ಅಂಶಗಳನ್ನು ನ್ಯಾಯಾಧೀಶ ಆತ್ಮಚರಣ ಈ ಆರೋಪಿಯ ಗಮನ ಸೆಳೆದು ಅವನ ಸಮಜಾಯಿಸಿ ಕೇಳಿದಾಗ ಕರ್ಕರೆ: ‘‘ಇದು ಸುಳ್ಳು. ಜನವರಿ 8ರಿಂದ 10ರವರೆಗೆ ನಾನು ಚಂಬೂರು ನಿರಾಶ್ರಿತರ ಶಿಬಿರದಲ್ಲಿ ಕೆಲಸ ಮಾಡುತ್ತಿದ್ದೆ.’’ ನ್ಯಾಯಾಧೀಶರು ‘‘ನೀನು ಜನವರಿ 15 ರಂದು ನಾಥೂರಾಮ್, ಆಪ್ಟೆ ಮತ್ತು ಬಡ್ಗೆ ದೀಕ್ಷಿತ ಮಹರಾಜರ ಮನೆಗೆ ಹೋಗಿ ಆಯುಧಗಳು ಬೇಕೆಂದು ಕೇಳಿದೆಯಂತೆ. ಏನು ಹೇಳುತ್ತೀ?’’ಎಂದು ಕೇಳಿದ ಪ್ರಶ್ನೆಗೆ ಉತ್ತರ: ‘‘ಅದೆಲ್ಲ ಸಂಪೂರ್ಣ ಅಸತ್ಯ. ಸುಳ್ಳು’’ಎಂದಿದ್ದ. ಪ್ರೊ.ಜೈನ್ ಮತ್ತು ಮೊರಾರ್ಜಿ ದೇಸಾಯಿ ಅವರು ನುಡಿದ ಸಾಕ್ಷವನ್ನು ಕುರಿತು ಕರ್ಕರೆಯ ಪರ ವಾದಿಸಿದ ವಕೀಲ ಇನಾಂದಾರ್ ‘‘ಮದನ್‌ಲಾಲ್‌ನೊಬ್ಬ ಮೂರ್ಖ.ಆದ್ದರಿಂದಲೇ ಅವನು ಗಾಂಧಿ ಕೊಲೆಯ ಪಿತೂರಿಯ ಬಗ್ಗೆ ಪ್ರೊ.ಜೈನರಿಗೆ ತಿಳಿಸಿದ. ಪ್ರೊ.ಜೈನ್ ಅವನಿಗಿಂತಲೂ ಹೆಚ್ಚು ಮೂರ್ಖ. ಮೊರಾರ್ಜಿ ದೇಸಾಯಿ ಮತ್ತು ಸರ್ದಾರ್ ಪಟೇಲರು ತಮ್ಮ ಕೆಲಸಕ್ಕೆ ಅಯೋಗ್ಯರು. ನಗರವಾಲಾ ಕೂಡ ಅಸಮರ್ಥ ಅಧಿಕಾರಿ. ಯಾಕೆಂದರೆ, ಜನವರಿ 21ರಂದೇ ಮೊರಾರ್ಜಿ ಮತ್ತು ಪ್ರೊ.ಜೈನ್‌ರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿಲ್ಲ.’’ ಎಂದು ಕಠಿಣ ಶಬ್ದಗಳಲ್ಲಿ ಅವರನ್ನು ಖಂಡಿಸಿದ್ದ. ಕರ್ಕರೆ ಎಂಥ ಕಪಟಿ, ಎಂಥ ಅಪ್ಪಟ ನಿರ್ಲಜ್ಜ ಸುಳ್ಳ ಎಂಬುದಕ್ಕೆ ಅವನು ನ್ಯಾಯಾಧೀಶರು ಕೇಳಿದ ಇನ್ನೊಂದು ಪ್ರಶ್ನೆಗೆ ಕೊಟ್ಟ ಉತ್ತರ: ‘‘ಜನವರಿ 15 ರಂದು ದಿಲ್ಲಿಗೆ ಹೋಗುವ ಮುಂಚೆ ನನಗೆ ಗೋಡ್ಸೆ ಗೊತ್ತೇ ಇರಲಿಲ್ಲ.ಆಪ್ಟೆ 1936ರಿಂದಲೂ ಗೊತ್ತು. ಮದನ್‌ಲಾಲ್‌ನನ್ನು 1947 ರಲ್ಲಿ ಕಂಡೆ.’’ ಕರ್ಕರೆ ಅಹಮದ್ ನಗರ ಜಿಲ್ಲೆಯ ಹಿಂದೂ ಮಹಾಸಭೆಯ ಕಾರ್ಯದರ್ಶಿ ಹೈದರಾಬಾದ್ ರಜಾಕಾರ ಚಳವಳಿಯ ಕಾಲದಲ್ಲಿ ಹೈದರಾಬಾದ್‌ಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿದವನು, ಆಪ್ಟೆ-ನಾಥೂರಾಮ್ ಆಪ್ತ ಗೆಳೆಯರು. ‘ಅಗ್ರಣಿ’ ಮತ್ತು ‘ಹಿಂದೂ ರಾಷ್ಟ್ರ ’ಪತ್ರಿಕೆ ಪ್ರಕಟಿಸುತ್ತಿದ್ದ ಯಮಳರು. ಅವರಲ್ಲಿ ಆಪ್ಟೆ 1936ರಿಂದ ಗೊತ್ತಂತೆ! ಗೋಡ್ಸೆ ಜನವರಿ 15ರವರೆಗೂ ಗೊತ್ತೇ ಇರಲಿಲ್ಲವಂತೆ!! ಇಂಥ ನಖಶಿಖಾಂತ ಹಿಂದೂ ಮಹಾಸಭಾ ಕಾರ್ಯಕರ್ತನಾಗಿದ್ದವನಿಗೆ ನಾಥೂರಾಮ್ ಗೊತ್ತಿಲ್ಲವೆಂದರೆ ಅದನ್ನು ಯಾವ ಮೂರ್ಖ ನಂಬಬಹುದು? ಇನ್ನು ಡಾ. ಪರಚುರೆಯ ವಿರುದ್ಧವಾಗಿ ಅವನು ಗ್ವಾಲಿಯರ್ ಮಿಲಿಟರಿ ಕಾರಾಗೃಹದಲ್ಲಿ ಇದ್ದಾಗ, ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಬಿ.ಆರ್.ಅತಲ್ ಅವರ ಮುಂದೆ ಕ್ರಿ.ಪ್ರೊ. ಕೋಡ್ 164ನೇ ಸೆಕ್ಷನ್ ಪ್ರಕಾರ ಕೊಟ್ಟ ತಪ್ಪೊಪ್ಪಿಗೆಯೇ ಪ್ರಬಲವಾದ ಸಾಕ್ಷ.ಈಗಾಗಲೇ ಗಮನಿಸಿರುವಂತೆ ಮ್ಯಾಜಿಸ್ಟ್ರೇಟರು ಶಾಸನದಲ್ಲಿ ನಿರೂಪಿಸಿರುವಂತೆ, ತಪ್ಪೊಪ್ಪಿಗೆ ಹೇಳಿಕೆಯನ್ನು ದಾಖಲಿಸುವಾಗ ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ಚಾಚೂತಪ್ಪದೆ ಅನುಸರಿಸಿದ್ದರು. ಬ್ರಿಟಿಷ್ ಆಡಳಿತೆಯ ಕಾಲದಲ್ಲಿ ಮ್ಯಾಜಿಸ್ಟ್ರೇಟರು ಸೆ.164ರ ಕೆಳಗೆ ತಪ್ಪೊಪ್ಪಿಗೆ ಹೇಳಿಕೆಯನ್ನು ದಾಖಲಿಸುವಾಗ ಬಹು ಎಚ್ಚರಿಕೆಯಿಂದ ಕಡುನಿಷ್ಠೆಯಿಂದ ನಡೆದುಕೊಳ್ಳುತ್ತಿದ್ದರು. ಅವರು ನ್ಯಾಯಾಲಯದಲ್ಲಿ ಸಾಕ್ಷ ನುಡಿದು ತಾವು ಅನುಸರಿಸಿದ ರೀತಿ, ಕ್ರಮ ಎಚ್ಚರಿಕೆಯನ್ನು ಹೇಳಿದ್ದರು. ಐ.ಸಿ.ಎಸ್.ಪದವೀಧರರಾಗಿದ್ದ ಹಿರಿಯ ಸೆಷನ್ಸ್ ನ್ಯಾಯಾಧೀಶರಾಗಿದ್ದ ಆತ್ಮಚರಣರು ಸಾಕ್ಷಿಯನ್ನು ಪ್ರತ್ಯಕ್ಷ ಕಂಡಿದ್ದರು. ತಪ್ಪೊಪ್ಪಿಗೆಯ ಬಗ್ಗೆ ಅವರು ಆರೋಪಿ ಪರಚುರೆಯನ್ನು ಪ್ರಶ್ನಿಸಿದಾಗ ಆ ಜಗಭಂಡ: ‘‘ನಾನು ಆ ಹೇಳಿಕೆಯನ್ನು ಕೊಡಲಿಲ್ಲ. ನಾನು ಸೆರೆಮನೆಯಲ್ಲಿದ್ದಾಗ ಪೊಲೀಸರು ಚಿತ್ರಹಿಂಸೆ ನೀಡಿ ಬಲಾತ್ಕಾರವಾಗಿ ನನ್ನ ಸಹಿ ಪಡೆದುಕೊಂಡಿದ್ದಾರೆ.’’ ಎಂಬುದಾಗಿ ಸಾರಾಸಗಟು ಆ ತಪ್ಪೊಪ್ಪಿಗೆಯನ್ನು ತಿರಸ್ಕರಿಸಿದ್ದ. ಈ ಹೇಳಿಕೆಯ ಕುರಿತು ಅವನ ಪರ ವಕಾಲತ್ತು ವಹಿಸಿ ವಾದಿಸಿದ ಇನಾಂದಾರ: ‘‘ಏಳು ಪುಟಗಳಷ್ಟು ದೀರ್ಘವಾದ ಈ ಹೇಳಿಕೆಯನ್ನು ಬರೆದುಕೊಳ್ಳಲು ಮೂರು ಗಂಟೆ ಹಿಡಿಯಿತೆಂದು ಹೇಳುತ್ತೀರಿ. ಏಳು ಪುಟಗಳನ್ನು ಮೂರು ಗಂಟೆಯಲ್ಲಿ ಬರೆದುಕೊಳ್ಳಲು ಸಾಧ್ಯವೇ? ಪರಚುರೆ ಆ ಹೇಳಿಕೆ ಕೊಡಲಿಲ್ಲ. ಮ್ಯಾಜಿಸ್ಟ್ರೇಟರು ತಮ್ಮ ಕೊಠಡಿಯಲ್ಲಿ ಕುಳಿತು ಮೊದಲೇ ಬರೆದುಕೊಂಡಿದ್ದ ಈ ಸುದೀರ್ಘ ಹೇಳಿಕೆಗೆ ಆರೋಪಿ ಪರಚುರೆಯ ಸಹಿ ಪಡೆದುಕೊಂಡಿದ್ದಾರೆ. ಪೊಲೀಸರು ಆರೋಪಿಗೆ ಚಿತ್ರ ಹಿಂಸೆ ಕೊಟ್ಟು, ಹೆದರಿಸಿ ಸಹಿ ಹಾಕಿಸಿದ್ದಾರೆ. ಮ್ಯಾಜಿಸ್ಟ್ರೇಟರು ಪೊಲೀಸರ ಹಸ್ತಕರಾಗಿ ಕಾರ್ಯವೆಸಗಿದ್ದಾರೆ.’’ಎಂದು ವಾದಿಸಿದ್ದ. ಆರೋಪಿಯ ಉತ್ತರವನ್ನು, ಅವನ ಪರ ವಕೀಲರ ವಾದವನ್ನು ತಿರಸ್ಕರಿಸಿ ನ್ಯಾಯಾಧೀಶರು, ಆ ಹೇಳಿಕೆ ಸ್ವಇಚ್ಛೆಯಿಂದ ಯಾವ ನಿರ್ಬಂಧ, ಹೆದರಿಕೆ ಇಲ್ಲದೆ ಕೊಟ್ಟದೆಂದು ಅಭಿಪ್ರಾಯಪಟ್ಟು ಪರಚುರೆಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಶಿಕ್ಷೆಯ ವಿರುದ್ಧವಾಗಿ ಪಂಜಾಬ್ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಮಾಡಿಕೊಂಡಾಗ, ಉಚ್ಚ ನ್ಯಾಯಾಲಯದ ಮೂವರು ನ್ಯಾಯಮೂರ್ತಿಗಳಲ್ಲಿ ಇಬ್ಬರು-ನ್ಯಾಯಮೂರ್ತಿ ಎನ್.ಭಂಡಾರಿ, ನ್ಯಾಯಮೂರ್ತಿ ಜಿ.ಡಿ.ಖೋಸ್ಲಾ ಪರಚುರೆಯ ಸೆಕ್ಷನ್ 164ರ ಹೇಳಿಕೆಯನ್ನು ನಿಯಮಾನುಸಾರ ಶಾಸನ ಸಮ್ಮತವಾಗಿ ದಾಖಲಿಸಲಾಗಿದೆ ಎಂದು ಅಭಿಪ್ರಾಯಪಟ್ಟು, ಅದನ್ನು ದಾಖಲಿಸಿದ ಮ್ಯಾಜಿಸ್ಟ್ರೇಟರನ್ನು ಪ್ರಶಂಸಿಸಿದ್ದರು. ಆದರೆ ಅಪೀಲು ವಿಚಾರಣೆ ಮಾಡಿದ ಪೂರ್ಣಪೀಠದ ಇನ್ನೊಬ್ಬ ನ್ಯಾಯಮೂರ್ತಿ ಶ್ರೀ ಅಚ್ಛ್ರುರಾಮ್ ಮಹಾಶಯರು ಪೊಲೀಸರು ಪ್ರೊ.ಪರಚುರೆಗೆ ಚಿತ್ರಹಿಂಸೆ ಕೊಟ್ಟು ನಾಝೀ ಸೈನಿಕರಂತೆ ವರ್ತಿಸಿದರೆಂದು ಕಟುಶಬ್ದಗಳಲ್ಲಿ ಖಂಡಿಸಿದರು.ಇಬ್ಬರು ನ್ಯಾಯಮೂರ್ತಿಗಳು ಅದು ಸ್ವಇಚ್ಛೆಯಿಂದ ಮಾಡಿದ ಹೇಳಿಕೆ ಎಂದು ಅಭಿಪ್ರಾಯಪಟ್ಟರೂ ಆರೋಪಿ ಅದನು ್ನಮಾಡಿಯೇ ಇಲ್ಲ ಎಂದು ತಿರುಗಿಬಿದ್ದಿರುವುದರಿಂದ ಸಂಶಯದ ಸೌಲಭ್ಯ ಕೊಟ್ಟು ಅವನನ್ನು ದೋಷಮುಕ್ತ ಮಾಡಿದರು. ಅವನನ್ನು ಶಿಕ್ಷೆಯಿಂದ ಪಾರು ಮಾಡಿದ ಮೇಲೆ ಆ ನ್ಯಾಯವಾದಿ ಇನಾಂದಾರ ಒಂದು ಪುಸ್ತಕ ಬರೆದು ತನ್ನ ವೃತ್ತಿ ಚಾತುರ್ಯವನ್ನು ಸ್ವಪ್ರಶಂಸೆ ಮಾಡಿಕೊಂಡಿದ್ದಾನೆ!

ಹೀಗೆ ಶಾಸನಾನುಸಾರ ಎಲ್ಲ ಆರೋಪಿಗಳ ಹೇಳಿಕೆಯನ್ನೂ ದಾಖಲಿಸಿಕೊಂಡ ನಂತರ ಎರಡೂ ಪಕ್ಷಗಳ-ಫಿರ್ಯಾದಿ ಮತ್ತು ಆರೋಪಿತರ ವಾದವಿವಾದಗಳನ್ನು ನ್ಯಾಯಾಧೀಶರು ಆಲಿಸಿದರು.ಸರಕಾರದ ಪರ ಹಿರಿಯ ನ್ಯಾಯವಾದಿ ಸಿ.ಕೆ.ದಫ್ತರಿ ಡಿಸೆಂಬರ್ 1, 1948ರಿಂದ ಡಿಸೆಂಬರ್ 9ನೆಯ ತಾರೀಕಿನವರೆಗೆ (ರಜಾದಿನ ಒಂದನ್ನು ಬಿಟ್ಟು)ವಾದಿಸಿದರು. ಆರೋಪಿಗಳ ಪರವಾಗಿ ಹಿರಿಯ ವಕೀಲರು 10ನೇ ಡಿಸೆಂಬರ್‌ನಿಂದ 30ನೇ ತಾರೀಖಿನವರೆಗೆ (ರಜಾದಿನಗಳನ್ನು ಬಿಟ್ಟು) ವಾದಿಸಿದರು. ಹಿಂದೆ ಗಮನಿಸಿರುವಂತೆ ಸಾಕ್ಷಿಗಳ ಸಾಕ್ಷ ಒಟ್ಟು 696 ಪುಟಗಳಷ್ಟು ಪ್ರಾಸಿಕ್ಯೂಷನ್ ಪರ 354 ದಸ್ತಾವೇಜುಗಳು, ಕೃತ್ಯಕ್ಕೆ ಸಂಬಂಧಿಸಿದ ಅಗತ್ಯವಾದ 80 ವಸ್ತುಗಳನ್ನು, ಆರೋಪಿತರ ಪರವಾಗಿ 118 ದಸ್ತಾವೇಜುಗಳನ್ನು ನ್ಯಾಯಾಲಯದಲ್ಲಿ ಸಾದರಪಡಿಸಲಾಗಿತ್ತು. ಈ ಎಲ್ಲ ಸಾಕ್ಷವನ್ನು ನ್ಯಾಯಾಧೀಶರು ಕೂಲಂಕಷವಾಗಿ ಪರಿಶೀಲಿಸಿ ಆದಷ್ಟು ಶೀಘ್ರವಾಗಿ ತೀರ್ಪು ಕೊಡುವುದಾಗಿ ವಾಯಿದೆ ಹಾಕಿದರು.

ಆರೋಪಿಗಳು ಹೇಳಿಕೆ ಕೊಟ್ಟಾಗ ಒಂದು ವಿದ್ಯಮಾನ ನಡೆಯಿತು. ಅದನ್ನು ಗಮನಿಸುವುದು ಅಗತ್ಯ. ನಾಥೂರಾಮ್ ಗೋಡ್ಸೆ ನ್ಯಾಯಾಲಯದಲ್ಲಿ 5 ಗಂಟೆ ಓದಿದ ನೂರಾರು ಪುಟಗಳ ಹೇಳಿಕೆಯನ್ನು ಯಾವ ಪತ್ರಿಕೆಯೂ ಪ್ರಕಟಿಸಬಾರದೆಂದು ಒಂದು ಆಜ್ಞೆಯನ್ನು ಹೊರಡಿಸಿತು. ಆ ಆಜ್ಞೆಯ ಸಿಂಧುತ್ವವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆಯಿಡಲಾಯಿತು. ನ್ಯಾಯಾಲಯ ಆ ಆಜ್ಞೆ ನ್ಯಾಯಬಾಹಿರವೆಂದು ತೀರ್ಮಾನಿಸಿತು. ಆದ್ದರಿಂದ ನಾಥೂರಾಮ್ ಗೋಡ್ಸೆಯ ಆ ಹೇಳಿಕೆ ಅಗತ್ಯವಾದದ್ದಕ್ಕಿಂತ ಹೆಚ್ಚು ಪ್ರಸಿದ್ಧಿ ಪಡೆಯಿತು. ಆರೆಸ್ಸೆಸ್ ಮತ್ತು ಹಿಂದೂ ಮಹಾಸಭೆಯ ದೃಷ್ಟಿಯಲ್ಲೇ ಮಹತ್ವ ಪಡೆಯಿತು. ಆ ಹೇಳಿಕೆಯ ಪೂರ್ಣ ಪಾಠವನ್ನು ಗೋಪಾಲ ಗೋಡ್ಸೆ ‘ಗಾಂಧೀಜಿಯನ್ನು ನಾನೇಕೆ ಕೊಂದೆ’ ಎಂಬ ಶೀರ್ಷಿಕೆಯಲ್ಲಿ (May it please your honour) ಪ್ರಕಟಿಸಿದ್ದಾನೆ. ಅದನ್ನು ಸಂಘಪರಿವಾರ ಮುದ್ರಿಸಿ ಗಾಂಧೀ ಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ! ಅದೇ ಕಾಲಕ್ಕೆ ಗಾಂಧಿ ಹತ್ಯೆ ಕೃತ್ಯ ಆರೆಸ್ಸೆಸ್‌ನಿಂದ ಆಗಿಲ್ಲವೆಂದೂ ಪ್ರತಿಭಟಿಸುತ್ತಿದ್ದಾರೆ.

(ಶನಿವಾರದ ಸಂಚಿಕೆಗೆ ಮುಂದುವರಿಯುವುದು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)