varthabharthi

ನಿಮ್ಮ ಅಂಕಣ

ಮಾಧ್ಯಮಗಳು ನಿಷ್ಪಕ್ಷವಾಗಿ ವರ್ತಿಸಲಿ

ವಾರ್ತಾ ಭಾರತಿ : 24 Apr, 2019
-ಲಿಂಗರಾಜರಾವ್ ಜಾಧವ್, ಕೆ. ಆರ್. ಮೊಹಲ್ಲಾ, ಮೈಸೂರು

ಮಾನ್ಯರೇ,

ಕರ್ನಾಟಕದ ಎಲ್ಲಾ 28 ಸೀಟುಗಳಿಗೆ ಎರಡೂ ಹಂತದ ಮತದಾನ ಮುಗಿಯಿತು. ಇನ್ನಾದರೂ ನಮ್ಮ ಕನ್ನಡ ಮಾಧ್ಯಮಗಳು ನಿಷ್ಪಕ್ಷವಾಗಿ ವರ್ತಿಸುತ್ತವೆ ಎಂದು ಭಾವಿಸೋಣವೇ? ರಾಜ್ಯಮಟ್ಟದ ಬೆಳಗಿನ ಕನ್ನಡ ಪತ್ರಿಕೆಗಳಲ್ಲಿ ಕೇವಲ ಎರಡೇ ಎರಡು ಬೆಳಗಿನ ಪತ್ರಿಕೆಗಳು (ಪ್ರಜಾವಾಣಿ, ವಾರ್ತಾಭಾರತಿ) ಮಾತ್ರ ಈ ವರೆಗೆ ನಿಷ್ಪಕ್ಷವಾಗಿ ಚುನಾವಣಾ ವರದಿ ಕೊಡುತ್ತಿದ್ದವು. ಉಳಿದ ರಾಜ್ಯಮಟ್ಟದ ಪತ್ರಿಕೆಗಳು ಸವರ್ಣೀಯರ ಒಡೆತನದಲ್ಲಿ ಇದ್ದು ಅವು ಕೇವಲ ಬಿಜೆಪಿಯ ಮುಖವಾಣಿಯಂತೆ ವರ್ತಿಸುತ್ತಿದ್ದವು. ವಾಟ್ಸ್‌ಆ್ಯಪ್‌ಗಿಂತಲೂ ಹೆಚ್ಚು ಪೂರ್ವಗ್ರಹ ಪೀಡಿತ ವರದಿಗಳು, ಲೇಖನಗಳು ಹಾಗೂ ಅಪ್ಪಟ ಸುಳ್ಳು ಸುದ್ದಿಗಳು ಈ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಈಗ ಚುನಾವಣೆ ಮುಗಿದಿರುವುದರಿಂದ ಇನ್ನಾದರೂ ನೈಜ ನಿಷ್ಪಕ್ಷ ಸುದ್ದಿಗಳನ್ನು ಪ್ರಕಟಿಸಲು ಅಡ್ಡಿ ಇಲ್ಲ ತಾನೇ! ಇನ್ನುಳಿದ ನಾಲ್ಕು ಹಂತದ ಚುನಾವಣೆಗಳು ಕರ್ನಾಟಕಕ್ಕೆ ಅನ್ವಯವಾಗುವುದಿಲ್ಲ. ಹಾಗಾಗಿ ಕನ್ನಡ ಪತ್ರಿಕೆಗಳಲ್ಲಿ ಬರುವ ಸುದ್ದಿಗಳು ಯಾವುದೇ ಅಭ್ಯರ್ಥಿಯ ಸೋಲು-ಗೆಲುವಿನ ಮೇಲೆ ಪರಿಣಾಮ ಬೀರುವುದಿಲ್ಲ. ಆದುದರಿಂದ ಇನ್ನಾದರೂ ನಿಷ್ಪಕ್ಷ ಸುದ್ದಿಗಳು ಪ್ರಕಟವಾಗಲಿ. ಭಾರತ ಎದುರಿಸುತ್ತಿರುವ ನೈಜ ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಯಾಕೆ ಯಾವುದೇ ನೇತಾರ ಮಾತನಾಡುತ್ತಿಲ್ಲ? ಸ್ವಂತ ಸಾಧನೆ ಏನೂ ಇಲ್ಲದ್ದರಿಂದ ದೇಶದ ಅತ್ಯಚ್ಚ ಪದವಿಯಲ್ಲಿ ಇರುವವರೇ ನಿರ್ಲಜ್ಜವಾಗಿ ನೀತಿ ಸಂಹಿತೆ ಉಲ್ಲಂಘಿಸಿ ನಮ್ಮ ಸೇನಾಪಡೆಯ ಹೆಸರಲ್ಲಿ ಮತಯಾಚನೆ ಮಾಡುವ ಅನಿವಾರ್ಯ ಯಾಕೆ ಉಂಟಾಯಿತು? ಎಂಬ ಬಗ್ಗೆ ವಿಶ್ಲೇಷಣೆ ನಡೆಯಲಿ. ಭಯೋತ್ಪಾದನೆಯ ಆರೋಪ ಹೊತ್ತಿರುವವರಿಗೆ ಭೋಪಾಲ್‌ನಲ್ಲಿ ಪಕ್ಷದ ಟಿಕೆಟ್ ಕೊಡುವ ದರ್ದು ಯಾಕೆ ಉಂಟಾಯಿತು? ಪುಲ್ವಾಮ ಉಗ್ರ ದಾಳಿಯಲ್ಲಿ ಭಾರತೀಯರದೇ ಒಳಗಿನವರ ಕೈವಾಡ ಇರುವ ಶಂಕೆ ಬಲವಾಗುತ್ತಿರುವುದರಿಂದ ಉನ್ನತ ಪದವಿಯಲ್ಲಿರುವವರ ಜನಪ್ರಿಯತೆ ದಿಢೀರನೆ ಇಳಿಯುತ್ತಿದ್ದು, ಅದನ್ನು ತಡೆಯಲು ಭಯೋತ್ಪಾದನೆ ಆರೋಪ ಹೊತ್ತಿರುವವರಿಗೆ ಪಕ್ಷ ಟಿಕೆಟ್ ಕೊಟ್ಟಿತೇ? ಮೋದಿಯ ಮೇಲೆ ಆರೆಸ್ಸೆಸ್ ವಿಶ್ವಾಸ ಕಳೆದುಕೊಂಡಿರುವುದಕ್ಕೆ ಇದು ಸಾಕ್ಷಿಯೇ? ಎಂಬ ಕುರಿತು ವಿಶ್ಲೇಷಣೆ ಆಗಲಿ. ಹೀಗೆಯೇ ಕನ್ನಡ ಟಿವಿ ಚಾನೆಲ್‌ಗಳೂ ಹಿಂದಿನ ಆರು ತಿಂಗಳಿಂದ ಒಂದೇ ಸಮನೆ ಕೇವಲ ಒಂದೇ ಪಾರ್ಟಿಯ ವಕ್ತಾರರಂತೆ ವರ್ತಿಸುತ್ತಾ ಅರಚಿ ಕೂಗಿ ಆರ್ಭಟಿಸಿ ನಮ್ಮ ಕಿವಿ ತೂತು ಮಾಡಿ, ಕನ್ನಡ ವೀಕ್ಷಕರನ್ನು ಬೋರು ಹೊಡೆಸಿದ್ದಾಯಿತು. ಚೂಯಿಂಗ್ ಗಮ್ಮಿನಂತೆ ಒಂದೇ ವಿಷಯವನ್ನು ಅಗಿದು ಜಗಿದು ವೀಕ್ಷಕರಿಗೆ ರೇಜಿಗೆ ಹುಟ್ಟಿಸಿದ್ದಾಯಿತು. ಇನ್ನಾದರೂ ಈ ಸುದ್ದಿ ಚಾನೆಲ್‌ಗಳು ‘‘ಹಿಂದೂ-ಮುಸ್ಲಿಂ-ಪಾಕಿಸ್ತಾನ್’’ ಇವೇ ಶಬ್ದಗಳ ಸುತ್ತ ಗಿರಕಿ ಹೊಡೆಯುವುದನ್ನು ನಿಲ್ಲಿಸಿ ನೈಜ ನಿಷ್ಪಕ್ಷ ಸುದ್ದಿಗಳನ್ನು ವೀಕ್ಷಕರಿಗೆ ಕೊಡಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)