varthabharthi

ನಿಮ್ಮ ಅಂಕಣ

ಪ್ರಜ್ಞಾ ಸಿಂಗ್ ಭೋಪಾಲಕ್ಕೆ ಶಾಪವಾಗಬಹುದು!

ವಾರ್ತಾ ಭಾರತಿ : 25 Apr, 2019
ನ. ಸುಂದರಮೂರ್ತಿ

ಭಾಜಪ ಪ್ರಜ್ಞಾ ಸಿಂಗ್ ಠಾಕೂರ್‌ರನ್ನು ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ತನ್ನ ಅಭ್ಯರ್ಥಿಯಾಗಿ ನಿಲ್ಲಿಸಿ, ಕೋಮು ಧ್ರುವೀಕರಣದ ರಾಜಕಾರಣವನ್ನು ಮುಂದುವರಿಸಿದರೆ 1984ರ ಭೋಪಾಲದ ವಿಷ ಅನಿಲ ದುರಂತಕ್ಕಿಂತ ಇನ್ನೂ ತೀಕ್ಷ್ಣವಾದ, ದೇಶವನ್ನೇ ವಿಭಜಿಸುವ ವಿಷಗಾಳಿ ದೇಶವನ್ನು ಆವರಿಸುವುದು ಖಂಡಿತ.


ಹಿಂದಿ ಬೆಲ್ಟ್, ಗುಜರಾತ್, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಚುನಾವಣೆ ಸಮೀಪಿಸಿದೆ. 2014ರ ಚುನಾವಣೆಯಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಡ, ಗುಜರಾತ್, ರಾಜಾಸ್ಥಾನ ಮತ್ತು ಮಹಾರಾಷ್ಟ್ರ - ಎಂಟು ರಾಜ್ಯಗಳಲ್ಲಿ ಭಾಜಪ ಒಟ್ಟು 273 ಸ್ಥಾನಗಳಲ್ಲಿ 246ನ್ನು ತನ್ನದಾಗಿಸಿಕೊಂಡಿತು; ಅಂದರೆ ಶೇಕಡ 90ಕ್ಕಿಂತ ಹೆಚ್ಚಿನ ಜಯ ಪಡೆಯಿತು. 2019ರ ಚುನಾವಣೆಯಲ್ಲಿ ಇದು ಸಾಧ್ಯವಾಗಲಾರದು. ಇತ್ತೀಚಿನ ಸಮೀಕ್ಷೆಗಳ ಅನುಸಾರ ಭಾಜಪಕ್ಕೆ ಮೇಲ್ಕಂಡ ಎಂಟು ರಾಜ್ಯಗಳಲ್ಲಿ 80ರಿಂದ 100 ಸ್ಥಾನಗಳಲ್ಲಿ ಪರಾಭವ ಉಂಟಾಗಬಹುದು. ಇದರ ಅರ್ಥ ಮೇಲ್ಕಂಡ ಎಂಟು ರಾಜ್ಯಗಳಲ್ಲಿ ಭಾಜಪದ ಗೆಲ್ಲುವ ಸಾಧ್ಯತೆ ಶೇ.30ರಿಂದ ಶೇ.36ರಷ್ಟು ಕಡಿಮೆಯಾಗಬಹುದು. ಮೋದಿ ಅಲೆ ಏನೂ ಕಾಣಬರದು.

ವಾಸ್ತವಾಂಶವೇನೆಂದರೆ, ಮೋದಿಯವರ ವಿರುದ್ಧವಾದ ವಿಚಾರಗಳೇ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿವೆ. ಯಾವ ಪಕ್ಷ ಅಥವಾ ರಂಗಕ್ಕೆ ಅಧಿಕಾರ ಸಿಗಬಹುದು, ಆಡಳಿತ ನಡೆಸುವ ಅವಕಾಶ ಒದಗಬಹುದು ಎಂದು ಇಂದಿಗೆ ಹೇಳಲು ಸಾಧ್ಯವಿಲ್ಲ. ದೇಶದ ಇಂದಿನ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಗಮನಿಸಿದರೆ ನರೇಂದ್ರ ಮೋದಿ ಪಕ್ಷ ಅಧಿಕಾರದಿಂದ ವಂಚಿತವಾಗುವ ಸಾಧ್ಯತೆಯೇ ಹೆಚ್ಚು. ಏನೆಲ್ಲ ಮಾಡಬಾರದು ಅವನ್ನೆಲ್ಲ ಮಾಡಿ ಅಧಿಕಾರವನ್ನು ಮುಂದುವರಿಸಿಕೊಂಡು ಹೋಗುವ ದುಸ್ಸಾಹಸವನ್ನು ಭಾಜಪ ಮಾಡುತ್ತಿದೆ.

ಉತ್ತರ ಭಾರತ ಹಾಗೂ ಹಿಂದಿ ಭಾಷಿಕ ಪ್ರದೇಶಗಳಲ್ಲಿ ಮೇ 10ನೇ ತಾರೀಖಿನವರೆಗೂ ಮತದಾನ ನಡೆಯಲಿದೆ. ಈ ಭಾಗದಲ್ಲಿ ಹಿಂದುತ್ವದ ಭಾವನೆಗಳನ್ನು ಕೆರಳಿಸುವ ಪ್ರಯತ್ನಗಳನ್ನು ಭಾಜಪ ಪ್ರಜ್ಞಾಪೂರ್ವಕವಾಗಿ ಮಾಡುತ್ತಿದೆ. ಅಭಿವೃದ್ಧಿ ಮತ್ತು ಬದಲಾವಣೆಯ ಮಾತುಗಳು ಕೇಳಬರುತ್ತಿಲ್ಲ. ಮಾಯವಾಗಿಬಿಟ್ಟಿವೆ! ಕೋಮು ಧ್ರುವೀಕರಣದ ರಾಜಕಾರಣ ತನಗೆ ಅತ್ಯಂತ ಅನುಕೂಲಕರ ಎಂದು ಭಾಜಪ ಭಾವಿಸುತ್ತದೆ. ತನ್ನೆಲ್ಲ ಪಿಡುಗುಗಳಿಗೆ ಕೋಮು ಧ್ರುವೀಕರಣದ ರಾಜಕಾರಣವೇ ಸಿದ್ಧೌಷದ, ರಾಮಬಾಣ ಎಂದು ಭಾಜಪ ಅಂದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ, ಭಾಜಪ ಅಧ್ಯಕ್ಷ ಅಮಿತ್‌ಶಾ, ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಭಾಜಪದ ಹಲವಾರು ಪ್ರಮುಖರು ಇತ್ತೀಚೆಗೆ ಆಡುತ್ತಿರುವ ಮಾತುಗಳು, ಮಾಡುತ್ತಿರುವ ಕೆಲಸಗಳೆಲ್ಲವೂ ಕೋಮು ಧ್ರುವೀಕರಣವನ್ನೇ ಆಧಾರವಾಗಿಟ್ಟುಕೊಂಡಿವೆ. ಇದಕ್ಕೆ ಇನ್ನೊಂದು ಸಾಕ್ಷಿ, ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಭೋಪಾಲದಿಂದ ಕಣಕ್ಕಿಳಿಸುವ ಯೋಚನೆ. ಇಲ್ಲಿಯವರೆಗಿನ ಅವರ ಕಾರ್ಯ ಚಟುವಟಿಕೆಗಳನ್ನು ಗಮನಿಸಿದಾಗ ಅವರನ್ನು ಸಾಧ್ವಿ ಎಂದು ಕರೆಯುವುದೂ ಉಚಿತವೆನಿಸುವುದಿಲ್ಲ.

ಪ್ರಜ್ಞಾ ಸಿಂಗ್ ಠಾಕೂರ್ ಮಾಲೆಗಾಂವ್ ಸ್ಫೋಟದ ಆರೋಪಿ, ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ಮಾಲೆಗಾಂವ್‌ನಲ್ಲಿ ಸೆಪ್ಟಂಬರ್ 29, 2008 ಬಾಂಬ್ ಸ್ಫೋಟವಾಯಿತು. ಈ ದುರಂತದಲ್ಲಿ ಆರು ಜನ ಅಮಾಯಕರು ಸಾವನ್ನಪ್ಪಿ, ನೂರಕ್ಕಿಂತಲೂ ಹೆಚ್ಚಿನ ಜನ ಗಾಯಗೊಂಡರು. ಈ ಹೇಯ ಕೃತ್ಯಕ್ಕೆ ಸಂಬಂಧ ಪಟ್ಟು ಪ್ರಜ್ಞಾ ಸಿಂಗ್‌ರನ್ನು ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (Maharashtra Control of Organised Crime Act - MCOCA) ಅಡಿಯಲ್ಲಿ ಬಂಧಿಸಲಾಗಿತ್ತು. ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (Unlawful Activities Prevention Act - UAPA) ಅನ್ವಯ ಆಕೆಯ ಮೇಲಿರುವ ಆರೋಪಗಳು ಬಹಳ ಗಂಭೀರವಾದವು. ಈ ಆರೋಪಗಳಿಂದ ಆಕೆ ಇನ್ನೂ ಮುಕ್ತವಾಗಿಲ್ಲ. ಆಕೆಯ ಮೇಲಿನ ಆರೋಪಗಳಿಗೆ ಅಗತ್ಯವಿರುವಷ್ಟು ಆಧಾರಗಳಿವೆ ಎಂದು ಮುಂಬೈನಲ್ಲಿರುವ ಎನ್‌ಐಎ (National Investigation Agency) ವಿಶೇಷ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಕೇಸ್‌ನ ಮೇಲೆ ನೀರೆರಚಲು ಒತ್ತಡ ಬಂತು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲಿಯಾನ್ ಹೇಳಿದ ವಿಚಾರವೂ ಇದೆ.

ಆಕೆಯ ಮೇಲಿನ ಆರೋಪಗಳನ್ನು ವಿಚಾರಣೆ ಮಾಡಿದವರಲ್ಲಿ ಪ್ರಮುಖರು ಹೇಮಂತ್ ಕರ್ಕರೆ, ಭಯೋತ್ಪಾದನಾ ನಿಗ್ರಹ ದಳ (Anti-Terrorist Squad - ATS)ದ ಮುಖ್ಯಸ್ಥ. ದಕ್ಷ ಹಾಗೂ ನಿಷ್ಠಾವಂತ ಅಧಿಕಾರಿ. ಮುಂಬೈನಲ್ಲಿ 2008ರಲ್ಲಿ ನಡೆದ 26/11 ಉಗ್ರರ ದಾಳಿಗಳ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಹೇಮಂತ್ ಕರ್ಕರೆ ಸಾವನ್ನಪ್ಪಿಹುತಾತ್ಮರಾದರು. ಮಾಲೆಗಾಂವ್ ಬಾಂಬ್ ಸ್ಫೋಟಗಳ ಮೂರು ತಿಂಗಳ ನಂತರ ಮುಂಬೈನ 26/11 ಸರಣಿ ಸ್ಫೋಟಗಳು ನಡೆಯಿತು. ಮುಂಬೈ ಸ್ಫೋಟಗಳಲ್ಲಿ 174 ಜನ ಸಾವಿಗೀಡಾಗಿ, 1,300 ಜನ ಗಾಯಗೊಂಡರು. ನೂರಾರು ಜನರನ್ನು ಕಾಪಾಡುವ ಪ್ರಯತ್ನದಲ್ಲಿ ಹೇಮಂತ್ ಕರ್ಕರೆ ತನ್ನ ಪ್ರಾಣವನ್ನೇ ತ್ಯಾಗ ಮಾಡಿದರು. ಕರ್ಕರೆ ಬಗ್ಗೆ ಕುಪಿತಗೊಂಡಿದ್ದ ಪ್ರಜ್ಞಾ ಸಿಂಗ್ ಎಪ್ರಿಲ್ 19ರಂದು ಬಹಿರಂಗವಾಗಿ ಆಡಿದ ಮಾತು, ‘‘ಕರ್ಕರೆ ಸತ್ತಿದ್ದು ನನ್ನ ಶಾಪದಿಂದ. ರಾವಣನಂತೆ, ಕಂಸನಂತೆ ವರ್ತಿಸಿದ ಕರ್ಕರೆ ಮತ್ತು ಅವನ ಮನೆ ಮಂದಿ ಸರ್ವನಾಶವಾಗಲಿ ಅಂತ ಶಾಪ ನೀಡಿದ್ದೆ. (ತುಮಾರ್ಹ ಸರ್ವನಾಶ್ ಹೋಗಾ!) ನಾನು ಸೆರೆಮನೆ ಸೇರಿದ ಮೂರು ತಿಂಗಳ ಒಳಗಾಗಿ ಕರ್ಕರೆ ಉಗ್ರರಿಂದ ಸಾವನ್ನಪ್ಪಿದ. ಅದು ಅವನ ಕರ್ಮ!’’ ಎಂತಹ ನಾಚಿಕೆಗೇಡಿನ ಮಾತುಗಳು.

ಪ್ರಜ್ಞಾ ಸಿಂಗ್ ಠಾಕೂರ್ ಸಾಧ್ವಿಯೋ ಡಾಕಿಣಿಯೋ ಎಂಬ ಶಂಕೆ ಈಗ ದೂರ ಸರಿದಿದೆ. ಆದರೂ ನರೇಂದ್ರ ಮೋದಿಯವರು ಪ್ರಜ್ಞಾ ಸಿಂಗ್ ಠಾಕೂರ್ ಭೋಪಾಲ್ ಲೋಕಸಭಾ ಕ್ಷೇತ್ರದ ಭಾಜಪ ಅಭ್ಯರ್ಥಿಯಾಗಿ ಸ್ಪರ್ಧಿಸುವುದನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರಾಚೀನ ಹಿಂದೂ ನಾಗರಿಕತೆ ಹಾಗೂ ಸಂಸ್ಕೃತಿಯ ಗೌರವದ ಸಂಕೇತ ಪ್ರಜ್ಞಾ ಸಿಂಗ್ ಎಂದು ಮೋದಿ ಬಣ್ಣಿಸಿದ್ದಾರೆ. ಇಂತಹ ವ್ಯಕ್ತಿಗಳಿಗೆ ಮತ್ತು ಪಕ್ಷಗಳಿಗೆ ಮತ ನೀಡುವುದರ ಬಗ್ಗೆ ಜನ ತೀರ್ಮಾನಿಸಲಿ. ಭೋಪಾಲ್‌ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದಿಗ್ವಿಜಯ ಸಿಂಗ್. ಹಿಂದೂ ಕೋಮುವಾದದ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿದವರು. ನರೇಂದ್ರ ಮೋದಿ ನೇತೃತ್ವದ ಭಾಜಪ ಇಸ್ಲಾಂ ವಿರೋಧ ಹಿಂದುತ್ವ ಧ್ರುವೀಕರಣದ ರಾಜಕೀಯವನ್ನು ಅನುಷ್ಠಾನಗೊಳಿಸುತ್ತಿದೆ. ದೇಶದ ಏಕತೆಯನ್ನೇ ಮುರಿಯುವ, ಜನರನ್ನು ಒಡೆಯುವ ಈ ಕೋಮು ರಾಜಕೀಯ ಅತ್ಯಂತ ಅಪಾಯಕಾರಿ.

1984ರ ಡಿಸೆಂಬರ್ 3ರಂದು ಭೋಪಾಲದ ಯೂನಿಯನ್ ಕಾರ್ಬೈಡ್ ಕಂಪೆನಿಯ ಕಾರ್ಖಾನೆಯಲ್ಲಿ 30 ಟನ್ ಮಿಥೇನ್ ಐಸೋಸೈನೇಟ್ ಎಂಬ ವಿಷ ಅನಿಲ ಸೋರಿಕೆಯಾಗಿ, ಸುಮಾರು 1,500 ಜನ ಮೃತ ಪಟ್ಟರು ಹಾಗೂ 6 ಲಕ್ಷಕ್ಕಿಂತಲೂ ಹೆಚ್ಚು ಜನ ಹಾನಿಗೊಳಗಾದರು. ವಿಶ್ವಸಂಸ್ಥೆ ವರದಿಯ ಪ್ರಕಾರ ಇದು 20ನೇ ಶತಮಾನದ ಅತಿದೊಡ್ಡ ಕೈಗಾರಿಕಾ ದುರಂತ. ಭಾಜಪ ಪ್ರಜ್ಞಾ ಸಿಂಗ್ ಠಾಕೂರ್‌ರನ್ನು ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ತನ್ನ ಅಭ್ಯರ್ಥಿಯಾಗಿ ನಿಲ್ಲಿಸಿ, ಕೋಮು ಧ್ರುವೀಕರಣದ ರಾಜಕಾರಣ ವನ್ನು ಮುಂದುವರಿಸಿದರೆ 1984ರ ಭೋಪಾಲದ ವಿಷ ಅನಿಲ ದುರಂತಕ್ಕಿಂತ ಇನ್ನೂ ತೀಕ್ಷ್ಣವಾದ, ದೇಶವನ್ನೇ ವಿಭಜಿಸುವ ವಿಷಗಾಳಿ ದೇಶವನ್ನು ಆವರಿಸುವುದು ಖಂಡಿತ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)