varthabharthi

ವಿಶೇಷ-ವರದಿಗಳು

ಶಾಹಿದ್ ರಝಾ ಖಾನ್ ಬಗ್ಗೆ ನಿಮಗೆಷ್ಟು ಗೊತ್ತು?

ಮದರಸ ಕಲಿಕೆ+ಜೆಎನ್ ಯು ಶಿಕ್ಷಣ= ಯುಪಿಎಸ್ಸಿ ರ‌್ಯಾಂಕ್ ವಿಜೇತ ಸಾಧಕ!

ವಾರ್ತಾ ಭಾರತಿ : 25 Apr, 2019

ಬಿಹಾರದ ಮದ್ರಸ ಪದವೀಧರ ಮತ್ತು ಜವಹರಲಾಲ್ ನೆಹರೂ ವಿವಿ (ಜೆಎನ್ ಯು) ವಿದ್ಯಾರ್ಥಿ ಶಾಹಿದ್ ರಝಾ ಖಾನ್, ಯುಪಿಎಸ್ಸಿ ಪರೀಕ್ಷೆಯಲ್ಲಿ 751ನೆ ರ‌್ಯಾಂಕ್ ಗಳಿಸಿದ್ದಾರೆ. ಐಎಎಸ್, ಐಪಿಎಸ್ ಅಥವಾ ಐಎಫ್ ಎಸ್ ಅಧಿಕಾರಿಯಾಗುವುದು ಅವರ ಗುರಿ.

ಯುಪಿಎಸ್ಸಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ಮದ್ರಸ ವಿದ್ಯಾರ್ಥಿಗಳಲ್ಲಿ ರಝಾ ಖಾನ್ ಕೂಡ ಒಬ್ಬರಾಗಿದ್ದಾರೆ. ತಮ್ಮ ಯುಪಿಎಸ್ಸಿ ಸಾಧನೆಯ ಶ್ರೇಯವನ್ನು ಖಾನ್ ಮದ್ರಸದ ಅಧ್ಯಯನಕ್ಕೆ ಸಲ್ಲಿಸುತ್ತಾರೆ. ಮದ್ರಸದಲ್ಲಿ ಕಳೆದ ದಿನಗಳು ತನಗೆ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಹೇಗೆ ಮತ್ತು ಬದುಕಿನ ಎಲ್ಲಾ ಘಟ್ಟಗಳಲ್ಲೂ ಶಾಂತಚಿತ್ತವಾಗಿ ಹೇಗೆ ಇರಬೇಕೆಂದು ಕಲಿಸಿತು ಎಂದವರು ಹೇಳುತ್ತಾರೆ.

“ನಾವು ಕುರ್ ಆನ್ ಮತ್ತು ಇತರ ಅರೆಬಿಕ್ ಸಾಹಿತ್ಯಗಳನ್ನು ನೆನಪಿಟ್ಟುಕೊಳ್ಳುತ್ತೇವೆ. ಯುಪಿಎಸ್ಸಿಯಲ್ಲಿ ಇದು ನನಗೆ ಸಹಕಾರಿಯಾಯಿತು” ಎಂದು ಖಾನ್ ಹೇಳುತ್ತಾರೆ. ಯುಪಿಎಸ್ಸಿಗಾಗಿ ರಝಾ ಖಾನ್ 7 ವರ್ಷಗಳ ಕಾಲ ಸಿದ್ಧತೆ ನಡೆಸಿದ್ದರು.

ಉತ್ತರ ಪ್ರದೇಶದ ಮುಬಾರಕ್ ಪುರದಲ್ಲಿರುವ ಅಲ್ ಜಮೀಯತುಲ್ ಅಶ್ರಾಫಿಯಾ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಅವರು 2011ರಲ್ಲಿ ದಿಲ್ಲಿಗೆ ಬಂದ ನಂತರ ಅವರ ಪ್ರಯಾಣ ಆರಂಭವಾಯಿತು. ಜೆಎನ್ ಯುನಲ್ಲಿ ಅರೆಬಿಕ್ ಸಾಹಿತ್ಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಗಳಿಸಿದರು. ಇದೀಗ ಅವರು ವಿವಿಯಲ್ಲಿ ಇಸ್ಲಾಮಿಕ್ ಅಧ್ಯಯನದಲ್ಲಿ ಪಿಎಚ್ ಡಿ ಮಾಡುತ್ತಿದ್ದಾರೆ.

ತನ್ನ ಯಶಸ್ಸಿನಲ್ಲಿ ಜೆಎನ್ ಯು ಮಹತ್ವದ ಪಾತ್ರ ವಹಿಸಿದೆ ಎಂದು ಖಾನ್ ಹೇಳುತ್ತಾರೆ. ಮದ್ರಸಕ್ಕೆ ಹೋಗುವುದರಿಂದ ಒಬ್ಬ ವ್ಯಕ್ತಿ ಲೌಕಿಕ ಶಿಕ್ಷಣವನ್ನು ಪಡೆಯಲು ಸಾಧ್ಯವಿಲ್ಲ ಎನ್ನುವುದು ಸುಳ್ಳು ಎಂದವರು ಹೇಳಿದರು.

“ನನ್ನ ಧಾರ್ಮಿಕ ವಿಷಯಗಳ ಮೇಲಿದ್ದ ಆಸಕ್ತಿಯೇ ನಾನು ಮದ್ರಸಕ್ಕೆ ಹೋಗುತ್ತಾ ವಿದ್ಯಾಭ್ಯಾಸ ನಡೆಸುತ್ತಿರುವುದಕ್ಕೆ ಕಾರಣ. 10ನೆ ತರಗತಿವರೆಗೆ ನಾನು ನನ್ನ ಗ್ರಾಮದ ಸ್ಥಳೀಯ ಮದ್ರಸಕ್ಕೆ ತೆರಳಿದ್ದೆ. ಮದ್ರಸದಲ್ಲಿ ನಾನು ಇಸ್ಲಾಮಿಕ್ ಅಧ್ಯಯನಗಳು, ತತ್ವಶಾಸ್ತ್ರ ಹಾಗು ಇತರ ವಿಚಾರಗಳನ್ನು ಕಲಿತೆ” ಎಂದವರು ಹೇಳುತ್ತಾರೆ.

ಕೃಪೆ: theprint.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)