varthabharthi

ಸಂಪಾದಕೀಯ

ಅಕ್ಷಯ್ ಕುಮಾರ್ ಸಂದರ್ಶನ: ಖಿಲಾಡಿಯೋಂಕಾ ಖಿಲಾಡಿ-2

ವಾರ್ತಾ ಭಾರತಿ : 26 Apr, 2019

 ಚುನಾವಣೆಯ ಘೋಷಣೆಯಾಯಿತೆಂದರೆ, ಆಡಳಿತ ಪಕ್ಷದ ನೇತೃತ್ವವನ್ನು ವಹಿಸಿದ ನಾಯಕ ಜನರ ಪ್ರಶ್ನೆಗಳಿಗೆ ಮುಖಾಮುಖಿಯಾಗುವ ಕಾಲ. ಉಳಿದ ಸಮಯಗಳಲ್ಲಿ ಜನರಿಂದ ತಲೆಮರೆಸಿಕೊಂಡು ಓಡಾಡುತ್ತಾ ಸಮಯ ಕಳೆದ ನಾಯಕ ಚುನಾವಣೆಯ ಸಮಯದಲ್ಲಿ ಜನರನ್ನು ಎದುರಿಸಲೇ ಬೇಕಾಗುತ್ತದೆ. ಐದು ವರ್ಷಗಳಲ್ಲಿ ತನ್ನ ಸಾಧನೆಗಳನ್ನು ಮುಂದಿಡುತ್ತಾ ಮತ್ತು ತನ್ನ ವೈಫಲ್ಯಗಳನ್ನು ಸಮರ್ಥಿಸಿಕೊಳ್ಳುತ್ತಾ ಜನರ ಮುಂದೆ ಮತ ಯಾಚನೆ ಮಾಡಬೇಕಾದ ದೀನ ಸ್ಥಿತಿಯಲ್ಲಿ ನಿಲ್ಲಬೇಕಾದ ಕಾಲ ಅದು. ಆದರೆ ಚುನಾವಣೆ ಘೋಷಣೆಯಾದ ದಿನದಿಂದ ತನ್ನ ಸಾಧನೆಗಳನ್ನು ಜನರ ಮುಂದೆ ತೆರೆದಿಡುವಲ್ಲಿ ಪ್ರಧಾನಿ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ.

ಬದಲಿಗೆ ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ ಮಡಿದ ಸೈನಿಕರ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ. ಮಗದೊಂದೆಡೆ ಈ ದೇಶದ ವಿರುದ್ಧ ಬಾಂಬು ಸ್ಫೋಟ ನಡೆಸಿದ ಶಂಕಿತ ಉಗ್ರರನ್ನು ಚುನಾವಣೆಗಿಳಿಸಿ, ಉಗ್ರವಾದಿಗಳನ್ನು ದೇಶಭಕ್ತರೆಂದು ಬಿಂಬಿಸಿ, ಹುತಾತ್ಮರಾದ ಯೋಧರನ್ನು ಅವಮಾನಿಸುತ್ತಿದ್ದಾರೆ. ಭಯೋತ್ಪಾದಕರ ವಿರುದ್ಧ ಹೋರಾಡಿ ಪ್ರಾಣವನ್ನೇ ತ್ಯಾಗ ಮಾಡಿದ ಹುತಾತ್ಮರನ್ನು ಶಂಕಿತ ಭಯೋತ್ಪಾದಕಿಯೊಬ್ಬಳು ಸಾರ್ವಜನಿಕವಾಗಿ ಅವಮಾನಿಸಿದರೆ, ಪ್ರಧಾನಿ ಮೋದಿ ಆ ಬಗ್ಗೆ ತುಟಿ ಬಿಚ್ಚುವುದಿಲ್ಲ. ಕರ್ಕರೆ ಮತ್ತು ಅವರ ತಂಡ ಭಯೋತ್ಪಾದನೆಗೆ ಬಲಿಯಾದಂತೆಯೇ ಪುಲ್ವಾಮದಲ್ಲಿ ನಲವತ್ತು ಮಂದಿ ಯೋಧರು ಉಗ್ರರ ದಾಳಿಗೆ ಬಲಿಯಾದರು. ಭದ್ರತಾ ನಿರ್ಲಕ್ಷವೇ ಅವರ ಸಾವಿಗೆ ಕಾರಣವಾಗಿದ್ದರೂ, ಆ ಕುರಿತಂತೆ ಈವರೆಗೆ ಸೈನಿಕರ ಕುಟುಂಬದ ಮುಂದೆಯಾಗಲಿ, ದೇಶದ ಮುಂದೆಯಾಗಲಿ ಸರಕಾರ ಕ್ಷಮೆಯಾಚಿಸಿಲ್ಲ.

ಕಳೆದ ನಾಲ್ಕುವರ್ಷಗಳ ಆಡಳಿತದಲ್ಲಿ ಈ ದೇಶದ ಜನರು ಸಾಕಷ್ಟು ಸಂಕಟಗಳನ್ನು ಅನುಭವಿಸಿದ್ದಾರೆ. ನೋಟು ನಿಷೇಧಕ್ಕಾಗಿ ಜನರು ಭಾರೀ ಬೆಲೆ ತೆತ್ತಿದ್ದಾರೆ. ಜನರು ಅದರಿಂದ ದೇಶಕ್ಕಾದ ಲಾಭಗಳನ್ನು ಪ್ರಧಾನಿ ವಿವರಿಸುವ ಕ್ಷಣಗಳಿಗಾಗಿ ಕಾಯುತ್ತಿದ್ದಾರೆ. ಜಿಎಸ್‌ಟಿಯಿಂದ ವ್ಯಾಪಾರ, ಉದ್ಯಮಗಳಿಗಾಗಿ ಭಾರೀ ಹಾನಿಯಾಗಿದೆ. ಗೋಸಾಕಣೆ ಮಾಡಿ ಜೀವನ ಮಾಡುತ್ತಿದ್ದ ರೈತರು, ನಕಲಿ ಗೋರಕ್ಷಕ ಉಪಟಳ ಮತ್ತು ಗೋ ಸಾಗಾಟದ ಅಡಚಣೆಗಳಿಂದ ನಷ್ಟಕ್ಕೊಳಗಾಗಿದ್ದಾರೆ. ಅಲ್ಪಸಂಖ್ಯಾತರು ಆತಂಕದ ದಿನಗಳಲ್ಲಿ ಜೀವಿಸುತ್ತಿದ್ದಾರೆ. ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಬೆಲೆಗಳು ದುಬಾರಿಯಾಗಿವೆ. ಆದರೆ ದುರದೃಷ್ಟವಶಾತ್ ಇವುಗಳಿಗೆ ಉತ್ತರಿಸಬೇಕಾಗಿದ್ದ ಪ್ರಧಾನಿ ಮೋದಿ, ಬಾಲಿವುಡ್ ನಟನ ಜೊತೆಗೆ ‘ಮಾವಿನ ಹಣ್ಣು’ ತಿಂದ ತನ್ನ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಹೌದು, ದೇಶಾದ್ಯಂತ ಚುನಾವಣಾ ಪ್ರಚಾರದ ಅಬ್ಬರ ನಡೆಯುತ್ತಿರುವ ಸಂದರ್ಭದಲ್ಲಿ ಕೊನೆಗೂ ನರೇಂದ್ರ ಮೋದಿಯವರು ಸಂದರ್ಶನವನ್ನು ನೀಡಿದರು. ಪ್ರಧಾನಿ ಮೋದಿ ನಾಯಕನಾಗಿ ನಟಿಸಿದ ಕಾಮಿಕ್ ಪುಸ್ತಕಗಳು, ಟಿವಿ ಧಾರಾವಾಹಿಗಳು, ಸಿನೆಮಾಗಳು ಜೊತೆಗೆ ಪ್ರಧಾನಿಯ ಹೆಸರಲ್ಲೇ ಅಸ್ತಿತ್ವದಲ್ಲಿರುವ ಚಾನಲ್ ಕೂಡ ‘ಮೋದಿ ಮೋದಿ’ ಎನ್ನುತ್ತಿರುವ ಚುನಾವಣಾ ಕಾಲದಲ್ಲಿ, ತಾನು ತಿಂದ ಮಾವಿನಹಣ್ಣು, ಕುರ್ತಾಗಳ ಕುರಿತ ಜನರ ಸಂಶಯಗಳನ್ನು ಅವರು ಕೊನೆಗೂ ನಿವಾರಿಸಿದ್ದಾರೆ. ಈ ಮೂಲಕ ಕಳೆದ ನಾಲ್ಕು ವರ್ಷಗಳ ಮೋದಿ ಆಡಳಿತ ಸಾರ್ಥಕತೆಯನ್ನು ಕಂಡಂತಾಗಿದೆ. ತನ್ನೆಲ್ಲ ಚುನಾವಣಾ ಒತ್ತಡಗಳ ನಡುವೆಯೂ ಈ ದೇಶದ ಜನರಿಗಾಗಿ ನರೇಂದ್ರ ಮೋದಿ ‘ರಾಜಕೀಯದ ನಡುವೆ ಒಂದಿಷ್ಟು ಬಿಡುವು’ ಮಾಡಿಕೊಂಡು ಸಂದರ್ಶನವೊಂದನ್ನು ನಡೆಸಿದರು. ಅವರು ಸಂದರ್ಶನ ನೀಡಿರುವುದು ಯಾವುದೋ ಪತ್ರಕರ್ತರಿಗಲ್ಲ. ಬಾಲಿವುಡ್‌ನ ಒಬ್ಬ ಕಮರ್ಶಿಯಲ್ ನಟನಿಗೆ.

ಸದ್ಯದ ದಿನಗಳಲ್ಲಿ ನರೇಂದ್ರ ಮೋದಿ ಹಾಲಿವುಡ್ ಮಟ್ಟದ ನಟನೆಯನ್ನು ಪ್ರದರ್ಶಿಸುತ್ತಿದ್ದಾರೆ. ಅಧಿಕಾರಾವಧಿಯಲ್ಲಿ ವಿದೇಶಗಳಲ್ಲೇ ಅಧಿಕ ಕಾಲ ಕಳೆದಿರುವುದರಿಂದ ನರೇಂದ್ರ ಮೋದಿಯನ್ನು ‘ಹಾಲಿವುಡ್ ಮಟ್ಟದ’ ನಟನಾಗಿಯೇ ಗುರುತಿಸಲ್ಪಡುತ್ತಿದ್ದಾರೆ. ಸ್ವತಃ ವಿಶ್ವಮಟ್ಟದ ಕಲಾವಿದನಾಗಿರುವ ತನ್ನನ್ನು ಇನ್ನೊಬ್ಬ ನಟನೇ ಸಂದರ್ಶನ ನಡೆಸುವುದು ಅರ್ಥಪೂರ್ಣ ಎಂದು ಮೋದಿ ಭಾವಿಸಿದರೆ ಅದು ಸಹಜವೂ ಆಗಿದೆ. ನಟನೇ ಸಂದರ್ಶನ ಮಾಡುವುದರಿಂದ ಪ್ರಧಾನಿ ಮೋದಿಗೆ ಇನ್ನೊಂದು ಲಾಭವಿದೆ. ನಟರಿಗೆ ಮೊದಲೇ ಸ್ಕ್ರಿಪ್ಟ್‌ಗಳನ್ನು ತಯಾರಿಸಿ ನೀಡಲಾಗುತ್ತದೆ. ಅದರ ಪ್ರಕಾರವೇ ಅವರು ಪಾತ್ರಗಳನ್ನು ನಿರ್ವಹಿಸುತ್ತಾರೆ. ಸ್ಕ್ರಿಪ್ಟ್ ಇಲ್ಲದೆ ಅವರು ನಟಿಸಲಾರರು. ಮೋದಿಯ ಬಹುತೇಕ ಸಂದರ್ಶನಗಳ ಚಿತ್ರಕತೆ ಮೊದಲೇ ಸಿದ್ಧಗೊಂಡಿರುತ್ತವೆ. ಅಂತರ್‌ರಾಷ್ಟ್ರೀಯ ಮಟ್ಟದ ನಟನನ್ನು ಸಂದರ್ಶನ ಮಾಡುವಾಗ ಬಾಲಿವುಡ್ ಮಟ್ಟದ ನಟ ಅಕ್ಷಯ್ ಕುಮಾರ್ ತುಸು ಅಳುಕುವುದು ಸಹಜ. ಸಂದರ್ಶನದ ಸಂದರ್ಭದಲ್ಲಿ ಅದು ಎದ್ದು ಕಂಡಿದೆ.

ಜಗತ್ತಿನಲ್ಲಿ ಯಾವ ಮಕ್ಕಳೂ ಅನುಭವಿಸದ ಸಂಗತಿಗಳನ್ನು ನರೇಂದ್ರ ಮೋದಿ ಅಕ್ಷಯ್ ಕುಮಾರ್ ಜೊತೆಗೆ ಹಂಚಿಕೊಂಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಮಾವಿನ ಹಣ್ಣನ್ನು ತಿಂದಿರುವುದು. ತಾನು ಕುರ್ತಾ ಹಾಕುವ ಕಾರಣಗಳನ್ನು ವಿವರಿಸಿದ್ದಾರೆ. ಖರ್ಚಿಗೆ ಅಮ್ಮ ದುಡ್ಡು ಕಳುಹಿಸುತ್ತಾರೆ ಎಂದಿದ್ದಾರೆ. ಉಳಿದ ರಾಜಕೀಯ ನಾಯಕರ ಜೊತೆಗಿರುವ ಆತ್ಮೀಯ ಸಂಬಂಧಗಳನ್ನು ಹಂಚಿಕೊಂಡಿದ್ದಾರೆ. ಈ ದೇಶವನ್ನು ಆಳಿದ ಯಾವ ನಾಯಕರೂ ಬಾಲ್ಯದಲ್ಲಿ ಮಾವಿನ ಹಣ್ಣು ತಿಂದಿಲ್ಲ ಮತ್ತು ಕುರ್ತಾ ಧರಿಸಿಲ್ಲ ಎನ್ನುವುದೂ ನಾವು ಗಮನಿಸಬೇಕಾದ ವಿಶೇಷವಾಗಿದೆ. ಬಾಲ್ಯದ ಕೆಲವು ಸಂಗತಿಗಳನ್ನು ಹಂಚುತ್ತಾ, ಅವರು ಹಿಮಾಲಯಕ್ಕೆ ಹೋದ ಸಂಗತಿಯನ್ನು ವಿವರಿಸುತ್ತಾರೆ. ಆದರೆ ಗೃಹಸ್ಥಾಶ್ರಮದ ವಿವರಗಳು ಮಾತ್ರ ಸೆನ್ಸಾರ್‌ಗೊಳಗಾಗಿವೆ.

ವಿಶೇಷವೆಂದರೆ ಅಕ್ಷಯ್ ಕುಮಾರ್‌ರ ಪತ್ನಿಯ ವೈಯಕ್ತಿಕ ವಿಷಯವನ್ನು ಮೋದಿ ಪ್ರಸ್ತಾಪಿಸುತ್ತಾರೆ. ಟ್ವಿಂಕಲ್ ಖನ್ನಾ ಟ್ವಿಟರ್‌ನಲ್ಲಿ ಸದಾ ಮೋದಿಯ ವಿರುದ್ಧ ದ್ವೇಷ ಪ್ರಕಟಿಸುವುದರಿಂದ, ಅಕ್ಷಯ್ ಮನೆಯಲ್ಲಿ ಶಾಂತಿ ನೆಲೆಸಿರಬಹುದು ಎಂದು ಜೋಕ್ ಹಾರಿಸುತ್ತಾರೆ. ಅಕ್ಷಯ್ ಕುಮಾರ್ ಅವರ ಕುಟುಂಬದ ಶಾಂತಿಯ ಬಗ್ಗೆ ಕಾಳಜಿ ವಹಿಸುವ, ಅವರ ಪತ್ನಿಯ ಕುರಿತಂತೆ ಜೋಕ್ ಹಾರಿಸುವ ಮೋದಿ ತನ್ನ ಪತ್ನಿಯ ಕುರಿತಂತೆ ಒಂದು ಅಕ್ಷರವನ್ನೂ ಉಲ್ಲೇಖಿಸದೇ ಇರುವುದು ಜನರನ್ನು ದುಃಖಿತರನ್ನಾಗಿಸಿದೆ. ಕುಟುಂಬವೆಂದರೆ ಅಲ್ಲಿ ಅಶಾಂತಿ ಮಾತ್ರವೇ ಇರುತ್ತದೆ ಎಂದು ಮೋದಿ ನಂಬಿದಂತಿದೆ. ಕನಿಷ್ಠ ತನ್ನ ಪತ್ನಿಯ ಪ್ರಸ್ತಾಪ ಮಾಡಿದಾಗಲಾದರೂ, ಅಕ್ಷಯ್ ಕುಮಾರ್ ಮೋದಿಯ ಪತ್ನಿಯ ಕುರಿತಂತೆ, ಮದುವೆಯಾದ ದಿನಗಳಲ್ಲಿ ಜೊತೆಯಾಗಿ ಅವರು ತಿಂದ ಮಾವುಗಳ ಲೆಕ್ಕಗಳನ್ನು ಕೇಳಬಹುದಿತ್ತು. ಚುನಾವಣಾ ಆಯೋಗಕ್ಕೆ ‘ಅವಿವಾಹಿತ’ ಎಂಬ ಸುಳ್ಳು ಮಾಹಿತಿಯನ್ನು ಯಾಕೆ ಕೊಟ್ಟಿರಿ? ಎಂದೂ ಜೋಕ್ ಹಾರಿಸಬಹುದಿತ್ತು. ಬಹುಶಃ ಬರೆದುಕೊಟ್ಟ ಚಿತ್ರ-ಕಥೆಯಲ್ಲಿ ಅದು ಇದ್ದಿರಲಿಕ್ಕಿಲ್ಲ. ಚುನಾವಣೆಯ ಹೊತ್ತಿನಲ್ಲಿ ಈ ರಾಜಕೀಯೇತರ ಸಂದರ್ಶನವೂ ಒಂದು ರಾಜಕೀಯ ಪ್ರಚಾರದ ತಂತ್ರಗಾರಿಕೆ. ತನ್ನನ್ನು ತಾನು ಸ್ವಯಂವೈಭವೀಕರಿಸಿಕೊಳ್ಳುವ ಮೋದಿಯ ಈ ಕಿರು ಚಿತ್ರದಲ್ಲಿ ಅಕ್ಷಯ್ ಕುಮಾರ್ ಕೂಡ ನಟಿಸಿರುವುದರಿಂದ ‘ಖಿಲಾಡಿಯೋಂಕಾ ಖಿಲಾಡಿ-ಭಾಗ 2’ ಎಂಬ ಹೆಸರನ್ನು ಧಾರಾಳವಾಗಿ ಇಡಬಹುದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)