varthabharthi

ನಿಮ್ಮ ಅಂಕಣ

ಚುನಾವಣಾ ನೀತಿಸಂಹಿತೆ ಎಂಬ ಪ್ರಹಸನ

ವಾರ್ತಾ ಭಾರತಿ : 26 Apr, 2019
ಕು. ಸ. ಮಧುಸೂದನ, ರಂಗೇನಹಳ್ಳಿ

 ನಮ್ಮದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ. ಇಲ್ಲಿನ ಮತದಾರರ ಸಂಖ್ಯೆ ತೊಂಬತ್ತು ಕೋಟಿ. ಇಪ್ಪತ್ತು ಲಕ್ಷ ಮತಯಂತ್ರಗಳು. ಒಂದೂಕಾಲು ಕೋಟಿಗೂ ಅಧಿಕ ಮತಗಟ್ಟೆಯನ್ನು ನಿರ್ವಹಿಸುವ ಸಿಬ್ಬಂದಿ, ಎರಡೂವರೆ ಕೋಟಿಗೂ ಅಧಿಕ ಭದ್ರತಾ ಸಿಬ್ಬಂದಿ. ಅಧಿಕೃತವಾಗಿ ಇಷ್ಟಲ್ಲದೆ ಪರೋಕ್ಷವಾಗಿ ಚುನಾವಣೆಗಳಿಗೆ ನೆರವಾಗುವ ಮೂರು ಕೋಟಿ ಇತರ ನೌಕರರು. ಇಷ್ಟು ದೊಡ್ಡ ಮಟ್ಟದ ಚುನಾವಣಾ ವ್ಯವಸ್ಥೆ ಹೊಂದಿರುವ ನಮ್ಮ ದೇಶದಲ್ಲಿ ಇದುವರೆಗೂ ಬಹುತೇಕ ಚುನಾವಣೆಗಳು ಶಾಂತಿಯುತವಾಗಿ (ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವು ಚುನಾವಣೆಗಳನ್ನು ಹೊರತು ಪಡಿಸಿದರೆ)ನಡೆದಿದ್ದು ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬರುತ್ತಿವೆ. ಅದರೆ ಈ ಬಾರಿ ನಡೆದ ಇದುವರೆಗಿನ ಮೂರು ಹಂತದ ಚುನಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಚುನಾವಣಾ ನೀತಿ ಸಂಹಿತೆ ಎನ್ನುವುದು ಹಾಸ್ಯಾಸ್ಪದ ವಿಷಯವಾಗಿ ಬಿಟ್ಟಿದೆ. ತಾನೇ ವಿಧಿಸಿದ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಚುನಾವಣಾ ಆಯೋಗ ವಿಫಲವಾಗುತ್ತಿಯೆಂಬ ಅನುಮಾನ ತಲೆದೋರುತ್ತಿದೆ.

ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬಹುದಾದಂತಹ ಅಧಿಕಾರವನ್ನು ಹೊಂದಿರುವ ಆಯೋಗ ಯಾಕೋ ಈ ಅಧಿಕಾರವನ್ನು ಉಪಯೋಗಿಸಿಕೊಳ್ಳುವಲ್ಲಿ ಆಸಕ್ತಿಯನ್ನೇನು ತೋರುತ್ತಿಲ್ಲ. ಚುನಾವಣಾ ಆಯೋಗದ ಈ ಕ್ರಿಯಾಹೀನತೆಯನ್ನು ಕಂಡ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ನೀತಿಸಂಹಿತೆ ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಯೋಗಕ್ಕೆ ಸೂಚನೆ ನೀಡಬೇಕಾಗಿ ಬಂದಿತು. ಉದಾಹರಣೆಗೆ ಚುನಾವಣಾ ಪ್ರಚಾರದಲ್ಲಿ ರಾಷ್ಟ್ರದ ರಕ್ಷಣೆ ಮತ್ತು ಸೈನ್ಯದ ಹೆಸರನ್ನು ಆಡಳಿತಪಕ್ಷವು ವ್ಯಾಪಕವಾಗಿ ಬಳಸಿಕೊಳ್ಳುತ್ತಿರುವಾಗ, ಅದನ್ನು ವಿರೋಧಿಸುವ ನೆಪದಲ್ಲಿ ವಿರೋಧ ಪಕ್ಷಗಳು ಸಹ ಯಾವ ಎಗ್ಗೂ ಇಲ್ಲದೆ ಸೈನ್ಯದ ವಿಷಯವನ್ನು ತಮ್ಮ ಪ್ರಚಾರ ಕಾರ್ಯದಲ್ಲಿ ಬಳಸಿಕೊಂಡಾಗ ಮಧ್ಯ ಪ್ರವೇಶಿಸಿದ ಸುಪ್ರೀಂ ಕೋರ್ಟ್ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಆಯೋಗಕ್ಕೆ ಸೂಚಿಸಿದಾಗ, ತನಗೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಇಲ್ಲವೆಂದು ಆಯೋಗ ಕೈ ಚೆಲ್ಲಿದ್ದು ನೀತಿ ಸಂಹಿತೆಯ ಮತ್ತಷ್ಟು ಉಲ್ಲಂಘನೆಗೆ ಕಾರಣವಾಗುತ್ತಾ ಹೋಯಿತು. ತಮ್ಮ ಪ್ರಚಾರ ಭಾಷಣಗಳಲ್ಲಿ ಜಾತಿ, ಧರ್ಮ, ದೇವರ ಹೆಸರುಗಳನ್ನು ಪ್ರಸ್ತಾಪಿಸಿದ್ದಕ್ಕೆ ಬಹುಜನಪಕ್ಷದ ಮಾಯಾವತಿಯವರಿಗೆ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೆಲ ದಿನಗಳ ಪ್ರಚಾರ ನಿರ್ಬಂಧ ವಿಧಿಸಿದ್ದು ಸಹ ಕೋರ್ಟಿನ ಮಧ್ಯಪ್ರವೇಶದ ಕಾರಣದಿಂದಾಗಿ.

ತನಗೆ ಕ್ರಮಕೈಗೊಳ್ಳುವ ಅಧಿಕಾರ ಇಲ್ಲವೆಂದು ಹೇಳುತ್ತಿರುವ ಆಯೋಗದ ಮಾತು ಸುಳ್ಳೆಂದು ಸಾರ್ವಜನಿಕರಿಗೆ ಗೊತ್ತಿರುವ ವಿಷಯ. ಆದರೆ ಆಯೋಗ ಮಾತ್ರ ತನ್ನ ಕೈಲಿ ಅಧಿಕಾರ ಇಲ್ಲವೆಂಬ ಹುಸಿನಾಟಕವನ್ನಾಡುತ್ತಲೇ ಬರುತ್ತಿದೆ. ತೊಂಬತ್ತರ ದಶಕದಲ್ಲಿ ಚುನಾವಣೆಯಲ್ಲಿ ಹಿಂದುತ್ವದ ವಿಚಾರವನ್ನು ಬಳಸಿಕೊಂಡು ಉದ್ರೇಕಕಾರಿ ಪ್ರಚಾರ ಮಾಡಿದ್ದಾಕ್ಕಾಗಿ ಈ ಹಿಂದೆ ಮಹಾರಾಷ್ಟ್ರದ ಶಾಸಕರೊಬ್ಬರನ್ನು ಅನರ್ಹಗೊಳಿಸಲಾಗಿತ್ತು ಎಂಬುದನ್ನು ಆಯೋಗ ಇದೀಗ ಮರೆತಂತೆ ವರ್ತಿಸುತ್ತಿದೆ. ಹಾಗೆಯೇ ಹಿಂದೆ ಟಿ. ಎನ್. ಶೇಷನ್ ಚುನಾವಣಾಧಿಕಾರಿಯಾಗಿದ್ದಾಗ ಈ ತೆರನಾದ ಉದ್ರೇಕಕಾರಿ ಪ್ರಚಾರ ಭಾಷಣಗಳನ್ನು ನಿಯಂತ್ರಿಸಲು ಎಲ್ಲ ಪ್ರಚಾರ ಸಭೆಗಳ ವೀಡಿಯೊ ದಾಖಲೆ ಮಾಡಿಸುವ ಕ್ರಮ ಕೈಗೊಂಡಿದ್ದರು. ಆದರಿವತ್ತು ತಂತ್ರಜ್ಞಾನ ಮತ್ತಷ್ಟು ಮುಂದುವರಿದಿದ್ದರೂ ಸಹ ನಮ್ಮ ಆಯೋಗ ಅವ್ಯಾವುವನ್ನು ಬಳಸಿಕೊಳ್ಳುವ ಇಚ್ಛಾಶಕ್ತಿ ತೋರಿಸುತ್ತಿಲ್ಲ. ಜೊತೆಗೆ ಅದು ನಿಯಮಾವಳಿಗಳನ್ನು ಜಾರಿಗೆ ತರುವಲ್ಲಿ ಸ್ಪಷ್ಟವಾಗಿ ನಿರ್ಲಕ್ಷ್ಯ ತೋರುತ್ತಿರುವುದು ಪದೇ ಪದೇ ಸಾಬೀತಾಗುತ್ತಿದೆ. ಇದಕ್ಕೆ ಕೆಲವು ಉದಾಹರಣೆಗಳನ್ನು ನಾವು ನೋಡಬಹುದಾಗಿದೆ. ಸೇನೆಯ ವಿಚಾರ ಬಳಸದಂತೆ ನಿರ್ಬಂಧವಿದ್ದರೂ ಮೊನ್ನೆ ಪ್ರಧಾನಿಯವರು ಪ್ರಚಾರ ಭಾಷಣ ಮಾಡುತ್ತ್ತಾ, ‘‘ಪಾಕಿಸ್ತಾನದ ವಿಚಾರ ಪ್ರಸ್ತಾಪಿಸುತ್ತ ನಮ್ಮ ಕೈಯಲ್ಲಿ ಅಣುಬಾಂಬು ಇದೆಯೆಂದು ನಾನು ಪಾಕಿಗೆ ಎಚ್ಚರಿಕೆ ನೀಡಿದ್ದರಿಂದಲೇ ಅವರು ನಮ್ಮ ಪೈಲಟ್ ಅವರನ್ನು ಬಿಟ್ಟುಕಳಿಸಿದ್ದು’’ ಎಂದು ಹೇಳಿ ಮತ್ತೆ ಸೇನೆಯ ಬಗ್ಗೆ ಮಾತಾಡಿದ್ದಾರೆ.

ಈ ಬಗ್ಗೆ ಆಯೋಗ ಗಾಢ ಮೌನ ತಾಳಿದೆ. ಇನ್ನು ಗುಜರಾತಿನ ಶಾಸಕರೊಬ್ಬರು ‘‘ಎಲ್ಲ ಮತಗಟ್ಟೆಗಳಲ್ಲಿಯೂ ನಾವು ಕ್ಯಾಮರಾ ಅಳವಡಿಸಿದ್ದು ನೀವು ಯಾರಿಗೆ ಮತ ಚಲಾಯಿಸುತ್ತೀರೆಂಬುದು ನಮಗೆ ಗೊತ್ತಾಗುತ್ತದೆ’’ಯೆಂದು ಮತದಾರರಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದರೂ ಚುನಾವಣಾ ಆಯೋಗ ಮಗುಮ್ಮಾಗಿ ಕೂತಿದೆ. ಹಾಗೆಯೇ ಮಧ್ಯಪ್ರದೇಶದ ಸಂಸತ್ ಸದಸ್ಯರೊಬ್ಬರು ‘‘ನೀವು ನನಗೆ ಮತಹಾಕದಿದ್ದರೆ ನಿಮ್ಮ ಪುಣ್ಯವನ್ನೆಲ್ಲ ನಾನು ತೆಗೆದುಕೊಂಡು ನಿಮಗೆ ಪಾಪ ನೀಡುತ್ತೇನೆ’’ ಎಂದು ಧರ್ಮದ ಹೆಸರಲ್ಲಿ ಬೆದರಿಕೆ ಹಾಕಿದ್ದನ್ನು ಆಯೋಗ ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಇನ್ನು ಸಾಧ್ವಿ ಪ್ರಜ್ಞಾ ಠಾಕೂರ್ ಅವರು ‘‘ಪೊಲೀಸ್ ಅಧಿಕಾರಿ ಕರ್ಕರೆ ಅವರಿಗೆ ಸಾವು ಬಂದಿದ್ದೇ ನನ್ನ ಶಾಪದಿಂದ’’ ಎಂದು ಹೇಳಿ ಮತದಾರರಲ್ಲಿ ಭಯ ಹುಟ್ಟಿಸುವ ಮಾತಾಡಿ ಮತದಾರರನ್ನು ಭೀತಿಗೊಳಿಸಿದ್ದರೂ ಆಯೋಗ ಯಾವ ಕ್ರಮವನ್ನೂ ಕೈ ಗೊಳ್ಳುತ್ತಿಲ್ಲ.

ಇಷ್ಟಲ್ಲದೆ ಎಲ್ಲಾ ಪಕ್ಷಗಳ ನಾಯಕರೂ ನೀತಿ ಸಂಹಿತೆಯನ್ನು ಸತತವಾಗಿ ಉಲ್ಲಂಘಿಸುತ್ತಲೇ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಆದರೆ ಆಯೋಗ ಮಾತ್ರ ಮೌನವಾಗಿದ್ದು, ನಾಮ್‌ಕಾವಸ್ತೆಗೆ ನೋಟೀಸು ನೀಡುವ ನಾಟಕವಾಡುತ್ತಿದೆ.

ಒಟ್ಟಿನಲ್ಲಿ ತಮ್ಮ ಸಾಧನೆಗಳನ್ನು, ಯೋಜನೆಗಳನ್ನು ಪ್ರಚುರ ಪಡಿಸಿ ಮತ ಕೇಳಬೇಕಾದ ನಾಯಕರು ಅನಗತ್ಯ ವಿವಾದಗಳನ್ನು ಸೃಷ್ಟಿಸುವ ಪ್ರಚೋದನಾ ಕಾರಿ ಹೇಳಿಕೆಗಳನ್ನು ನೀಡುತ್ತಾ ಹೋಗುತ್ತಿದ್ದರೆ, ಚುನಾವಣಾ ನೀತಿ ಸಂಹಿತೆ ಎನ್ನುವುದು ಅಪಹಾಸ್ಯದ ವಿಷಯವಾಗಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಚುನಾವಣಾ ವ್ಯವಸ್ಥೆಯ ಪ್ರಮುಖ ದೋಷವೆಂದರೆ ನೀತಿ ಸಂಹಿತೆ ಸರಿಯಾಗಿ ಜಾರಿಯಾಗದೆ ಇರುವುದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)