varthabharthi

ನಿಮ್ಮ ಅಂಕಣ

ಡಿವಿಡೆಂಡ್ ಕೊಡದ ಸಹಕಾರಿ ಬ್ಯಾಂಕುಗಳ ಮೇಲೆ ಕ್ರಮವೇಕಿಲ್ಲ?

ವಾರ್ತಾ ಭಾರತಿ : 26 Apr, 2019
-ಕೆ. ಎಸ್. ನಾಗರಾಜ್, ಹನುಮಂತನಗರ, ಬೆಂಗಳೂರು

ಮಾನ್ಯರೇ,

ರಾಜ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳು ಎಂದು ತಮ್ಮನ್ನು ತಾವೇ ಬಿಂಬಿಸಿಕೊಳ್ಳುವ ಬಹುತೇಕ ಸಹಕಾರಿ ಬ್ಯಾಂಕುಗಳು ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರದ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಸುವ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳು ಕಳೆದ 3 ವರ್ಷಗಳಿಂದ ತನ್ನ ಸದಸ್ಯರಿಗೆ ಡಿವಿಡೆಂಡ್ ಕೊಟ್ಟಿರುವುದಿಲ್ಲ. ಪ್ರತಿ ವರ್ಷ ನಡೆಯುವಂತಹ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಸಾಲ ವಸೂಲಾತಿಯಾಗದ ಪ್ರಮಾಣ ಹೆಚ್ಚಾಗಿರುವುದರಿಂದ ಡಿವಿಡೆಂಡ್ ಕೊಡಲಾಗುವುದಿಲ್ಲವೆಂದು ತಮ್ಮ ಪುಸ್ತಕಗಳಲ್ಲಿ ಅಚ್ಚು ಹಾಕಿಸಿರುತ್ತಾರೆ. ಪ್ರತಿ ವರ್ಷವೂ ಇದೇ ಮಾತು ಮುಂದುವರಿದಿರುತ್ತದೆ. ಸಾಲವನ್ನು ವಸೂಲಿ ಮಾಡಬಾರದು ಎಂದು ಇವರಿಗೆ ಹೇಳಿರುವವರು ಯಾರು.? ಕೊಟ್ಟ ಸಾಲವನ್ನು ವಸೂಲಿ ಮಾಡಲು ಇರುವ ತೊಂದರೆಗಳೇನು? ಪ್ರತಿ ವರ್ಷವೂ ಇದೇ ನೆಪ ಮಾಡಿಕೊಂಡು ಸದಸ್ಯರಿಗೆ ಡಿವಿಡೆಂಡ್ ಕೊಡದಿದ್ದರೆ ಯಾವ ಪುರುಷಾರ್ಥಕ್ಕಾಗಿ ಸದಸ್ಯರು ಸಂಸ್ಥೆಯಲ್ಲಿ ಮುಂದುವರಿಯಬೇಕು? ವಸೂಲಾಗದ ಸಾಲದ ಪ್ರಮಾಣ ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ಸದಸ್ಯರಿಗೆ ಡಿವಿಡೆಂಡ್ ಕೊಡದಂತಹ ಆಡಳಿತ ಮಂಡಳಿಯವರು ಪ್ರತಿ ವರ್ಷವೂ ಆಯವ್ಯಯ ಪುಸ್ತಕದಲ್ಲಿ ತಮ್ಮ ಸಾರಿಗೆ ಮತ್ತು ಸಭೆಗೆ ಹಾಜರಾದ ಕಾರಣಕ್ಕಾಗಿ ಪಡೆದುಕೊಂಡ ಗೌರವ ಧನಗಳನ್ನು ಕಡ್ಡಾಯವಾಗಿ ಪಡೆದುಕೊಂಡಿರುತ್ತಾರೆ. ಸಾಲ ವಸೂಲಾಗಿಲ್ಲ ಎನ್ನುವ ಕಾರಣಕ್ಕೆ ನಿರ್ದೇಶಕರು ಅಥವಾ ಆಡಳಿತ ಮಂಡಳಿಯವರು ತಮ್ಮ ಸಭೆಗಳಿಗೆ ಹಾಜರಾತಿ ಶುಲ್ಕವನ್ನು ಪಡೆದುಕೊಳ್ಳದೆ ದೊಡ್ಡತನವನ್ನೇಕೆ ತೋರುವುದಿಲ್ಲ.

ಪ್ರತಿ ವರ್ಷ ಪ್ರತಿಯೊಬ್ಬ ನಿರ್ದೇಶಕರು ವಿವಿಧ ಸಮಿತಿಗಳಲ್ಲಿ ಇರುವ ಕಾರಣಗಳಿಂದ ಬೋರ್ಡ್ ಮೀಟಿಂಗ್‌ಗಳಿಗೆ ಹಾಜರಾಗಿ ಸಿಟ್ಟಿಂಗ್ ಫೀಸ್ ಪಡೆದುಕೊಂಡಿರುತ್ತಾರೆ. ಇವುಗಳನ್ನೇಕೆ ಅವರು ನಿರಾಕರಿಸಬಾರದು. ಅವರಿಗೆ ಎಲ್ಲಾ ರೀತಿಯ ಸೌಲಭ್ಯ, ಸೌಕರ್ಯಗಳು ಬೇಕಾಗಿರುತ್ತವೆ, ಆದರೆ ಸದಸ್ಯರಿಗೆ ಮಾತ್ರ ಲಾಭಾಂಶವನ್ನು ಕೊಡಲು ಹಿಂದೆ ಮುಂದೆ ನೋಡುತ್ತಾರೆ. ಕರ್ನಾಟಕ ರಾಜ್ಯದ ಸಹಕಾರಿ ಸಂಘಗಳ ಇಲಾಖೆಯವರು ಇದಕ್ಕೊಂದು ನಿಯಮವನ್ನು ಮಾಡಬೇಕು. ಒಂದು ವರ್ಷಕ್ಕಿಂತ ಮೇಲ್ಪಟ್ಟು ಡಿವಿಡೆಂಡ್ ಕೊಡದ ಬ್ಯಾಂಕುಗಳ ಮೇಲೆ ಕ್ರಮವನ್ನು ಕೈಗೊಳ್ಳಬೇಕು. ಡಿವಿಡೆಂಡ್ ನೀಡಲು ಸಾಧ್ಯವಾಗಿಲ್ಲವಾದರೆ ಬ್ಯಾಂಕಿನ ಆರ್ಥಿಕ ಪರಿಸ್ಥಿತಿಯೂ ಸುಧಾರಣೆಯಾಗಿಲ್ಲವೆಂದೇ ಅರ್ಥವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)