varthabharthi

ಸಂಪಾದಕೀಯ

ನೀರಿಗಾಗಿ ದಂಗೆ ಏಳುವ ಮುನ್ನ....

ವಾರ್ತಾ ಭಾರತಿ : 27 Apr, 2019

ಚುನಾವಣೆಯ ಕಾವು ಮುಗಿದದ್ದೇ, ನಾಡಿನ ಜನತೆಗೆ ಕುಡಿಯುವ ನೀರು ಮಡಕೆಯ ತಳ ಸೇರಿರುವುದು ಅರಿವಿಗೆ ಬಂದಿದೆ. ಧರ್ಮ, ಜಾತಿ ಸೇರಿದಂತೆ ಭಾವನಾತ್ಮಕವಾಗಿ ಜನರನ್ನು ಮರುಳು ಮಾಡಿ ಮತಯಾಚಿಸಿದವರೆಲ್ಲ ತಮ್ಮ ತಮ್ಮ ಗೂಡು ಸೇರಿದ್ದಾರೆ. ತತರಿಸಿದ ಬಿಸಿಲಿನಿಂದ ಸುಸ್ತಾಗಿರುವ ಅವರು ರೆಸಾರ್ಟ್‌ಗಳಲ್ಲಿ ನಿರಾಳರಾಗುತ್ತಿದ್ದಾರೆ. ನಗರಗಳೂ, ಹಳ್ಳಿಗಳೂ ನೀರಿಗಾಗಿ ಹಾಹಾಕಾರಕ್ಕೆ ತೊಡಗಿವೆ. ಎರಡು ರೀತಿಯಲ್ಲಿ ನಾಡು ನೀರಿನ ಕೊರತೆಯಿಂದ ನರಳುತ್ತಿವೆ. ಸಾವಿರಾರು ಹಳ್ಳಿಗಳು ಅಕ್ಷರಶಃ ಬರಪರಿಸ್ಥಿತಿಯನ್ನು ಎದುರಿಸುತ್ತಿವೆ. ಇವರ ಸಮಸ್ಯೆ ಕುಡಿಯುವ ನೀರು ಮಾತ್ರವಲ್ಲ, ಕೃಷಿಯೂ ಕೂಡ. ಅವರ ಕೃಷಿ ನಾಶವಾದರೆ ಅವರ ಬದುಕುವ ದಾರಿಯೇ ಮುಚ್ಚಿಕೊಳ್ಳುತ್ತದೆ.

ದುರದೃಷ್ಟಕ್ಕೆ ಚುನಾವಣೆ ಮತ್ತು ಬೇಸಿಗೆ ಜೊತೆ ಜೊತೆಯಾಗಿ ಅವರ ಬದುಕಲ್ಲಿ ಕಾಲಿಟ್ಟಿದೆ. ರಾಜಕಾರಣಿಗಳು ಚುನಾವಣೆಯಲ್ಲಿ ತಲ್ಲೀನರಾಗಿರುವುದರಿಂದ ಬರಗಾಲ ಪೀಡಿತರನ್ನು ಕೇಳುವವರೇ ಇಲ್ಲದಂತಾಗಿದೆ. ಇತ್ತೀಚಿನ ವರ್ಷಗಳಿಂದ ಬೇಸಿಗೆಕಾಲವನ್ನು ಹಳ್ಳಿಯ ಜನರು ಬರಗಾಲವೆಂದೇ ಕರೆಯತೊಡಗಿದ್ದಾರೆ. ಬರಗಾಲಕ್ಕೂ ಬೇಸಿಗೆಗೂ ಇರುವ ಅಂತರ ಅಳಿದು ಹೋಗಿದೆ. ಹೀಗಿರುವಾಗ ಬೇಸಿಗೆ ಅಥವಾ ಬರಕ್ಕಾಗಿ ಪೂರ್ವ ಸಿದ್ಧತೆಯನ್ನು ಮಾಡಲು ಸರಕಾರಕ್ಕೆ ಸಾಕಷ್ಟು ಅವಕಾಶವೂ ಇದೆ. ಆದರೆ ಈ ಬಾರಿ ಬರಗಾಲದ ಜೊತೆಗೆ ಚುನಾವಣಾ ಕಾಲವೂ ಎದುರಾಯಿತು. ಸರಕಾರ ಮಾತ್ರವಲ್ಲ, ವಿರೋಧ ಪಕ್ಷಗಳೂ ಜನರ ಸಮಸ್ಯೆಗಳನ್ನು ಬದಿಗಿಟ್ಟು ತಮ್ಮ ತಮ್ಮ ಅಭ್ಯರ್ಥಿಗಳ ಆಯ್ಕೆ, ಪರ ವಿರೋಧ, ಟೀಕೆ, ಪ್ರತಿ ಟೀಕೆ ಇತ್ಯಾದಿಗಳಲ್ಲೇ ಕಾಲ ಕಳೆದವು.

ವಿಪರ್ಯಾಸವೆಂದರೆ, ಚುನಾವಣೆಯೆನ್ನುವುದು ಜನನಾಯಕರು ಜನರನ್ನು ಮುಖಾಮುಖಿಯಾಗುವ ಕಾಲ. ಬರಗಾಲದ ಸಂದರ್ಭದಲ್ಲೇ ಚುನಾವಣೆ ಎದುರಾಗಿರುವುದು ಮತದಾರರಿಗೆ ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳಲು, ವಿವರಿಸಲು ಒಂದು ಅವಕಾಶ. ವೋಟು ಕೇಳಲು ಬರುವ ನಾಯಕರ ಮುಂದೆ ಸುಟ್ಟು ಹೋದ ತಮ್ಮ ಗದ್ದೆಗಳನ್ನು, ತೋಟಗಳನ್ನು ತೋರಿಸಿ ಅವರಿಂದ ಪರಿಹಾರವನ್ನು ಅಪೇಕ್ಷಿಸಬೇಕಾಗಿತ್ತು. ಆದರೆ ಇತ್ತೀಚೆಗೆ ಚುನಾವಣೆಗಳಲ್ಲಿ ಜನರ ಸಮಸ್ಯೆ ಚರ್ಚೆಯಾಗುವುದೇ ಕಡಿಮೆ. ಈ ಬಾರಿಯಂತೂ ಪ್ರಧಾನಮಂತ್ರಿಯವರು ಸೈನಿಕರ ಹೆಸರಲ್ಲಿ ಮತ ಯಾಚಿಸಿದರು. ಅವರ ಅನುಯಾಯಿಗಳು ಮೋದಿಯ ಹೆಸರಲ್ಲಿ ಮತ ಯಾಚಿಸಿದರು. ಯಾರಿಗೂ ನೀರಿನ ಹಾಹಾಕಾರ ಚುನಾವಣಾ ವಿಷಯವೇ ಆಗಲಿಲ್ಲ. ಇದರಲ್ಲಿ ಮತದಾರರ ಪಾತ್ರವೂ ಬಹುದೊಡ್ಡದಿದೆ. ನೀರು, ಕೃಷಿ, ರೈತ, ಹಸಿವು, ಬಡತನ ಇತ್ಯಾದಿ ಹೆಸರುಗಳಲ್ಲಿ ಮತ ಯಾಚಿಸಿದರೆ ಮತಗಳು ಬೀಳುವುದಿಲ್ಲ ಎನ್ನುವುದು ರಾಜಕಾರಣಿಗಳ ಅರಿವಿಗೂ ಬಂದಿದೆ. ಈ ಹಿಂದೆ ಹಸಿವು, ಬಡತನದ ಕುರಿತಂತೆಯೇ ಮಾತನಾಡಿ ಚುನಾವಣೆಯಲ್ಲಿ ಮತಯಾಚಿಸಿದ ಸಿದ್ದರಾಮಯ್ಯರ ಸ್ಥಿತಿಯನ್ನು ಕರ್ನಾಟಕ ಇನ್ನೂ ಮರೆತಿಲ್ಲ. ಜನರ ಮತಗಳನ್ನು ಸೆಳೆಯಬೇಕಾದರೆ ಅವರನ್ನು ಭಾವೋನ್ಮಾದಕ್ಕೆ ಒಯ್ಯಬೇಕು. ಧರ್ಮ, ಜಾತಿ ಇತ್ಯಾದಿಗಳ ಹೆಸರಲ್ಲಿ ಅವರನ್ನು ಉದ್ವಿಗ್ನಗೊಳಿಸಬೇಕು.

ಬಿಜೆಪಿಯ ಬಳಿಯಂತೂ ಈ ಬಾರಿ ಪುಲ್ವಾಮದಲ್ಲಿ ಹತರಾಗಿರುವ ನಲವತ್ತು ಹುತಾತ್ಮ ಯೋಧರ ಮೃತದೇಹಗಳಿದ್ದವು. ಸೈನಿಕರ ಆ ಸ್ಥಿತಿಗೆ ಬಿಜೆಪಿ ಸರಕಾರವೇ ಹೊಣೆಯಾಗಿದ್ದರೂ, ಅವರನ್ನೇ ಮುಂದಿಟ್ಟು ಬಿಜೆಪಿ ಮತ ಯಾಚಿಸಿತು. ಜೊತೆಗೆ ಯೋಧರು ನಡೆಸಿದ್ದಾರೆ ಎನ್ನಲಾಗಿರುವ ಸರ್ಜಿಕಲ್ ಸ್ಟ್ರೈಕ್‌ನ್ನು ಕೂಡ ಚುನಾವಣೆಯಲ್ಲಿ ಬಳಸಿಕೊಂಡಿತು. ಎತ್ತಣ ಸರ್ಜಿಕಲ್ ಸ್ಟ್ರೈಕ್? ಎತ್ತಣ ಬಳ್ಳಾರಿ, ಬೆಳಗಾವಿಯ ರೈತರು? ಅವರ ಬದುಕಿನಲ್ಲಿ ಬಿಜೆಪಿಯ ಮಾತುಗಳು ಯಾವ ರೀತಿಯಲ್ಲಿ ಬದಲಾವಣೆ ತರಬಲ್ಲುದು? ಒಂದು ರೀತಿಯಲ್ಲಿ ಮಾಧ್ಯಮಗಳೂ ಜನರ ಸಮಸ್ಯೆಗಳನ್ನು ಕತ್ತಲಲ್ಲಿಟ್ಟಿತು. ಪುಲ್ವಾಮ, ಬಾಲ್‌ಕೋಟ್ ಜನರ ಅಗತ್ಯವೆಂಬಂತೆ ಬಿಂಬಿಸಿದವು. ಬಹುತೇಕರು ಮೋದಿಯ ಹೆಸರಲ್ಲಿ ಮತ ಹಾಕಿದರು. ಹಲವರು ಮೋದಿಯನ್ನು ವಿರೋಧಿಸಿ ಮತಹಾಕಿದರು. ಯಾರೂ ನೀರಿಗಾಗಿ, ಕೃಷಿಯ ಏಳಿಗೆಗಾಗಿ ಮತ ಹಾಕಲಿಲ್ಲ. ಇದೀಗ ಚುನಾವಣೆ ಮುಗಿದದ್ದೇ ಜನರು ಮುಗಿಲು ನೋಡುತ್ತಿದ್ದಾರೆ. ನೀರಿಲ್ಲ ಎಂದು ಬೊಬ್ಬಿಡಲು ಶುರು ಮಾಡಿದ್ದಾರೆ. ರಾಜಕಾರಣಿಗಳು ಮಾತ್ರ ಫಲಿತಾಂಶದ ಕಡೆಗೆ ತಮ್ಮ ಚಿತ್ತವನ್ನು ನೆಟ್ಟಿದ್ದಾರೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಲದ ಮಟ್ಟ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದ್ದು ನಾಡಿನ 1,120ಕ್ಕೂ ಅಧಿಕ ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಕುಡಿಯುವ ನೀರಿಗಾಗಿಯೇ ಇಷ್ಟೊಂದು ಪ್ರಮಾಣದಲ್ಲಿ ಹಾಹಾಕಾರ ಎದ್ದಿರುವಾಗ, ಕೃಷಿಯ ಸ್ಥಿತಿ ಏನಾಗಬೇಕು.

ಜಾನುವಾರುಗಳಿಗೆ ಪೂರೈಸಲು ನೀರೆಲ್ಲಿಂದ ತರಬೇಕು? ಈಗಾಗಲೇ ಬರನಿರ್ವಹಣೆಗಾಗಿ ಸರಕಾರ 225 ಕೋಟಿ ರೂ.ಯನ್ನು ವಿನಿಯೋಗಿಸಲು ನಿರ್ಧರಿಸಿದೆಯಾದರೂ, ಅದು ರಾವಣನ ಹೊಟ್ಟೆಗೆ ಮಜ್ಜಿಗೆ ಎಂಬಂತಾಗಿದೆ. ಹಳ್ಳಿಯ ಕುಡಿಯುವ ನೀರಿನ ಬವಣೆಯನ್ನು ಬಿಡಿ ನಗರ ಪ್ರದೇಶಗಳ ಅಗತ್ಯವನ್ನೇ ಈಡೇರಿಸಲು ಅದು ಹೆಣಗಾಡುತ್ತಿದೆ. ಕೊಡಗು, ಮಂಡ್ಯ ಕಾವೇರಿ ನೀರನ್ನೇ ಅವಲಂಬಿಸಿದೆ. ಬೆಂಗಳೂರಿನ ಕುಡಿಯುವ ನೀರಿನ ಅಗತ್ಯವನ್ನೂ ಈ ನದಿಯೇ ಪೂರೈಸುತ್ತಿದೆ. ಆದರೆ ವರ್ಷದಿಂದ ವರ್ಷಕ್ಕೆ ಜನರ ನೀರಿನ ಬೇಡಿಕೆ ಜಾಸ್ತಿಯಾಗುತ್ತಿದೆಯೇ ಹೊರತು, ಕಾವೇರಿಯಲ್ಲಿ ನೀರಿನ ಹರಿವು ಹೆಚ್ಚುವುದಿಲ್ಲ. ಬದಲಿಗೆ ವರ್ಷದಿಂದ ವರ್ಷಕ್ಕೆ ಹರಿಯುವ ನೀರು ಇಳಿಕೆಯಾಗುತ್ತಾ ಹೋಗುತ್ತಿದೆ. ಇರುವುದು ಒಂದು ನದಿ, ಅದರೆ ಅದನ್ನು ಬಳಸುವ ಕೈಗಳೋ ಸಹಸ್ರಾರು. ಈ ನದಿಯ ನೀರು ಕುಡಿಯುವುದಕ್ಕೆ, ಕೃಷಿಗೆ ಮಾತ್ರವಲ್ಲ, ಕೈಗಾರಿಕೆಗಳಿಗೂ ಬಳಕೆಯಾಗುತ್ತಿವೆ. ಇದೇ ಸಂದರ್ಭದಲ್ಲಿ ಖಾಸಗಿ ಕಂಪೆನಿಗಳು ವಿವಿಧ ಲಾಬಿಗಳ ಮೂಲಕ ನೀರಿನ ದಾಸ್ತಾನಿಗೆ ತೊಡಗುತ್ತವೆ. ಜನರ ಕುಡಿಯುವ ನೀರಿನ ಆವಶ್ಯಕತೆಗಿಂತಲೂ ಈ ಕಂಪೆನಿಗಳ ಆವಶ್ಯಕತೆಗಳನ್ನು ಈಡೇರಿಸಲು ಜನ ನಾಯಕರು ತುದಿಗಾಲಲ್ಲಿ ನಿಲ್ಲುತ್ತಾರೆ.

ಮಂಗಳೂರಿನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಬೆಂಗಳೂರು ಬಿಟ್ಟರೆ, ರಾಜ್ಯದ ಪ್ರಮುಖ ನಗರವಾಗಿ ಮಂಗಳೂರು ಗುರುತಿಸಿಕೊಂಡಿದೆ. ಸಾವಿರಾರು ಕೋಟಿ ರೂಪಾಯಿಯ ಯೋಜನೆಗಳು ಮಂಗಳೂರಿನಲ್ಲಿ ಜಾರಿಯಲ್ಲಿವೆ. ಯೋಜನೆಗಳು ನೀರಿಲ್ಲದೆಯೇ ನಡೆಯುತ್ತವೆಯೇ? ಎಂಆರ್‌ಪಿಎಲ್ ಸೇರಿದಂತೆ ಬೃಹತ್ ಕಂಪೆನಿಗಳಿಗೂ ಭಾರೀ ಪ್ರಮಾಣ ನೀರಿನ ಅಗತ್ಯವಿದೆ. ನಗರದಲ್ಲಿರುವ ಈ ಬೃಹತ್ ಕಂಪೆನಿಗಳೆಲ್ಲ ನೇತ್ರಾವತಿ ನದಿಯ ನೀರನ್ನೇ ಆಶ್ರಯಿಸಿಕೊಂಡಿವೆ. ತಮ್ಮ ಉತ್ಪಾದನೆಗೆ ಯಾವ ರೀತಿಯ ಧಕ್ಕೆಯೂ ಆಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಇವುಗಳು ಅಧಿಕ ಪ್ರಮಾಣದಲ್ಲಿ ಅಕ್ರಮವಾಗಿ ನೀರನ್ನು ದಾಸ್ತಾನು ಇಡುತ್ತಿವೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ. ಇದೇ ಸಂದರ್ಭದಲ್ಲಿ ಪ್ರತಿ ವರ್ಷ ಜನವಸತಿ ಸಂಕೀರ್ಣಗಳ ಸಂಖ್ಯೆಯೂ ಹೆಚ್ಚುತ್ತಿವೆ. ಇವರೆಲ್ಲರೂ ಮತ್ತೆ ನೀರಿಗಾಗಿ ಮೊರೆ ಹೋಗಬೇಕಾದುದು ನೇತ್ರಾವತಿಯನ್ನೇ.

ಇದೇ ಸಂದರ್ಭದಲ್ಲಿ ನೇತ್ರಾವತಿಯ ಪಾತ್ರದಲ್ಲಿರುವ ಕೃಷಿಕರ ನೀರಿನ ಅಗತ್ಯವನ್ನೂ ಈಡೇರಿಸಬೇಕು. ಇವೆಲ್ಲದರ ಜೊತೆಗೆ ಎತ್ತಿನ ಹೊಳೆ ಜಾರಿಗೆ ಬಂದಿದೆ. ಇದರಿಂದಾಗಿ ನೇತ್ರಾವತಿಯ ನೀರಿನ ಕೊರತೆ ಇನ್ನಷ್ಟು ಹೆಚ್ಚಬಹುದು ಎನ್ನುವ ಆತಂಕ ಜನರದ್ದಾಗಿದೆ. ಇದು ಹೀಗೇ ಮುಂದುವರಿದಲ್ಲಿ ಜನರು ನೀರಿಗಾಗಿ ದಂಗೆಯೇಳುವ ಸ್ಥಿತಿ ನಿರ್ಮಾಣವಾಗಬಹುದು. ಕರಾವಳಿಯ ಜನರ ನೀರಿನ ತಕ್ಷಣದ ಅಗತ್ಯವನ್ನು ಈಡೇರಿಸಲು ಕಡಲನ್ನು ಹೇಗೆ ಬಳಸಬಹುದು ಎನ್ನುವುದರ ಕುರಿತಂತೆಯೂ ಆಡಳಿತಾಧಿಕಾರಿಗಳು ಯೋಚಿಸಬೇಕು. ಈ ನಿಟ್ಟಿನಲ್ಲಿ ಯೋಜನೆಗಳನ್ನು ಶೀಘ್ರದಲ್ಲಿ ರೂಪಿಸುವ ಅಗತ್ಯವಿದೆ. ಹಾಗೆಯೇ ಈ ಬರಗಾಲ ನೀರಿನ ಉಳಿತಾಯದ ಕುರಿತಂತೆಯೂ ನಮ್ಮನ್ನು ಜಾಗೃತಿಗೊಳಿಸುವಂತಾಗಬೇಕು. ನದಿ, ಕೆರೆ ಮೊದಲಾದ ಜಲಾಶಯಗಳನ್ನು ಉಳಿಸುವಲ್ಲಿ ನಮ್ಮ ಪಾತ್ರವೂ ಇದೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ನಮಗೆಲ್ಲ ಇದು ಸುಸಮಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)