varthabharthi

ನಿಮ್ಮ ಅಂಕಣ

ಉತ್ಪಾದಕತೆಯ ಬಗ್ಗೆ ಇರುವ ಲಿಂಗಾಧಾರಿತ ಗ್ರಹಿಕೆಗಳಿಂದಾಗಿ ಮಹಿಳೆಗೆ ತನ್ನನ್ನು ತಾನು ಸಮಾನ ಮತ್ತು ಸತ್ವವುಳ್ಳ ಕಾರ್ಮಿಕಳಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

‘ಆದರ್ಶ’ ಕಾರ್ಮಿಕರ ಉತ್ಪಾದನೆ

ವಾರ್ತಾ ಭಾರತಿ : 27 Apr, 2019
ಕೃಪೆ: Economic and Political Weekly

ಪತ್ರಿಕಾ ವರದಿಗಳ ಪ್ರಕಾರ ಮಹಾರಾಷ್ಟ್ರದ ಭೀಡ್ ಜಿಲ್ಲೆಯ ಕಾಂಟ್ರಾಕ್ಟರುಗಳು ಕಬ್ಬನ್ನು ಕಡಿಯಲು ಮಹಿಳಾ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿಲ್ಲ. ಏಕೆಂದರೆ ಮುಟ್ಟಾಗುವ ಮಹಿಳೆಯರು ಪದೇಪದೇ ಕೆಲಸದಿಂದ ಬಿಡುವು ತೆಗೆದುಕೊಳ್ಳುತ್ತಾರೆ ಮತ್ತು ಅದರಿಂದ ಕೆಲಸ ಕುಂಠಿತವಾಗುತ್ತದೆ ಎಂಬ ಪೂರ್ವಗ್ರಹ ಪೀಡಿತ ಪರಿಕಲ್ಪನೆ. ಆದರೆ ವಾಸ್ತವವೆಂದರೆ ಗಂಡಾಗಲೀ, ಹೆಣ್ಣಾಗಲೀ ಗುತ್ತಿಗೆಗೆ ಒಪ್ಪಿಕೊಂಡ ಕೆಲಸವನ್ನು ಮಾಡದೆ ಬಿಡುವು ತೆಗೆದುಕೊಂಡರೆ ಗುತ್ತಿಗೆದಾರನಿಗೆ ಅವರು ದೊಡ್ಡ ಮಟ್ಟದ ದಂಡವನ್ನು ಕಟ್ಟಿಕೊಡಬೇಕಾಗುತ್ತದೆ. ಆದರೆ ಈ ಕಬ್ಬು ಕಡಿಯುವ ಋತುವಿನ ಕೆಲಸದ ಮೇಲೆ ಅಪಾರವಾಗಿ ಅವಲಂಬಿಸಿರುವ ಭೀಡ್ ಜಿಲ್ಲೆಯ ಮಹಿಳೆಯರು ಗುತ್ತಿಗೆದಾರರ ನಿಯಮಕ್ಕೊಳಪಟ್ಟು ಕೆಲಸ ಮಾಡಲು ಹಿಸ್ಟೆರೊಕ್ಟಮಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಗರ್ಭಕೋಶವನ್ನೇ ತೆಗೆಸಿಕೊಳ್ಳುತ್ತಿದ್ದಾರೆ. ಗುತ್ತಿಗೆದಾರರ ಪ್ರಕಾರ ಮಹಿಳೆಯರು ಸ್ವಪ್ರೇರಣೆಯಿಂದಲೇ ಈ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಅಲ್ಲಿ ಕೆಲಸ ಮಾಡುವ ಮಹಿಳೆಯರ ಪ್ರಕಾರ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಗುತ್ತಿಗೆದಾರರೇ ಹಣಸಹಾಯ ಮಾಡುವುದಲ್ಲದೆ ಆ ಹಣವನ್ನು ಅವರ ಕೂಲಿಯ ಮೊತ್ತದಿಂದ ಕಡಿದುಕೊಳ್ಳುತ್ತಾರೆ.

ಭಾರತದ ಅಸಂಘಟಿತ ಕ್ಷೇತ್ರದಲ್ಲಿ ಮಹಿಳೆಯರೇ ಹೆಚ್ಚು ಕೆಲಸ ಮಾಡುವ ಉದ್ಯೋಗಗಳಲ್ಲಿ ಮಹಿಳೆಯರ ಶ್ರಮದ ಮೌಲ್ಯವನ್ನು ಕಡಿಮೆ ಮಾಡಿ ನೋಡುವುದಲ್ಲದೆ ಸಾಪೇಕ್ಷವಾಗಿಯೂ ಕಡಿಮೆ ಕೂಲಿಯನ್ನು ನೀಡಲಾಗುತ್ತದೆ. ಭೀಡ್ ಜಿಲ್ಲೆಯ ಉದಾಹರಣೆಯು ಹೇಳುವಂತೆ ಮಹಿಳೆಯರು ಇತರರಂತೆ ಸರಿಸಮಾನವಾದ ಅಥವಾ ಕೌಶಲ್ಯವುಳ್ಳ ಕಾರ್ಮಿಕರೆಂದು ಪರಿಗಣಿಸುವುದಿರಲಿ, ಅವರು ತಮ್ಮ ಉತ್ಪಾದಕತೆಯನ್ನು ಸಾಬೀತುಪಡಿಸಿಕೊಳ್ಳಬೇಕೆಂದರೆ ತಮ್ಮ ಒಂದು ಅಂಗವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಪರೋಕ್ಷ ಬಲಪ್ರಯೋಗದ ಕಾರಣದಿಂದ ಮಹಿಳೆಯರು ಶಸ್ತ್ರಚಿಕಿತ್ಸೆಯ ನಂತರದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುವುದಲ್ಲದೆ ಅವರ ಸ್ತ್ರೀತ್ವದ ಬೆಲೆಯನ್ನೂ ಸಹ ಅವರಿಂದಲೇ ನಗದಿನ ರೂಪದಲ್ಲಿ ಗುತ್ತಿಗೆದಾರರು ವಸೂಲಿ ಮಾಡುತ್ತಾರೆ. ಮಹಿಳೆಯರ ಶ್ರಮದ ಈ ಅಪಮೌಲ್ಯೀಕರಣಕ್ಕೆ ಮಡಿ-ಮೈಲಿಗೆಯ ಜಾತಿವಾದಿ ಮತ್ತು ಪುರುಷ ಪ್ರಧಾನ ಮೌಲ್ಯಗಳೂ ಸೇರಿಕೊಂಡು ಆಹಾರ ಸಂಸ್ಕರಣೆ, ರೇಷ್ಮೆ ಸಾಕಣೆ ಮತ್ತು ಗಾರ್ಮೆಂಟ್ ಕೈಗಾರಿಕೆಗಳಲ್ಲಿನ ಹಲವು ಬಗೆಯ ಕೆಲಸಗಳು ಮಹಿಳೆಯರಿಗೆ ನಿಷಿದ್ಧಗೊಂಡಿವೆ. ಮಾಲಕರು ಕಾರ್ಮಿಕರನ್ನು ಮನುಷ್ಯರೆಂದಾದರೂ ಪರಿಗಣಿಸುತ್ತಾರೆಯೇ? ಹಾಗವರು ಪರಿಗಣಿಸುವುದೇ ನಿಜವಾದಲ್ಲಿ, ಯಾರನ್ನು ಭೌತಿಕವಾಗಿ ಪರಿಪೂರ್ಣ ಕಾರ್ಮಿಕರೆಂದು ಪರಿಗಣಿಸಲಾಗುತ್ತದೆ? ಬಹುಪಾಲು ಸಂದರ್ಭಗಳಲ್ಲಿ ಮಾಲಕರ ಅಥವಾ ಗುತ್ತಿಗೆದಾರರ ಕಾರ್ಮಿಕ ಸಂಬಂಧಿ ತರ್ಕವು ಕಾರ್ಮಿಕ ಶ್ರಮಶಕ್ತಿಯ ಗರಿಷ್ಠ ಬಳಕೆಯ ತತ್ವವನ್ನಾಧರಿಸಿರುತ್ತದೆ.

ತಮ್ಮ ಲಾಭದ ಗರಿಷ್ಠತೆಗೆ ಅಡ್ಡಿ ಬರುವ ಅಥವಾ ತಡೆಗಟ್ಟುವ ಯಾವುದನ್ನೇ ಆದರೂ ಅವರು ನಿವಾರಿಸಿಕೊಳ್ಳಲು ಬಯಸುತ್ತಾರೆ. ಮಾನವರ ಕೆಲಸಗಳ ಅತ್ಯಗತ್ಯ ಭಾಗವೇ ಆಗಿರುವ ಕಾಲಕಾಲಕ್ಕೆ ತೆಗೆದುಕೊಳ್ಳುವ ಅಲ್ಪಬಿಡುವುಗಳೂ ಸಹ ಇವರ ಲೆಕ್ಕದಲ್ಲಿ ಸಂಪನ್ಮೂಲಗಳು ವ್ಯರ್ಥವಾದಂತೆ. ಇದು ಮನೆಗೆಲಸದ ಮತ್ತು ದಿನಗೂಲಿಯ ವಿಷಯದಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ, ಇಲ್ಲಿ ಮಾಲಕರು ತಾವೂ ಕೂಲಿ ಕೊಡುವ ಅವಧಿಯಷ್ಟೂ ಕಾಲ ಆ ಕಾರ್ಮಿಕರ ಪ್ರತಿ ನಿಮಿಷವೂ ತಮಗೇ ಸೇರಿದ್ದೆಂದು ಭಾವಿಸುತ್ತಿರುತ್ತಾರೆ. ಆಕ್ಸ್‌ಫಾಮ್ ಸಂಸ್ಥೆಯು ಇತ್ತೀಚೆಗೆ ಹೊರತಂದ ‘ಮೈಂಡ್ ದ ಗ್ಯಾಪ್’ ಎಂಬ ಅಧ್ಯಯನ ವರದಿಯು ಶ್ರಮದ ಸಂಬಂಧಗಳು ಜಾತಿ ಹಾಗೂ ಲಿಂಗ ಬೇಧದ ರಾಜಕೀಯ ಆರ್ಥಿಕತೆಯನ್ನು ಅಧರಿಸಿದೆಯೆಂದೂ, ಈ ವಿದ್ಯಮಾನವೇ ಉದ್ಯೋಗಳ ಲಭ್ಯತೆಯನ್ನ್ನೂ, ಉದ್ಯೋಗದ ಸ್ವರೂಪವನ್ನೂ, ಉದ್ಯೋಗದ ಸ್ಥಿತಿಗತಿಯನ್ನೂ ಮತ್ತು ಅದರ ಮಾರುಕಟ್ಟೆ ಪರಿಣಾಮಗಳನ್ನೂ ನಿರ್ಧರಿಸುತ್ತವೆ ಎಂದು ಹೇಳುತ್ತದೆ. ಲಾಭದ ಮತ್ತು ಉತ್ಪಾದಕತೆಯ ಹೆಚ್ಚಳದ ಬೇಟೆಯು ತೋರಿಕೆಗೆ ಲಿಂಗಾತೀತವಾದ ಕೆಲಸದ ಸ್ಥಳವನ್ನು ಸೃಷ್ಟಿಸುವಂತೆ ಕಾಣುತ್ತದೆ. ಆದರೆ ವಾಸ್ತವದಲ್ಲಿ ಅವು ಅತ್ಯಂತ ಪುರುಷಬಲಪ್ರೇರಿತವಾಗಿಯೂ ಮತ್ತು ಸಾಮಾಜಿಕ ಶ್ರೇಣೀಕರಣದಿಂದಲೂ ಕೂಡಿರುತ್ತವೆ.

ಈ ಕೆಲಸದ ಆವರಣದೊಳಗೆ ಪ್ರವೇಶಿಸುವ ಮಹಿಳೆಯು ತಮ್ಮ ಲಿಂಗವನ್ನು ಹಾಗೂ ದೈಹಿಕ ಅಗತ್ಯಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಸದಾ ತಮ್ಮ ದೈಹಿಕ ಸಾಮರ್ಥ್ಯವನ್ನು, ಧಾರಣ ಶಕ್ತಿಯನ್ನೂ ಸಾಬೀತು ಮಾಡಬೇಕೆಂದೂ ನಿರೀಕ್ಷಿಸಲಾಗುತ್ತದೆ. ಎಲ್ಲಾ ಬಗೆಯ ಉದ್ದಿಮೆಗಳಲ್ಲೂ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರು ತಮ್ಮ ಉತ್ಪಾದಕತೆಯ ಸಾಮರ್ಥ್ಯವನ್ನು ಸಾಬೀತುಪಡಿಸಬೇಕೋ ಅಥವಾ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಬೇಕೋ ಎಂಬ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯಕ್ಕೆ ಗುರಿಯಾಗಿದ್ದಾರೆ. ಮತ್ತೊಂದು ಕಡೆ ಮಾಲಕರು ತಾಯ್ತನ ರಜೆ, ಶಿಶು ಆರೈಕೆ, ನೈರ್ಮಲ್ಯ ಸೌಲಭ್ಯಗಳು ಮತ್ತು ವಿರಾಮ ತೆಗೆದುಕೊಳ್ಳಲು ನಿರ್ದಿಷ್ಟ ಸ್ಥಳಗಳನ್ನು ಒದಗಿಸಬೇಕೆಂಬ ಕಾರ್ಮಿಕರ ಹಕ್ಕುಗಳನ್ನು ಗರಿಷ್ಠ ಉತ್ಪಾದಕತೆಯನ್ನು ಪಡೆದುಕೊಳ್ಳುವುದಕ್ಕೆ ಅಡ್ಡಿಯಾಗಿರುವ ತೊಡಕುಗಳೆಂದು ಭಾವಿಸುತ್ತಾರೆ. ಉತ್ಪಾದಕತೆಯನ್ನು ಹೆಚ್ಚಿಸಿ ಗರಿಷ್ಠ ಲಾಭವನ್ನು ಪಡೆದುಕೊಳ್ಳುವುದೇ ಅವರ ಏಕೈಕ ಕಾಳಜಿಯಾಗಿರುವುದರಿಂದ ಅತ್ಯಂತ ಮೂಲಭೂತ ಮಾನವ ಹಕ್ಕುಗಳನ್ನು ಒದಗಿಸುವುದನ್ನೂ ಸಹ ಅವರು ಕಾರ್ಮಿಕರಿಗೆ ಮಾಡುತ್ತಿರುವ ಉಪಕಾರವೆಂದು ಪರಿಗಣಿಸುತ್ತಾರೆ.

ಎಲ್ಲಿಯತನಕ ಮಹಿಳಾ ಕಾರ್ಮಿಕರು ಈ ಬಗೆಯ ವಿಶೇಷ ರಿಯಾಯತಿಗಳನ್ನು ಆಗ್ರಹಿಸುವುದಿಲ್ಲವೋ ಅಲ್ಲಿಯವರೆಗೆ ಮಹಿಳಾ ಕಾರ್ಮಿಕರಿಗೆ ಸ್ವಾಗತವಿರುತ್ತದೆ. ಆ ಮೂಲಕ ಅವರು ಮಹಿಳೆಯರು ಪುರುಷರಂತಿದ್ದರೆ ಮಾತ್ರ ಶ್ರಮಿಕರಾಗುವುದಕ್ಕೆ ಅರ್ಹರು ಎಂದು ಹೇಳುತ್ತಿದ್ದಾರೆ. ಇದೊಂದು ಆಮಾನವೀಯ ತರ್ಕವಾಗಿದೆ. ಏಕೆಂದರೆ ಆ ಮೂಲಕ ಅದು ಮಹಿಳಾ ಕಾರ್ಮಿಕರು ಯಾವಾಗಲು ಒಂದು ಆದರ್ಶ ಪುರುಷ ಕಾರ್ಮಿಕತ್ವವನ್ನು ಆವಾಹಿಸಿಕೊಂಡಿರುವಂತೆ ಮಾಡುತ್ತಾ ಒಂದು ಪರಾಯೀಕರಣಗೊಂಡ ಮತ್ತು ಮನುಷ್ಯ ಘನತೆಯು ನಿರಾಕರಿಸಲ್ಪಟ್ಟ ಮಹಿಳಾ ಕಾರ್ಮಿಕ ಶಕ್ತಿಯನ್ನು ಹುಟ್ಟುಹಾಕುತ್ತದೆ. ಮಹಿಳೆಯ ದೇಹವು ಹೀಗೆ ಹಲವು ಪ್ರಯೋಗಗಳಿಗೆ ತುತ್ತಾಗುತ್ತಾ ಪರಿಣಾಮದಲ್ಲಿ ಕಾರ್ಖಾನೆಯ ಒಂದು ಉಪಕರಣವಾಗಿಬಿಡುತ್ತದೆ. ಕಬ್ಬುಕಡಿಯುವ ಮಹಿಳಾ ಕಾರ್ಮಿಕಳು ತನ್ನ ಗರ್ಭಕೋಶವನ್ನು ತೆಗೆಸಿಕೊಂಡು ಬಂದ ಮೇಲೆ ಮಾತ್ರವೇ ಆಕೆಯನ್ನು ಕಾರ್ಮಿಕಳು ಎಂದು ಪರಿಗಣಿಸಲಾಗುತ್ತದೆ. ಆದರೆ ಅದಕ್ಕೂ ಮುಂಚೆ ಆಕೆ ಮಕ್ಕಳಿಗೆ ಜನ್ಮ ನೀಡುವ ಮರುಉತ್ಪಾದನಾ ಶ್ರಮವನ್ನೂ ಹಾಗೂ ತನಗೆ ನಿಗದಿಯಾಗಿರುವ ಶಿಶು ಆರೈಕೆ ಕರ್ತವ್ಯವನ್ನು ನಿರ್ವಹಿಸಿರಬೇಕು. ತನ್ನ ಸ್ತ್ರೀತ್ವವನ್ನು ಪ್ರತಿಪಾದಿಸುವುದರಲ್ಲಾಗಲಿ ಅಥವಾ ಅದನ್ನು ಬಿಟ್ಟುಕೊಡುವುದರಲ್ಲಾಗಲಿ ಮಹಿಳೆಗೆ ಯಾವ ಸ್ವಂತಿಕೆಗೂ ಅವಕಾಶವಿಲ್ಲ. ಅದನ್ನು ತಂದೆ, ಸಹೋದರ, ಗಂಡ ಅಥವಾ ಮಗ ಹಾಗೂ ಕೆಲಸದ ಸ್ಥಳಗಳಲ್ಲಿ ಮಾಲಕ ನಿಯಂತ್ರಿಸುತ್ತಾನೆ.

ಇಂತಹ ಸನ್ನಿವೇಶದಲ್ಲಿ ಮಹಿಳೆಯರ ಶ್ರಮಶಕ್ತಿಯಲ್ಲಿ ಆಗುವ ಹೆಚ್ಚಳವು ಅಂಥ ಮಹತ್ವದ್ದೆಂದು ಅನಿಸುವುದಿಲ್ಲ. ಏಕೆಂದರೆ, ಅವರು ಸಮಾಜದಲ್ಲಿ ಎದುರಿಸುತ್ತಿರುವ ವ್ಯವಸ್ಥಾತ್ಮಕ ಪ್ರತಿಕೂಲತೆಗಳು ಮುಂದುವರಿಯುತ್ತಲೇ ಹೋಗುತ್ತವೆ ಮತ್ತು ಕೆಲಸದ ಸ್ಥಳಗಳಲ್ಲಿ ಅದು ತಾರತಮ್ಯ, ಲೈಂಗಿಕ ಕಿರುಕುಳ, ಇನ್ನಿತ್ಯಾದಿಗಳ ರೂಪದಲ್ಲಿ ಹೆಚ್ಚಾಗುತ್ತಲೂ ಹೋಗುತ್ತವೆ. ಭೀಡ್‌ನ ಮಹಿಳಾ ಕಾರ್ಮಿಕರ ಮೇಲೆ ನಡೆದಿರುವ ದೌರ್ಜನ್ಯವನ್ನು ರಾಷ್ಟ್ರೀಯ ಮಹಿಳಾ ಆಯೋಗವೂ ತಡವಾಗಿಯಾದರೂ ಗಮನಕ್ಕೆ ತೆಗೆದುಕೊಂಡಿರುವುದು ಸ್ವಾಗತಾರ್ಹ ವಿಷಯವಾದರೂ, ಅದು ಕುರುಡು ಅಧಿಕಾರಶಾಹಿಯನ್ನೇನೂ ಅಲುಗಿಸುವುದಿಲ್ಲ. ಕೃಷಿ ಕೂಲಿ ಮಾರುಕಟ್ಟೆಯ ಕುಸಿತವು ಅಂಚಿಗೆ ದೂಡಲ್ಪಟ್ಟ ಮಹಿಳೆಯರು ಅಮಾನವೀಯ ಕೆಲಸದ ಪರಿಸ್ಥಿತಿಗಳಿರುವ ಮತ್ತು ಸರಿಯಾಗಿ ಕೂಲಿ ನೀಡದ ಹಾಗೂ ಶೋಷಕ ಗುತ್ತಿಗೆ ಕೆಲಸಗಳಿಗೆ ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯವನ್ನು ಸೃಷ್ಟಿಸಿದೆ. ಕೆಲಸದ ಸ್ಥಳಗಳಲ್ಲಿ ಮೂಲಭೂತ ಬದಲಾವಣೆ ಬರದಿದ್ದರೆ ಮತ್ತು ಕಠಿಣವಾದ ಕಾರ್ಮಿಕಪರ ನೀತಿಗಳು ಜಾರಿಯಾಗದಿದ್ದರೆ ಮಹಿಳಾ ಕಾರ್ಮಿಕರ ಮೇಲೆ ತಾರತಮ್ಯ ಮತ್ತು ದೌರ್ಜನ್ಯಗಳು ಅಧಿಕಗೊಳ್ಳುವ ಸಂಭವವೇ ಹೆಚ್ಚು. ಮಹಿಳೆಯರು ಕೂಡ ಸಮಾನಸ್ಥಾಯಿಯಲ್ಲಿ ದೇಶದ ಶ್ರಮಶಕ್ತಿಯ ಭಾಗ ವಾಗಲು ಭೀಡ್‌ನಂತಹ ಇನ್ನೆಷ್ಟು ಪ್ರಕರಣಗಳು ಬೆಳಕಿಗೆ ಬರಬೇಕು?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)