varthabharthi

ಸಂಪಾದಕೀಯ

ಚುನಾವಣಾ ವಿಷಯವಾಗದ ನಿರುದ್ಯೋಗ

ವಾರ್ತಾ ಭಾರತಿ : 30 Apr, 2019

ಸಾಧಾರಣವಾಗಿ ಕಾರ್ಮಿಕ ಸಂಘಟನೆಗಳ ಹೋರಾಟಗಳ ಕುರಿತಂತೆ ತಿಂಗಳಿಗೆ ಲಕ್ಷಗಟ್ಟಳೆ ವೇತನ ಪಡೆಯುವ ಐಟಿ, ಬಿಟಿ ಮಂದಿಗೆ ತಿರಸ್ಕಾರದ ಭಾವವಿರುತ್ತದೆ. ರೈತರು, ಕಾರ್ಮಿಕರ ಹೋರಾಟಗಳು ಈ ದೇಶಕ್ಕೆ ಕಳಂಕ ಎಂಬಂತೆ ಇವರು ಬಲವಾಗಿ ನಂಬಿ ಕೊಂಡು ಬಂದವರು. ಎಂದಿಗೂ ಇತರ ಕಾರ್ಮಿಕರ ಸಂಕಟಗಳ ಜೊತೆಗೆ ತಮ್ಮನ್ನು ಬೆಸೆಯದವರು ಇವರು. ಈ ಕಾರ್ಮಿಕರಿಗೆ ಒದಗಿದ ಆಪತ್ತು ನಮ್ಮನ್ನೂ ಒಂದಲ್ಲ ಒಂದು ದಿನ ನುಂಗಿ ಹಾಕಬಹುದು ಎನ್ನುವ ಕಲ್ಪನೆಯೇ ಇಲ್ಲದವರು. ಮಾತು ಮಾತಿಗೆ ಮೀಸಲಾತಿಯನ್ನು ವಿರೋಧಿಸುತ್ತಾ ‘ಪ್ರತಿಭೆ, ಅರ್ಹತೆ’ ಎಂದೆಲ್ಲ ಒದರುವವರು. ಈ ದೇಶ ನಿಂತಿರುವುದೇ ನಮ್ಮಂತಹ ಯೋಗ್ಯರ ಬಲದಿಂದ ಎಂಬ ಭ್ರಮೆಯಲ್ಲಿದ್ದವರು. ವಿಪರ್ಯಾಸವೆಂದರೆ ಕಳೆದ ಕೆಲವು ವರ್ಷಗಳಿಂದ ಈ ಭ್ರಮೆಗಳು ಒಂದೊಂದಾಗಿ ಕಳಚುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಐಟಿ ಕಂಪೆನಿಗಳ ಉದ್ಯೋಗದಲ್ಲಿ ಬಿರುಗಾಳಿಯೆದ್ದಿದೆ.

ಅಮೆರಿಕವನ್ನು ನೆಚ್ಚಿಕೊಂಡ ಐಟಿ ಸಿಬ್ಬಂದಿ ಏಕಾಏಕಿ ಉದ್ಯೋಗ ಕಳೆದುಕೊಂಡು ದಿಗ್ಭ್ರಾಂತರಾಗಿದ್ದಾರೆ. ತಮ್ಮ ಸಮಸ್ಯೆಗಳನ್ನು ಯಾರೊಂದಿಗೆ ತೋಡಿಕೊಳ್ಳಬೇಕು, ಆ ಸಮಸ್ಯೆಯ ವಿರುದ್ಧ ಹೇಗೆ ಹೋರಾಟ ನಡೆಸಬೇಕು ಎನ್ನುವುದು ಅರಿಯದೆ ಹಲವು ಐಟಿ ಸಿಬ್ಬಂದಿ ಮಾನಸಿಕವಾಗಿ ಖಿನ್ನರಾಗಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ. ಇದೀಗ ಆಕಾಶದಲ್ಲಿ ಹಾರಾಡುತ್ತಿದ್ದ ವಿಮಾನ ಸಿಬ್ಬಂದಿಯ ಕತೆಯೂ ಅದೇ ಆಗಿದೆ. ನೋಟು ನಿಷೇಧದ ಸಂದರ್ಭದಲ್ಲಿ, ಈ ದೇಶದ ಲಕ್ಷಾಂತರ ಸಣ್ಣ ಉದ್ದಿಮೆಗಳು ನೆಲಕಚ್ಚಿದವು. ಸಣ್ಣ ಪುಟ್ಟ ಉದ್ಯೋಗ ಮಾಡುತ್ತಾ ದಿನ ದೂಡುತ್ತಿದ್ದವರು ನಿರುದ್ಯೋಗಿಗಳಾದರು. ಡಿಜಿಟಲೀಕರಣವೂ ಸ್ಥಳೀಯ ಉದ್ಯಮ ವ್ಯವಹಾರಗಳಿಗೆ ತೀವ್ರ ಧಕ್ಕೆ ತಂದವು. ಸ್ಥಳೀಯ ದಿನಸಿ ಅಂಗಡಿಗಳು ವ್ಯಾಪಾರಗಳಿಲ್ಲದೆ ಮುಚ್ಚಬೇಕಾದಂತಹ ಸ್ಥಿತಿ. ದೇಶದಲ್ಲಿ ಇಷ್ಟೆಲ್ಲ ಆರ್ಥಿಕ ಏರುಪೇರುಗಳು ನಡೆಯುತ್ತಿದ್ದಾಗ ಈ ದೇಶದ ತಳಸ್ತರದ ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸುವುದು ತಮ್ಮ ಕರ್ತವ್ಯವೂ ಕೂಡ ಎಂದು ಆಕಾಶದಲ್ಲಿ ತೇಲುತ್ತಿದ್ದ ವಿಮಾನ ಸಿಬ್ಬಂದಿ ಭಾವಿಸಿದ್ದಿದ್ದರೆ ಇಂದು ಜೆಟ್ ಏರ್‌ವೇಸ್ ಸಿಬ್ಬಂದಿಯ ಪರವಾಗಿ ಈ ದೇಶದ ತಳಸ್ತರದ ಜನರೂ ನಿಲ್ಲುತ್ತಿದ್ದರೇನೋ.

ಅದೇನೇ ಇರಲಿ, ಆಕಾಶದಲ್ಲಿ ಮೆರೆಯುತ್ತಿದ್ದವರೂ ಇಂದು ಮೊದಲ ಬಾರಿ ಭೂಮಿಗಿಳಿದಿದ್ದಾರೆ. ಅವರೂ ಇಂದು ಸರಕಾರದ ಮುಂದೆ ತಮ್ಮ ವೇತನಕ್ಕಾಗಿ ಗೋಗರೆಯುತ್ತಿದ್ದಾರೆ. ಬೀದಿಯಲ್ಲಿ ಧರಣಿ ನಡೆಸುತ್ತಿದ್ದಾರೆ. ವೇತನವಿಲ್ಲದೆ ಈಗಾಗಲೇ ಜೆಟ್ ಏರ್‌ವೇಸ್‌ನ ಒಬ್ಬ ಸಿಬ್ಬಂದಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಜೆಟ್ ಏರ್‌ವೇಸ್‌ನ ಬಿಕ್ಕಟ್ಟಿಗೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸದೆ ಇದ್ದರೆ ಇನ್ನಷ್ಟು ಉದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ನ್ಯಾಶನಲ್ ಏವಿಯೇಟರ್ ಗಿಲ್ಡ್ ನ ಉಪಾಧ್ಯಕ್ಷ ಎಚ್ಚರಿಸಿದ್ದಾರೆ. ಜೆಟ್ ಏರ್‌ವೇಸ್‌ನ 22,000 ಉದ್ಯೋಗಿಗಳು ಅತಂತ್ರದಲ್ಲಿದ್ದಾರೆ. ಅವರು ದಿನದಿಂದ ದಿನಕ್ಕೆ ಉದ್ಯೋಗಿಗಳು ನಿರಾಶರಾಗುತ್ತಿದ್ದಾರೆ. ಬಿಕ್ಕಟ್ಟಿಗೆ ಪರಿಹಾರ ಹುಡುಕಲು ಎಲ್ಲ ರಾಜಕೀಯ ಪಕ್ಷಗಳು ಸಂಘಟಿತರಾಗಬೇಕು ಎಂದೂ ಎನ್‌ಎಜಿ ಕರೆ ನೀಡಿದೆ. ಆದರೆ ಯುದ್ಧ ಘೋಷಣೆಯಾದ ಬಳಿಕ, ಶಸ್ತ್ರ ಸಂಗ್ರಹಕ್ಕೆ ಇಳಿದಂತಿದೆ ಅವರ ಮಾತು.

ಇಂದು ದೇಶದ ಬಹುತೇಕ ಎಲ್ಲ ಉದ್ದಿಮೆಗಳು, ಕೈಗಾರಿಕಾ ಸಂಸ್ಥೆಗಳು ಬಿಕ್ಕಟ್ಟಿನಲ್ಲಿವೆ. ಸಿಬ್ಬಂದಿ ಅತಂತ್ರದಲ್ಲಿದ್ದಾರೆ. ಕಾರ್ಪೊರೇಟ್ ಕುಳದ ಹಿತಾಸಕ್ತಿಗಾಗಿ ಹಿಂದೂಸ್ಥಾನ್ ಏರೋನಾಟಿಕ್ಸ್‌ನ್ನು ನಾಶ ಮಾಡಲು ಸ್ವತಃ ಕೇಂದ್ರ ಸರಕಾರವೇ ತುದಿಗಾಲಲ್ಲಿ ನಿಂತಿದೆ. ಜಿಯೋಗಾಗಿ ಬಿಎಸ್ಸೆನ್ನೆಲ್ ಸಂಸ್ಥೆ ಜೀವಬಿಡಬೇಕಾಗಿದೆ. ಬಿಎಸ್ಸೆನ್ನೆಲ್‌ನ ಸಾವಿರಾರು ಸಿಬ್ಬಂದಿ ನಿರುದ್ಯೋಗಿಗಳಾಗುವ ಆತಂಕದಲ್ಲಿದ್ದಾರೆ. ಇದು ಚುನಾವಣೆಯ ಹೊತ್ತು. ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳನ್ನು ತಮ್ಮ ಪರವಾಗಿ ಸಂಘಟಿಸಿ, ಪೂರಕ ನಿರ್ಧಾರವೊಂದನ್ನು ಸರಕಾರದ ಮೂಲಕ ಜಾರಿಗೊಳಿಸುವುದು ಸುಲಭ. ಆದರೆ ‘ಮೋದಿ’ ಎನ್ನುವ ಭ್ರಮೆಯ ಅಬ್ಬರದಲ್ಲಿ ಜನರ ಮೂಲಭೂತ ಸಮಸ್ಯೆಯೇ ಬದಿಗೆ ಸರಿದಿದೆ. ಮೋದಿ ಎನ್ನುವ ಬಿಸಿಲುಗುದುರೆಯ ಹಿಂದೆ ಸಾಗಿದವರಲ್ಲಿ ವಿಮಾನಸಂಸ್ಥೆಗಳಿಂದ ಹಿಡಿದು, ಐಟಿ, ಬಿಎಸ್ಸೆನ್ನೆಲ್ ಸಿಬ್ಬಂದಿಯೇ ಬಹುತೇಕ ಇದ್ದಾರೆ. ಅವರೆಲ್ಲರೂ ಕೇಂದ್ರ ಸರಕಾರದ ವಿರುದ್ಧ ಸ್ಪಷ್ಟ ಮಾತುಗಳನ್ನಾಡಲು ಹಿಂದೇಟು ಹಾಕುತ್ತಿದ್ದಾರೆ. ಅವರ ರಾಜಕೀಯ ಬದ್ಧತೆಗಳೇ ಅವರಿಗೆ ಮುಳುವಾಗಿವೆ. ಆದುದರಿಂದಲೇ ನಿರುದ್ಯೋಗ ಚುನಾವಣೆಯ ಮುಖ್ಯ ವಿಷಯ ಆಗಲೇ ಇಲ್ಲ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೇಶ ಅತಿ ಕಳವಳ ಹೊಂದಿರುವುದು ನಿರುದ್ಯೋಗಗಳಿಗೆ ಸಂಬಂಧಿಸಿ ಎಂದು ಸಿ ವೋಟರ್-ಐಎಎನ್‌ಎಸ್ ನಡೆಸಿರುವ ಸಮೀಕ್ಷೆ ತಿಳಿಸಿದೆ. ಆರ್ಥಿಕ ಹಿಂಜರಿಕೆ ಜನರನ್ನು ಕಾಡುತ್ತಿರುವ ಪ್ರಮುಖ ವಿಷಯ ಎನ್ನುವುದನ್ನು ಈ ಸಮೀಕ್ಷೆ ಬಹಿರಂಗಪಡಿಸಿದೆ. 11,672 ಜನರನ್ನೊಳಗೊಂಡ ಈ ಮಾದರಿ ಸಮೀಕ್ಷೆಯಲ್ಲಿ ಶೇ. 57.04ರಷ್ಟು ಜನರು ಆರ್ಥಿಕ ವಿಷಯಗಳೇ ದೇಶದ ಮುಖ್ಯ ಸಮಸ್ಯೆ ಎಂದು ನಂಬಿದ್ದಾರೆ. ಜೊತೆಗೆ ಶೇ. 28.42ರಷ್ಟು ಜನರು ನೇರವಾಗಿ ನಿರುದ್ಯೋಗಗಳನ್ನೇ ಪ್ರಸ್ತಾಪಿಸಿದ್ದಾರೆ. ಶೇ. 11ರಷ್ಟು ಜನರು ಮಾತ್ರ ಭದ್ರತಾ ವಿಷಯಕ್ಕೆ ಆದ್ಯತೆ ನೀಡಿದ್ದಾರೆ. ಆದರೆ ಈ ಚುನಾವಣೆಯಲ್ಲಿ ನಡೆಯುತ್ತಿರುವುದಾದರೂ ಏನು? ಜನರನ್ನು ಪಾಕಿಸ್ತಾನ ಮತ್ತು ಉಗ್ರರನ್ನು ಮುಂದಿಟ್ಟು ಬಿಜೆಪಿ ಬೆದರಿಸುತ್ತಿದೆ. ಪುಲ್ವಾಮ ದಾಳಿಗೆ ಕೇಂದ್ರ ಸರಕಾರವೇ ಹೊಣೆಯಾಗಿದ್ದರೂ, ಬಾಲಕೋಟ್ ದಾಳಿಯ ಮೂಲಕ ಅದನ್ನು ಸರಿಪಡಿಸಿದ್ದೇವೆ ಎಂದು ದೇಶದ ಜನರನ್ನು ನಂಬಿಸಲು ಹೊರಟಿದೆ.

ನೋಟು ನಿಷೇಧ, ಜಿಎಸ್‌ಟಿ ಇತ್ಯಾದಿಗಳು ತನ್ನ ಸಾಧನೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದ್ದರೂ ಚುನಾವಣೆಯಲ್ಲಿ ಅದನ್ನು ಪ್ರಸ್ತಾಪಿಸುತ್ತಲೇ ಇಲ್ಲ ಯಾಕೆ? ಚುನಾವಣೆ ಯಾಕೆ ಬಾಲಕೋಟ್ ಕೇಂದ್ರಿತವಾಗಿದೆ? ಕಾಂಗ್ರೆಸ್ ಪಕ್ಷ ಅಭಿವೃದ್ಧಿಗೆ ಮತ್ತು ಜನಸಾಮಾನ್ಯರ ಬದುಕಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಣಾಳಿಕೆಯಲ್ಲಿ ಹೇಳಿದೆಯಾದರೂ, ಅದು ನೋಟು ನಿಷೇಧ ಮತ್ತು ಜಿಎಸ್‌ಟಿಯ ವೈಫಲ್ಯಗಳನ್ನು ಜನರ ಮುಂದಿಡುವಲ್ಲಿ ಸಂಪೂರ್ಣ ವಿಫಲವಾಗಿದೆ. ನೋಟು ನಿಷೇಧವಾದಂದಿನಿಂದ ಹಿಡಿದು ಇಂದಿನವರೆಗಿನ ಜನಸಾಮಾನ್ಯರ ಸಂಕಟಗಳನ್ನು ಮತ್ತೆ ವಿವರಿಸಲು, ಅದರಿಂದಾದ ನಾಶ ನಷ್ಟವನ್ನು ಅಂಕಿಅಂಶ ಸಹಿತ ವಿವರಿಸಲು ಬಿಜೆಪಿಯೇತರ ಪಕ್ಷಗಳಿಗೆ ಸಾಧ್ಯವಾಗಿಲ್ಲ. ನೋಟು ನಿಷೇಧದಿಂದ ಬಿಜೆಪಿ ಸರಕಾರ ನಡೆಸಿರುವ ಅಕ್ರಮ, ಅದರಿಂದ ಹೇಗೆ ಬೃಹತ್ ಕಾರ್ಪೊರೇಟ್ ಕುಳಗಳು ಕೋಟಿಗಟ್ಟಲೆ ಸಂಪಾದಿಸಿದರು ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಸಲು ಆ ಪಕ್ಷಗಳು ಹಿನ್ನಡೆ ಕಂಡಿವೆ. ಪದವೀಧರರನ್ನು ಪಕೋಡ ಮಾರುವ ಸ್ಥಿತಿಗಿಳಿಸಿದ ಸರಕಾರದ ಆರ್ಥಿಕ ಪ್ರಮಾದಗಳೇ ಇಂದಿನ ಚುನಾವಣೆಯ ವಿಷಯವಾಗಬೇಕಾಗಿತ್ತು. ಆದರೆ ಬಿಜೆಪಿ ಜಾಣತನದಿಂದ ಜನರ ಗಮನವನ್ನು ಪಾಕಿಸ್ತಾನ, ಪುಲ್ವಾಮ, ಅಸ್ಸಾಂ, ಕಾಶ್ಮೀರದ ಕಡೆಗೆ ಒಯ್ಯುತ್ತಿದೆ. ಜನರನ್ನು ಭಾವನಾತ್ಮಕವಾಗಿ ಮರುಳು ಮಾಡಿ ಮತಯಾಚಿಸಲು ಹೊರಟಿದೆ. ಮೋದಿ ಎನ್ನುವ ಬಲೂನಿಗೆ ಗಾಳಿ ತುಂಬಿ ಅದನ್ನು ಮಾರಲು ಹೊರಟಿದೆ. ಜನರು ಈ ಬಣ್ಣದ ಬಲೂನಿಗೆ ಮರುಳಾಗಿದ್ದಾರೆ. ಆ ಬಲೂನನ್ನು ಒಡೆಯುವ ಸಣ್ಣ ಸೂಜಿಯ ಕೆಲಸವನ್ನೂ ವಿರೋಧ ಪಕ್ಷ ಮಾಡದೇ ಇರುವುದು ಈ ಬಾರಿಯ ಲೋಕಸಭಾ ಚುನಾವಣೆಯ ವೈಫಲ್ಯಗಳಲ್ಲಿ ಒಂದಾಗಿದೆ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)