varthabharthi

ನಿಮ್ಮ ಅಂಕಣ

ಇದುವೇ ಇವರ ನಿಜವಾದ ದೇಶಪ್ರೇಮವೇ?

ವಾರ್ತಾ ಭಾರತಿ : 30 Apr, 2019
ಡಾ. ಕೆ. ಷರೀಫಾ, ಬೆಂಗಳೂರು

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ದಿಗ್ವಿಜಯಸಿಂಗ್‌ರವರ ವಿರುದ್ಧ ಮಧ್ಯಪ್ರದೇಶದ ಭೂಪಾಲದಿಂದ ಸಾಧ್ವಿ ಪ್ರಜ್ಞಾ ಠಾಕೂರ್‌ರನ್ನು ಕಣಕ್ಕಿಳಿಸಿದೆ. ಆಕೆ 2008ರಲ್ಲಿ ನಡೆದ ಮಾಲೆಗಾಂವ್ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ. ಆಕೆಯನ್ನು ಬಿಜೆಪಿ ತನ್ನ ಪಕ್ಷಕ್ಕೆ ಸೇರಿಸಿಕೊಂಡಿದೆ.

2008ರ ಮಾರ್ಚ್ 29ರಂದು ಮಹಾರಾಷ್ಟ್ರದ ಮಾಲೇಗಾಂವ್ ಪಟ್ಟಣದಲ್ಲಿ ಮುಸ್ಲಿಮರೇ ಹೆಚ್ಚಿರುವ ಪ್ರದೇಶದ ಜನನಿಬಿಡ ರಸ್ತೆಯಲ್ಲಿ ಬಲವಾದ ಬಾಂಬೊಂದು ಸ್ಫೋಟಗೊಂಡು ಸ್ಥಳದಲ್ಲೇ 7 ಜನ ಸತ್ತು ಎಂಬತ್ತಕ್ಕೂ ಹೆಚ್ಚು ಜನ ಮಾರಣಾಂತಿಕವಾಗಿ ಗಾಯಗೊಂಡರು. ಇಂತಹ ಭಯಾನಕ ಸ್ಫೋಟದ ಆರೋಪಿಯನ್ನು ಸಂಸದೆಯನ್ನಾಗಿಸಲು ಪ್ರಯತ್ನಿಸುವುದರ ಮೂಲಕ ದಲಿತರ ಮತ್ತು ಮುಸ್ಲಿಮರ ಮೇಲಿನ ಹಿಂಸೆ, ಸಾವುಗಳನ್ನು ಮೋದಿ ಈ ಮೂಲಕ ಸಮರ್ಥಿಸಿದಂತಾಗಿದೆ. ಇದು ಮುಸ್ಲಿಮರ ಮೇಲೆ ನಡೆದಿರುವ ಸಂಫೀ ಭಯೋತ್ಪಾದನಾ ದಾಳಿಗಳನ್ನು ಅಧಿಕೃತವಾಗಿ ಶಾಸನಬದ್ಧಗೊಳಿಸಲು ಹೊರಟಿರುವ ಸಂಘ ಪರಿವಾರದ ಹುನ್ನಾರವೆಂಬುದನ್ನು ಮರೆಮಾಚಲು ಸಾಧ್ಯವಿಲ್ಲ.

ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ 2003ರಿಂದ ಹಿಡಿದು 2008ರವರೆಗಿನ ಅನೇಕ ಭಯೋತ್ಪಾದನಾ ಘಟನೆಗಳಲ್ಲಿ ಭಾಗಿಯಾಗಿದ್ದಾರೆಂಬ ಆರೋಪವಿದೆ. ಅದರಲ್ಲಿ ಹೈದರಾಬಾದ್‌ನ ಮಕ್ಕಾ ಮಸೀದಿ ಬಾಂಬ್ ಸ್ಫೋಟ, ನಾಸಿಕ್, ನಾಂದೇಡ್, ಅಜ್ಮೀರ್ ದರ್ಗಾ, ಕಾನ್ಪುರ, ಪರ್‌ಭಣಿ ಮುಂತಾದ ಸ್ಫೋಟಗಳ ಹಿಂದೆ ಸಾಧ್ವಿ ಪ್ರಜ್ಞಾ ಸಿಂಗ್ ಇದ್ದಾರೆಂಬ ಆರೋಪವಿದೆ. ಈ ಸ್ಫೋಟಗಳ ಹಿಂದೆ ಅವರು ಸಕ್ರಿಯ ಸದಸ್ಯೆಯಾಗಿರುವ 'ಅಭಿನವ್ ಭಾರತ್' ಎಂಬ ಸಂಘಟನೆಯ ಷಡ್ಯಂತ್ರವಿರುವುದು ಪತ್ತೆಯಾಗಿದೆ. ಇದಕ್ಕೆ ಬೇಕಾದ ಹಣಕಾಸಿನ ಸವಲತ್ತನ್ನು ಪುಣೆಯ ಶ್ಯಾಮ್ ಆಪ್ಟೆ ಎಂಬ ವ್ಯಕ್ತಿ ಮಾಡುತ್ತಿದ್ದನೆನ್ನಲಾಗಿದೆ. ಆತ ಆರೆಸ್ಸೆಸ್‌ನ ಹಿರಿಯ ನಾಯಕ. ಪ್ರಜ್ಞಾ ಸಿಂಗ್ ಠಾಕೂರ್ ಇನ್ನೂ ದೋಷಮುಕ್ತಳಾಗಿಲ್ಲ. ಕೋರ್ಟ್ ಇನ್ನೂ ಕ್ಲೀನ್ ಚಿಟ್ ನೀಡಿಲ್ಲ. ಈಗ ಸರಕಾರ ನಿಷ್ಪಕ್ಷವಾಗಿ ತನಿಖೆ ನಡೆಸದಿದ್ದರೆ ತನಿಖೆಯ ದಿಕ್ಕನ್ನೇ ಬದಲಿಸುವ ಹುನ್ನಾರ ಈ ಸಂಘಿಗಳದು. ಸಂಘಿಗಳ ಭಯೋತ್ಪ್ಪಾದನೆಯನ್ನು ಶಾಸನಾತ್ಮಕಗೊಳಿಸಿ ಅಧಿಕೃತ ಪ್ರಭುತ್ವ ಭಯೋತ್ಪಾದನೆಯನ್ನಾಗಿಸುವ ದೊಡ್ಡ ಹುನ್ನಾರದ ಭಾಗವಾಗಿಯೇ ಇಂತಹ ಕೃತ್ಯಗಳನ್ನು ಬಿಜೆಪಿ ಬೆಂಬಲಿಸುತ್ತಿದೆ.

ಹೇಮಂತ ಕರ್ಕರೆಯವರಂತಹ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಸಾವು ಬಯಸಿದವರು ಪ್ರಜ್ಞಾ ಠಾಕೂರ್. ದೇಶಕ್ಕಾಗಿ ದೇಶದ ಜನರಿಗಾಗಿ ಹೋರಾಡಿದ ಹೇಮಂತ ಕರ್ಕರೆಯವರ ಸಾವನ್ನು ಸಂಭ್ರಮಿಸಿದ ಪ್ರಜ್ಞಾ ಠಾಕೂರ್, ''ನಾನು ಶಾಪ ನೀಡಿದ್ದರಿಂದಾಗಿಯೇ ಕರ್ಕರೆ 26/11ರ ಮುಂಬೈನ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ. ಆತ ಮಾಡಿದ ಕರ್ಮದ ಫಲವನ್ನು ಅನುಭವಿಸಿದ್ದಾನೆ'' ಎಂದು ನಿಂದಿಸಿದ್ದರು.

ಮುಸ್ಲಿಮರ ಪವಿತ್ರ ಪ್ರಾರ್ಥನಾ ಸ್ಥಳವಾದ ಬಾಬರಿ ಮಸೀದಿ 1992ರ ಡಿಸೆಂಬರ್ 6ರಂದು ಉರುಳಿಸಲಾಯಿತು. ಆ ಕುರಿತು ಪ್ರಜ್ಞಾ ಠಾಕೂರ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ''ಮಸೀದಿ ಧ್ವಂಸಗೊಳಿಸಲು ನಾನು ಗೋಪುರದ ತುದಿಗೆ ಏರಿದ್ದೆ. ದೇವರು ಇದನ್ನು ಮಾಡುವ ಅಪೂರ್ವ ಅವಕಾಶ ನೀಡಿದ್ದಕ್ಕೆ ನನಗೆ ಹೆಮ್ಮೆ ಇದೆ. ನಾನು ಅದನ್ನು ಸಾಧಿಸಿದೆ. ದೇಶದ ಕಳಂಕವನ್ನು ಅಳಿಸಿ ಹಾಕಿದೆ. ಇದೀಗ ನಾವು ಅಲ್ಲಿ ಭವ್ಯವಾದ ಮಂದಿರ ನಿರ್ಮಿಸುತ್ತೇವೆ'' ಆದರೆ ಸಾಮಾಜಿಕ ಜಾಲತಾಣಗಳ ದಾಖಲೆಗಳ ಪ್ರಕಾರ ಆಕೆ ಹುಟ್ಟಿದ್ದು 1988ರ ಎಪ್ರಿಲ್ 2ರಂದು. ಆ ನೆಲೆಯಲ್ಲಿ ಈಗ ಅವರ ವಯಸ್ಸು 31 ವರ್ಷ. ಬಾಬರಿ ಮಸೀದಿ ಉರುಳಿಸಿದ್ದು 1992ರಲ್ಲಿ. ಪ್ರಜ್ಞಾ ಠಾಕೂರ್ ಹುಟ್ಟಿದ್ದು 1988ರಲ್ಲಿ. ಅಂದರೆ ಆಗ ಆಕೆಗೆ ಕೇವಲ 4 ವರ್ಷ ವಯಸ್ಸು. ಅಪ್ಪಟ ಸುಳ್ಳುಗಳನ್ನು ಹೇಳುವುದರಲ್ಲಿ ಪ್ರಜ್ಞಾ ಮೋದಿಯನ್ನೂ ಮೀರಿಸುತ್ತಿದ್ದಾರೆನಿಸುತ್ತದೆ. ಇಂತಹವರಿಗೆ ಲೋಕಸಭೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟು ನೀಡಿರುವುದು ಅತ್ಯಂತ ಖೇದಕರ. ಇದು ಡಾ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರವರ ಸಂವಿಧಾನದ ಪ್ರಜಾಸತ್ತೆ ಬುಡಮೇಲಾಗುತ್ತಿರುವ ಮತ್ತು ಹಿಟ್ಲರ್‌ಶಾಹಿ ಜಾರಿಯಾಗುತ್ತಿರುವುದರ ಸೂಚನೆಯಲ್ಲವೆ?

ಸ್ತನದ ಕ್ಯಾನ್ಸರ್ ಇರುವುದರಿಂದ ಅನಾರೋಗ್ಯದ ಕಾರಣ ನೀಡಿ ಜೈಲಿನಿಂದ ಹೊರಗೆ ಬಂದ ಪ್ರಜ್ಞಾರನ್ನು ಬಿಜೆಪಿ ಕಣಕ್ಕಿಳಿಸುವುದು ಎಷ್ಟರ ಮಟ್ಟಿಗೆ ಸೂಕ್ತ?. ಈಕೆಯ ಸ್ಪರ್ಧೆಯನ್ನು ಐಪಿಎಸ್ ಅಧಿಕಾರಿಗಳ ಸಂಘವು ತೀವ್ರವಾಗಿ ಖಂಡಿಸಿದೆ. ಅವಳ ಲೋಕಸಭಾ ಸ್ಪರ್ಧೆಯನ್ನು ಪ್ರಶ್ನಿಸಿ, ಮಾಲೆಗಾವ್ ಸ್ಫೋಟದಲ್ಲಿ ಮೃತಪಟ್ಟ ವ್ಯಕ್ತಿಯೋರ್ವರ ತಂದೆ ನಿಸಾರ್ ಅಹ್ಮದ್ ಸೈಯದ್ ಬಿಲಾಲ್ ಅವರು ಎನ್‌ಐಎ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣ ವಿಚಾರಣೆಯಲ್ಲಿದೆ. ಪ್ರಜ್ಞಾ ಸಿಂಗ್ ವಿರುದ್ಧದ ದೂರುಗಳನ್ನು ಚುನಾವಣಾ ಆಯೋಗ ಸ್ವೀಕರಿಸಿದೆ. ಇವರ ಉಮೇದುವಾರಿಕೆಯನ್ನು ದಿಲ್ಲಿ ಮುಖ್ಯ ಮಂತ್ರಿ ಅರವಿಂದ ಕೇಜ್ರಿವಾಲ್ ತೀವ್ರವಾಗಿ ಆಕ್ಷೇಪಿಸಿದ್ದಾರೆ. ಇದರಿಂದ ಬಿಜೆಪಿಯ ನಿಜ ಬಣ್ಣ ಬಯಲಾಗಿದೆ ಎಂದಿದ್ದಾರೆ. ''ಮುಂಬೈ ದಾಳಿಯಲ್ಲಿ ಭಾರತ ಮಾತೆಯ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ತೆತ್ತ ಕರ್ಕರೆಯವರ ತ್ಯಾಗವನ್ನು ಬಿಜೆಪಿ ಪ್ರಶ್ನಿಸುತ್ತಿದೆ ಇದು ಬಿಜೆಪಿಯ ರಾಷ್ಟ್ರಪ್ರೇಮವಾಗಿದೆ'' ಎಂದು ದಿಲ್ಲಿಯ ಉಪಮುಖ್ಯ ಮಂತ್ರಿ ಮನೀಷ್ ಸಿಸೋದಿಯಾ ಹೇಳಿದ್ದಾರೆ.

2007ರಲ್ಲಿ ನಡೆದ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದ ತನಿಖೆಯೂ ಸಹ ಹರ್ಯಾಣದ ಪೊಲೀಸರನ್ನು ಮಧ್ಯಪ್ರದೇಶದ ಆರೆಸ್ಸೆಸ್ ಕಾರ್ಯಕರ್ತರ ಮನೆ ಬಾಗಿಲಿಗೇ ತಂದು ನಿಲ್ಲಿಸಿತ್ತು. 2008ರ ಮಾಲೆಗಾಂವ್ ಪ್ರಕರಣದ ತನಿಖೆ ನಡೆಸಿ ಸೈನ್ಯದಲ್ಲಿ ಮಾತ್ರ ಸಿಗುವ ಆರ್‌ಡಿಎಕ್ಸ್ ಸ್ಫೋಟಕವನ್ನು ಫ್ರೀಡಂ ಬೈಕಿಗೆ ಅಳವಡಿಸಿ ಸ್ಫೋಟಿಸಲಾಗಿದೆಯೆಂಬುದನ್ನು ಮತ್ತು ಆ ಬೈಕು ಪ್ರಜ್ಞಾ ಸಿಂಗ್‌ರದ್ದಾಗಿತ್ತು ಎಂಬುದನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ-ಎಟಿಎಸ್‌ನ ಮುಖ್ಯಸ್ಥರಾದ ಹೇಮಂತ್ ಕರ್ಕರೆಯವರು ಪತ್ತೆ ಹಚ್ಚುತ್ತಾರೆ. ಇದುವೇ ಪ್ರಜ್ಞಾಗೆ ಮುಳುವಾಗಿದ್ದು. ನಂತರ ಆಕೆಯ ದೂರವಾಣಿ ಕರೆ, ಓಡಾಟ, ಒಡನಾಟಗಳ ವಿವರ ಮತ್ತು ಆರೋಪಿಗಳ ಲ್ಯಾಪ್‌ಟಾಪ್‌ನಲ್ಲಿದ್ದ ಧ್ವನಿ, ವೀಡಿಯೊ ಮುದ್ರಿಕೆಗಳನ್ನೆಲ್ಲ ಅಧ್ಯಯನ ಮಾಡಿದ ಕರ್ಕರೆಯವರು ಇದರ ಹಿಂದಿರುವ ಸಂಘ ಪರಿವಾರದ ದೇಶದ್ರೋಹಿ ಭಯೋತ್ಪಾದಕ ಭಯಾನಕ ಷಡ್ಯಂತ್ರಗಳನ್ನು ಭೇದಿಸಿದರು. ಇದುವೇ ಅವರನ್ನು ಸಂಕಷ್ಟಕ್ಕೀಡು ಮಾಡಿತು.

ಮುಂಬೈಯಲ್ಲಿ ತಾಜ್ ಹೋಟೆಲ್‌ನ ಮೇಲೆ ಭಯೋತ್ಪಾದನಾ ದಾಳಿ ಸಂದರ್ಭದಲ್ಲಿ ಜನರಿಗೆ ರಕ್ಷಣೆ ನೀಡುತ್ತ ಹುತಾತ್ಮರಾದ ಹೇಮಂತ ಕರ್ಕರೆಯವರು ವೀರ ಮರಣವನ್ನಪ್ಪುತ್ತಾರೆ. ಅವರು ಅಶೋಕಚಕ್ರ ಪುರಸ್ಕಾರಕ್ಕೆ ಭಾಜನರಾದ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹದಳದ ವರಿಷ್ಠರಾಗಿದ್ದರು. ಇಂತಹ ವೀರನ ಬಗ್ಗೆ ಆಕೆ ಮಾತಾಡಿದ್ದು ಅತ್ಯಂತ ಕ್ಷುಲ್ಲಕ ಮಾತು. ಆನಂತರ ಅಭ್ಯರ್ಥಿ ಸ್ಥಾನ ಗಟ್ಟಿಮಾಡಿಕೊಳ್ಳಲು ಪ್ರಜ್ಞಾ ಠಾಕೂರ್ ಯುಟರ್ನ್ ತೆಗೆದುಕೊಂಡಿದ್ದಾರೆೆ. ಹೇಮಂತ್ ಕರ್ಕರೆಯವರ ಬಗ್ಗೆ ಆಡಿರುವ ಮಾತುಗಳಿಗೆ ಕ್ಷಮೆಯಾಚನೆ ಮಾಡಿದ್ದಾರೆೆ. ಆದರೆ ಅವರು ತನ್ನ ಶಬ್ದಗಳನ್ನು ವಾಪಸ್ ಪಡೆಯುವುದರಿಂದ ಹುತಾತ್ಮರಾದ ಕರ್ಕರೆ ಮತ್ತೆ ಜೀವಂತ ಮರಳಲಾರರು. ಆಕೆ ತನ್ನ ಉಮೇದುವಾರಿಕೆಯನ್ನು ಹಿಂಪಡೆದರೆ ಅದೇ ದೇಶಕ್ಕೆ ದೊಡ್ಡ ಕೊಡುಗೆಯಾದೀತು.

ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಪ್ರಜ್ಞಾ ಚುನಾವಣೆಗೆ ನಿಲ್ಲದಂತೆ ತಡೆಯಲು ವಿರೋಧ ಪಕ್ಷಗಳು ವಿಫಲವಾದವೇಕೆ? ಬಿಜೆಪಿ ಒಂದಿಷ್ಟಾದರೂ ಮನುಷ್ಯತ್ವಕ್ಕೆ ಬೆಲೆ ಕೊಡುವುದಾದರೆ ಪ್ರಜ್ಞಾರನ್ನು ಚುನಾವಣೆಯಿಂದ ಹಿಂದೆ ಸರಿಸಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)