varthabharthi

ವಿಶೇಷ-ವರದಿಗಳು

ದ್ವೇಷ ಅಪರಾಧ: ಭಾರತದಲ್ಲಿ ಗೋವಿನ ವಿಷಯಕ್ಕೆ ಸಂಬಂಧಿಸಿದ ಹಿಂಸೆ ಮತ್ತು ಗುಂಪು ದಾಳಿಗಳು

ವಾರ್ತಾ ಭಾರತಿ : 30 Apr, 2019
ಎಸ್. ಬಾಬುಖಾನ್, ಮೂಲ: ಪ್ರಾಚಿ ಸಾಳ್ವೆ

ಭಾಗ-2

ನಮ್ಮ ದೇಶದಲ್ಲಿ ಗೋ ವಿಷಯಕ್ಕೆ ಸಂಬಂಧಿಸಿದ ಗುಂಪುದಾಳಿಗಳಿಗೆ ಒಳಗಾದವರ ಸಾಮಾಜಿಕ ಮತ್ತು ಧಾರ್ಮಿಕ ಹಿನ್ನೆಲೆ ಮತ್ತು ಪ್ರಮಾಣ:

ಗೋವಿಗೆ ಸಂಬಂಧಿಸಿದ ದ್ವೇಷ ಅಪರಾಧ ಅಥವಾ ಗುಂಪು ದಾಳಿಗಳು ಮುಸ್ಲಿಮರು, ದಲಿತರು ಆದಿವಾಸಿಗಳು ಬುಡಕಟ್ಟು ಮತ್ತು ಹಿಂದುಗಳನ್ನು ಗುರಿಯಾಗಿಸಿಕೊಂಡಿವೆ. ಮುಖ್ಯವಾಗಿ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡಿವೆ. ಇದುವರೆಗೂ 72 (57%) ದಾಳಿಗಳು ನಡೆದಿವೆ, ಸಾಮಾಜಿಕ ಮತ್ತು ಧಾರ್ಮಿಕ ಹಿನ್ನೆಲೆ ಬಗ್ಗೆ ಗೊತ್ತಿಲ್ಲದ 23 (18%) ಜನರ ಮೇಲೆ, ಹಿಂದುಗಳು 11 (9%) ಮತ್ತು ದಲಿತರ 11 (9%) ಮೇಲೆ ದಾಳಿಗಳಾಗಿವೆ. ಈ ದಾಳಿಗಳು ಆದಿವಾಸಿಗಳು ಮತ್ತು ಬುಡಕಟ್ಟು ಸಮುದಾಯಗಳನ್ನೂ ಬಿಟ್ಟಿಲ್ಲ ಈ ಸಮುದಾಯಗಳಲ್ಲೂ ಸಾವು ನೋವುಗಳಾಗಿವೆ. ಸತ್ತಿರುವ 46 ಜನ ಈ ದೇಶದ ನಾಗರಿಕರು ಮತ್ತು ಭಾರತೀಯರು.

2014ರ ನಂತರ ನಡೆದಿರುವ ಒಟ್ಟು ಗುಂಪುದಾಳಿಗಳಲ್ಲಿ 169 ಜನರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಈ ದಾಳಿಗಳು ಪ್ರಧಾನವಾಗಿ ಮುಸ್ಲಿಮರನ್ನು ಕೇಂದ್ರೀಕರಿಸಿ ನಡೆದಿವೆ ಮತ್ತು ಶೇ.52 ಕ್ಕಿಂತ ಹೆಚ್ಚಿನ ದಾಳಿಗಳು ವದಂತಿಗಳ ಆಧಾರದ ಮೇಲೆ ಆಗಿವೆ. 2014-2017ರವರೆಗಿನ ಗುಂಪು ಹಲ್ಲೆಗಳಲ್ಲಿ 24 ಜನ ಮುಸ್ಲಿಮರು ಪ್ರಾಣ ತೆತ್ತಿದ್ದಾರೆ.

ಘಟನೆಗಳು ನಡೆದಾಗ ಅಧಿಕಾರದಲ್ಲಿದ್ದ ಮತ್ತು ಇರುವ ರಾಜಕೀಯ ಪಕ್ಷಗಳು

ದಾಖಲಾಗಿರುವ ಘಟನೆಗಳು ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಗಳ ಪ್ರಕಾರ ಶೇ. 59ರಷ್ಟು ಪ್ರಕರಣಗಳು ಬಿಜೆಪಿ ಅಧಿಕಾರದಲ್ಲಿದ್ದ ಮತ್ತು ಇರುವ ರಾಜ್ಯಗಳಿಂದಲೇ ಎನ್ನುವುದು ತೀರಾ ಆತಂಕಕಾರಿಯಾದ ಸಂಗತಿ. ಇನ್ನುಳಿದಂತೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ಮತ್ತು ಇರುವ ಕಡೆಗಳಲ್ಲಿ ಶೇ. 13 ಮತ್ತು ಸಮಾಜವಾದಿ ಪಾರ್ಟಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಶೇ. 4ರಷ್ಟು ಘಟನೆಗಳು ಜರುಗಿವೆ. ಇತರ ಕಡೆಗಳಲ್ಲಿ 1-4 ಘಟನೆಗಳು ವರದಿಯಾಗಿವೆ. ಗುಂಪುದಾಳಿಗಳಿಗೂ ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತದಲ್ಲಿರುವ ಪಕ್ಷಗಳಿಗೂ ಸಾಪೇಕ್ಷ ಸಂಬಂಧಗಳಿವೆ. ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವ ಕಡೆಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗಿವೆ. ಈಶಾನ್ಯ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಹಾಗೆಯೇ ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಹೊರತು ಪಡಿಸಿ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಹಿಂದಿ ಭಾಷಿಕ ರಾಜ್ಯಗಳಲ್ಲಿ ಗುಂಪು ಆಕ್ರಮಣಗಳ ಸಂಖ್ಯೆಗೂ ದ್ರಾವಿಡ ಮತ್ತು ಹಿಂದಿಯೇತರ ಭಾಷಿಕ ರಾಜ್ಯಗಳಲ್ಲಿ ಆಗಿರುವ ಗುಂಪು ಹಲ್ಲೆಗಳಿಗೂ ವ್ಯತ್ಯಾಸಗಳಿವೆ. ದಕ್ಷಿಣ ಭಾರತದ ರಾಜಕಾರಣ ಬಹಳ ವಿಶಿಷ್ಟವಾದದ್ದು. ಇಲ್ಲಿನ ರಾಜಕಾರಣದ ಆದ್ಯತೆಗಳು ಭಾವನಾತ್ಮಕ ಮತ್ತು ವಿವಾದಿತ ವಿಷಯಗಳನ್ನು ಸ್ವಲ್ಪಮಟ್ಟಿಗೆ ಅನುಸರಿಸಿದರೂ ಪ್ರಬಲ ರಾಷ್ಟ್ರೀಯ ಪಕ್ಷಗಳಿಗೆ ಸಡ್ಡುಹೊಡೆದು ತಮ್ಮ ರಾಜಕೀಯ ಅಸ್ಮಿತೆಯನ್ನು ಕಾಪಾಡಿಕೊಂಡು ಬಂದಿವೆ. ಈ ಅಸ್ಮಿತೆಯ ವಿಶಾಲ ವ್ಯಾಪ್ತಿಯಲ್ಲಿ ಎಲ್ಲಾ ಸಮುದಾಯಗಳಿಗೂ ಆದ್ಯತೆ ನೀಡಲಾಗಿದೆ. ಮೀಸಲಾತಿಯಂತಹ ವಿಷಯಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳು ಉತ್ತರದ ರಾಜ್ಯಗಳಿಗಿಂತ ಹತ್ತು ಹೆಜ್ಜೆ ಮುಂದಿರುವುದು ಇದಕ್ಕೆ ಸಾಕ್ಷಿ. ಪ್ರಾದೇಶಿಕ ಪಕ್ಷಗಳ ಇತಿ ಮಿತಿಗಳ ಬಗ್ಗೆ ಯಾರು ಏನೇ ಹೇಳಲಿ ಸಾಮಾನ್ಯ ಸ್ಥಿತಿಗಳಲ್ಲಿ ಇವು ಪ್ರಬಲವಾಗಿರುವ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಪ್ರಬಲವಾಗಿರುತ್ತದೆ.

ಕರ್ನಾಟಕದಲ್ಲಿ ದ್ವೇಷ ಅಪರಾಧದ ಸ್ಥಿತಿಗತಿ

(ಕೋಷ್ಟಕ ನೋಡಿ)

ಕರ್ನಾಟಕದ ಸ್ಥಿತಿ ಸ್ವಲ್ಪಮಟ್ಟಿಗೆ ಗಂಭೀರವಾಗಿದೆ ಮತ್ತು ಕಾಂಗ್ರೆಸ್ ಆಡಳಿತದಲ್ಲಿದ್ದ ಅವಧಿಯಲ್ಲಿ ಕರ್ನಾಟಕದಲ್ಲಿ ಇದುವರೆಗೂ 12 ಪ್ರಕರಣಗಳು ಜರುಗಿದ್ದು ಇಬ್ಬರು ಸಾವಿಗೀಡಾಗಿದ್ದಾರೆ. 2016 ಮತ್ತು 2018ರಲ್ಲಿ ಒಟ್ಟಾರೆ 8 ಪ್ರಕರಣಗಳು ಬೆಳಕಿಗೆ ಬಂದಿವೆ. ಇದುವರೆಗೂ ನಡೆದ ಘಟನೆಗಳಲ್ಲಿ 18 ಜನರ ಮೇಲೆ ಾರಣಾಂತಿಕ ಹಲ್ಲೆಗಳು ನಡೆದಿವೆ.

ಕರ್ನಾಟಕದಲ್ಲಿ ಗೋ-ವಿಷಯಕ್ಕೆ ಸಂಬಂಧಿಸಿದ ಗುಂಪುದಾಳಿಗಳಿಗೆ ಒಳಗಾದವರ ಸಾಮಾಜಿಕ ಮತ್ತು ಧಾರ್ಮಿಕ ಹಿನ್ನೆಲೆ ಮತ್ತು ಪ್ರಮಾಣ:

ಕರ್ನಾಟಕದಲ್ಲಿ ನಡೆದಿರುವ ಗುಂಪುದಾಳಿಗಳ ಪ್ರಮಾಣ ಶೇ.50ರಷ್ಟು ದಾಳಿಯ ಕೇಂದ್ರಬಿಂದು ಮುಸ್ಲಿಮರೇ ಆಗಿದ್ದಾರೆ. ಎರಡನೆಯದಾಗಿ ದಲಿತರ ಮೇಲೆ ಆದ ದಾಳಿಯ ಪ್ರಮಾಣ ಶೇ. 26, ಹಿಂದೂಗಳ ಮೇಲೆ ಆದ ದಾಳಿಯ ಪ್ರಮಾಣ ಶೇ.16 ಮತ್ತು ಬುಡಕಟ್ಟು ಸಮುದಾಯದ ಮೇಲಾದ ದಾಳಿಯ ಪ್ರಮಾಣ ಶೇ. 5. ಒಟ್ಟಾರೆ ದಾಳಿಗಳು ಮುಸ್ಲಿಮರು, ದಲಿತರು ಮತ್ತು ಬುಡಕಟ್ಟು ಸಮುದಾಯದವರ ಮೇಲೆ ಕೇಂದ್ರೀಕೃತಗೊಂಡಿವೆ. ಒಟ್ಟು 12 ಘಟನೆಗಳಲ್ಲಿ 10 (ಶೇ.84) ಈ ಸಮುದಾಯಗಳನ್ನು ಗುರಿಯಾಗಿಸಿಕೊಂಡಿವೆ. ಜಿಲ್ಲಾವಾರು ಘಟನೆಗಳನ್ನು ಪರಿಶೀಲಿಸಿದರೆ; ಬೆಳಗಾವಿಯಲ್ಲಿ 1, ಬೆಂಗಳೂರು ನಗರ ಜಿಲ್ಲೆ 1, ಉಡುಪಿ 4, ಹಾಸನ 1, ದಕ್ಷಿಣ ಕನ್ನಡ 1, ಉತ್ತರ ಕನ್ನಡ 1, ಚಿಕ್ಕಮಗಳೂರು 1, ಮಡಿಕೇರಿ 1 ಮತ್ತು ಮಂಗಳೂರು 1. ಗುಂಪುದಾಳಿಗಳ ಪ್ರಕರಣಗಳನ್ನು ಸ್ವಲ್ಪ ವಿವರವಾಗಿ ಪರಿಶೀಲಿಸಿದಾಗ ಕಂಡು ಬರುವ ಅಂಶಗಳು; 2014ರಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ದನಗಳನ್ನು ಸಾಗಿಸುವಾಗ ಮಂಗಳೂರಿನ ಪಂಪ್‌ವೆಲ್‌ಬಳಿ ಮೂರು ಜನರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದ ಮೂವರೂ ಮುಸ್ಲಿಮರೇ. 2015ರಲ್ಲಿ ದನವನ್ನು ಕಳ್ಳತನಮಾಡಿದ ಎಂಬ ವದಂತಿಯ ಆಧಾರದ ಮೇಲೆ ಚೈನು ಮತ್ತು ಕಬ್ಬಿಣದ ಸಲಾಕೆೆಗಳಿಂದ ಕಾರ್ಕಳದಲ್ಲಿ ಇಬ್ರಾಹೀಂ ಪಡುಬಿದ್ರಿ ಎಂಬ ವ್ಯಕ್ತಿಯನ್ನು ಭಜರಂಗದಳದ ಕಾರ್ಯಕರ್ತರು ಥಳಿಸಿದರು ಎಂದು ವರದಿಯಾಗಿದೆ. 2016ರಲ್ಲಿ ಒಟ್ಟು 5 ಘಟನೆಗಳು ವರದಿಯಾಗಿದ್ದು ಇದರಲ್ಲಿ 7 ಜನರ ಮೇಲೆ ಗಂಭೀರವಾಗಿ ಹಲ್ಲೆಮಾಡಲಾಗಿದೆ. ಮೂರು ಪ್ರಕರಣಗಳಲ್ಲಿ ಮುಸ್ಲಿಮರು ದಾಳಿಗೊಳಗಾದರೆ, ಒಂದು ಪ್ರಕರಣದಲ್ಲಿ ದನದ ಮಾಂಸ ಶೇಖರಿಸಿದ್ದಾರೆ ಎನ್ನುವ ಅನುಮಾನದ ಮೇಲೆ ಭಜರಂಗದಳದ ಕಾರ್ಯಕರ್ತರು ಕೊಪ್ಪದಲ್ಲಿ ವಾಸವಿರುವ ದಲಿತ ಕುಟುಂಬದ ಮೇಲೆ ದಾಳಿ ಮಾಡಿದ್ದಾರೆ. ಮತ್ತೊಂದು ಗಂಭೀರ ಪ್ರಕರಣದಲ್ಲಿ ದನಗಳ ಸಾಗಾಟ ಮಾಡಿದ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರ ಮೇಲೆ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಹಲ್ಲೆ ಮಾಡಿದ್ದರಿಂದ ಬಿಜೆಪಿ ಕಾರ್ಯಕರ್ತರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

 2017ರಲ್ಲಿ ಒಂದು ಘಟನೆ ವರದಿಯಾಗಿದ್ದು ಇದರಲ್ಲಿ 3 ಆದಿವಾಸಿ ಜನರ ಮೇಲೆ ದನವನ್ನು ಕಡಿದರು ಎಂಬ ಕಾರಣಕ್ಕಾಗಿ ಹಲ್ಲೆ ಮಾಡಲಾಗಿದೆ. 2018ರಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು, ಹೊನ್ನಾವರದಲ್ಲಿ ದನಗಳ ಸಾಗಾಟ ಮಾಡುವ ಸಂದರ್ಭದಲ್ಲಿ 150 ಜನರ ಗುಂಪೊಂದು ದಾಳಿ ಮಾಡಿತು ಎಂದು ವರದಿಯಾಗಿದೆ. ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಅನುಮತಿ ಪಡೆದು ದನದ ಮಾಂಸ ಸಾಗಾಟ ಮಾಡಿದ ಚಾಲಕರೊಬ್ಬರ ಮೇಲೆ ಬೆಳಗಾವಿಯಲ್ಲಿ ಗುಂಪು ಹಲ್ಲೆ ನಡೆದಿದೆ. ಸುಮಾರು 61 ವರ್ಷ ವಯಸ್ಸಿನ ದನದ ವ್ಯಾಪಾರಿಯಾದ ಹುಸೇನಬ್ಬರನ್ನು ಭಜರಂಗದಳದವರು ಹಲ್ಲೆಮಾಡಿ ಕೊಲೆಮಾಡಿದ್ದಾರೆ ಎಂದು ಕುಟುಂಬದವರು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2019ರಲ್ಲಿ ಸುಮಾರು 70 ವರ್ಷ ವಯಸ್ಸಿನ ಮುಸ್ಲಿಂ ಮಹಿಳೆಯು ಸಕಲೇಶಪುರದಲ್ಲಿ ನಡೆಸುತ್ತಿದ್ದ ಕ್ಯಾಂಟೀನಿನಲ್ಲಿ ದನದ ಮಾಂಸದ ಖಾದ್ಯ ಮಾರುತ್ತಿದ್ದಾಳೆಂದು ನೆಪಮಾಡಿ 8 ಜನರ ಗುಂಪೊಂದು ದಾಳಿ ನಡೆಸಿ ಕ್ಯಾಂಟೀನನ್ನು ಸುಟ್ಟು ಹಾಕಿ ಆಕೆಯ ಮೇಲೆ ಬಿಸಿ ಸಾಂಬಾರನ್ನು ಹಾಕಿದ್ದಾರೆ. ಇವರೆಲ್ಲರೂ ಭಜರಂಗದಳದ ಕಾರ್ಯಕರ್ತರೆಂದು ಆರೋಪಿಸಲಾಗಿದೆ.

ಇಲ್ಲಿನ ಬಹುಪಾಲು ಜಿಲ್ಲೆಗಳ ಸಂಸದರು ಬಿಜೆಪಿ ಪಕ್ಷದವರಾಗಿದ್ದು, ಹಲವಾರು ಬಾರಿ ಅನ್ಯಾಯಕ್ಕೆ ಒಳಗಾದವರ ಪರವಾಗಿ ನಿಲ್ಲುವ ಬದಲು ರಾಜಕೀಯ ಕಾರಣಗಳಿಗಾಗಿ ಗುಂಪುದಾಳಿ ನಡೆಸಿದವರ ಪರವಾಗಿಯೇ ವಕಾಲತ್ತನ್ನು ವಹಿಸಿರುವುದು ಮಾಧ್ಯಮಗಳಲ್ಲಿ ದಾಖಲಾಗಿರುವ ಸಂಗತಿ. ಇನ್ನು ಇತರ ಪಕ್ಷಗಳು ಮತ್ತು ನಾಯಕರು ಈ ರೀತಿಯ ವಿಷಯಗಳಲ್ಲಿ ಮೌನ ವಹಿಸಿರುವುದು ಇಲ್ಲವೇ ಹಾರಿಕೆಯ ಮಾತುಗಳನ್ನಾಡಿ ಹೋಗಿರುವುದೇ ಹೆಚ್ಚು. ಸ್ಥಳೀಯವಾಗಿ ಕೆಲವು ಸಂಘಟನೆಗಳು ಇದರ ವಿರುದ್ಧ ದನಿ ಎತ್ತಿವೆ.

(ಮುಂದುವರಿಯುವುದು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)