varthabharthi

ನಿಮ್ಮ ಅಂಕಣ

ಸ್ವಚ್ಛತಾ ಕಾರ್ಮಿಕರಿಗೆ ಮೂಲ ಸೌಕರ್ಯ ಒದಗಿಸಿ

ವಾರ್ತಾ ಭಾರತಿ : 30 Apr, 2019
-ಸದ್ದಾಂ ಹುಸೇನ ಬಿ. ಬಳಗಾನೂರ ಗಣಿಹಾರ, ವಿಜಯಪುರ.

ಮಾನ್ಯರೇ,

ಪ್ರತಿ ವರ್ಷ ಮೇ 1ರಂದು ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ. ಆದರೆ ದೇಶದ ಬಡ ಕಾರ್ಮಿಕರ ಬಗ್ಗೆ ಕಾಳಜಿ ಎಷ್ಟು ಮಂದಿಗಿದೆ?. ಪ್ರತಿಯೊಬ್ಬ ತಳ ಮಟ್ಟದ ಕಾರ್ಮಿಕನೂ ಒಂದಲ್ಲ ಒಂದು ಸಮಸ್ಯೆಯಲ್ಲಿದ್ದಾನೆ. ಪ್ರತೀ ವರ್ಷ ಎಷ್ಟೋ ಕಾರ್ಮಿಕರು ಬದುಕಿಗಾಗಿ ನಡೆಸುವ ಹೋರಾಟದಿಂದಲೇ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯದಲ್ಲೇ ಮ್ಯಾನ್‌ಹೋಲ್ ಸ್ವಚ್ಛಗೊಳಿಸುವಾಗಲೇ ಅದೆಷ್ಟೋ ಕಾರ್ಮಿಕರು ಬಲಿಯಾಗಿದ್ದಾರೆ. ಇಂತಹವರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಮೂಲಸೌಕರ್ಯಗಳನ್ನು ಒದಗಿಸುವುದಿಲ್ಲ. ತಂತ್ರಜ್ಞಾನದಲ್ಲಿ ಎಷ್ಟೆಲ್ಲ ಮುಂದುವರಿದರೂ ಮ್ಯಾನ್‌ಹೋಲ್‌ಗಳನ್ನು ಸ್ವಚ್ಛಗೊಳಿಸಲು ಬಡ ಕಾರ್ಮಿಕರೇ ಇಳಿಯಬೇಕಾಗಿದೆ. ಇಂತಹ ಕಾರ್ಮಿಕರ ವೇತನವೂ ಅಷ್ಟಕ್ಕಷ್ಟೇ. ಸಿಗುವ ವೇತನ ಕೂಡಾ ನಿಯಮಿತವಾಗಿ ಸಿಗುವುದಿಲ್ಲ. ಹೀಗಾಗಿ ಬಡ ಕಾರ್ಮಿಕರು ತಮ್ಮ ಜೀವನ ನಿಭಾಯಿಸುವುದೇ ಕಷ್ಟಕರವಾಗಿದೆ. ಕಾರ್ಮಿಕರಿಗೆ ಪ್ರತಿ ತಿಂಗಳು ವೇತನ ಬಿಡುಗಡೆ ಮಾಡಬೇಕು ಹಾಗೂ ಅವರಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕಾಗಿದೆ. ಪ್ರತಿಯೊಂದು ವಿಭಾಗಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೇತನದ ಜೊತೆಗೆ ಬೋನಸ್ ನೀಡಬೇಕು. ದೇಶದ ಸ್ವಚ್ಛತಾ ಕಾರ್ಮಿಕರು ಕಸದ ರಾಶಿಗಳು, ಚರಂಡಿಗಳ ಹೊಲಸಿನ ಮಧ್ಯೆ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಅಂತಹ ಕಾರ್ಮಿಕರಿಗೆ ಮುಖ ಕವಚ, ಕೈಕವಚ, ಬೂಟ್ ಇತ್ಯಾದಿಗಳನ್ನು ಒದಗಿಸಿದರೆ ಅಂತಹ ಕಾರ್ಮಿಕರು ಅನಾರೋಗ್ಯದಿಂದ ಪಾರಾದಾರು. ಆದ್ದರಿಂದ ಕಾರ್ಮಿಕರಿಗೆ ಸಂಬಂಧ ಪಟ್ಟ ಅಧಿಕಾರಿಗಳು, ಸರಕಾರ ಅವರ ಸಮಸ್ಯೆಗಳನ್ನು ತಕ್ಷಣ ಸರಿಪಡಿಸಿ ಅವರನ್ನು ಸಾಮಾನ್ಯರಂತೆ ಬದುಕಲು ಅವಕಾಶ ಮಾಡಿಕೊಡಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)