varthabharthi

ನಿಮ್ಮ ಅಂಕಣ

ಸುದಿನಗಳ ನಿರೀಕ್ಷೆಯಲ್ಲಿ ಶ್ರಮಿಕರ ಪಯಣ

ಬಂದೇ.... ಬರುತಾವ ಕಾಲ...

ವಾರ್ತಾ ಭಾರತಿ : 1 May, 2019
ನಾ. ದಿವಾಕರ

ಇಂದು ವಿಶ್ವ ಕಾರ್ಮಿಕರ ದಿನ


ಮುಂಬರುವ ದಿನಗಳಲ್ಲಿ ಭಾರತ ವಿಶ್ವದ ನಂಬರ್ ಒನ್ ರಾಷ್ಟ್ರವಾಗಲಿದೆ. ಚೀನಾವನ್ನೂ ಹಿಂದಿಕ್ಕಲಿದೆ. ಪರಮಾಣು ಅಸ್ತ್ರಗಳೊಡನೆ ಸುಭದ್ರ ದೇಶವಾಗಲಿದೆ. ಆದರೆ ಮಲಗುಂಡಿಯೊಳು ನಲುಗುವ ಜೀವಗಳು, ಕೊಂಬೆಗೆ ನೇತಾಡುವ ದೇಹಗಳು, ಕೂಳಿಲ್ಲದೆ ಮಣ್ಣಾಗುವ ಆತ್ಮಗಳು ತಮ್ಮ ಬೆವರು ನೆತ್ತರಿನ ಜುಗಲ್‌ಬಂದಿಯಲ್ಲಿ ಸತತವಾಗಿ ತೊಡಗಿಯೇ ಇರುತ್ತವೆ. ಅಚ್ಛೇ ದಿನ್, ಅಂದರೆ ಸುದಿನಗಳು ಬರುತ್ತಲಿವೆ. ಇಲ್ಲ ಎಂದವರಾರು? ಆದರೆ ಯಾರಿಗೆ ಎನ್ನುವುದೇ ಪ್ರಶ್ನೆ. ಭಾರತ ಸ್ವಚ್ಛವಾಗಲಿದೆ, ಯಾರಿಂದ ಎನ್ನುವುದೂ ಒಂದು ಪ್ರಶ್ನೆ. ಯಾರಿಗಾಗಿ ಎನ್ನುವುದು ಮೂರ್ತ ಪ್ರಶ್ನೆ. ಮೇ ದಿನಾಚರಣೆಯಂದು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಯತ್ನಿಸಿದರೆ 1886ರಲ್ಲಿ ಹುತಾತ್ಮರಾದ ಕಾರ್ಮಿಕರಿಗೆ ಶ್ರದ್ಧಾಂಜಲಿ ಅರ್ಪಿಸಿದಂತೆ.


ಭಾರತ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಒಂದು ದೇಶ ತನ್ನದೇ ಆದ ಸಂವಿಧಾನವನ್ನು ಹೊಂದಿ 70 ವರ್ಷಗಳ ಸ್ವತಂತ್ರ ಆಡಳಿತ ವ್ಯವಸ್ಥೆಯನ್ನು ಪೂರೈಸಿದ ನಂತರವೂ ಆ ದೇಶದ ಜನಸಾಮಾನ್ಯರ ಹಾದಿಯಲ್ಲಿ ಅನಿಶ್ಚಿತತೆ ತಾಂಡವಾಡುತ್ತಿದ್ದರೆ ಏನೆನ್ನಬೇಕು? ಒಂದು ರೀತಿಯಲ್ಲಿ ಭಾರತ ಪುನರುಜ್ಜೀವನಕ್ಕಾಗಿ ಹಾತೊರೆಯುತ್ತಿದೆ. ಹಾಗೆಂದ ಕೂಡಲೇ ಭವ್ಯ ಭಾರತದ ಪ್ರತಿಷ್ಠೆಗೇ ಭಂಗ ಉಂಟಾಗುತ್ತದೆ ಎಂದು ಬೊಬ್ಬಿಡುವ ದನಿಗಳು ಹೇರಳವಾಗಿವೆ. ಭಾರತ ಎಂದರೆ ಭೂಪಟದ ಒಂದು ಚೌಕಟ್ಟಿನಲ್ಲಿ ಗೆರೆಗಳ ನಡುವೆ ಬಂಧಿತವಾದ ಒಂದು ಭೂ ಪ್ರದೇಶ ಎಂದು ಭಾವಿಸುವವರ ದೃಷ್ಟಿಯಲ್ಲಿ ಭಾರತ ಸುಭಿಕ್ಷವಾಗಿದೆ, ಸುರಕ್ಷಿತವಾಗಿದೆ. ಸುರಕ್ಷೆ ಅಥವಾ ಸುಭದ್ರತೆ ಎಂದರೇನು? ಈ ಪ್ರಶ್ನೆಗೆ ಉತ್ತರ ಹುಡುಕುವಾಗ ಗಡಿ, ಸೇನೆ, ಭದ್ರತಾ ಪಡೆಗಳು, ಪರಮಾಣು ಬಾಂಬ್ ಮತ್ತು ಗಡಿಯ ಸುತ್ತಲಿನ ಲೇಸರ್ ಬೇಲಿಗಳು ಆಕಾಶಕಾಯಗಳಂತೆ ಪ್ರಜ್ವಲಿಸುತ್ತವೆ. ನಾನಿರುವವರೆಗೂ ಭಾರತವನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂಬ ಅಧಿನಾಯಕರ ಘೋಷಣೆ ಒಮ್ಮೆಮ್ಮೆ ಅಲೆಕ್ಸಾಂಡರ್‌ನನ್ನು ನೆನಪಿಸುತ್ತದೆ. ಕೃಷ ದೇಹಕ್ಕೆ ತೊಡಿಸುವ ಶಿರಸ್ತ್ರಾಣ ಮತ್ತು ಎದೆಯ ಮೇಲಿನ ವಜ್ರ ಕವಚ ಏನನ್ನು ಕಾಪಾಡಬಲ್ಲದು?

ಕಾರ್ಮಿಕರ ದಿನ ಎಂದೇ ಹೇಳಲಾಗುವ ಮೇ ದಿನಾಚರಣೆ ಯಂದು ಈ ದೇಶದ ಕಾರ್ಮಿಕರು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ನಾವು ಕಾರ್ಮಿಕರೋ ಅಲ್ಲವೋ ಎನ್ನುವ ಪ್ರಶ್ನೆಯೂ ದುಡಿಯುವ ವರ್ಗಗಳ ಒಂದು ಗುಂಪನ್ನು ಕಾಡತೊಡಗಿದೆ. ನಾವು ಭಾರತೀಯರು, ನಾವು ಹಿಂದೂಗಳು, ನಾವು ಮುಸಲ್ಮಾನರು, ನಾವು ದಲಿತರು, ಕ್ರೈಸ್ತರು ಇತ್ಯಾದಿ... ಇರಲಿ ಈ ಅಸ್ಮಿತೆಗಳಿಂದಾಚೆಗೆ ಈ ದೇಶದ ಶೇ. 70ಕ್ಕೂ ಹೆಚ್ಚು ಜನತೆಯಲ್ಲಿ ಮತ್ತೊಂದು ಅಸ್ಮಿತೆ ಇದೆ. ಇದು ನಿಗೂಢವಲ್ಲ, ಗೋಪ್ಯವೂ ಅಲ್ಲ ಅಥವಾ ಅಮೂರ್ತವೂ ಅಲ್ಲ. ಇದು ದುಡಿಯುವ ಕೈಗಳನ್ನು ಕಾಡುವ ಶ್ರಮದ ಅಸ್ಮಿತೆ. ಶ್ರಮ ಮತ್ತು ಶ್ರಮಿಕ ಈ ಎರಡರ ನಡುವಿನ ಅವಿನಾಭಾವ ಸಂಬಂಧವನ್ನು ಅರಿಯಲು ಶ್ರಮದ ಮೌಲ್ಯ ಅರಿವಾಗಬೇಕು. ಮೌಲ್ಯ ಎಂದಾಕ್ಷಣ ಮಾರುಕಟ್ಟೆ ಎದುರಾಗುತ್ತದೆ. ಮೂರು ದಶಕಗಳ ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ ಎಲ್ಲವೂ ಸಂತೆ ಕಟ್ಟೆಯಲ್ಲಿರುವ ಬಿಕರಿ ಪದಾರ್ಥಗಳಾಗಿಬಿಟ್ಟಿವೆ. ಇಲ್ಲಿ ಶ್ರಮವೂ ಲಭ್ಯ, ಶ್ರಮಿಕರೂ ಲಭ್ಯ. ಆದರೆ ಈ ಎರಡನ್ನೂ ಬಂಧಿಸುವ ಬೆವರು ಮಾರುಕಟ್ಟೆಯ ಸರಕು ಆಗುವುದೇ ಇಲ್ಲ. ಬಿಕರಿಯಾಗುವುದೂ ಇಲ್ಲ.

ಯಾವುದನ್ನು ಶ್ರಮ ಎನ್ನೋಣ? ಒಬ್ಬ ಯೋಧ ಸೇನೆಯಲ್ಲಿ ತಮಗೆ ಮೂಲ ಸೌಕರ್ಯಗಳನ್ನೂ ಒದಗಿಸಲಾಗುವುದಿಲ್ಲ ಎಂದು ತನ್ನ ಅಳಲು ತೋಡಿಕೊಂಡಾಗ ನಮ್ಮ ದೇಶದಲ್ಲಿ ಕೇಳಿಬಂದ ಪ್ರತಿಕ್ರಿಯೆಗಳಾದರೂ ಎಂತಹುದು? ‘‘ಸೈನಿಕನಾಗಿ ದೇಶದ ವಿರುದ್ಧ ಮಾತನಾಡುವುದೇ?’’ ‘‘ಓಹ್ ಎಂತಹ ದ್ರೋಹ ! ಇದರ ಅರ್ಥವೇನು?’’. ತೇಜ್ ಬಹದ್ದೂರ್ ದೇಶದ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಒತ್ತೆಯಿಟ್ಟ ಯೋಧ. ನಿಜ. ಆದರೆ ಆ ಸೈನಿಕನಲ್ಲಿರುವ ಶ್ರಮಿಕ ಮತ್ತು ಆತನ ಶ್ರಮ ಮೌಲ್ಯಾಧಾರಿತ ಮಾರುಕಟ್ಟೆಯಲ್ಲೇಕೆ ನಿರ್ಮೌಲ್ಯೀಕರಣಕ್ಕೊಳಗಾಗುತ್ತದೆ? ಇದೇ ಪ್ರಶ್ನೆಯನ್ನು ವಿದರ್ಭದ ಒಣಮರದತ್ತ ಕರೆದೊಯ್ಯೋಣ. ಕೊಂಬೆಯೊಂದಕ್ಕೆ ನೇತುಬಿದ್ದಿರುವ ಶವದ ಅಂತರಾತ್ಮದ ಪ್ರಶ್ನೆಗಳು ಏನಿದ್ದಿರಬಹುದು? ಆತ್ಮಹತ್ಯೆ ಒಂದು ಫ್ಯಾಶನ್ ಎಂದು ಅವನಿಗೆ ಯಾರಾದರೂ ಹೇಳಿದ್ದರೇ? ರೈತರಿಗೆ ಫ್ಯಾಶನ್ ಎಂದರೆ ಹೊಸ ತಳಿ, ಹೊಸ ಬೀಜ ಮತ್ತು ಗೊಬ್ಬರ ಮತ್ತು ಹುಲುಸಾದ ಬೆಳೆ ಅಷ್ಟೇ ಅಲ್ಲವೇ ? ಈ ಹೊಸತುವಿಗಾಗಿ ರೈತ ಏನೆಲ್ಲಾ ಮಾಡುತ್ತಾನೆ. ಸಾಲವನ್ನೂ ಮಾಡುತ್ತಾನೆ. ತೀರಿಸಲಾರದಷ್ಟು ಸಾಲ ಹೊರೆಯಾದಾಗ ಕೊಂಬೆಗಳಲ್ಲಿ ನೇತಾಡುತ್ತಾನೆ. ಈ ರೈತನ ಬೆವರಿನ ವಾಸನೆ ಈ ದೇಶದ ನಾಗರಿಕ ಸಮಾಜದ ಮೂಗಿಗೆ ಎಂದಾದರೂ ಬಡಿದಿದೆಯೇ ?

ಗದ್ದೆಯಲ್ಲಿ ಭತ್ತ ನಾಟಿ ಮಾಡಿ ಉರಿ ಬಿಸಿಲಲ್ಲಿ ಹಟ್ಟಿಗೆ ಓಡಿ ಬರುವ ತಾಯಿ ಸ್ನಾನದ ಪರಿವೆಯೂ ಇಲ್ಲದೆ ಮಗುವಿಗೆ ಮೊಲೆಯುಣಿಸುತ್ತಾಳೆ. ತನ್ನ ಮೈಯಲ್ಲಿನ ಬೆವರು ಮಗುವಿನ ದೇಹದೊಳಗೆ ಹೋಗುತ್ತದೆ ಎಂದು ತಿಳಿದಿದ್ದರೂ ಆಕೆ ಹೀಗೆಯೇ ಮಾಡುತ್ತಾಳೆ. ಏಕೆಂದರೆ ಮಗುವಿನ ಬದುಕು ಆಕೆಗೆ ಮುಖ್ಯ. ಉಟ್ಟ ಬಟ್ಟೆಯಲ್ಲೇ ಮಗುವಿಗೆ ಮಡಿಲಿನ ಆಸರೆ ನೀಡುತ್ತಾಳೆ. ಈ ಮಗು ಬೆಳೆದು ದೊಡ್ಡದಾಗಿ ಅಮೆರಿಕದ ಹವಾನಿಯಂತ್ರಿತ ಕೋಣೆಯನ್ನು ಹೊಕ್ಕಾಗ ಬೆವರಿನ ವಾಸನೆಯನ್ನೂ ಮರೆತಿರುತ್ತದೆ, ತಾಯ ಮೊಲೆ ಹಾಲನ್ನೂ ಮರೆತಿರುತ್ತದೆ. ‘‘ಆ ಹಳ್ಳಿಯಲ್ಲೇನು ಮಾಡ್ತೀಯಮ್ಮಾ, ಒಂದು ಫ್ಲಾಟ್ ತೊಗೊಂಡಿದ್ದೀನಿ ಇಲ್ಲೇ ಬಂದು ಇದ್ದುಬಿಡು’’ಎನ್ನುತ್ತಾನೆ. ಕೃಷಿ ಅಮ್ಮನಾಗಿ ಸಮಾಜ ಮಗುವಾಗಿ ನಮ್ಮೆದುರು ನಿಂತ ಹಾಗೆ ಈ ಪ್ರಸಂಗವನ್ನೊಮ್ಮೆ ನೆನಪಿಸಿಕೊಳ್ಳಿ. ಹೇಗೆನಿಸುತ್ತದೆ? ಭಾರತದ ನಾಗರಿಕ ಸಮಾಜ ಈ ಸ್ಥಿತಿಯಲ್ಲಿದೆ. ಯಾವುದು ಶ್ರಮ, ಯಾರು ಶ್ರಮಿಕ? ಅಪ್ಪ ಕೆಂಬಾವುಟದಡಿ ಹೋರಾಡಿ ನಿರ್ಮಿಸಿಕೊಟ್ಟ ಸಣ್ಣ ಅಳತೆಯ ಗೂಡು ತನ್ನ ಭವ್ಯ ಅರಮನೆಗೆ ಮೆಟ್ಟಿಲಾಗಿತ್ತು ಎಂಬ ಪರಿವೆಯಾದರೂ ಎಷ್ಟು ಜನರಲ್ಲಿದೆ? ಇರಲಿಕ್ಕಿಲ್ಲ ಏಕೆಂದರೆ ನಾವು ಶ್ರಮಿಕರಲ್ಲ, ಶ್ರಮಿಕರು ಎಂದರೆ ಅವರು...!

ಅವರು ಎಂದರೆ ಯಾರು? ಮಲಗುಂಡಿಯಲ್ಲಿ ಧುಮುಕಿ ಉಸಿರು ಕಟ್ಟಿ ದುಡಿದು, ಉಸಿರುಳಿದರೆ ಮೇಲೆದ್ದು ಬರುವವರು ಅಥವಾ ಭೂತಳಕ್ಕೆ ಇಳಿದು ನಿಸರ್ಗದ ಅಮೂಲ್ಯ ಸಂಪತ್ತುಗಳನ್ನು ಶ್ರೀಮಂತರ ಮಡಿಲಿಗೆ ಹಾಕಿ, ಮೇಲೆದ್ದು ಬಂದರೂ ಜೀವನವಿಡೀ ಮಣ್ಣೊಳಗೇ ಬದುಕಿ ಮಣ್ಣಾಗುವವರು. ಅಥವಾ ಇಲ್ಲಿಲ್ಲದಿದ್ದರೆ ಮತ್ತೊಂದೆಡೆ ಎಂದು ಊರಿಂದೂರಿಗೆ ಅಲೆಯುತ್ತಾ ಎರಡು ಹೊತ್ತಿನ ಕೂಳಿಗಾಗಿ ತಮ್ಮದೇ ಆದ ನೆಲೆಯನ್ನು ಮರೆತು ತಮ್ಮದಲ್ಲದ ನೆಲೆಯಲ್ಲಿ ತಮ್ಮತನವನ್ನೂ ಕಳೆದುಕೊಂಡು ಮತ್ತಾರಿಗೋ ಸಂಪತ್ತು ಉತ್ಪಾದಿಸುವ ವಲಸೆ ಕಾರ್ಮಿಕರು ಅಥವಾ ಸಿಮೆಂಟಿನ ಧೂಳಿನಲ್ಲೇ ಹಗಲು ರಾತ್ರಿಗಳನ್ನು ಕಳೆದು, ಕಬ್ಬಿಣದ ಸಲಾಕೆಗಳನ್ನು ಹಿಗ್ಗಿಸಿ, ಬಗ್ಗಿಸಿ, ಸೊಟ್ಟಗಾಗಿರುವುದನ್ನು ನೆಟ್ಟಗಾಗಿಸಿ, ನಾಲ್ಕು ಚಕ್ರಗಳಲ್ಲಿ ವಿಹರಿಸುವ ಆರಾಮಕುರ್ಚಿಯ ಮಹನೀಯರಿಗೆ ನವಿರಾದ ಹಾಸುಗಲ್ಲುಗಳನ್ನು ನಿರ್ಮಿಸಿಕೊಡುವ ಕಾರ್ಮಿಕರು ಅಥವಾ ರೈಲು ಹತ್ತಲು ಜೇಬಿನಲ್ಲಿ ಚಿಕ್ಕಾಸೂ ಇಲ್ಲದೆ, ರೈಲುಗಳ ಮೇಲೆ ಕುಳಿತು ಮತ್ತಾವುದೋ ನಗರದ ಕೊಳೆಗೇರಿಗಳಲ್ಲೇ ತಮ್ಮ ಸ್ವರ್ಗ ಕಾಣುತ್ತಾ, ಭೂಮಿ ಆಕಾಶವನ್ನೇ ನೋಡಲಾಗದಂತಹ ಮೆಟ್ರೋ ರೈಲುಗಳನ್ನು ನಿರ್ಮಿಸಿ, ಸೇತುವೆಗಳ ಕೆಳಗೆ ಕೂಳುಣ್ಣುವ ಶ್ರಮಿಕರು. ಅಷ್ಟೇ ಅಲ್ಲವೇ?

 ಅವರು ಕೇವಲ ಕೂಳಿಗಾಗಿ ಮಾತ್ರವಲ್ಲ, ಸೂರಿಗಾಗಿಯೂ ಅಲೆದಾಡುವರು. ಆದರೆ ನಾಗರಿಕ ಸಮಾಜ ನಿತ್ಯ ಜೀವನದಲ್ಲಿ ಕಾಣುವ ಶ್ರಮಿಕರು ಒಂದೇ ಸೂರಿನಡಿ ಬದುಕಿ ಕೂಳಿಗಾಗಿ ಅಂಡಲೆಯುತ್ತಾರೆ. ರಸ್ತೆ ಕಸ ಗುಡಿಸುವವರು, ತ್ಯಾಜ್ಯ ಸಂಗ್ರಹಿಸುವವರು, ಮಲಗುಂಡಿ ಸ್ವಚ್ಛ ಮಾಡುವವರು, ಚರಂಡಿ ಶುಚಿಗೊಳಿಸುವವರು ಇವರೆಲ್ಲರೂ ಮಧ್ಯಮ ವರ್ಗಗಳ ನಿತ್ಯ ಶಾಪಗಳಿಗೆ ಗುರಿಯಾಗುವವರೇ! ಛೇ ಇಷ್ಟು ಹೊತ್ತಾದರೂ ಬರಲಿಲ್ಲ ಈ ಕಸದ ಗಾಡಿ ಎಂದು ಶಾಪ ಹಾಕುವರಿಗೇನೂ ಕಡಿಮೆ ಇರುವುದಿಲ್ಲ. ಹಬ್ಬದ ದಿನಾನಾದ್ರೂ ಬೇಗ ಬರಬಾರದೇ ಎಂದು ಮೂದಲಿಸುವವರೂ ಹಲವರು! ಏಕೆ ಕಸ ಸಂಗ್ರಹಿಸುವವರಿಗೆ ಹಬ್ಬ ಬೇಡವೇ ? ಏನ್ಮಾಡೋದು ಜಾತಿಯ ಬೀಜಗಳ ಫಲ. ಇರಲಿ. ಇವರೊಡನೆ ಬಡ ಮಕ್ಕಳ ಪೋಷಣೆ ಮಾಡುವ, ಹಸುಳೆಗಳ ಆರೈಕೆ ಮಾಡುವ ಅಂಗನವಾಡಿ ಕಾರ್ಯಕರ್ತೆಯರು, ಆಳುವ ವರ್ಗಗಳು ಇಡೀ ಸಮಾಜವನ್ನು ಬೌದ್ಧಿಕವಾಗಿ, ಭೌತಿಕವಾಗಿ ಅಸ್ವಸ್ಥಗೊಳಿಸುತ್ತಿದ್ದರೂ ಜನಸಾಮಾನ್ಯರ ಸ್ವಾಸ್ಥ್ಯ ಕಾಪಾಡಲು ಹಗಲಿರುಳೂ ಶ್ರಮಿಸುವ ಆಶಾ ಕಾರ್ಯಕರ್ತೆಯರು, ಸ್ವಚ್ಛ ಭಾರತದ ಕನಸು ಸಾಕಾರಗೊಳಿಸಲು ತಮ್ಮ ದೈಹಿಕ ಸ್ವಚ್ಛತೆಯನ್ನೂ ಲೆಕ್ಕಿಸದೆ ದುಡಿಯುವ ಸ್ವಚ್ಛತಾ ಕಾರ್ಮಿಕರು ಇವರುಗಳ ಬವಣೆ ನಾಗರಿಕ ಸಮಾಜದ ದೃಷ್ಟಿಯಲ್ಲಿ ಅನಿವಾರ್ಯ. ಹಾಗಾಗಿ ಅಷ್ಟೇನೂ ಕಾಳಜಿ ವ್ಯಕ್ತವಾಗುವುದೇ ಇಲ್ಲ.

ಇವರೆಲ್ಲರೂ ಶ್ರಮಿಕರು. ಆದರೆ ತಾವು ವರ್ಗ ಹೋರಾಟದ ಮುಂಚೂಣಿ ಯಲ್ಲಿರುವ ಕಾರ್ಮಿಕರು ಎಂದು ಭಾವಿಸುತ್ತಾ ವರ್ಗ ಸಂಘರ್ಷದ ನೆಲೆಯಲ್ಲಿ ಸದಾ ಉತ್ಸುಕರಾಗಿ ಜಿಂದಾಬಾದ್ ಘೋಷಣೆಗಳನ್ನು ಮೊಳಗಿಸುವ ಸುಶಿಕ್ಷಿತ ಕಾರ್ಮಿಕರ ವರ್ಗ, ಸುರಕ್ಷಿತ ಕಾರ್ಮಿಕ ವರ್ಗ ತನ್ನೊಳಗೂ ಶ್ರಮದ ವಾಸನೆ ಇದೆ, ತನ್ನೊಳಗೂ ಶ್ರಮದ ಮೌಲ್ಯ ಇದೆ, ತನ್ನೊಳಗೂ ಶ್ರಮಿಕರ ಭಾವನೆಗಳು ಅಡಗಿರಬೇಕಿದೆ ಎಂಬ ವಾಸ್ತವವನ್ನೇ ಮರೆತಂತಾಗಿರುವುದನ್ನು ಮೇ ದಿನದ ಸಂದರ್ಭದಲ್ಲಿ ನೆನೆಯಲೇ ಬೇಕಾಗಿದೆ. ಏಕೆಂದರೆ ಇಂದು ಭಾರತದ ಅರ್ಥವ್ಯವಸ್ಥೆಯನ್ನು ಕಾರ್ಪೊರೇಟ್ ಉದ್ಯಮಿಗಳ ಕೈಗೆ ತಾಂಬೂಲ ನೀಡುವ ರೀತಿಯಲ್ಲಿ ಹಸ್ತಾಂತರಿಸುತ್ತಿರುವ ಆಳುವ ವರ್ಗಗಳ ಪೋಷಕರೆಂದರೆ ಈ ಸುಶಿಕ್ಷಿತ ಕಾರ್ಮಿಕ ಬಂಧುಗಳೇ. ಮಹಾರಾಷ್ಟ್ರಕ್ಕೆ ಪಾದಯಾತ್ರೆ ನಡೆಸಿದ ಲಕ್ಷಾಂತರ ರೈತರು, ದಿಲ್ಲಿಯತ್ತ ಪಾದ ಬೆಳೆಸಿದ 30 ಲಕ್ಷ ರೈತರು ಕೆಂಬಾವುಟವನ್ನು ಹಿಡಿದು ನಾಳಿನ ಬದುಕಿಗಾಗಿ ಹೋರಾಡಿದಾಗ ಬ್ಯಾಂಕ್, ವಿಮೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸುಶಿಕ್ಷಿತ ಕಾರ್ಮಿಕ ವರ್ಗ ನಿರ್ಲಿಪ್ತವಾಗಿದ್ದುದನ್ನು ನೋಡಿದಾಗ ಹೀಗೆನಿಸುತ್ತದೆ.

ಊನ, ದಾದ್ರಿ, ಗೌರಿ, ಕಲಬುರ್ಗಿ ಒತ್ತಟ್ಟಿಗಿರಲಿ ಇವಾವುದೂ ಇವರ ಮನಕಲಕಬೇಕಿಲ್ಲ (ಜಾತಿ ಪ್ರಜ್ಞೆ, ಮತಧರ್ಮ, ನಾಗರಿಕ ಪ್ರಜ್ಞೆ ಅಡ್ಡಬರಬಹುದು) ಕನಿಷ್ಠ ಅನ್ನದಾತನ ಕೂಗಿಗೆ ಸ್ಪಂದಿಸಬೇಕಿತ್ತಲ್ಲವೇ? ಹಾಗಾಗಲಿಲ್ಲ. ಏಕೆ ಹೀಗೆ ? ಶ್ರಮಜೀವಿಗಳೇ ಒಂದಾಗಿ ಎಂದು ಕೂಗುವ ಮುನ್ನ ನಮ್ಮ ನೆಲೆ ಏನೆಂದು ನಾವು ಅರಿಯಬೇಕಲ್ಲವೇ? ಶಿಕ್ಷಕರೂ ಕಾರ್ಮಿಕರೇ ಎಂಬ ಪ್ರಶ್ನೆ 1990ರ ದಶಕದಲ್ಲಿ ಉದ್ಭವಿಸಿತ್ತು. ಇಂದು ಸಾಫ್ಟ್‌ವೇರ್ ಉದ್ಯೋಗಿಗಳಲ್ಲಿ ಇದೇ ಪ್ರಶ್ನೆ ಉದ್ಭವಿಸಿದೆ. ನಾವು ಕೇವಲ ಕಾರ್ಮಿಕರಲ್ಲ ಶ್ರಮಜೀವಿಗಳೂ ಹೌದು ಎಂದು ಇವರಿಗೆ ಅರಿವಾಗುವುದು ಯಾವಾಗ?. ಬೆವರು ಸುರಿಸಿದವನೇ ಶ್ರಮಜೀವಿಯಲ್ಲ, ಬೆವರಿನ ವಾಸನೆ ಗ್ರಹಿಸುವವನು ಶ್ರಮಜೀವಿ, ಬೆವರಿನ ಮೌಲ್ಯ ಗ್ರಹಿಸಿದವನು ಶ್ರಮಜೀವಿ. ಶ್ರೇಣೀಕೃತ ಜಾತಿ ವ್ಯವಸ್ಥೆ ನಮ್ಮ ಪ್ರಜ್ಞೆಯನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಬೆವರಿನ ಹನಿಗಳನ್ನೂ ತುಲನಾತ್ಮಕವಾಗಿ ನೋಡುವ ಪರಂಪರೆಗೆ ನಾವು ದಾಸರಾಗಿಬಿಟ್ಟಿದ್ದೇವೆ. ವಿಜಯಬ್ಯಾಂಕ್, ದೇನಾ ಬ್ಯಾಂಕ್ ಸತ್ತು ಹೋದವು. ಎಂಟು ಸ್ಟೇಟ್ ಬ್ಯಾಂಕುಗಳು ಕಾಣೆಯಾಗಿಬಿಟ್ಟವು. ಆದರೂ ನಮಗೇನೂ ಆಗದು ಎನ್ನುವ ಭಂಡ ಧೈರ್ಯ ನಮ್ಮನ್ನು ಆವರಿಸಿದೆ.

ಧಿಕ್ಕಾರದ ಘೋಷಣೆ ಬಿಟ್ಟರೆ ಮತ್ತೇನನ್ನೂ ಮಾಡುತ್ತಿಲ್ಲ. ಸಾಯುತ್ತಿರುವ ಬ್ಯಾಂಕುಗಳು, ವಿಮಾ ಕಂಪೆನಿಗಳು, ಬಿಎಸ್ಸೆನ್ನೆಲ್, ಎಚ್‌ಎಎಲ್, ಬಿಇಎಂಎಲ್ ಇವೆಲ್ಲವೂ ನಿಮಗಾಗಿಯೇ ಇದೆ, ನೀವು ಇದನ್ನು ಉಳಿಸಿಕೊಳ್ಳಿ ಎಂದು ಶ್ರಮಿಕ ವರ್ಗಕ್ಕೆ, ಗ್ರಾಮೀಣ ಬಡ ಜನತೆಗೆ, ಅವಕಾಶವಂಚಿತ ಜನತೆಗೆ ತಿಳಿಯಪಡಿಸುವ ಹೊಣೆಗಾರಿಕೆ ಯಾರದು ? ಕ್ರಾಂತಿಯ ಮುಂಚೂಣಿಯಲ್ಲಿರಬೇಕಾದ ಸುಶಿಕ್ಷಿತ ಕಾರ್ಮಿಕರದ್ದಲ್ಲವೇ?

ಒಂದು ದುರಂತ ಎಂದರೆ ಕೆಂಬಾವುಟದಡಿ ಕಾರ್ಪೊರೇಟೀಕರಣಕ್ಕೆ ಧಿಕ್ಕಾರ ಕೂಗುವ ದನಿಗಳೇ, ಮುಷ್ಟಿ ಬಿಗಿಯುವ ಕೈಗಳೇ, ದೇಶದ ಇಡೀ ಅರ್ಥವ್ಯವಸ್ಥೆಯನ್ನು ಕಾರ್ಪೊರೇಟ್ ವಶಕ್ಕೆ ಒಪ್ಪಿಸುವ ಜನಪ್ರತಿನಿಧಿಗಳಿಗೂ ಜೈಕಾರ ಹೇಳುತ್ತಿವೆ. ಇಲ್ಲಿ ತಪ್ಪು ಯಾರದು ಎನ್ನುವುದು ಪ್ರಶ್ನೆಯಾಗಲಾರದು. ಆರೋಪ ಪ್ರತ್ಯಾರೋಪಗಳೂ ಸಲ್ಲದು. ಸಾರ್ವತ್ರಿಕ ವೈಫಲ್ಯ ಎಂದು ಬೇಕಾದರೆ ಹೇಳಬಹುದು. ಮುಂಬರುವ ದಿನಗಳಲ್ಲಿ ಭಾರತ ವಿಶ್ವದ ನಂಬರ್ ಒನ್ ರಾಷ್ಟ್ರವಾಗಲಿದೆ. ಚೀನಾವನ್ನೂ ಹಿಂದಿಕ್ಕಲಿದೆ. ಪರಮಾಣು ಅಸ್ತ್ರಗಳೊಡನೆ ಸುಭದ್ರ ದೇಶವಾಗಲಿದೆ. ಆದರೆ ಮಲಗುಂಡಿಯೊಳು ನಲುಗುವ ಜೀವಗಳು, ಕೊಂಬೆಗೆ ನೇತಾಡುವ ದೇಹಗಳು, ಕೂಳಿಲ್ಲದೆ ಮಣ್ಣಾಗುವ ಆತ್ಮಗಳು ತಮ್ಮ ಬೆವರು ನೆತ್ತರಿನ ಜುಗಲ್‌ಬಂದಿಯಲ್ಲಿ ಸತತವಾಗಿ ತೊಡಗಿಯೇ ಇರುತ್ತವೆ. ಅಚ್ಛೇ ದಿನ್, ಅಂದರೆ ಸುದಿನಗಳು ಬರುತ್ತಲಿವೆ. ಇಲ್ಲ ಎಂದವರಾರು? ಆದರೆ ಯಾರಿಗೆ ಎನ್ನುವುದೇ ಪ್ರಶ್ನೆ. ಭಾರತ ಸ್ವಚ್ಛವಾಗಲಿದೆ, ಯಾರಿಂದ ಎನ್ನುವುದೂ ಒಂದು ಪ್ರಶ್ನೆ . ಯಾರಿಗಾಗಿ ಎನ್ನುವುದು ಮೂರ್ತ ಪ್ರಶ್ನೆ. ಮೇ ದಿನಾಚರಣೆಯಂದು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಯತ್ನಿಸಿದರೆ 1886ರಲ್ಲಿ ಹುತಾತ್ಮರಾದ ಕಾರ್ಮಿಕರಿಗೆ ಶ್ರದ್ಧಾಂಜಲಿ ಅರ್ಪಿಸಿದಂತೆ. ಒಮ್ಮೆ ಅವರ ತ್ಯಾಗ ಬಲಿದಾನಗಳನ್ನು ನೆನೆಯೋಣವೇ ? ಶ್ರಮಜೀವಿಗಳೇ ಒಂದಾಗಿ ಎನ್ನುವ ಮುನ್ನ ನಾವು ಯಾರು ಎಂದು ಪ್ರಶ್ನಿಸಿಕೊಳ್ಳೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)