varthabharthi

ನಿಮ್ಮ ಅಂಕಣ

ದುಡಿಯುವ ಕೈಗಳಿಗೆ ಬಲ ಬರಲಿ

ವಾರ್ತಾ ಭಾರತಿ : 1 May, 2019
ವೆಂಕಟೇಶ ಕೋಣಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಉಡುಪಿ ಜಿಲ್ಲೆ

ಕಾರ್ಮಿಕ ವರ್ಗ ತನ್ನ ಹಕ್ಕುಗಳಿಗಾಗಿ ತ್ಯಾಗ, ಬಲಿದಾನಗಳ ಹೋರಾಟದ ಪರಂಪರೆಯ ಪ್ರತೀಕ ಸಂಕೇತದ ದಿನ ಈ ಮೇ ದಿನ. ಬಂಡವಾಳಶಾಹಿ ವರ್ಗ ಶೋಷಣೆಯನ್ನು ಇನ್ನೆಂದೂ ಸಹಿಸಲಾರೆವು ಎಂದು ವಿಮೋಚನೆಯ ಸಮರ ಸಾರಿ, ವಿಜಯ ಸಾಧಿಸಿ, ಸಮಾನತೆಯ ಸಮಾಜ ವ್ಯವಸ್ಥೆ ಸ್ಥಾಪನೆ ದುಡಿಯುವ ವರ್ಗದಿಂದಲೇ ಸಾಧ್ಯ ಎಂದು ದೃಢಪಡಿಸಿದ, ಇತಿಹಾಸದ ಸಾಕ್ಷಿ ನೆನಪಿಸುವ ಸ್ಫೂರ್ತಿ ಸಂಕಲ್ಪದ ದಿನ ಈ ಮೇ ದಿನ.

ಮೇ ದಿನ ಮುಂದಿಟ್ಟ ಕಣ್ಣೋಟ ಎಂದರೆ ಶೋಷಣೆಯ ನಿರ್ಮೂಲನೆ. ಇಂದು ಕಾರ್ಮಿಕ ವರ್ಗ ವಿಶ್ವದ ಯಾವುದೇ ಭಾಗದಲ್ಲಿ ನಡೆಸುವ ಹೋರಾಟ ಈ ಪ್ರಕ್ರಿಯೆಗೆ ನೀಡುತ್ತಿರುವ ಕಾಣಿಕೆ. ಪ್ರಸಕ್ತ ಹಂತದಲ್ಲಿ ನವ ಉದಾರವಾದಿ ಜಾಗತೀಕರಣದ ವಿರುದ್ಧ ಹೋರಾಟವೇ ಶೋಷಣೆಯನ್ನು ಕೊನೆಗೊಳಿಸುವ ಹೋರಾಟವಾಗಿದೆ. ಮೇ ದಿನವನ್ನು ಆಚರಿಸುವ ಅತ್ಯುತ್ತಮ ವಿಧಾನವೆಂದರೆ ಉದಾರೀಕರಣ, ಖಾಸಗೀ ಕರಣ ಮತ್ತು ಜಾಗತೀಕರಣದ ದಾಳಿಗಳನ್ನು ಸೋಲಿಸಿ ಈ ಹೋರಾಟವನ್ನು ಅದರ ತರ್ಕಬದ್ಧ ಗುರಿಯತ್ತ ಒಯ್ಯಲು ಸಿದ್ಧವಾಗುವ ಪ್ರತಿಜ್ಞೆಯನ್ನು ಮಾಡುವುದು.

ಮೇ ದಿನದ ಆದರ್ಶದ ಹರವು, ವಿಸ್ತಾರ ಜಗತ್ತಿನಾದ್ಯಂತ ಮತ್ತು ನಮ್ಮ ದೇಶದಲ್ಲಿ ಹೆಚ್ಚೆಚ್ಚು ವ್ಯಾಪಕಗೊಳ್ಳುತ್ತಿದೆ. ಎಷ್ಟೋ ದೌರ್ಬಲ್ಯಗಳು, ನ್ಯೂನತೆಗಳಿದ್ದರೂ ಅದು ವ್ಯಾಪಕಗೊಳ್ಳುತ್ತಿದೆ. 8 ಗಂಟೆಗಳ ದಿನದ ಬೇಡಿಕೆಯೊಂದಿಗೆ ಅದನ್ನು ಶಾಸನ ಬದ್ಧಗೊಳಿಸಬೇಕೆಂದು ಮೇ ದಿನ ಆರಂಭವಾಯಿತು. ಅದು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಮಟ್ಟಿಗೆ ಈಡೇರಿದೆ. ಮೇ ದಿನದ ಉದ್ದೇಶವೆಂದರೆ ಎಲ್ಲಾ ಶೋಷಣೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು. ಸಮಾಜವಾದನ್ನು ಸ್ಥಾಪಿಸಿದ ದೇಶಗಳಲ್ಲಿ ಈ ಶೋಷಣೆ ಕೊನೆಗೊಳ್ಳುತ್ತಿದೆ. ಆದರೆ ಬಹುಪಾಲು ಜಗತ್ತಿನಲ್ಲಿ ಆ ಕೆಲಸ ಇನ್ನೂ ಉಳಿದಿದೆ. ಇದುವರೆಗೆ ಸೃಷ್ಟಿಸಿದ ಸಂಪತ್ತುಗಳು, ಕಾರ್ಖಾನೆಗಳು, ಗಣಿಗಳು, ಯಂತ್ರಗಳು, ಕಾಲನಿ ಇತ್ಯಾದಿ ಎಲ್ಲವೂ ತಮ್ಮದೇ. ಮುಂದೆಯೂ ಬದುಕಿನ ಆಸರೆಗಳನ್ನು ಉತ್ಪಾದಿಸಲು ತಮಗೆ ಸಾಧ್ಯ ಎಂದು ಜಗತ್ತಿಗೆ ಕಾರ್ಮಿಕರು ಸಾರಬೇಕಾಗಿದೆ.

ಅಸಂಘಟಿತ ವಲಯದ ಕಾರ್ಮಿಕರನ್ನು ಸಂಘಟಿಸಿ ಕಾರ್ಮಿಕ ಆಂದೋಲನ ಪ್ರಜಾಪ್ರಭುತ್ವದ ಮತ್ತು ರಾಷ್ಟ್ರೀಯ ಪ್ರಗತಿಯ ದೃಷ್ಟಿಯಿಂದ ಬಹಳ ಮಹತ್ವದ್ದು. ಸಂಘಟಿತ ವಲಯದ ಕಾರ್ಮಿಕರ ಸಂಕಟಗಳನ್ನು ಕೂಡ ನಾವೂ ನಿರ್ಲಕ್ಷಿಸುವಂತಿಲ್ಲ. ಅವರು ಕೂಡ ಕಾರ್ಮಿಕ ವರ್ಗದ ಮೇಲೆ ನಡೆಯುತ್ತಿರುವ ಸಾರ್ವತ್ರಿಕ ದಾಳಿಗೆ ಗುರಿಯಾಗಿದ್ದಾರೆ. ಅಂತರ್ ರಾಷ್ಟ್ರೀಯ ಹಣಕಾಸು ಬಂಡವಾಳಶಾಹಿಗಳ ಆದೇಶದಂತೆ ಈ ದಾಳಿಗಳು ನಡೆಯುತ್ತಿವೆ.

ನಮ್ಮ ರಾಜ್ಯದಲ್ಲೇ ಹೊಸ ಆರ್ಥಿಕ ನೀತಿ, ತಂತ್ರಜ್ಞಾನದ ಬಳಕೆಯಿಂದಾಗಿ ದೊಡ್ಡ ದೊಡ್ಡ ಕಾರ್ಖಾನೆಗಳ ಸಂಖ್ಯೆ ಇಳಿಮುಖವಾಗಿದೆ. ಕೆಲವು ಕಾರ್ಖಾನೆಗಳು ಮುಚ್ಚಿವೆ. 1980ರಲ್ಲಿ ಬೆಂಗಳೂರಿನ ಸಾರ್ವಜನಿಕ ವಲಯದ ಕಾರ್ಮಿಕರ ಸಂಖ್ಯೆ ಸುಮಾರು 70,000 ಇದ್ದದ್ದು ಈಗ ಅದರ ಅರ್ಧಕ್ಕೆ ಇಳಿದಿದೆ. ಬೆಂಗಳೂರು ನಗರದಲ್ಲಿ ಸುಮಾರು 18-20 ಲಕ್ಷ ಅಸಂಘಟಿತ ಕಾರ್ಮಿಕರು ಇದ್ದಾರೆ. ಇವರಿಗೆ ಯಾವ ಸಾಮಾಜಿಕ ಸೌಲಭ್ಯಗಳೂ ದೊರಕುವುದಿಲ್ಲ. ಅನೇಕ ಕಡೆ ಕನಿಷ್ಠ ವೇತನ, 8 ಗಂಟೆ ಕೆಲಸದ ಅವಧಿ ಕೂಡ ಇಲ್ಲ. ಈ ಅಸಂಘಟಿತ ಕಾರ್ಮಿಕರಲ್ಲಿ ಕಂಟ್ರಾಕ್ಟ್ ಕಾರ್ಮಿಕರು, ಹೊರಗುತ್ತಿಗೆ, ದಿನಗೂಲಿ ಕಾರ್ಮಿಕರು ಗಣನೀಯ ಪ್ರಮಾಣದಲ್ಲಿ ಇದ್ದಾರೆ. ಕಟ್ಟಡ ನಿರ್ಮಾಣ ಕ್ಷೇತ್ರ ಬೃಹದಾಕಾರವಾಗಿ ಬೆಳೆಯುತ್ತಿದೆ. ಆದರೆ ಇಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೆ ಸಂಘಟನೆಯೂ ಇಲ್ಲ, ಕೆಲಸದ ಭದ್ರತೆಯೂ ಇಲ್ಲ. ಅಪಘಾತಗಳಾಗಿ ಕಟ್ಟಡದಿಂದ ಬಿದ್ದು ಕೈ ಕಾಲು ಮುರಿದರೆ, ಸತ್ತರೆ ಪರಿಹಾರವಿಲ್ಲ. ನಮ್ಮ ರಾಜ್ಯದಲ್ಲಿ ಆರೇಳು ಲಕ್ಷ ಬೀಡಿ ಕಾರ್ಮಿಕರು ಇದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಇಂತಹ ಬೀಡಿ ಕಾರ್ಮಿಕರಲ್ಲಿ ನೂರಕ್ಕೆ ತೊಂಬತ್ತರಷ್ಟು ಮಹಿಳೆಯರೇ ಇದ್ದಾರೆ. ಇವರ ಸಂಘಟನೆ ಬಲಿಷ್ಠವಾಗಿ ಇದ್ದರೂ ವಿಶಾಲವಾಗಿ ಹರಡಿಲ್ಲ.

ಇಲ್ಲಿ ಸಂಘಟಿತ ಕಾರ್ಮಿಕರಿಗೆ ಸೌಲಭ್ಯಗಳು ದೊರಕಿದರೂ, ಈ ಸೌಲಭ್ಯಗಳು ಸಂಘಟನೆ ಆಗದವರಿಗೆ ಸಿಗುತ್ತಿಲ್ಲ. ಇದರ ಜೊತೆಗೆ ಕೇಂದ್ರ ಸರಕಾರದ ಲೇಬಲ್ಡ್- ಅನ್‌ಲೇಬಲ್ಡ್ ನೀತಿ ಸಹ ಸಂಘಟಿತ ಕಾರ್ಮಿಕರು ಅಸಂಘಟಿತರಾಗುವಂತೆ ಮಾಡುತ್ತಿದೆ. ಸಂಘಟಿತ ಕಾರ್ಮಿಕರಿಗೆ ವಾರಕ್ಕೆ 3-4 ದಿನಗಳು ಮಾತ್ರ ಕೆಲಸ ಬೇರೆ ದಿನಗಳಲ್ಲಿ ಜೀವನ ನಿರ್ವಹಿಸಲು ಅನ್‌ಲೇಬಲ್ಡ್ ಬೀಡಿ ಕಟ್ಟಬೇಕಾಗಿದೆ. ಬೀಡಿ ಕಾರ್ಮಿಕರು, ಅಂಗನವಾಡಿ ನೌಕರರು, ಅಕ್ಷರದಾಸೋಹ, ಆಶಾ ನೌಕರರು ತಮ್ಮ ಸಂಘಟನೆಗಳನ್ನು ಬಲಪಡಿಸಿ ತಮ್ಮ ಹಕ್ಕುಗಳಿಗಾಗಿ ಹೋರಾಡುವುದರಿಂದ ಕೆಲವು ಸೌಲಭ್ಯಗಳನ್ನಾದರೂ ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೆ ವಿದ್ಯಾವಂತ ಮಹಿಳೆಯರಲ್ಲಿ ರಾಜಕೀಯ ಪ್ರಜ್ಞೆ ಬೆಳೆದರೆ ದುಡಿಯುವ ಮಹಿಳೆಯರ ಹೋರಾಟ ದೊಡ್ಡ ಪ್ರಮಾಣದಲ್ಲಿ ಬೆಳೆಯುವುದಕ್ಕೂ ಸಹಾಯವಾಗಿ ಕರ್ನಾಟಕದ ರಾಜಕೀಯದಲ್ಲಿ ಸಾಕಷ್ಟುಬದಲಾವಣೆ ತರಲು ಸಾಧ್ಯವಾಗುತ್ತದೆ.

ದುಡಿಯುವ ಲಕ್ಷಾಂತರ ಹೆಣ್ಣು ಮಕ್ಕಳ ನಡುವೆ ಕೋಮು ವಿಷದ ಬಗ್ಗೆ, ಅದರ ಅಪಾಯಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕಾದ ಜವಾಬ್ದಾರಿ ಪ್ರಗತಿಪರ ಶಕ್ತಿಗಳಿಗಿದೆ. ನಮ್ಮ ದೇಶದಲ್ಲಿ ರಾಜಕೀಯ ಬದಲಾವಣೆಯಾಗಬೇಕಾದರೆ ಕೃಷಿ ಕೂಲಿ ಕಾರ್ಮಿಕ ರಂಗದ ಕಡೆ ಗಮನಹರಿಸಿ ಎಂದು ಹೇಳುತ್ತೇವೆಯೋ ಹಾಗೆಯೇ ಕಾರ್ಮಿಕ ಮುಖಂಡರು ಅಸಂಘಟಿತ ಕಾರ್ಮಿಕರ ಕಡೆ ಗಮನ ಹರಿಸಿ ಅವರನ್ನು ಸಂಘಟಿಸಿ ಐಕ್ಯ ಹೋರಾಟಗಳ ಮೂಲಕ ಆಂದೋಲನವನ್ನು ಕಟ್ಟಿ ಬೆಳೆಸಲು ಮುಂದಾಗುವುದರ ಮೂಲಕ ರಾಜಕೀಯ ಪ್ರಜ್ಞೆ ಮೂಡಿಸಬೇಕಾಗಿದೆ.

ಅಸಂಘಟಿತ ವಲಯದ ಪ್ರತಿಯೊಂದು ಉದ್ಯೋಗದಲ್ಲಿ ಅದಿಸೂಚಿತವಾಗಿರುವ ಕನಿಷ್ಠ ವೇತನ ಜಾರಿಗಾಗಿ ಹೋರಾಡುವುದಲ್ಲದೆೆ ಸಾಮಾಜಿಕ ಭದ್ರತೆಗಾಗಿ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗಾಗಿ ಆಂದೋಲನ ನಡೆಸಬೇಕಾಗಿದೆ. ಹೀಗಾಗದಿದ್ದರೆ ಅಸಂಘಟಿತರ ಜೀವನಕ್ರಮದಲ್ಲಿ ನಿಜವಾದ ಪ್ರಗತಿ ಸಾಧ್ಯವಿಲ್ಲ. ಕೃಷಿ ಕೂಲಿಕಾರರು, ಬೀಡಿ, ಅಂಗನವಾಡಿ, ಗ್ರಾಮ ಪಂಚಾಯತ್ ನೌಕರರು, ಅಕ್ಷರದಾಸೋಹ, ಆಶಾ ನೌಕರರು ಇತ್ಯಾದಿ ಎಲ್ಲರೂ ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರ ಸಮಸ್ಯೆಗಳನ್ನು ಎದುರಿಸಲು ಒಂದು ಸಮಗ್ರ ಆಂದೋಲನ ರೂಪಿಸ ಬೇಕಾದ ಅಗತ್ಯ ಹೆಚ್ಚಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)