varthabharthi

ಸಂಪಾದಕೀಯ

ರೆಕ್ಕೆ ಹರಿದ ಪುಷ್ಪಕ ವಿಮಾನ

ವಾರ್ತಾ ಭಾರತಿ : 1 May, 2019

‘ಏರಿದವನು ಕೆಳಗಿಳಿಯಲೇ ಬೇಕು’ ಇದು ಬೇಂದ್ರೆಯ ಕವಿತೆಯ ಸಾಲು. ಆಕಾಶದಲ್ಲಿ ತೇಲುವವರ ಬಗ್ಗೆ ಭೂಮಿಯಲ್ಲಿರುವ ಮಂದಿಗೆ ಹಲವು ಭ್ರಮೆಗಳಿವೆ. ವಿಮಾನಗಳ ಕುರಿತಂತೆ, ಅದರಲ್ಲಿ ಓಡಾಡುವವರ ಕುರಿತಂತೆಯೂ ನಾವು ಇತ್ತೀಚಿನವರೆಗೂ ಕಲ್ಪನೆಗಳನ್ನು ಕಟ್ಟಿಕೊಂಡು ಓಡಾಡುತ್ತಿದ್ದೆವು. ಯಾವಾಗ ಮಲ್ಯರ ವಿಮಾನವೊಂದು ಆರ್ಥಿಕ ಮುಗ್ಗಟ್ಟಿನಿಂದ ನೆಲಕಚ್ಚಿತೋ ಆಗ ವಿಮಾನ ಮತ್ತು ವಿಮಾನದೊಳಗಿರುವವರ ಬಂಡವಾಳಗಳೂ ಒಂದೊಂದಾಗಿ ಭೂಮಿಯಲ್ಲಿದ್ದವರ ಮುಂದೆ ಬಯಲಾಗುತ್ತಾ ಹೋಯಿತು. ಇತ್ತೀಚೆಗೆ ಜೆಟ್ ಏರ್‌ವೇಸ್ ಕೂಡ ರೆಕ್ಕೆ ಹರಿದು ಭೂಮಿಗೆ ಬಿದ್ದಿದೆ. ಅದರ ಸಿಬ್ಬಂದಿಯೂ ಈ ಭೂಮಿಯಲ್ಲಿರುವ ಉಳಿದೆಲ್ಲ ಕಾರ್ಮಿಕರಂತೆ ‘‘ನಮ್ಮ ವೇತನ ಕೊಡಿ’’ ಎಂದು ಸರಕಾರದ ಮುಂದೆ ದುಂಬಾಲು ಬಿದ್ದಿದ್ದಾರೆ.

ಮಾರುಕಟ್ಟೆ ದೃಷ್ಟಿಯಿಂದ ನೋಡಿದರೆ ಭಾರತದ ಅತಿದೊಡ್ಡ ಖಾಸಗಿ ವಾಯುಯಾನ ಸಂಸ್ಥೆಯಾದ ಜೆಟ್ ಏರ್‌ವೇಸ್ ತಾತ್ಕಾಲಿಕವಾಗಿ ತನ್ನ ಸೇವೆಗಳನ್ನು ಸ್ಥಗಿತಗೊಳಿಸಿ ತನ್ನ ವಿಮಾನಗಳನ್ನೆಲ್ಲಾ ಕೆಳಗಿಳಿಸಬೇಕಾಗಿ ಬಂದಿದೆ. ತನಗೆ ಸಾಲ ಕೊಟ್ಟವರಿಗೆ, ಸರಬರಾಜುದಾರರಿಗೆ, ಗುತ್ತಿಗೆದಾರರಿಗೆ ಮತ್ತು ಉದ್ಯೋಗಿಗಳಿಗೆ ಮಾಡಬೇಕಿದ್ದ ಪಾವತಿಗಳನ್ನು ಜೆಟ್ ಏರ್‌ವೇಸ್ ಬಹಳ ದಿನಗಳಿಂದ ಬಾಕಿ ಇರಿಸಿಕೊಂಡಿತ್ತು. ಹೊಸ ಹೂಡಿಕೆದಾರರಿಗಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಹೊಸ ಬಿಡ್ಡಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿದೆಯಾದರೂ, ಗುತ್ತಿಗೆದಾರರು ವಿಮಾನಗಳನ್ನು ಮತ್ತು ವಿಮಾನನಿಲ್ದಾಣಗಳಲ್ಲಿನ ತಂಗುಪಟ್ಟಿಯನ್ನು ವಶಪಡಿಸಿಕೊಂಡಿರುವುದರಿಂದ ಮತ್ತು ಹಾರಾಟದ ಹಕ್ಕುಗಳನ್ನು ಪ್ರತಿಸ್ಪರ್ಧಿಗಳಿಗೆ ಹಂಚಿರುವುದರಿಂದ ಬಿಕ್ಕಟ್ಟಿನಲ್ಲಿ ಸಿಲುಕಿರುವ ಈ ಜೆಟ್‌ಏರ್‌ವೇಸ್ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆಯೆಂದೇ ಕಾಣುತ್ತಿದೆ. ಆದರೆ ಈ ಪರಿಸ್ಥಿತಿಯು ಅಪಾಯದ ಗಂಟೆಯನ್ನು ಹೊಡೆಯಲು ಪ್ರಾರಂಭಿಸಿದೆ.

ಈ ವಾಯುಯಾನದ ಉದ್ಯಮದಲ್ಲಿ ಲಾಭದ ದರ ಕಡಿಮೆ. ಇದರ ಜೊತೆಗೆ ಡಾಲರ್‌ನೆದುರು ಭಾರತದ ರೂಪಾಯಿಯ ವಿನಿಮಯ ದರದ ಊಹೆಗೆ ನಿಲುಕದ ಏರಿಳಿತಗಳು ಹಾಗೂ ಹೆಚ್ಚಿನ ತೆರಿಗೆ ಹೊರೆಯ ಕಾರಣದಿಂದಾಗಿ ಹೆಚ್ಚಾಗುತ್ತಾ ಹೋಗುವ ವಿಮಾನ ಇಂಧನದ ಬೆಲೆಗಳಂತಹ ಬಾಹ್ಯ ಕಾರಣಗಳೂ ಸಹ ಈ ಉದ್ಯಮದ ವ್ಯಾವಹಾರಿಕ ಲಾಭದ ದರದ ಮೇಲೆ ನೇರ ಪರಿಣಾಮವನ್ನು ಬೀರುತ್ತಿದೆ. ಇದಲ್ಲದೆ, ಭಾರತದ ವಾಯುಯಾನ ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ಪ್ರಯಾಣದರ ಸ್ಪರ್ಧೆಯ ಸ್ವರೂಪಗಳು ಮತ್ತು ಸಾಮರ್ಥ್ಯಗಳ ವಿಸ್ತರಣೆಯ ಕಾರಣದಿಂದಾಗಿ ಸಂಪೂರ್ಣವಾಗಿ ಪ್ರಯಾಣಿಕ ವಿಮಾನ ಸೇವೆಯನ್ನು ಮಾತ್ರ ಒದಗಿಸುವ ಜೆಟ್ ಸಂಸ್ಥೆ ಎದುರಿಸಬೇಕಾಗಿ ಬಂದಿರುವ ಆತಂಕಗಳಿಗೆ ನಿರ್ದಿಷ್ಟ ಕಾರಣಗಳೂ ಇವೆ. ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಗಿದ್ದರ ಜೊತೆಜೊತೆಗೆ ಪ್ರಯಾಣದರದ ಕತ್ತುಕುಯ್ಯುವ ಸ್ಪರ್ಧೆಗಳಿಂದಾಗಿ ಜೆಟ್ ಏರ್‌ವೇಸ್‌ನ ಸಾಲದ ಹೊರೆ ಏರುತ್ತಲೇ ಹೋಯಿತು. ಆದರೆ ಇದೇ ಸನ್ನಿವೇಶದಲ್ಲೂ ಸಮರ್ಥ ನಿರ್ವಹಣೆಯನ್ನು ಮಾಡಿದ ಕಡಿಮೆ ವೆಚ್ಚದ ವಿಮಾನ ಯಾನ ಕಂಪೆನಿಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಲೇ ಇವೆ.

ಈಗ ಭಾರತದ ಅತಿದೊಡ್ಡ ವಾಯುಯಾನ ಕಂಪೆನಿಯಾಗಿರುವ ಇಂಡಿಗೋ ಕಂಪೆನಿಯು 2018ರ ಮಾರ್ಚ್ 31ಕ್ಕೆ ಮುಕ್ತಾಯವಾದ ಹಣಕಾಸು ವರ್ಷದಲ್ಲಿ 2,24,237 ಕೋಟಿ ರೂ. ಲಾಭವನ್ನು ದಾಖಲಿಸಿದೆ. ಜೆಟ್ ಏರ್‌ವೇಸ್‌ನ ಬಹಳಷ್ಟು ಸಮಸ್ಯೆಗಳು ಸ್ವಯಂ ಹೇರಿಕೊಂಡದ್ದು. 2007ರಲ್ಲಿ ಏರ್ ಸಹಾರಾ ಕಂಪೆನಿಯನ್ನು ಕೊಂಡುಕೊಳ್ಳುವುದರೊಂದಿಗೆ ಜೆಟ್ ಏರ್‌ವೇಸ್‌ನ ಸಮಸ್ಯೆಗಳು ಪ್ರಾರಂಭವಾದವು. ಅದು ಕಳೆದ ನಾಲ್ಕು ತ್ರೈಮಾಸಿಕಗಳಲ್ಲೂ ನಷ್ಟವನ್ನು ದಾಖಲಿಸಿರುವುದಲ್ಲದೆ ಕಳೆದ 11 ವರ್ಷಗಳಲ್ಲಿ 9 ಹಣಕಾಸು ವರ್ಷಗಳಲ್ಲೂ ನಷ್ಟವನ್ನೇ ದಾಖಲಿಸಿದೆ. ಜೊತೆಗೆ ಈ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಅರ್ಧ ಪಾಲನ್ನು ಕಳೆದುಕೊಂಡಿದೆ. ಮೇಲಾಗಿ ನಷ್ಟವನ್ನು ತುಂಬುವಂತಹ ಯಾವುದೇ ದಾರಿಯನ್ನು ಅದು ಕಂಡುಕೊಂಡಿರಲಿಲ್ಲ.

ತನ್ನದೇ ಆದ ಹಣಕಾಸು ತಪ್ಪುನಿರ್ವಹಣೆಗಳ ಜೊತೆಗೆ ತನ್ನ ಉದ್ದಿಮೆಯಲ್ಲಿ ದೀರ್ಘಕಾಲದ ಹೂಡಿಕೆ ಮಾಡಬಲ್ಲ ಹೂಡಿಕೆದಾರರನ್ನು ಪಡೆದುಕೊಳ್ಳುವುದರಲ್ಲಿ ವಿಫಲವಾದದ್ದೂ ಸಹ ಜೆಟ್ ಏರ್‌ವೇಸ್‌ನ ಕಷ್ಟಗಳನ್ನು ಹೆಚ್ಚಿಸಿತು. ಇತ್ತಿಹಾದ್ ಏರ್‌ವೇಸ್ ಕಂಪೆನಿಯು 2013ರಲ್ಲಿ ಜೆಟ್ ಏರ್‌ವೇಸ್‌ನ ಶೇ.24ರಷ್ಟು ಶೇರುಗಳನ್ನು ಕೊಂಡುಕೊಂಡರೂ ಸಹ ಅದು ಮೇಲ್ಮುಖವನ್ನು ಕಾಣಲೇ ಇಲ್ಲ್ಲ. ಜೆಟ್ ಏರ್‌ವೇಸ್ 2018ರ ಮಾರ್ಚ್ 31ರ ಸಾಲಿನಲ್ಲಿ 634.45 ಕೋಟಿ ರೂ. ಸಾಲವನ್ನು ದಾಖಲಿಸಿದ್ದಲ್ಲದೆ, ಆ ವೇಳೆಗೆ ಒಟ್ಟಾರೆಯಾಗಿ 8,425 ಕೋಟಿ ರೂ. ಸಾಲದಲ್ಲಿ ಮುಳುಗಿತ್ತು. ಒಂದೆಡೆ ಹೊಸ ಶೇರು ಮೌಲ್ಯವನ್ನು ತುಂಬಲಾಗದಿದ್ದರೂ, ಆಸಕ್ತಿ ತೋರಿದ ಹೊಸ ಹೂಡಿಕೆದಾರರ ಯಾವ ಷರತ್ತಿಗೂ ಒಪ್ಪಿಕೊಳ್ಳದೆ ಮತ್ತು ಕಂಪೆನಿಯ ಮೇಲೆ ತನ್ನ ನಿಯಂತ್ರಣವನ್ನು ಬಿಟ್ಟುಕೊಡಲು ಒಪ್ಪದ ಸಂಸ್ಥೆಯ ಸಂಸ್ಥಾಪಕ ನರೇಶ್ ಗೋಯಲ್ ಅವರ ಹಠಮಾರಿತನವೂ ಸಹ ಕಂಪೆನಿಯು ಈ ಸ್ಥಿತಿಯನ್ನು ತಲುಪಲು ಕಾರಣವಾಯಿತು. ಸಂಸ್ಥೆಯು ಎದುರಿಸುತ್ತಿದ್ದ ಹಣಕಾಸು ಬಿಕ್ಕಟ್ಟು ಸ್ಪಷ್ಟವಾಗಿ ಕಾಣುತ್ತಿದ್ದರೂ ಕಂಪೆನಿಯು ಮುಳುಗದಂತೆ ಪಾರುಮಾಡಲು ಹಣಕಾಸು ಸಂಸ್ಥೆಗಳು ಏಕೆ ಸಕಾಲಿಕ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ? ಜೆಟ್ ಏರ್‌ವೇಸ್ ಕಂಪೆನಿಯ ಸಾಲದಲ್ಲಿ ಶೇ.27ರಷ್ಟು ಸಾಲವನ್ನು ನೀಡಿರುವುದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ.

ಋಣಪರಿಹಾರ ಕ್ರಮವನ್ನು ಮುಂಚೆಯೇ ಪ್ರಾರಂಭಿಸಿದ್ದರೆ ಸಾಲದ ಹೊರೆಯಿಂದಾಗಿ ಅದರ ಆಸ್ತಿಪಾಸ್ತಿಗಳ ಮೌಲ್ಯಗಳಾದರೂ ಹೆಚ್ಚು ಕುಸಿಯದಂತೆ ತಡೆಯಬಹುದಾಗಿತ್ತು. ಇದರಿಂದಾಗಿ ಹೊಸ ಹೂಡಿಕೆದಾರರು ಈ ಕಂಪೆನಿಯನ್ನು ಪುನಶ್ಚೇತನಗೊಳಿಸಲು ಮುಂದಾದರೂ ಸಹ ಜೆಟ್ ಏರ್‌ವೇಸ್‌ಗೆ ಸಾಲ ಕೊಟ್ಟಿರುವ ಸಾರ್ವಜನಿಕ ಬ್ಯಾಂಕುಗಳು ತಮ್ಮ ಪಾಲಿನ 7,251 ಕೋಟಿ ರೂ.ಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಇದಾಗಬೇಕೆಂದರೆ ಈ ಕಂಪೆನಿಗೆ ಸಾಲ ಕೊಟ್ಟಿರುವ ಸಾರ್ವಜನಿಕ ಬ್ಯಾಂಕುಗಳು ಆ ಮೊತ್ತದ ಹಣವನ್ನು ಮನ್ನಾ ಮಾಡಬೇಕಾಗುತ್ತದೆ. ಹೇಗೆ ನೋಡಿದರೂ ಈ ವ್ಯವಹಾರದಲ್ಲಿ ಅತಿ ಹೆಚ್ಚು ನಷ್ಟಕ್ಕೊಳಗಾಗುವವರು ಆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ 23,000 ಉದ್ಯೋಗಿಗಳು ಮತ್ತು ಅದಕ್ಕೆ ಸಾಲ ಕೊಟ್ಟ ಸಾರ್ವಜನಿಕ ಬ್ಯಾಂಕುಗಳೇ ಆಗಿವೆ. ಸಂಸ್ಥೆಯ ಬೇಜವಾಬ್ದಾರಿತನ ಈ ದೇಶದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಲಿದೆ. ಈಗಾಗಲೇ ಹತ್ತು ಹಲವು ಬೃಹತ್ ಸಾಲಗಳಿಂದ ತತ್ತರಿಸಿರುವ ಬ್ಯಾಂಕುಗಳಿಗೆ ಮತ್ತು ದುಷ್ಪರಿಣಾಮಗಳನ್ನು ಎದುರಿಸುತ್ತಿರುವ ಶ್ರೀಸಾಮಾನ್ಯನಿಗೆ ಈ ಹಾರಲಾಗದ ಪುಷ್ಪಕ ವಿಮಾನದ ಭಾರವನ್ನು ತಾಳಲು ಸಾಧ್ಯವೇ? ಕಾಲವೇ ಹೇಳಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)