varthabharthi

ವಿಶೇಷ-ವರದಿಗಳು

ದ್ವೇಷ ಅಪರಾಧ: ಭಾರತದಲ್ಲಿ ಗೋವಿನ ವಿಷಯಕ್ಕೆ ಸಂಬಂಧಿಸಿದ ಹಿಂಸೆ ಮತ್ತು ಗುಂಪು ದಾಳಿಗಳು

ವಾರ್ತಾ ಭಾರತಿ : 1 May, 2019
ಎಸ್. ಬಾಬುಖಾನ್, ಮೂಲ: ಪ್ರಾಚಿ ಸಾಳ್ವೆ (www.Indiaspend.org)

ಭಾಗ-3

ಗೋಹತ್ಯಾ ನಿಷೇಧ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದ ಕಾಯ್ದೆಗಳು:

ಗೋ ರಕ್ಷಣೆ ಮಾಡುವುದು ರಾಜ್ಯನಿರ್ದೇಶಕ ತತ್ವಗಳಲ್ಲಿ ಬರುವ ವಿಷಯವಾಗಿರುವುದರಿಂದ ರಾಜ್ಯ ಸರಕಾರಗಳು ಈ ಬಗ್ಗೆ ತೀರ್ಮಾನ ಗಳನ್ನು ತೆಗೆದುಕೊಳ್ಳುವ ಪರಮೋಚ್ಚ ಅಧಿಕಾರವನ್ನು ಹೊಂದಿವೆ. ನಮ್ಮ ದೇಶದ 29 ರಾಜ್ಯಗಳ ಪೈಕಿ 20 ರಾಜ್ಯಗಳಲ್ಲಿ ದನಗಳನ್ನು ವಧೆ ಮಾಡುವುದನ್ನು ಮತ್ತು ದನಗಳನ್ನು ಮಾರುವುದನ್ನು ನಿಷೇಧಿಸುವ, ನಿಯಂತ್ರಣ ಮಾಡುವ ವಿವಿಧ ಕಾನೂನುಗಳು 1964ರಿಂದಲೇ ಜಾರಿಯಲ್ಲಿವೆ. ಅದರೆ ದಿಢೀರನೆ ಕೇಂದ್ರ ಸರಕಾರದ ಪರಿಸರ ಇಲಾಖೆ 2017ರಲ್ಲಿ ಗೋಸಂರಕ್ಷಣಾ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಗೆಜೆಟ್ ಹೊರಡಿಸಿ ದನಗಳ ವಧೆಯನ್ನು ನಿಷೇಧಿಸುವ ಮತ್ತು ದನಗಳನ್ನು ಮಾರುವುದನ್ನು ನಿಯಂತ್ರಿಸುವ ಕಾಯ್ದೆಯನ್ನು ಜಾರಿಗೊಳಿಸಿತು. ಇದಕ್ಕೂ ಮುಂಚಿತವಾಗಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಗೋಹತ್ಯಾ ನಿಷೇಧ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಮಾಡಿತು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಅದನ್ನು ಹಿಂಪಡೆಯಿತು. ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ ಗೋಹತ್ಯಾ ನಿಷೇಧ ಕಾಯ್ದೆಯನ್ನು ಪರಿಶೀಲಿಸಿ ಕೆಲವು ಅಂಶಗಳನ್ನು ಇಲ್ಲಿ ದಾಖಲುಮಾಡಲಾಗಿದೆ.

 ದೇಶದ ಎಲ್ಲಾ ರಾಜ್ಯಗಳಲ್ಲೂ ಒಂದೇ ತೆರನಾಗಿ ಕಾಯ್ದೆ ರೂಪಿಸಲಾಗಿಲ್ಲ. ದನ ಕಡಿಯುವುದನ್ನು ಸಂಪೂರ್ಣವಾಗಿ ಹಲವು ರಾಜ್ಯಗಳು ನಿಷೇಧಿಸಿವೆ. ಜೊತೆಗೆ ಉಲ್ಲಂಘಿಸಿರುವ ವ್ಯಕ್ತಿಗಳಿಗೆ ರೂ. 1,000-1,00,000ದವರೆಗೂ ದಂಡ ಅಥವಾ 6 ತಿಂಗಳಿಂದ 14 ವರ್ಷದವರೆಗೂ ಕಾರಾಗೃಹ ಶಿಕ್ಷೆ ವಿಧಿಸಬಹುದು. ದನಕಡಿಯುವುದನ್ನು ನಿಯಂತ್ರಿಸಲಾಗಿದ್ದು ಕೆಲವು ರಾಜ್ಯಗಳಲ್ಲಿ 12 ರಿಂದ 14 ವರ್ಷ ಮೇಲ್ಪಟ್ಟ ದನಗಳನ್ನು ಕಡಿಯಲು ಅವಕಾಶ ಮಾಡಿಕೊಡಲಾಗಿದೆ ಮತ್ತು ಕೆಲವು ರಾಜ್ಯಗಳಲ್ಲಿ ಎಮ್ಮೆ ಮತ್ತು ಕೋಣಗಳನ್ನು ಮಾತ್ರ ಕಡಿಯಲು ಅವಕಾಶವಿದೆ. ದನಗಳ ಮಾಂಸವನ್ನು ಆಮದು ಮತ್ತು ರಫ್ತುಮಾಡುವುದನ್ನು ಸಹ ಹಲವು ರಾಜ್ಯಗಳು ನಿಷೇಧಿಸಿವೆ. ವಿಶೇಷವೆಂದರೆ ದನದ ಮಾಂಸವನ್ನು ತಿನ್ನುವುದಕ್ಕೆ ಕೆಲವು ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ನಿಷೇಧ ಹೇರಲಾಗಿದೆ. ಹಿಂದಿ ಅಥವಾ ಉತ್ತರದ ರಾಜ್ಯಗಳಲ್ಲಿ ಗೋಹತ್ಯಾ ನಿಷೇಧಕ್ಕೆ ಪ್ರಬಲವಾದ ಕಾಯ್ದೆಗಳನ್ನು ಜಾರಿಮಾಡಲಾಗಿದೆ. 7-14 ವರ್ಷದವರೆಗೂ ಶಿಕ್ಷೆ ಅಥವಾ ರೂ. 1ಲಕ್ಷದದವರೆಗೂ ಜುಲ್ಮಾನೆ ವಿಧಿಸುವ ಕಾನೂನುಗಳು ಜಾರಿಯಲ್ಲಿವೆ. ಹರ್ಯಾಣ ಮತ್ತು ಚಂಡಿಗಡದಲ್ಲಿ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ದಕ್ಷಿಣದ ರಾಜ್ಯಗಳಲ್ಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕಾಯ್ದೆಗಳಲ್ಲಿ ಸಮತೋಲನವಿದೆ ಇಲ್ಲಿ ನಿಷೇಧ ಎನ್ನುವುದಕ್ಕಿಂತ ನಿಯಂತ್ರಣ ಹೇರಲಾಗಿದೆ.

ಯಾವುದೇ ಕಾಯ್ದೆಗಳನ್ನು ಜಾರಿಮಾಡುವುದಕ್ಕಿಂತ ಮುಂಚಿತವಾಗಿ ಇಲ್ಲವೇ ಕಾಯ್ದೆಗಳನ್ನು ರೂಪಿಸುವಾಗ ಈ ಕಾಯ್ದೆಗಳಿಂದ ಬಾಧ್ಯಸ್ಥ ಅಥವಾ ಸಂತ್ರಸ್ತರಾಗುವ ಜನಸಮುದಾಯಗಳ ಅನುಭವಗಳನ್ನು ಮತ್ತು ಅಭಿಪ್ರಾಯಗಳನ್ನು ಪರಿಗಣಿಸಬೇಕು. ಇದರಿಂದಾಗುವ ಪರಿಣಾಮಗಳ ಬಗ್ಗೆ ಮಾಹಿತಿಯನ್ನು ಸಮುದಾಯಗಳಿಗೆ ತಲುಪಿಸುವ ಕಾರ್ಯವನ್ನು ಮಾಡಬೇಕು. ಕಾಯ್ದೆಯು ಸಮದೃಷ್ಟಿ ಮತ್ತು ಮಾನವೀಯ ಮುಖವನ್ನು ಹೊಂದಿರಬೇಕು. ದುರದೃಷ್ಟವೆಂದರೆ ಈ ಕಾಯ್ದೆಗಳನ್ನು ರೂಪಿಸುವಾಗ ಬಾಧ್ಯಸ್ಥ ಅಥವಾ ಭಾಗೀದಾರ ಸಮುದಾಯದ ಹಕ್ಕುಗಳನ್ನು ಇಡಿಯಾಗಿ ಅವಲೋಕಿಸುವ ಸಂಘ ಸಂಸ್ಥೆಗಳು ಅಥವಾ ಸಮುದಾಯದ ಪ್ರತಿನಿಧಿಗಳ ಅಹವಾಲುಗಳನ್ನು ಕೇಳಿಸಿಕೊಳ್ಳುವವರಿಲ್ಲ ಮತ್ತು ಇವರಿಗಾಗಿ ರಚನೆಯಾಗಿರುವ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಮತ್ತು ಪರಿಶಿಷ್ಟಜಾತಿಯ ರಾಷ್ಟ್ರೀಯ ಮತ್ತು ರಾಜ್ಯ ಆಯೋಗಗಳು ಸಮುದಾಯಗಳ ಹಕ್ಕುಗಳ ವಿಷಯಗಳಲ್ಲಿ ಮಾತನಾಡಬೇಕಾಗುತ್ತದೆ ಆದರೆ ಕೆಲವೊಮ್ಮೆ ಇವೆಲ್ಲವೂ ಮೌನವಾಗಿಬಿಡುತ್ತವೆ.

ಈಗ ಜಾರಿಯಲ್ಲಿರುವ ಈ ಕಾಯ್ದೆಗಳನ್ನು ಗಮನಿಸಿದಾಗ ಹಕ್ಕು ಮತ್ತು ಉಲ್ಲಂಘನೆಯ ಸಂದರ್ಭದಲ್ಲಿ ಮಾನವ ಹಕ್ಕುಗಳು ಬೆಲೆಕಳೆದುಕೊಳ್ಳುತ್ತವೆ ಮತ್ತು ಭಾರತ ಸಂವಿಧಾನದ ಪರಿಚ್ಛೇದ 21 ಬದುಕುವ ಹಕ್ಕನ್ನು ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಪರಿಗಣಿಸುವ ಸಾಧ್ಯತೆ ಕಡಿಮೆ. ಅಂದರೆ ಸಾಮಾನ್ಯವಾಗಿ ಯಾವುದೇ ಕಾಯ್ದೆಯ ಉಲ್ಲಂಘನೆಯ ಸಂದರ್ಭದಲ್ಲಿ ಬೇರೆ ಕಾಯ್ದೆಗಳಲ್ಲಿರುವ ಉಲ್ಲಂಘಿಸಿದ ವ್ಯಕ್ತಿಯ ಪರವಾದ ಅಂಶಗಳನ್ನು ಸಹ ಪರಿಗಣಿಸಬೇಕು ಇಲ್ಲವಾದರೆ ಅದು ಏಕಮುಖ ನ್ಯಾಯವಾಗುವ ಅಪಾಯವೇ ಹೆಚ್ಚು.

ಕಾನೂನು ಕ್ರಮ ಜರುಗಿಸಲು ಇರುವ ತೊಡಕುಗಳು:

ಗುಂಪು ಹಲ್ಲೆ ಮಾಡುವುದು ಸಂವಿಧಾನ ವಿರೋಧಿ ಕೃತ್ಯ, ಇಂದಿನ ಸಂದರ್ಭದಲ್ಲಿ ಸಂವಿಧಾನಾತ್ಮಕ ಸಂಸ್ಥೆಗಳನ್ನು ಬಲಹೀನಗೊಳಿಸುವಂತಹ ಮತ್ತು ಅವುಗಳನ್ನು ಧಿಕ್ಕರಿಸಿ ತನ್ನದೇ ಸರಿ ಎನ್ನುವ ಒಂದು ಮನಸ್ಥಿತಿ ನಿರ್ಮಾಣವಾಗುತ್ತಿದೆ. ಕೆಲವು ಪ್ರಕರಣಗಳನ್ನು ಹೊರತುಪಡಿಸಿ ಸಾಮಾನ್ಯವಾಗಿ ಘಟನೆಗಳು ಪೂರ್ವಯೋಜಿತವಾಗಿದ್ದು ವ್ಯವಸ್ಥಿತವಾಗಿ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಧ್ರುವೀಕರಣದ ವಾಸನೆ ಬರುತ್ತಿದೆ. ಇವೆಲ್ಲವೂ ರಾಜಕೀಯ ಧ್ರುವೀಕರಣದಲ್ಲಿ ಕೊನೆಗೊಳ್ಳುತ್ತವೆ. ದನ ಸಾಗಿಸುವವರು ಅಥವಾ ಮಾಂಸಮಾರಾಟ ಮಾಡುವವರು ಕಾಯ್ದೆಗಳನ್ನು ಉಲ್ಲಂಘಿಸಿದರೆ ಕಾಗ್ನಿಸಬಲ್ ಅಫೆನ್ಸ್ ಎಂದು ಯಾವುದೇ ವ್ಯಕ್ತಿ ಅಥವಾ ಸಂಘಸಂಸ್ಥೆಗಳು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ದೂರುಕೊಡಲು ಅವಕಾಶವಿದೆ ಮತ್ತು ಕ್ರಮಕೈಗೊಳ್ಳಲು ಸರಕಾರದ ವಿವಿಧ ಇಲಾಖೆಗಳಿವೆ. ಕರ್ನಾಟಕ ಗೋಹತ್ಯಾ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964ರ ಪ್ರಕಾರ ಹಸು ಮತ್ತು ಕರುಗಳನ್ನು ಹೊರತುಪಡಿಸಿ 12 ವರ್ಷ ಮೇಲ್ಪಟ್ಟ ದನ, ಗೂಳಿ, ಎಮ್ಮೆ ಮತ್ತು ಕೋಣಗಳನ್ನು ಸೂಕ್ತ ಪರವಾನಿಗೆಯೊಂದಿಗೆ ಕಡಿಯಬಹುದಾಗಿದೆ ಮತ್ತು ಅದರ ಮಾಂಸವನ್ನು ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಆದರೆ ನಡೆದಿರುವ ಘಟನೆಗಳಲ್ಲಿ ಕಾಯ್ದೆಯನ್ನು ಉಲ್ಲಂಘಿಸಿರಬಹುದು ಎನ್ನುವ ಅನುಮಾನ ಮತ್ತು ಆರೋಪಗಳೇ ಹೆಚ್ಚು. ಈ ಅನುಮಾನ ಮತ್ತು ಆರೋಪಗಳೇ ಸಾಕ್ಷ್ಯಗಳಾಗುವ ಸಾಧ್ಯತೆ ಇರುವುದರಿಂದ ಹಲ್ಲೆ ಮಾಡಿದವರಿಗಿಂತ ಹಲ್ಲೆಗೊಳಗಾದವರ ಮೇಲೆಯೇ ದೂರು ದಾಖಲಾಗುತ್ತದೆ. ದೇಶದಲ್ಲಿ ಇದುವರೆಗೂ ನಡೆದಿರುವ ಘಟನೆಗಳಲ್ಲಿ ಪ್ರತಿ 5ನೇ ಪ್ರಕರಣದಲ್ಲಿ ಹಲ್ಲೆಗೊಳಗಾದವರ ಮೇಲೆಯೇ ದೂರು ದಾಖಲಾಗಿದೆ. ಒಟ್ಟಾರೆ ಶೇ. 21ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಹಲ್ಲೆಗೊಳಗಾದವರ ಮೇಲೆಯೇ ದೂರು ದಾಖಲಿಸಲ್ಪಟ್ಟಿದೆ. 2016ರಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಕರಣದಲ್ಲಿ ಹಲ್ಲೆಗೊಳಗಾದ ಬಲಿಪಶುಗಳನ್ನೇ ಬಂಧಿಸಲಾಗಿತ್ತು. ಇನ್ನುಳಿದಂತೆ ಒಂದೆರಡು ಪ್ರಕರಣಗಳ ಬಗ್ಗೆ ಕಾನೂನು ಮಾಹಿತಿ ಲಭ್ಯವಿಲ್ಲ. ಉಳಿದ ಘಟನೆಗಳಲ್ಲಿ ಕೊಲೆಯತ್ನ ಆರೋಪ ಮುಂತಾದ ವಿಷಯಗಳ ಆಧಾರದ ಮೇಲೆ ಕ್ರಮತೆಗೆದುಕೊಳ್ಳಲಾಗಿದೆ. ದನದ ವಿಷಯದಲ್ಲಿ ದಲಿತರ ಮೇಲೆ ಹಲ್ಲೆಯಾದರೆ ಕನಿಷ್ಠ ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯಡಿಯಲ್ಲಿ ಶಿಕ್ಷೆಯಡಿಯಲ್ಲಿ ಕ್ರಮ ಕೈಗೊಳ್ಳಬಹುದು ಆದರೆ ಮುಸ್ಲಿಮರ ಮೇಲೆ ಗುಂಪುದಾಳಿಯಾದರೆ ಲಭ್ಯವಿರುವ ಕಾಯ್ದೆ ಕಾನೂನು ಪ್ರಕ್ರಿಯೆಗಳನ್ನೇ ಅವಲಂಬಿಸಬೇಕು. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಶಾಸನಬದ್ಧ ಅಧಿಕಾರ ಇರುವುದರಿಂದ, ಪತ್ರಿಕೆಗಳಲ್ಲಿ ಇಂತಹ ಪ್ರಕರಣಗಳು ವರದಿಯಾದರೆ ಸುವೊಮೋಟೊ ಎಂದು ಪರಿಗಣಿಸಬಹುದು ಮತ್ತು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದು. ಆದರೆ ಇದರ ಬಗ್ಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಂತರ್ಜಾಲ ತಾಣದಲ್ಲಿ ಹುಡುಕಿದಾಗ ಮಾಹಿತಿ ಸಿಗಲಿಲ್ಲ. ಗುಂಪು ಹಲ್ಲೆಯನ್ನು ಇಂಡಿಯನ್ ಪೀನಲ್ ಕೋಡ್‌ನಲ್ಲಿ ಎಲ್ಲೂ ನಮೂದಿಸಲಾಗಿಲ್ಲ. ಈ ದ್ವೇಷ ಅಪರಾಧಕ್ಕೆ ಅಥವಾ ಗುಂಪುದಾಳಿಗೆ ಸಂಬಂಧಿಸಿದಂತೆ ಯಾವುದೇ ಹೊಸ ಕಾನೂನನ್ನು ರೂಪಿಸಲಾಗಿಲ್ಲ. ಕಾನೂನು ಇಲ್ಲದಿರುವುದರಿಂದ ಗುಂಪು ಹಲ್ಲೆಗೊಳಗಾದವರಿಗೆ ನ್ಯಾಯ ಒದಗಿಸಲು ಮತ್ತಷ್ಟು ಕಷ್ಟವಾಗುತ್ತದೆ. ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ 1973 ಸೆಕ್ಷನ್ 23(ಎ) ಪ್ರಕಾರ ದೊಂಬಿ ಮಾಡುವವರ ವಿರುದ್ಧ ಕ್ರಮತೆಗೆದುಕೊಳ್ಳಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)