varthabharthi

ನಿಮ್ಮ ಅಂಕಣ

ಅಧಿಕಾರಕ್ಕಾಗಿ ದೇಶದ ಪ್ರಧಾನಿಯೇ ಕುದುರೆ ವ್ಯಾಪಾರಕ್ಕಿಳಿದರೇ?

ವಾರ್ತಾ ಭಾರತಿ : 3 May, 2019
-ಉದಯರಾಜ್ ಆಳ್ವ, ಕೆ. ಆರ್. ಮೊಹಲ್ಲಾ, ಮೈಸೂರು

ಮಾನ್ಯರೇ,

ಸ್ವತಃ ದೇಶದ ಪ್ರಧಾನಿ ಮೋದಿ ಚೌಕಿದಾರಿಕೆ ಬಿಟ್ಟು ಕುದುರೆ ವ್ಯಾಪಾರ ಮಾಡುತ್ತಿದ್ದಾರೆಯೇ? ಮೊನ್ನೆ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಭಾಷಣ ಮಾಡುತ್ತಾ ಮೋದಿಯವರು ನಿಸ್ಸಂಕೋಚವಾಗಿ ಹೇಳಿದ್ದೇನೆಂದರೆ- ‘‘ತೃಣಮೂಲ ಕಾಂಗ್ರೆಸ್ ಪಕ್ಷದ 40 ಶಾಸಕರು ನನ್ನ ನೇರ ಸಂಪರ್ಕದಲ್ಲಿ ಇದ್ದಾರೆ ಹಾಗೂ ಅವರು ಮೇ 23ರ ನಂತರ ಬಿಜೆಪಿಗೆ ಬರುತ್ತಾರೆ ಮತ್ತು ಪ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರಕಾರ ಬಿದ್ದು ನನ್ನ ಕಮಲ ಅರಳುವುದು ಖಚಿತ’’ ಎಂಬುದಾಗಿ. ಮೋದಿ ಕೇವಲ ಬಿಜೆಪಿಗೆ ಮಾತ್ರ ಪ್ರಧಾನಿಯಲ್ಲ. ಅವರು ಇಡೀ ದೇಶಕ್ಕೆ ಪ್ರಧಾನಿ. ಹಾಗಿರುವಾಗ ಸ್ವತಃ ದೇಶದ ಪ್ರಧಾನಿಯೇ ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡುವ ಮಾತನ್ನು ನಿರ್ಲಜ್ಜವಾಗಿ ಬಹಿರಂಗ ಸಭೆಯಲ್ಲಿ ಹೇಳಿಕೊಳ್ಳುವುದು ಅತ್ಯಂತ ನಾಚಿಕೆಗೇಡಿನ ವಿಷಯ. ಚುನಾವಣಾ ಆಯೋಗ ಪ್ರಧಾನಿಯ ಈ ಪ್ರಜಾತಂತ್ರ ವಿರೋಧಿ ಮಾತನ್ನು ಗಮನಿಸಿದೆಯೇ? ಒಂದು ವೇಳೆ ಪಕ್ಷದ ಅಧ್ಯಕ್ಷರು ಈ ರೀತಿ ಹೇಳಿದ್ದರೆ ಅದು ತಪ್ಪೆನಿಸುತ್ತಿರಲಿಲ್ಲ. ಆದರೆ ದೇಶದ ಪ್ರಧಾನಿ ಈ ರೀತಿ ಸಮಯಸಾಧಕ ಬುದ್ಧಿ ತೋರಿಸಿ 40 ಟಿಎಂಸಿ ಶಾಸಕರು ತನ್ನ ಸಂಪರ್ಕದಲ್ಲಿದ್ದಾರೆ ಎಂದು ಹಸಿ ಸುಳ್ಳು ಹೇಳಿ ವಿರೋಧ ಪಕ್ಷದವರನ್ನು ಹಾಗೂ ಮತದಾರರನ್ನು ದಾರಿ ತಪ್ಪಿಸಲು ಪ್ರಯತ್ನಿಸುವುದು ಅತ್ಯಂತ ಹೇಯ ಕೆಲಸ. ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಟಿಎಂಸಿ ಶಾಸಕರು ‘ನನ್ನ’ ನೇರ ಸಂಪರ್ಕದಲ್ಲಿ ಇದ್ದಾರೆ ಎಂದು ಮೋದಿ ಹೇಳಿರುವುದು ಸ್ವತಃ ಪ್ರಧಾನಿಯೇ ಕುದುರೆ ವ್ಯಾಪಾರಕ್ಕೆ ಇಳಿದಿದ್ದಾರೆ ಎಂದು ಅವರ ಮಾತಿನಿಂದಲೇ ಸಾಬೀತಾಯಿತು. ಮೋದಿ ದಿನದ 18 ಗಂಟೆ ಕೆಲಸ ಮಾಡುತ್ತಾರೆ ಎಂದು ಅವರ ಪಕ್ಷದವರು ಪ್ರಚಾರ ಮಾಡುತ್ತಾರೆ. ಆದರೆ ಮೋದಿ ದಿನದ 12 ಗಂಟೆ ಸೋಷಿಯಲ್ ಮೀಡಿಯಾ ಜಾಲಾಡುತ್ತಿರುತ್ತಾರೆ ಅಥವಾ ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗಿರುತ್ತಾರೆ ಮತ್ತು ದಿನಕ್ಕೆ ಕೇವಲ 3-4 ಗಂಟೆ ಮಾತ್ರ ಅವರು ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಾರೆ ಎಂಬ ಸತ್ಯವನ್ನು ಅವರ ಸೆಕ್ರೆಟರಿಗಳೇ ಹೇಳುತ್ತಾರೆ. ಸಾಮಾಜಿಕ ಮೀಡಿಯಾದಲ್ಲಿ ಜಾಲಾಡುವುದು ಅಥವಾ ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗುವುದು ದೇಶದ ಅಭಿವೃದ್ಧಿಗೆ ಸಂಬಂಧಪಟ್ಟ ಪ್ರಧಾನಿ ಹುದ್ದೆಯ ಕರ್ತವ್ಯಗಳಲ್ಲ ತಾನೇ! ಇಂತಹ ಕುದುರೆ ವ್ಯಾಪಾರ ಯಾವುದೇ ಪಕ್ಷ ಮಾಡಲಿ ಅದರಲ್ಲಿ ದೊಡ್ಡ ಮೊತ್ತದ ಹಣ ವಿನಿಮಯ ಆಗುತ್ತದೆ. 40 ಶಾಸಕರನ್ನು ಕೊಂಡುಕೊಳ್ಳಲು ಕನಿಷ್ಠ ಒಂದು ಸಾವಿರ ಕೋಟಿ ರೂಪಾಯಿ ಬೇಕೇಬೇಕು. ಅದು ಕಪ್ಪುಹಣ ಎಂದು ಬಿಡಿಸಿ ಹೇಳಬೇಕಾಗಿಲ್ಲ. ಹಾಗಾದರೆ ‘‘ನಾನು ತಿನ್ನುವುದಿಲ್ಲ ಇತರರಿಗೆ ತಿನ್ನಲು ಬಿಡುವುದಿಲ್ಲ’’ ಎಂದು ಮೋದಿ ಕೊಚ್ಚಿಕೊಂಡಿದ್ದು ಈಗ ಎಲ್ಲಿ ಹೋಯಿತು? ಒಟ್ಟಾರೆ ಹಿಂದಿನ ಐದು ವರ್ಷಗಳಿಂದ ಪ್ರಜಾಪ್ರಭುತ್ವದ ಮೂಲಬೇರಿಗೆ ಪೆಟ್ಟಾಗುವಂತಹ ಕುಕಾರ್ಯಗಳೇ ನಡೆಯುತ್ತಿರುವುದು ಒಳ್ಳೆಯ ಲಕ್ಷಣವಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)