varthabharthi

ನಿಮ್ಮ ಅಂಕಣ

ಇಂದು ಟಿಪ್ಪು ಸುಲ್ತಾನ್ ವೀರಮರಣವನ್ನಪ್ಪಿದ ದಿನ

ಅಪ್ರತಿಮ ಸೇನಾನಿ ಟಿಪ್ಪು ಸುಲ್ತಾನ್

ವಾರ್ತಾ ಭಾರತಿ : 4 May, 2019
ಮಣಿಮುಗ್ಧ ಎಸ್. ಶರ್ಮಾ

ಅಂದು ಮೇ 4, 1799ರಂದು ಗಡಿಯಾರದ ಮುಳ್ಳು ಮಧ್ಯಾಹ್ನ 1 ಗಂಟೆಗೆ ಸರಿಯುತ್ತಿದ್ದಂತೆಯೇ ಶ್ರೀರಂಗಪಟ್ಟಣದಲ್ಲಿ ಉರಿಬಿಸಿಲು ಕಾದಕೆಂಡದಂತಿತ್ತು. ಆ ಹೊತ್ತಿಗೆ ಮಿಂಚಿನ ವೇಗದಲ್ಲಿ, 76 ಮಂದಿ ಕೆಂಪಂಗಿಗಳು (ಬ್ರಿಟಿಷ್ ಸೈನಿಕರು) ನಾಲ್ಕು ಅಡಿ ಆಳದ ಕಾವೇರಿ ನದಿಯನ್ನು ದಾಟಿದ್ದರು. ಅವರನ್ನು ಅನುಸರಿಸಿ ಬಂದ ಬ್ರಿಟಿಷ್ ಸೇನೆಯ 73 ಹಾಗೂ 74ನೇ ರೆಜಿಮೆಂಟ್‌ನ ಕಾಲ್ದಳದ ಸೈನಿಕರು, ಶ್ರೀರಂಗಪಟ್ಟಣದ ಕೋಟೆಗೆ ಮುತ್ತಿಗೆ ಹಾಕಿದರು. ಕೋಟೆಯ ಪಶ್ಚಿಮ ದಿಕ್ಕಿನ ಗೋಡೆಯನ್ನು ಏರಿದ ಮತ್ತು ದಿಡ್ಡಿಬಾಗಿಲಿನ ಮೂಲಕ ಕೋಟೆಯೊಳಗೆ ನುಗ್ಗಲು ಆಕ್ರಮಣಕಾರರಿಗೆ ಬರೀ 16 ನಿಮಿಷಗಳು ತಗಲಿದವು. ಈ ಹಠಾತ್ ದಾಳಿಯು ಕೋಟೆ ಕಾಯುವವರನ್ನು ದಿಗಿಲುಗೊಳಿಸಿತು. ಇದಾದ ಎರಡು ತಾಸುಗಳ ಬಳಿಕ ಶ್ರೀರಂಗಪಟ್ಟಣದ ಕೋಟೆಯು ಪತನಗೊಂಡಿತು. ಆ ಕೋಟೆಯ ‘ಮಹಾ ಸಂರಕ್ಷಕ’ನು, ತನ್ನ 8 ಸಾವಿರ ಮಂದಿ ಸಶಸ್ತ್ರಧಾರಿ ಸೈನಿಕರೊಂದಿಗೆ, ಗುಂಡಿನ ಹಾಗೂ ಖಡ್ಗದ ಗಾಯಗಳೊಂದಿಗೆ ನೆಲಕ್ಕುರುಳಿಬಿದ್ದಿದ್ದ. ಹೌದು. ‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ವೀರಮರಣವನ್ನಪ್ಪಿದ್ದ.

    ಭಾರತದ ರಾಜಕೀಯ ಪರಿಸರವನ್ನು ಇಂದು ಪರಿಗಣನೆಗೆ ತೆಗೆದುಕೊಂಡಲ್ಲಿ ಅದು ಕೆಟ್ಟುಹೋಗಿ ತುಂಬಾ ಸಮಯವೇನೂ ಆಗಿಲ್ಲ. ಸಮಾಜದ ಕೆಲವು ನಿರ್ದಿಷ್ಟ ವರ್ಗಗಳ ಆಕ್ರೋಶಕ್ಕೆ ತುತ್ತಾಗದೆ, ಟಿಪ್ಪು ಸುಲ್ತಾನ್ ಬಗ್ಗೆ ಒಳ್ಳೆಯ ಮಾತನಾಡುವುದು ಸಮಸ್ಯೆಗೆ ಕಾರಣವಾಗುತ್ತದೆ. ಕೆಲವರು ಟಿಪ್ಪು ಸುಲ್ತಾನ್‌ನನ್ನು ಅಪಾರವಾಗಿ ಆಧರಿಸುತ್ತಾರೆ. ಬ್ರಿಟಿಷರ ವಿರುದ್ಧ ಸಂಧಾನರಹಿತವಾದ ಹೋರಾಟ ನಡೆಸಿದ ಟಿಪ್ಪು ‘ವೈಭವೀಕರಿಸುವುದಕ್ಕೆ ಅರ್ಹನಾದ ವೀರ’ನೆಂದೇ ಅವರು ಅಭಿಪ್ರಾಯಿಸುತ್ತಾರೆ. ಇನ್ನು ಕೆಲವರು ಆತನನ್ನು ಧರ್ಮದ ಆಧಾರದಲ್ಲಿ ಬಹುಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯವೆಸಗಿದ ದಮನಕಾರಿ ಮುಸ್ಲಿಂ ಆಡಳಿತಗಾರ ಎಂಬ ದೃಷ್ಟಿಯಲ್ಲಿ ನೋಡುತ್ತಾರೆ. ಆತನ ಆಧುನಿಕ ಕಾಲದ ವಿರೋಧಿಗಳು, ಬ್ರಿಟಿಷರ ಪರ ವಹಿಸಿದವರೊಂದಿಗೆ ಟಿಪ್ಪು ಕಠಿಣವಾಗಿ ನಡೆದುಕೊಂಡಿದ್ದುದು, ಸಾಮೂಹಿಕ ಮತಾಂತರಗಳ ಬಗ್ಗೆ ಆತನ ಸ್ವಪ್ರಶಂಸೆಯ ಮಾತುಗಳು ಹಾಗೂ ಮುಸ್ಲಿಮೇತರರಿಗೆ ಆತ ವಿಧಿಸಿದ್ದ ಮರಣದಂಡನೆಯ ಘಟನೆಗಳನ್ನು ಪುರಾವೆಯಾಗಿ ನೀಡುತ್ತಾರೆ. ಆದರೆ ಅವನ ಬಗೆಗಿನ ಸತ್ಯವು ಇವೆರಡರ ಮಧ್ಯೆ ಎಲ್ಲಿಯೋ ಅಡಗಿಕೊಂಡಿದೆ. ಟಿಪ್ಪುವು ಅದ್ಭುತವಾದ ಅನುಕಂಪ ಹಾಗೂ ಉದಾರತೆಯನ್ನು ಪ್ರದರ್ಶಿಸುತ್ತಿದ್ದ, ಆದರೆ ಆತ ಅಷ್ಟೇ ಕ್ರೂರತೆಯನ್ನು, ತನ್ನವರೆಂದು ಪರಿಗಣಿಸಿದವರ ವಿರುದ್ಧವೂ ಪ್ರದರ್ಶಿಸುತ್ತಿದ್ದ.

ಆದರೆ ಚರ್ಚೆಯಲ್ಲಿ ಈ ವಿಷಯವನ್ನು ಬದಿಗಿರಿಸಿ ಮಾತನಾಡುವುದಾದರೆ ‘ಮೈಸೂರು ಹುಲಿ’ ಎಂದೂ ಕಾಗದದ ಹುಲಿಯಾಗಿರಲಿಲ್ಲ. ಈ ಹುಲಿ ವಿರೋಧಿಗಳನ್ನು ನಾಶಪಡಿಸಬಲ್ಲ. ಅಷ್ಟೇ ಏಕೆ ಏಳು ಸಮುದ್ರಗಳಾಚೆಯಿಂದ ಬಂದ ಬ್ರಿಟಿಷರೆಂಬ ಸಿಂಹವನ್ನು ಕೆಡವಿಹಾಕಬಲ್ಲವನಾಗಿದ್ದ.
ಟಿಪ್ಪು ಸುಲ್ತಾನ್ ಹಾಗೂ ಅವರ ತಂದೆ ನವಾಬ್ ಹೈದರಲಿ ಅತ್ಯಂತ ಶ್ರೇಷ್ಠ ಯುದ್ಧವೀರ ಹಾಗೂ ಸೇನಾನಿಯಾಗಿದ್ದರು. ಮಿಲಿಟರಿ ಜ್ಞಾನ, ಕಾರ್ಯತಂತ್ರ ಹಾಗೂ ಯುದ್ಧತಂತ್ರದಲ್ಲಿ ಟಿಪ್ಪುವಿಗಿಂತಲೂ ಹೈದರಲಿ ಹೆಚ್ಚು ನಿಸ್ಸೀಮನಾಗಿದ್ದನು. ಆದರೆ ಟಿಪ್ಪು ನಿರ್ಭೀತಿಯ ಧೀರನಾಗಿದ್ದ. ಈ ವ್ಯಕ್ತಿತ್ವವು ಆತನ ವಿರೋಧಿಗಳಲ್ಲಿ ಭೀತಿಯನ್ನು ಹುಟ್ಟಿಸಿತ್ತು. ಅಷ್ಟೇ ಅಲ್ಲ, ಆಂಗ್ಲೋ-ಮೈಸೂರು ಕದನವು, ಅಧುನಿಕ ಭಾರತದ ಇತಿಹಾಸದಲ್ಲೇ ಅತ್ಯಂತ ಆಸಕ್ತಿದಾಯಕವಾದ ಅಧ್ಯಾಯವಾಗಿದೆ.

ಹೈದರಲಿ ಬ್ರಿಟಿಷರ ಬಗ್ಗೆ ಮೆಚ್ಚುಗೆಯನ್ನು ಹೊಂದಿದ್ದ ಹಾಗೂ ತನ್ನ ಸೇನೆಯನ್ನು ಆಧುನೀಕರಿಸಲು ಬ್ರಿಟಿಷರ ಸೇನಾ ಸಹಾಯವನ್ನು ಪಡೆಯಲು ಬಯಸಿದ್ದ. ಆದರೆ ಬ್ರಿಟಿಷರು ಅದಕ್ಕೆ ಒಪ್ಪಲಿಲ್ಲ. ಇದರಿಂದಾಗಿ ಹೈದರ್ ಫ್ರೆಂಚರ ಸಹಾಯವನ್ನು ಪಡೆಯಬೇಕಾಯಿತು. ಫ್ರೆಂಚರ ನೆರವಿನೊಂದಿಗೆ ಹೈದರಲಿ ತನ್ನ ಕಾಲಾಳುದಳ ಹಾಗೂ ಫಿರಂಗಿದಳವನ್ನು ಆಧುನೀಕರಿಸಿದ. ಆದರೆ ಆ ಕಾಲದಲ್ಲಿ ಅಶ್ವಾರೋಹಿದಳವನ್ನು ನಿರ್ಲಕ್ಷಿಸಿದ್ದ ಇತರ ಭಾರತೀಯ ಅರಸೊತ್ತಿಗೆಗಳಿಗಿಂತ ಭಿನ್ನವಾದ ದಾರಿ ತುಳಿದ ಹೈದರ್ ತನ್ನ ಅಶ್ವಾರೋಹಿದಳದ ಬಗ್ಗೆ ಸದಾ ಕಾಳಜಿವಹಿಸಿದ್ದ ಹಾಗೂ ಉತ್ಕೃಷ್ಟವಾದ ನಿಪುಣತೆಯೊಂದಿಗೆ ಅದನ್ನು ಬಳಸಿಕೊಂಡಿದ್ದ. ವಾಸ್ತವವಾಗಿ, ಮೈಸೂರು ಅಶ್ವಾರೋಹಿದಳವು ಅದರ ದಿಟ್ಟತನ ಹಾಗೂ ಆಕ್ರಮಣಕಾರಿ ಗುಣಗಳಿಂದಾಗಿ ತನ್ನ ವಿರೋಧಿಗಳಲ್ಲಿ ಭೀತಿಯನ್ನು ಮೂಡಿಸಿತ್ತು. 1770ರಲ್ಲಿ ಹೈದರಲಿಯು 20 ಸಾವಿರ ಅಶ್ವಾರೋಹಿದಳ, 20 ಬೆಟಾಲಿಯನ್ ಕಾಲಾಳುಪಡೆ ಹಾಗೂ ಅಪಾರ ಪ್ರಮಾಣದ ಬಂದೂಕುಗಳನ್ನು ಹೊಂದಿದ್ದ. ಇಂಗ್ಲಿಷರು ಕೂಡಾ ಮೈಸೂರು ಅಶ್ವಾರೋಹಿದಳದ ಕಾರ್ಯಾಚರಣೆಗಳನ್ನು ಬೆಳೆಗಳ ಮೇಲೆ ಹಿಂಡು ಹಿಂಡಾಗಿ ದಾಳಿ ನಡೆಸುವ ಲೋಕಸ್ಟ್ ಕೀಟಗಳ ಗುಂಪಿಗೆ ಹೋಲಿಸಿದ್ದರೂ ಕೂಡಾ, ಅದರ ಶ್ರೇಷ್ಠತೆಯನ್ನು ಒಪ್ಪಿಕೊಂಡಿದ್ದರು.

ಯುದ್ಧ ಕಾಲದಲ್ಲಿ ಪ್ರಾಂತೀಯ ರಾಜ್ಯಪಾಲರುಗಳು ಪೋಷಿಸಿರುವ ಪ್ರಜಾಸೈನ್ಯವನ್ನು ಬಳಸಿಕೊಳ್ಳುವಂತಹ ಪದ್ಧತಿಯು ಆಗ ಭಾರತದಲ್ಲಿ ಸರ್ವೇ ಸಾಮಾನ್ಯವಾಗಿತ್ತು. ಆದರೆ ಈ ಪದ್ಧತಿಯನ್ನು ಕೈಬಿಟ್ಟ ಹೈದರಲಿ ಸಂಪೂರ್ಣವಾಗಿ ಕೇಂದ್ರೀಕೃತ ಸೈನಿಕ ನೇಮಕಾತಿ ಹಾಗೂ ತರಬೇತಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದ. ಸೇನಾ ರೆಜಿಮೆಂಟ್ ವ್ಯವಸ್ಥೆಯನ್ನು ಕೂಡಾ ಹೈದರ್ ಅನುಸರಿಸಿದ್ದ. ಆದರೆ ಟಿಪ್ಪು ಸುಲ್ತಾನನ ಕಾಲಕ್ಕೆ ಮೈಸೂರು ಫಿರಂಗಿದಳವು ಅತ್ಯುತ್ಕೃಷ್ಟತೆಯನ್ನು ಪಡೆದುಕೊಳ್ಳುವಲ್ಲಿ ಸಫಲವಾಯಿತು. ಟಿಪ್ಪುವಿನ ಬಂದೂಕುಗಳು ದೀರ್ಘ ವ್ಯಾಪ್ತಿ ಹಾಗೂ ನಿಖರತೆಯನ್ನು ಹೊಂದಿದ್ದವು. ಟಿಪ್ಪು ಸುಲ್ತಾನ್, ರಾಕೆಟ್ ಫಿರಂಗಿಗಳನ್ನು ಕುಶೂನ್‌ಗಳು ಎಂದು ಕರೆಯಲಾಗುವ ತನ್ನ ಸೇನಾ ತುಕಡಿಯಡಿ ಸಂಘಟಸಿದ್ದ. ಟಿಪ್ಪುವಿನ ಬಳಿ ಎಷ್ಟು ಫಿರಂಗಿಗಳಿದ್ದವೆಂಬ ಬಗ್ಗೆ ನಿಖರ ಮಾಹಿತಿಯಿಲ್ಲ. ಆದರೆ 1799ರಲ್ಲಿ ಶ್ರೀರಂಗಪಟ್ಟಣದ ಪತನ ಹಾಗೂ ಟಿಪ್ಪುವಿನ ನಿಧನದ ಬಳಿಕ ಬ್ರಿಟಿಷರು 421 ಗನ್ ವಾಹಕಗಳು, 17,612 ಪೌಂಡರ್‌ಗಳು ಹಾಗೂ 4 ರಿಂದ 42 ಪೌಂಡ್ ತೂಕದವರೆಗಿನ ಕಬ್ಬಿಣದ ಫಿರಂಗಿ ಗುಂಡುಗಳನ್ನು ಆತನ ಕೋಟೆಯಲ್ಲಿ ಪತ್ತೆಹಚ್ಚಿದ್ದರು.

ಆದರೆ ಬ್ರಿಟಿಷರಲ್ಲಿ ಇದ್ದಂತಹ ಅಧಿಕಾರಿಗಳ ನಾಯಕತ್ವಕ್ಕೆ ಮೈಸೂರು ಸಂಸ್ಥಾನದಲ್ಲಾಗಲಿ ಅಥವಾ ಭಾರತದ ಇತರ ಯಾವುದೇ ಶಕ್ತಿಗಾಗಲಿ ಸರಿಸಾಟಿಯಾಗಲು ಸಾಧ್ಯವಾಗಲಿಲ್ಲ.

ಬ್ರಿಟಿಷರು ಅಧಿಕಾರಿ ನಾಯಕತ್ವದ ಸಂಸ್ಕೃತಿಯನ್ನು ಪೋಷಿಸಿದ್ದರು. ಅಲ್ಲಿ ಅಧಿಕಾರಿಗಳು ತಮ್ಮ ಸೈನಿಕರನ್ನು ಯುದ್ಧರಂಗದೆಡೆಗೆ ಮುನ್ನಡೆಸುತ್ತಿದ್ದರು ಮಾತ್ರವಲ್ಲದೆ ಸಾಮಾನ್ಯ ಸೈನಿಕರ ಹಾಗೆಯೇ ಅವರು ಕೂಡಾ ಯುದ್ಧದ ಸಂಕಷ್ಟಗಳನ್ನು ಅನುಭವಿಸುತ್ತಿದ್ದರು ಹಾಗೂ ಯುದ್ಧರಂಗದಲ್ಲಿ ಸಾವನ್ನಪ್ಪುತ್ತಿದ್ದರು ಕೂಡಾ. ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನ ಎಲ್ಲೆಡೆ ಬ್ರಿಟಿಷ್ ಸೇನಾಧಿಕಾರಿಗಳು ಯುದ್ಧದಲ್ಲಿ ಘೋರವಾದ ಸಾವುನೋವುಗಳಿಗೆ ತುತ್ತಾಗುತ್ತಿದ್ದರು. ತಮ್ಮ ಯೋಧರ ಮುಂದೆಯೇ ಪರಮೋಚ್ಚ ತ್ಯಾಗವನ್ನು ಮಾಡಲು ಸಿದ್ಧರಿರುವ ಮೂಲಕ ಬ್ರಿಟಿಷ್ ಸೇನಾಧಿಕಾರಿಯು ತನ್ನ ಕೈಕೆಳಗಿನ ಸೈನಿಕರಿಂದ ಅಪಾರವಾದ ಗೌರವವನ್ನು ಸಂಪಾದಿಸಿಕೊಳ್ಳುತ್ತಾನೆ. ಸಾಮಾನ್ಯ ಸೈನಿಕರಂತೆ ಸೇನಾ ಜನರಲ್‌ಗಳಿಗೂ ಕವಾಯತು ಕಡ್ಡಾಯವಾಗಿತ್ತು. ಆಂಗ್ಲೊ-ಮೈಸೂರು ಯುದ್ಧ ಅಥವಾ ಆ್ಯಂಗ್ಲೊ ಮರಾಠ ಯುದ್ಧಗಳ ಭಾಗವಾದ ಇತರ ಹಲವಾರು ಕದನಗಳನ್ನು ಯಾರಾದರೂ ಓದಿದಲ್ಲಿ ನಿಮಗೆ ಅದಕ್ಕೆ ಪುರಾವೆ ಲಭಿಸಲಿದೆ.

ಮೊದಲ ಜಾಗತಿಕ ಯುದ್ಧದಲ್ಲೂ ಭಾರತೀಯ ಸೇನೆಯು ಪಾಶ್ಚಾತ್ಯ ದೇಶಗಳಲ್ಲಿ ಯುದ್ಧರಂಗದ ಮುಂಚೂಣಿಗೆ ತೆರಳಿತ್ತು. ಒಂದು ವರ್ಷಕ್ಕಿಂತ ಸ್ವಲ್ಪ ಕಡಿಮೆ ಸಮಯ ಸೇವೆ ಸಲ್ಲಿಸಿದ ಬಳಿಕ ಭಾರತೀಯ ಸೇನೆಯ ಕಾಲಾಳುದಳದ ತುಕಡಿಗಳನ್ನು ಯುರೋಪ್‌ನಿಂದ ಹಿಂದೆಗೆದುಕೊಳ್ಳಲಾಯಿತು. ತಮ್ಮ ಕೈಕೆಳಗೆ ಇದ್ದ ಈ ಸೈನಿಕರ ಭಾಷೆಯನ್ನು ಅರಿತಿರುವಂತಹ ಬ್ರಿಟಿಷ್ ಅಧಿಕಾರಿಗಳ ಸಂಖ್ಯೆ ಕಡಿಮೆಯಿದ್ದುದು ಇದಕ್ಕೊಂದು ಕಾರಣವಾಗಿದೆ. ಈ ಯುದ್ಧದಲ್ಲಿ ಭಾರತೀಯ ಹಾಗೂ ಬ್ರಿಟಿಷ್ ಸೇನೆಗಳಲ್ಲಿ ಸೇವೆ ಸಲ್ಲಿಸಿದ್ದ ಹಲವಾರು ಅಧಿಕಾರಿಗಳು ಸಾವನ್ನಪ್ಪಿದ್ದರು.

ಟಿಪ್ಪು ಸುಲ್ತಾನ್ ಹಾಗೂ ಹೈದರಲಿ ಇಬ್ಬರಿಗೂ ಇಂಗ್ಲಿಷರ ಬಲಾಬಲದ ಅರಿವಿತ್ತು. ಈ ಕಾರಣಕ್ಕಾಗಿಯೇ ಮೇ 4,1799ರ ಮಧ್ಯಾಹ್ನದಂದು ಶ್ರೀರಂಗಪಟ್ಟಣಕ್ಕೆ ನುಗ್ಗಿದ ಬ್ರಿಟಿಷರು, ಕೋಟೆಯ ಮೇಲಿನ ರಕ್ಷಣಾ ಬುರುಜಲ್ಲಿ ನಿಂತ ಟಿಪ್ಪು, ಬ್ರಿಟಿಷ್ ಅಧಿಕಾರಿಯನ್ನು ಗುಂಡಿಕ್ಕುತ್ತಿರುವುದನ್ನು ಕಂಡರು. ಆತನ ಸಹಾಯಕರು ಇದೊಂದು ಬೇಟೆಯ ಕ್ರೀಡೆಯೆಂಬಂತೆ ಒಂದಾದ ಆನಂತರ ಮತ್ತೊಂದರಂತೆ ಮದ್ದುಗುಂಡುಗಳನ್ನು ಹಸ್ತಾಂತರಿಸುತ್ತಿರುವುದನ್ನು ಕಂಡರು.

ಆದರೆ ಆದಾಗಲೇ ತಡವಾಗಿತ್ತು. ಟಿಪ್ಪು ಓರ್ವ ವೀರಯೋಧನ ಮರಣವನ್ನಪ್ಪಿದನು. ಹಾಗೆ ನೋಡಿದರೆ ಬ್ರಿಟಿಷ್‌ಸೇನೆಯ ಸಂಖ್ಯಾಬಲ, ಶಸ್ತ್ರಾಸ್ತ್ರ ಬಲವನ್ನು ಗಮನಿಸಿ ಆತ, ಇನ್ನೊಂದು ದಿನ ಪ್ರಬಲವಾಗಿ ಹೋರಾಟಮಾಡಬಹುದೆಂದು ಭಾವಿಸಿ ಯುದ್ಧದಿಂದ ಹಿಂದೆ ಸರಿದು ಪರಾರಿಯಾಗಬಹುದಿತ್ತು.
ಬಹುಶಃ ಅದೊಂದು ಜಾಣತನದ ನಿರ್ಧಾರವಾಗಬಹುದಾಗಿತ್ತು. ಆದರೆ ಶರಣಾಗಿ ಅವಮಾನಕ್ಕೊಳಗಾಗುವುದಕ್ಕಿಂತ, ವೀರ ಮರಣವನ್ನೇ ಆತ ಆಯ್ದುಕೊಂಡ. ಆ ಕ್ಷಣವೇ, ಬ್ರಿಟಿಷರು ತಾವು ಅತಿಯಾಗಿ ದ್ವೇಷಿಸುತ್ತಿದ್ದ ಟಿಪ್ಪುವನ್ನು ಅಪಾರವಾಗಿ ಮೆಚ್ಚಿಕೊಂಡರು.

ಟಿಪ್ಪುವಿನ ಪರಾಭವಕ್ಕೆ ಕೊಡುಗೆ ನೀಡಿದ ಎಲ್ಲಾ ಬ್ರಿಟಿಷ್ ಹಾಗೂ ಭಾರತೀಯ ಸೈನಿಕರಿಗೆ ನೀಡಲಾದ ಶ್ರೀರಂಗಪಟ್ಟಣಂ ಪದಕದ ಮೇಲೆ ಸಿಂಹ(ಬ್ರಿಟಿಷರ ಸಂಕೇತ)ವೊಂದು ಹುಲಿ (ಟಿಪ್ಪು)ಯನ್ನು ಕೆಡವಿಹಾಕಿರುವ ಚಿತ್ರವನ್ನು ಕೆತ್ತಲಾಗಿತ್ತು. ಆನಂತರ ಭಾರತದ ಸಂಕೇತವಾಗಿ ಬ್ರಿಟಿಷರು ಬಳಸುತ್ತಿದ್ದ ಹುಲಿಯ ಸಂಕೇತಕ್ಕೆ ಟಿಪ್ಪು ಸ್ಫೂರ್ತಿಯಾಗಿದ್ದಿರಬಹುದು. ಬಹುಶಃ ಬ್ರಿಟಿಷರು, ‘ಮೈಸೂರು ಹುಲಿಗೆ’ ಸಲ್ಲಿಸಿದ ದೊಡ್ಡ ಶ್ರದ್ಧಾಂಜಲಿ ಇದಾಗಿರಬಹುದು.

ಕೃಪೆ: ಟೈಮ್ಸ್ ಆಫ್ ಇಂಡಿಯಾ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)