varthabharthi

ಸಂಪಾದಕೀಯ

ಚುನಾವಣಾ ಆಯೋಗ ಹ್ಯಾಕ್ ಆಗಿದೆಯೆ?

ವಾರ್ತಾ ಭಾರತಿ : 4 May, 2019

ಪ್ರಧಾನಿ ಮೋದಿಯವರು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ಚುನಾವಣಾ ಪ್ರಚಾರಕ್ಕಿಳಿಯುವಾಗ, ತಾನೊಬ್ಬ ಪ್ರಧಾನಿ ಎನ್ನುವ ಅಂಶವನ್ನು ಸಂಪೂರ್ಣ ಮರೆತಂತಿದೆ. ಚುನಾವಣೆಗಾಗಿ ಮತ ಯಾಚಿಸುವ ಸಂದರ್ಭದಲ್ಲಿ ತಾನು ವಹಿಸಿರುವ ಹುದ್ದೆಯ ಘನತೆಗೆ ಯಾವ ಧಕ್ಕೆಯೂ ಬರಬಾರದು ಎನ್ನುವ ಅಂಶವನ್ನು ಅವರು ಸದಾ ನೆನಪಿನಲ್ಲಿಡಬೇಕಿತ್ತು. ಈ ಹಿಂದೆ ಪ್ರಧಾನಿಯಾಗಿ ಮನಮೋಹನ್ ಸಿಂಗ್ ಹೇಗೆ ಚುನಾವಣಾ ಸಂದರ್ಭದಲ್ಲಿ ಮೆರೆದ ಪ್ರಬುದ್ಧತೆಯನ್ನು ಮೋದಿ ಮಾದರಿಯಾಗಿರಿಸಿಕೊಳ್ಳಬಹುದಿತ್ತು. ದುರದೃಷ್ಟವಶಾತ್ ಇಂದು ಇಡೀ ಬಿಜೆಪಿ ಮೋದಿಯವರ ಸಾರ್ವಜನಿಕ ಅತಿರಂಪಾಟಗಳನ್ನೇ ನೆಚ್ಚಿಕೊಂಡಂತಿದೆ. ಈ ಹಿಂದೆಲ್ಲ ಬಿಜೆಪಿ ಒಬ್ಬ ನಾಯಕನನ್ನು ನೆಚ್ಚಿಕೊಂಡು ಮತಯಾಚನೆ ಮಾಡಿದ್ದಿಲ್ಲ. ಇಂದು ಸ್ವತಃ ಬಿಜೆಪಿಯೊಳಗಿನ ನಾಯಕರೇ ‘ಪಕ್ಷಕ್ಕಲ್ಲ, ಮೋದಿಗೆ ಮತ ಹಾಕಿ’ ಎಂದು ಸಾರ್ವಜನಿಕವಾಗಿ ಮನವಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಅಟಲ್, ಅಡ್ವಾಣಿ, ಜೋಷಿ, ಸುಶ್ಮಾ ಸ್ವರಾಜ್‌ರಂತಹ ಹಿರಿಯ ನಾಯಕರು ಕೈ ಕೈ ಜೋಡಿಸಿ ಕಟ್ಟಿದ ಬಿಜೆಪಿಯಂತಹ ರಾಷ್ಟ್ರೀಯ ಪಕ್ಷ ಇಂದು ‘ಮೋದಿ’ಗೆ ಸೀಮಿತವಾಗಿರುವುದು, ಅದರ ಅತಂತ್ರ ಭವಿಷ್ಯವನ್ನು ಹೇಳುತ್ತದೆ. ಬಹುಶಃ ಈ ಹೊಣೆಗಾರಿಕೆ ನರೇಂದ್ರ ಮೋದಿಗೂ ಒಂದು ಸವಾಲೇ ಆಗಿದೆ. ಈ ಬಾರಿ ಹೇಗಾದರೂ ಸರಿ, ಪಕ್ಷವನ್ನು ಅಧಿಕಾರಕ್ಕೇರಿಸಲೇಬೇಕು ಎನ್ನುವ ಹೊರೆಯನ್ನು ಅವರೊಬ್ಬರೇ ಹೊತ್ತಿದ್ದಾರೆ. ಪಕ್ಷದೊಳಗಿರುವ ಹಿರಿಯ ನಾಯಕರ ಮನಸ್ಥಿತಿಯೂ ಅದೇ ಆಗಿದೆ. ಗೆದ್ದರೆ ಜೊತೆಗೆ ಸೇರಿಕೊಳ್ಳುವುದು, ಸೋತರೆ ಮೋದಿಯನ್ನೇ ಅದಕ್ಕೆ ಹೊಣೆ ಮಾಡಿ ಅವರನ್ನು ಹೊರಗಿಡುವ ಒಂದು ಗುಂಪು ಬಿಜೆಪಿಯೊಳಗೆ ಸಂದರ್ಭಕ್ಕಾಗಿ ಕಾಯುತ್ತಾ ಕೂತಿದೆ. ಇದು ಸ್ವತಃ ನರೇಂದ್ರ ಮೋದಿಯವರಿಗೂ ಗೊತ್ತಿರುವ ಸತ್ಯ. ಈ ಕಾರಣದಿಂದಲೇ, ಪ್ರಧಾನಿ ಸ್ಥಾನದ ಎಲ್ಲ ಘನತೆಯನ್ನು ಬದಿಗಿಟ್ಟು ಅವರು ಮೂರನೆಯ ದರ್ಜೆಯ ನಾಯಕನೊಬ್ಬನಂತೆ ಬೀದಿ ರಂಪದ ಭಾಷಣ ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಅವರೆಲ್ಲ ಭಾಷಣಗಳ ಉಗುಳನ್ನು ಪ್ರಸಾದವೆಂದು ಸ್ವೀಕರಿಸುತ್ತಾ ಧನ್ಯವಾಗುತ್ತಿದೆ.

ಮೋದಿಯವರು ಆಡಿದ ಅತ್ಯಂತ ಆಘಾತಕಾರಿ ಮತ್ತು ಉಡಾಫೆಯ ಭಾಷಣಗಳಲ್ಲಿ, ಪಶ್ಚಿಮಬಂಗಾಳ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಆಡಿದ ಮಾತುಗಳೂ ಸೇರಿಕೊಳ್ಳುತ್ತವೆ. ‘‘ತೃಣಮೂಲ ಕಾಂಗ್ರೆಸ್‌ನ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ’’ ಎಂದು ಮೋದಿಯವರು ಇಲ್ಲಿ ಹೇಳಿಕೊಂಡರು. ನಡೆಯುತ್ತಿರುವುದು ಲೋಕಸಭಾ ಚುನಾವಣೆ. ಈ 40 ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುವ ಮೂಲಕ ಅವರು ಜನರಿಗೆ ಯಾವ ಸಂದೇಶವನ್ನು ನೀಡಲು ಹೊರಟಿದ್ದಾರೆ? ಇದರಲ್ಲಿ ನರೇಂದ್ರ ಮೋದಿಯವರ ಸಾಧನೆಯೇನು? 40 ಶಾಸಕರು ಮೋದಿಯವರ ಸಂಪರ್ಕದಲ್ಲಿದ್ದಾರೆ ಎನ್ನುವ ಕಾರಣಕ್ಕಾಗಿ ಮತದಾರರು ಮೋದಿಯವರ ಪಕ್ಷಕ್ಕೆ ಮತವನ್ನು ನೀಡಬೇಕೇ? ಪ್ರಜಾಸತ್ತಾತ್ಮಕವಾಗಿ ಈ ದೇಶದ ಪ್ರಜೆಗಳಿಂದ ಆಯ್ಕೆಯಾದ ಶಾಸಕರನ್ನು ಯಾವುದೇ ಮಾರ್ಗದಲ್ಲಾದರೂ ಕೊಂಡು ಕೊಳ್ಳುವುದು, ಮತ ಹಾಕಿದ ಮತದಾರರ ಮತಗಳನ್ನೇ ಕೊಂಡುಕೊಂಡಂತೆ ಅಲ್ಲವೇ? ವಿರೋಧ ಪಕ್ಷವನ್ನು ವಾಮಮಾರ್ಗದಲ್ಲಿ ದುರ್ಬಲಗೊಳಿಸಿ, ಮತದಾರರನ್ನು ವಂಚಿಸಿ ಅಧಿಕಾರ ಹಿಡಿಯುವಷ್ಟು ಕಳಪೆ ಸಾಧನೆಯನ್ನು ಮಾಡಿದ್ದಾರೆಯೇ ನರೇಂದ್ರ ಮೋದಿಯವರು? ಕಳೆದ ನಾಲ್ಕು ವರ್ಷಗಳ ಸಾಧನೆಗಳನ್ನು ಹೇಳಿ ಮತ ಯಾಚಿಸಲು ಮೋದಿಯ ಬಳಿ ಯಾವ ಘನಕಾರ್ಯಗಳೂ ಇಲ್ಲ ಎನ್ನುವುದನ್ನು ಅವರು ಈ ಮೂಲಕ ಒಪ್ಪಿಕೊಂಡಂತಾಯಿತು. ಮೋದಿ ಹತಾಶರಾಗಿದ್ದಾರೆ ಎನ್ನುವುದನ್ನೂ ಇದು ಹೇಳುತ್ತದೆ.

 ಕರ್ನಾಟಕ ರಾಜ್ಯದಲ್ಲಿ ಮೈತ್ರಿ ಸರಕಾರ ಅಧಿಕಾರ ಹಿಡಿದ ದಿನದಿಂದ ಇಂತಹದೇ ಮಾತುಗಳನ್ನು ಯಡಿಯೂರಪ್ಪ ಆಡುತ್ತಿದ್ದಾರೆ. ಪ್ರತಿ ದಿನ ಮಾಧ್ಯಮಗಳಲ್ಲಿ ‘‘ಮೈತ್ರಿ ಸರಕಾರದ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ’’ ಎಂದು ಹೇಳುವ ಮೂಲಕ, ಇನ್ನೇನು ಸರಕಾರ ಬಿದ್ದೇ ಬಿಡುತ್ತದೆ ಎನ್ನುವ ವಾತಾವರಣವನ್ನು ಮಾಧ್ಯಮಗಳ ಮೂಲಕ ಅವರು ನಿರ್ಮಿಸುತ್ತಾ ಬಂದಿದ್ದಾರೆ. ಇದೀಗ ಮೋದಿಯೇ ಯಡಿಯೂರಪ್ಪ ಅವರನ್ನು ಮಾದರಿಯಾಗಿಟ್ಟು ಚುನಾವಣಾ ಪ್ರಚಾರಕ್ಕಿಳಿದಂತಾಗಿದೆ. ಆಪರೇಷನ್ ಕಮಲಕ್ಕಾಗಿ ಸ್ಪಷ್ಟನೆ ನೀಡಬೇಕಾಗಿದ್ದ ಪ್ರಧಾನಮಂತ್ರಿಯೇ ಬಹಿರಂಗವಾಗಿ ಶಾಸಕರ ಕುದುರೆ ವ್ಯಾಪಾರವನ್ನು ಸಮರ್ಥಿಸಿಕೊಂಡರೆ ಅಥವಾ ಅವರೇ ನೇರವಾಗಿ ಕುದುರೆ ವ್ಯಾಪಾರಕ್ಕಿಳಿದರೆ, ಆ ಪಕ್ಷದ ಪ್ರಾದೇಶಿಕ ನಾಯಕರಿಂದ ಇನ್ನೇನು ನಿರೀಕ್ಷಿಸಬಹುದು? ಈ ದೇಶದ ಇತಿಹಾಸದಲ್ಲಿ ಒಬ್ಬ ಪ್ರಧಾನಿ ಸಾರ್ವಜನಿಕ ವೇದಿಕೆಯಲ್ಲಿ ನಿಂತು, ಕುದುರೆ ವ್ಯಾಪಾರವನ್ನು ತನ್ನ ರಾಜಕೀಯ ಹೆಗ್ಗಳಿಕೆಯೆಂಬಂತೆ ಘೋಷಿಸಿರುವುದು ಇದೇ ಮೊದಲಿರಬೇಕು. ಚುನಾವಣಾ ಆಯೋಗ ಈ ಬಗ್ಗೆ ಇನ್ನೂ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ ಎನ್ನುವುದು ಆಯೋಗದೊಳಗಿರುವ ಅಧಿಕಾರಿಗಳೂ ಮೋದಿಯ ಸಂಪರ್ಕದಲ್ಲೇ ಇದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಿದೆ.

ಮೋದಿಯ ಕುದುರೆ ವ್ಯಾಪಾರಕ್ಕೆ ಚುನಾವಣಾ ಆಯೋಗವೂ ಬಲಿಯಾಗಿದೆ ಎನ್ನುವ ಶಂಕೆ ದೇಶವನ್ನು ಕಾಡುತ್ತಿದೆ. ವಾರಣಾಸಿಯಲ್ಲಿ ಮಾಜಿ ಯೋಧನ ವಿರುದ್ಧ ತನ್ನ ಅಧಿಕಾರವನ್ನು ವೀರಾವೇಶದಿಂದ ಪ್ರದರ್ಶಿಸಿದ ಚುನಾವಣಾ ಆಯೋಗ ಮೋದಿಯ ವಿಷಯದಲ್ಲಿ ಆಮೆಗತಿಯಲ್ಲಿ ಹೆಜ್ಜೆ ಇಡುತ್ತಿರುವುದು ಈ ಬಾರಿಯ ಚುನಾವಣೆಯ ಅತಿ ದೊಡ್ಡ ದುರಂತವಾಗಿದೆ. ಇವಿಎಂನ್ನು ಹ್ಯಾಕ್ ಮಾಡಲು ಸಾಧ್ಯವೋ ಇಲ್ಲವೋ, ಆದರೆ ಮೋದಿಯವರು ಚುನಾವಣಾ ಆಯೋಗವನ್ನು ಹ್ಯಾಕ್ ಮಾಡಿರುವ ಕುರಿತಂತೆ ಯಾವ ಅನುಮಾನವು ಇಲ್ಲ. ಇದೇ ಹೊತ್ತಿನಲ್ಲಿ ಮೋದಿ, ಅಮಿತ್ ಶಾ ನೀತಿ ಉಲ್ಲಂಘನೆಗೆ ಸಂಬಂಧಿಸಿ ಎಲ್ಲ ಪ್ರಕರಣಗಳಿಗೂ ಮೇ 6ರೊಳಗೆ ತೀರ್ಪನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಚುನಾವಣಾ ಆಯೋಗ ಸರಿದಾರಿಯಲ್ಲಿದ್ದಿದ್ದರೆ ಸುಪ್ರೀಂಕೋರ್ಟ್ ಅದಕ್ಕೆ ನಿರ್ದೇಶನ ನೀಡುವ ಅಗತ್ಯವಾದರೂ ಇತ್ತೇ? ಒಂದು ರೀತಿಯಲ್ಲಿ ಸುಪ್ರೀಂಕೋರ್ಟ್ ನಿರ್ದೇಶನ ಆಯೋಗಕ್ಕೆ ನೀಡಿದ ತಪರಾಕಿಯಾಗಿದೆ. ನಮೋ ಟಿವಿ ಈಗಲೂ ಮೋದಿಯ ಭಾಷಣಗಳನ್ನು ಪ್ರಸಾರ ಮಾಡುತ್ತಲೇ ಇದೆ. ಮೋದಿಯ ಸಿನೆಮಾ ಬಿಡುಗಡೆಗೆ ನಿಷೇಧ ಹೇರಿರಬಹುದು, ಆದರೆ ಸಿನೆಮಾದ ಜಾಹೀರಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಹರಿದಾಡುತ್ತಲೇ ಇವೆ. ಮೋದಿಯ ವಿರುದ್ಧ ಯಾವುದೇ ಆದೇಶ ನೀಡಲು ಆಯೋಗ ನಿಧಾನದ ತಂತ್ರವನ್ನು ಅನುಸರಿಸುತ್ತಿದೆ. ಚುನಾವಣಾ ಆಯೋಗ ತನ್ನ ತೀರ್ಪು ನೀಡುವ ಹೊತ್ತಿಗೆ ಜನರ ಮೇಲೆ ಮೋದಿ ಗ್ಯಾಂಗ್ ತನ್ನ ಪರಿಣಾಮವನ್ನು ಬೀರಿ ಆಗಿರುತ್ತದೆ. ಚುನಾವಣಾ ಆಯೋಗದ ದುರ್ಬಳಕೆಯ ಮೂಲಕ ಮೋದಿ ಗೆದ್ದರೂ ಸೋತಂತೆಯೇ. ಖಂಡಿತವಾಗಿಯೂ ಅದು ಪ್ರಜಾಸತ್ತೆಯ ಗೆಲುವಾಗದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)