varthabharthi

ಗಲ್ಫ್ ಸುದ್ದಿ

ಶ್ರೀಲಂಕಾ ಬಾಂಬರ್ ಜತೆ ನಂಟು ಹೊಂದಿದ್ದ ಆರೋಪ: ಸೌದಿಯಲ್ಲಿ ಇಬ್ಬರ ಬಂಧನ

ವಾರ್ತಾ ಭಾರತಿ : 4 May, 2019

ಹೊಸದಿಲ್ಲಿ, ಮೇ 4: ಶ್ರೀಲಂಕಾದ ಶಾಂಗ್ರಿ-ಲಾ ಹೋಟೆಲ್ ನಲ್ಲಿ ಸ್ಫೋಟ ನಡೆಸಿದ್ದ ಐಸಿಸ್ ಬೆಂಬಲಿಗ ಝಹ್ರಾನ್ ಹಾಶಿಂ ಎಂಬಾತನ ಮೈದುನ ಮೌಲಾನ ರಿಲಾ ಹಾಗೂ ಶಾನವಾಝ್ ಎಂಬ ಆತನ ಸಹಚರನನ್ನು ಸೌದಿ ಅರೇಬಿಯಾ ಕಳೆದ ವಾರ ಭಾರತದ ಗುಪ್ತಚರ ಮಾಹಿತಿಯ ಆಧಾರದಲ್ಲಿ ಬಂಧಿಸಿದೆ ಎಂದು ವರದಿಯಾಗಿದೆ.

ಆತ್ಮಹತ್ಯಾ ಬಾಂಬರ್ ಹಾಶಿಂ ಈಸ್ಟರ್ ರವಿವಾರದಂದು ಶ್ರೀಲಂಕಾದಲ್ಲಿ ನಡೆದ ಸ್ಫೋಟಗಳಿಗೆ ಕಾರಣವಾದ ತೀವ್ರಗಾಮಿ ಗುಂಪನ್ನು ಪ್ರೇರೇಪಿಸಿದವನೆನ್ನಲಾಗಿದೆ. ಭಾರತವು ಶ್ರೀಲಂಕಾಗೆ ಈ ದಾಳಿಗಳ ಬಗ್ಗೆ ಅದು ಯಾವಾಗ ಎಲ್ಲಿ ನಡೆಯುವ ಸಾಧ್ಯತೆಯಿದೆ ಎನ್ನುವ ಬಗ್ಗೆ, ಹಲವಾರು ಎಚ್ಚರಿಕೆ ನೀಡಿದ್ದರೂ ಶ್ರೀಲಂಕಾ ಅದನ್ನು ನಿರ್ಲಕ್ಷಿಸಿತ್ತು.

ಭಾರತದ ಭದ್ರತಾ ಏಜನ್ಸಿಗಳು ಈಗಾಗಲೇ ಸೌದಿ ಅರೇಬಿಯಾದ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದು, ಶ್ರೀಲಂಕಾ ಸದ್ಯದಲ್ಲಿಯೇ ಸೌದಿ ಅರೇಬಿಯಾಗೆ ತನ್ನ ತಂಡವೊಂದನ್ನು ಕಳುಹಿಸುವ ಸಾಧ್ಯತೆಯಿದೆ.

ಶ್ರೀಲಂಕಾದಲ್ಲಿ ಸ್ಫೋಟಗಳ ನಂತರ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಶ್ರೀಲಂಕಾದಲ್ಲಿ ಟಾಟಾ ಒಡೆತನದ ಇಂಡಿಯನ್ ಹೋಟೆಲ್ಸ್ ಕಂಪೆನಿ ಲಿಮಿಟೆಡ್ ಹಿರಿಯಾಧಿಕಾರಿಗಳನ್ನು ಸಂಪರ್ಕಿಸಿ ಸೆಕ್ಯುರಿಟಿ ಕ್ಯಾಮರಾ ಮತ್ತು ಲೋಹ ಶೋಧಕಗಳನ್ನು ಶ್ರೀಲಂಕಾದಲ್ಲಿರುವ ಮೂರು ಹೋಟೆಲ್ ಗಳಲ್ಲಿ ಅಳವಡಿಸುವಂತೆ ಹೇಳಿದ್ದರು.

ಎಪ್ರಿಲ್ 21ರಂದು ಶಂಕಿತ ಉಗ್ರ ಅಬ್ದುಲ್ ಲತೀಫ್ ಮುಹಮ್ಮದ್ ಜಾಮಿಲ್ ಆ ಹೋಟೆಲ್ ಗೆ ಪ್ರವೇಶಿಸಿದ್ದರೂ ಸ್ಫೋಟಿಸಲು ಆತನಿಗೆ ಸಾಧ್ಯವಾಗಿರಲಿಲ್ಲ. ನಂತರ ಆತ ದೆಹಿವಾಲ ಎಂಬಲ್ಲಿನ ಟ್ರಾಪಿಕಲ್ ಇನ್ನ್ ಎಂಬಲ್ಲಿ ನಡೆದ ಸ್ಫೋಟದಲ್ಲಿ ಸಾವನ್ನಪ್ಪಿದ್ದ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)