varthabharthi

ನಿಮ್ಮ ಅಂಕಣ

ಶಾಲಾ ಮಕ್ಕಳ ಬ್ಯಾಗಿನ ತೂಕ ಇಳಿಕೆ ಕ್ರಮ ಶ್ಲಾಘನೀಯ

ವಾರ್ತಾ ಭಾರತಿ : 6 May, 2019
ರಿಯಾಝ್ ಅಹ್ಮದ್, ರೋಣ

ಮಾನ್ಯರೇ,

 ಶಾಲಾ ಮಕ್ಕಳ ಬ್ಯಾಗಿನ ತೂಕ ಇಳಿಕೆಗೆ ಸರಕಾರ ಹೊರಡಿಸಿರುವ ಆದೇಶವು ನಿಜಕ್ಕೂ ಶ್ಲಾಘನೀಯ. ಕಾರ್ಮಿಕರು ಲಗೇಜನ್ನು ಹೊತ್ತುಕೊಂಡು ಹೋಗುವಂತೆ ಮಕ್ಕಳು ಭಾರವಾದ ಬ್ಯಾಗನ್ನು ತಿಣುಕಾಡುತ್ತಾ, ತಮ್ಮ ಪುಟ್ಟ ಹೆಗಲ ಮೇಲೆ ಹೊತ್ತುಕೊಂಡು ಶಾಲೆಗಳಿಗೆ ಹೋಗಬೇಕಾದಂತಹ ಪರಿಸ್ಥಿತಿ ಇತ್ತು. ಮಕ್ಕಳನ್ನು ಈ ತೊಂದರೆಯಿಂದ ರಕ್ಷಿಸಲು ಸರಕಾರವು ತಡವಾಗಿಯಾದರೂ ಎಚ್ಚರಗೊಂಡಿರುವುದು ಸಂತೋಷದ ವಿಚಾರ. ಮೊದಲೆಲ್ಲ ನಾವು ಶಾಲೆಗೆ ಹೋಗುತ್ತಿರುವಾಗ ನಮ್ಮ ಶಾಲಾ ಮೇಷ್ಟ್ರುಗಳು ಅನಗತ್ಯ ಪುಸ್ತಕಗಳನ್ನು ಕೊಂಡುಕೊಳ್ಳಲು ನಮಗೆ ಆದೇಶಿಸುತ್ತಿರಲಿಲ್ಲ. ಒಂದೊಂದು ವಿಷಯಕ್ಕೆ ಕೇವಲ ಒಂದು ನೋಟ್‌ಬುಕ್. ಅದು ಕೂಡಾ ನೂರು ಪುಟಗಳದ್ದು ಮಾತ್ರ. ಅಂದು ನಮಗಿಷ್ಟವಾದ ನೋಟ್‌ಬುಕ್‌ಗಳನ್ನು ಅಂಗಡಿಯವನೊಟ್ಟಿಗೆ ಚೌಕಾಶಿ ಮಾಡಿ ಅಪ್ಪನ ಹತ್ತಿರ ಹಣ ಪಡೆದು ಖರೀದಿಸುತ್ತಿದ್ದೆವು. ಆದರೆ ಇಂದು ಹೆಚ್ಚಿನ ಖಾಸಗಿ ಶಾಲೆಗಳಲ್ಲಿ ಪುಸ್ತಕದಿಂದ ಹಿಡಿದು ಎಲ್ಲ ವಸ್ತುಗಳನ್ನು ಆಯಾ ಶಾಲೆಗಳಲ್ಲಿಯೇ ಖರೀದಿಸುವ ಪರಿಸ್ಥಿತಿ ಪಾಲಕರಿಗೆ ಎದುರಾಗಿದೆ. ಇಂದು ಖಾಸಗಿ ಶಾಲೆಗಳು ವ್ಯಾಪಾರದ ಮಳಿಗೆಗಳಾಗುತ್ತಿವೆ. ಹೆಚ್ಚಿನ ಶಾಲಾ ಆಡಳಿತ ಮಂಡಳಿಯವರು ತಮ್ಮ ಲಾಭಕ್ಕಾಗಿ ದುಡ್ಡನ್ನು ಯಾವುದೇ ನಿಯಂತ್ರಣವಿಲ್ಲದೆ ಪಾಲಕರಿಂದ ಸುಲಿಗೆ ಮಾಡುತ್ತ್ತಿದ್ದಾರೆ. ಈ ಪರಿಸ್ಥಿತಿಯು ಬದಲಾಗಬೇಕಾದರೆ ಸರಕಾರವು ಈ ನಿಟ್ಟಿನಲ್ಲಿ ಖಾಸಗಿ ಶಾಲೆಗಳ ಮೇಲೆ ನಿಯಂತ್ರಣವನ್ನು ಹೇರಬೇಕು.

ಮಗದೊಂದೆಡೆ ಪಿಯುಸಿ ಹಾಗೂ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದೇ ತಡ ನಮ್ಮಲ್ಲಿಯ ಹೆಚ್ಚಿನ ಖಾಸಗಿ ಶಾಲೆಗಳು ತಮ್ಮ ಶಾಲೆಗಳಿಂದ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಭಾವಚಿತ್ರದೊಂದಿಗೆ ರಾಜ್ಯದ ಎಲ್ಲ ದಿನಪತ್ರಿಕೆಗಳಲ್ಲಿ ಜಾಹೀರಾತನ್ನು ನೀಡುವಲ್ಲಿ ನಾಮುಂದು ತಾಮುಂದು ಎಂಬಂತೆ ಸ್ಪರ್ಧೆಗೆ ಇಳಿದಿರುವುದನ್ನು ಓದಗರಾದ ನಾವು ನಿತ್ಯ ಪತ್ರಿಕೆಗಲ್ಲಿ ನೋಡುತ್ತಿದ್ದೇವೆ. ಇದರಿಂದಾಗಿ ಪ್ರತಿಭಾವಂತ ಮಕ್ಕಳನ್ನು ನಮ್ಮ ಶಿಕ್ಷಣ ಸಂಸ್ಥೆಗಳು ಜಾಹೀರಾತಿನ ಸರಕುಗಳನ್ನಾಗಿಸುತ್ತಿವೆಯೇ ಎಂದು ಅನುಮಾನ ಮೂಡುತ್ತಿದೆ. ಉತ್ತಮ ಅಂಕಗಳನ್ನು ಗಳಿಸಿದ ಮಕ್ಕಳು ನಿಜಕ್ಕೂ ಅಭಿನಂದನಾರ್ಹರು ಇದರಲ್ಲಿ ಎರಡು ಮಾತಿಲ್ಲ. ಆದರೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಕ್ಕಳ ಮೇಲೆ ಇಂತಹ ಜಾಹೀರಾತು ಯಾವ ಮಟ್ಟಿಗೆ ಪರಿಣಾಮ ಬೀರಬಹುದು ಎನ್ನುವುದನ್ನು ಒಂದು ಕ್ಷಣ ಯೋಚಿಸಬೇಕಾಗಿದೆ. ಜೀವನದಲ್ಲಿ ಪರೀಕ್ಷೆಗಳ ಅಂಕಗಳ ಆಚೆಗೂ ಒಂದು ಬದುಕು ಇದೆ ಎಂದು ಇಂದು ನಮ್ಮ ಸಮಾಜಕ್ಕೆ ತಿಳಿಸುವ ಅಗತ್ಯವಿದೆ. ಪಾಲಕರು ಮಕ್ಕಳ ತಲೆಯಲ್ಲಿ ಇಂತಿಷ್ಟು ಅಂಕಗಳನ್ನು ಪಡೆಯಲೇಬೇಕು, ಇಲ್ಲದಿದ್ದರೆ ನಿನ್ನ ಬದುಕೇ ಹಾಳಾಗುತ್ತದೆ ಎಂದು ನಿತ್ಯ ಮಾನಸಿಕ ಒತ್ತಡವನ್ನು ಹಾಕುತ್ತಿದ್ದೇವೆ. ಇಂದು ಅದೆಷ್ಟೊ ಜನರು ಕಡಿಮೆ ಅಂಕಗಳನ್ನು ಪಡೆದೂ ಜೀವನದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿರುವ ಉದಾಹರಣೆಗಳು ನಮ್ಮ ಮುಂದೆ ಇವೆ. ಪಾಲಕರಾದ ನಾವು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಉದ್ದೇಶ ಕೇವಲ ಅಕ್ಷರಗಳ ಪರಿಚಯಕ್ಕೆ ಮಾತ್ರವಲ್ಲದೆ ಮಕ್ಕಳು ತಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದನ್ನೂ ಕಲಿಯಬೇಕಾಗಿದೆ. ಇತರರಿಗಾಗಿ ಬದುಕುವರು, ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವವರು, ಸಮಾಜಕ್ಕೆ ಉತ್ತಮ ವ್ಯಕ್ತಿಯೆಂಬ ನೆಲೆಯಲ್ಲಿ ಮಾದರಿಯಾಗಬೇಕಾಗಿರುವುದಕ್ಕೆ ನಮ್ಮ ಮಕ್ಕಳನ್ನು ಸಿದ್ಧಗೊಳಿಸಬೇಕಾಗಿರುವುದು ಪಾಲಕರಾದ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆಗ ಮಕ್ಕಳು ಶಾಲೆಗಳಲ್ಲಿ ಖುಷಿಯಾಗಿ ಕಲಿಯುತ್ತ ತಮ್ಮ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರ ಜೊತೆಗೆ ಪ್ರಸಕ್ತ ಸಮಾಜದಲ್ಲಿ ಒಬ್ಬ ಉತ್ತಮ ನಾಗರಿಕನಾಗಿ ಹೊರಹೊಮ್ಮಬಹುದು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)