varthabharthiಸಂಪಾದಕೀಯ

ಪತ್ರಿಕೋದ್ಯಮವೆಂಬ ಚಕ್ರವ್ಯೂಹ ಹೊಕ್ಕ ಏಕಾಂಗಿ ಯೋಧರು

ವಾರ್ತಾ ಭಾರತಿ : 6 May, 2019

ನಿರ್ಭೀತ ಎಂಬ ಪದ ಪತ್ರಕರ್ತನ ಪಾಲಿಗೆ ಮುಳ್ಳಿನ ಕಿರೀಟವೇ ಸರಿ. ಯಾಕೆಂದರೆ ಸದ್ಯದ ದಿನಗಳಲ್ಲಿ ಪತ್ರಕರ್ತ ನಿರ್ಭೀತವಾಗಿ ತನ್ನ ವೃತ್ತಿ ನಿರ್ವಹಿಸುವ ವಾತಾವರಣ ಪತ್ರಿಕೋದ್ಯಮದಲ್ಲಿ ಇಲ್ಲ. ಪ್ರಾದೇಶಿಕ ಪತ್ರಿಕೆಗಳಲ್ಲಿ ದುಡಿಯುವ ಪತ್ರಕರ್ತರಂತೂ ನಾಲ್ದಿಕ್ಕಿನಲ್ಲಿ ಅಪಾಯಗಳನ್ನು ಎದುರಿಸುತ್ತಾ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಪತ್ರಕರ್ತನ ಪಾಲಿಗೆ ಪತ್ರಿಕೆ ಎನ್ನುವುದು ವೃತ್ತಿಯ ಭಾಗವೂ ಹೌದು. ಬದುಕು ನಿರ್ವಹಿಸಲೂ ಆತ ಪತ್ರಿಕೆಯ ವೇತನವನ್ನೇ ಅವಲಂಬಿಸಬೇಕು. ಈ ಕಾರಣದಿಂದಲೇ ನಿರ್ಭೀತಿಯ ಬರವಣಿಗೆಗೆ ಆತ ತನಗೆ ತಾನೇ ಕೆಲವು ಮಿತಿಗಳನ್ನು ಹೇರಿಕೊಳ್ಳಬೇಕಾಗುತ್ತದೆ. ಪತ್ರಿಕೆ ಅನಿವಾರ್ಯವಾಗಿ ಬಂಡವಾಳ ಶಾಹಿಗಳ ಜಾಹೀರಾತುಗಳನ್ನು ನೆಚ್ಚಿಕೊಳ್ಳಲೇ ಬೇಕಾದಂತಹ ಸ್ಥಿತಿ ಇದೆ.

ರಾಷ್ಟ್ರಮಟ್ಟದ ಅಥವಾ ಪ್ರಾದೇಶಿಕ ಇವೆರಡೂ ಇದಕ್ಕೆ ಹೊರತಲ್ಲ. ಪತ್ರಕರ್ತ ಕೆಲವೊಮ್ಮೆ ಈ ಉದ್ಯಮಕ್ಕೇ ತನ್ನನ್ನು ತಾನು ಬಲಿಕೊಡಬೇಕಾಗುತ್ತದೆ. ಪತ್ರಿಕೆಯ ಹಿತಾಸಕ್ತಿ ಜಾಹೀರಾತುಗಳನ್ನು ಅವಲಂಬಿಸಿರುವುದರಿಂದ, ಈ ಜಾಹೀರಾತುಗಳ ಹಿಂದಿರುವ ಕುಳಗಳ ವಿರುದ್ಧ ಬರೆಯುವ ಪೂರ್ಣ ಸ್ವಾತಂತ್ರವನ್ನು ಅವನು ಕಳೆದುಕೊಂಡಿರುತ್ತಾನೆ. ಪತ್ರಿಕೆಯೊಳಗಿರುವ ಈ ಅಡೆತಡೆಗಳನ್ನು ಮೀರಿ ಆತ ಶತ್ರುಗಳನ್ನು ಎದುರು ಹಾಕಿಕೊಳ್ಳುವ ಸಂದರ್ಭದಲ್ಲಿ ದುಷ್ಕರ್ಮಿಗಳ ಕೈಗೆ ಸಿಲುಕಿಕೊಳ್ಳುವ ಅಪಾಯವಿದೆ. ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರಿಗಿಂತ ಪ್ರಾದೇಶಿಕ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸುವ ಪತ್ರಕರ್ತರೇ ಅತಿ ಹೆಚ್ಚು ಅಪಾಯದಲ್ಲಿ ಸಿಲುಕಿಕೊಳ್ಳುತ್ತಾರೆ ಎನ್ನುವುದು ಇತ್ತೀಚಿನ ಸಮೀಕ್ಷೆಯಿಂದ ಹೊರ ಬಂದ ಸತ್ಯವಾಗಿದೆ.

ಕಳೆದ ಒಂದು ವಾರದಲ್ಲಿ ಮಹಿಳೆ ಸೇರಿದಂತೆ ಕನಿಷ್ಠ ಮೂವರು ಪತ್ರಕರ್ತರ ಮೇಲೆ ದಾಳಿ ನಡೆದಿರುವ ಘಟನೆಗಳು ಅಸ್ಸಾಂನಲ್ಲಿ ವರದಿಯಾಗಿದ್ದವು. ಒಂದು ವರದಿಯ ಪ್ರಕಾರ, ಅಸ್ಸಾಮಿ ದಿನಪತ್ರಿಕೆ ‘ ದೈನಿಕ್ ಅಸೋಮ್’ನ ವರದಿಗಾರ ರಾಜೆನ್ ದೇಕಾ ಅವರನ್ನು ಬಿಜೆಪಿ ಕಾರ್ಯಕರ್ತನೊಬ್ಬ ಮಾರಕಾಯುಧಗಳಿಂದ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ್ದ. ಆ ದಿನವೇ, ಟಿವಿ ವಾಹಿನಿಯೊಂದರ ವರದಿಗಾರ್ತಿ ಉಪಾಸನಾ ಬುರವಾ ಗೋಸ್ವಾಮಿ ಅವರನ್ನು ತಿನ್ಸುಕಿಯಾ ಜಿಲ್ಲೆಯ ಉಪಾಹಾರಗೃಹವೊಂದರಲ್ಲಿ ನಾಲ್ವರು ವ್ಯಕ್ತಿಗಳು ಥಳಿಸಿದ್ದರು.ಹಾಗೆಯೇ, ಗುವಾಹಟಿ ಮೂಲದ ಟಿವಿ ವಾಹಿನಿಯೊಂದರ ಪತ್ರಕರ್ತ ರಾಜೀವ್ ಬೊರಾ ಅವರನ್ನು ಜೋಹ್ರಾಟ್ ಪಟ್ಟಣದಲ್ಲಿ ಐವರು ದುಷ್ಕರ್ಮಿಗಳು ಥಳಿಸಿ ಗಾಯಗೊಳಿಸಿದ್ದರು.

    ಭಾರತದಲ್ಲಿ ಪತ್ರಕರ್ತರ ಮೇಲೆ ದಾಳಿ ನಡೆಯುತ್ತಿರುವುದು ಇದು ಮೊದಲೇನಲ್ಲ. ‘ರಿಪೋರ್ಟರ್ಸ್‌ ವಿದೌಟ್ ಬಾರ್ಡರ್ಸ್‌’ ಸಂಸ್ಥೆಯು ಸಿದ್ಧಪಡಿಸಿರುವ ಪತ್ರಿಕಾ ಸ್ವಾತಂತ್ರದ ಸೂಚ್ಯಂಕದಲ್ಲಿ ಭಾರತವು ನಿರಂತರವಾಗಿ ಕುಸಿತವನ್ನು ಕಾಣುತ್ತಾ ಬಂದಿದೆ. ಈ ವರ್ಷ ಭಾರತವು ಪತ್ರಿಕಾ ಸ್ವಾತಂತ್ರದ ಸೂಚ್ಯಂಕದಲ್ಲಿ 180 ರಾಷ್ಟ್ರಗಳ ಪೈಕಿ 140 ಸ್ಥಾನದಲ್ಲಿ ಕಳೆದ ಸಾಲಿಗಿಂತ ಎರಡು ಸ್ಥಾನಗಳಷ್ಟು ಕುಸಿತವನ್ನು ಕಂಡಿದೆ. ಪತ್ರಿಕಾ ಸ್ವಾತಂತ್ರದ ಸೂಚ್ಯಂಕದಲ್ಲಿ ಭಾರತವು 2018ರಲ್ಲಿ 138ನೇ ಸ್ಥಾನ ಹಾಗೂ 2017ರಲ್ಲಿ 136ನೇ ಸ್ಥಾನ ಪಡೆದಿತ್ತು.

ಇಂಗ್ಲಿಷೇತರ ಭಾಷೆಗಳ ಸುದ್ದಿಮಾಧ್ಯಮಗಳಲ್ಲಿ ದುಡಿಯುವ ಪತ್ರಕರ್ತರು ದಾಳಿಗೆ ಹೆಚ್ಚು ಸುಲಭವಾಗಿ ತುತ್ತಾಗುವ, ಜೀವಬೆದರಿಕೆಗೊಳಗಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಸಮಾಜವಿರೋಧಿಗಳಿಂದ ಮಾತ್ರವಲ್ಲದೆ ಆಡಳಿತಶಕ್ತಿಗಳಿಂದಲೂ ಹಿಂಸೆ ಹಾಗೂ ಬೆದರಿಕೆಯನ್ನು ಎದುರಿಸಿದ ಪತ್ರಕರ್ತರ ಪಟ್ಟಿಯಲ್ಲಿ ಇದು ಸ್ಪಷ್ಟವಾಗುತ್ತದೆ. ಹಾಗೆಯೇ ಪ್ರಾದೇಶಿಕ ಪತ್ರಿಕೆಗಳ ಪತ್ರಕರ್ತರ ಮೇಲೆ ಆರೋಪಗಳನ್ನು ಹೊರಿಸಿ ಅವರನ್ನು ವ್ಯವಸ್ಥಿತವಾಗಿ ಮುಗಿಸಿ ಬಿಡುವ ಕೃತ್ಯಗಳೂ ನಡೆಯುತ್ತಿವೆ. ಕೆಲವೊಮ್ಮೆ ಅವ್ಯವಹಾರಗಳಲ್ಲಿ ಪತ್ರಕರ್ತ ಸಿಲುಕಿದರೂ ಆತನನ್ನು ಒಂಟಿಯಾಗಿಸಿ ಶಿಕ್ಷೆ ನೀಡಲಾಗುತ್ತದೆ. ಇಂತಹ ಅವ್ಯವಹಾರಗಳಲ್ಲಿ ತೊಡಗುವಂತೆ ಈ ಪತ್ರಕರ್ತರನ್ನು ಬಲವಂತ ಪಡಿಸುವ ಬೃಹತ್ ಮಾಧ್ಯಮ ಸಂಸ್ಥೆಗಳನ್ನು ದೂರುವ ಗೋಜಿಗೆ ನಾವು ಹೋಗುವುದಿಲ್ಲ. ಇಂತಹ ಅವ್ಯವಹಾರಗಳಲ್ಲಿ ತೊಡಗುತ್ತಿರುವುದು ತೀವ್ರವಾದ ಹಣಕಾಸಿನ ಬಿಕ್ಕಟ್ಟನ್ನು ಎದುರಿಸುವ ಸಣ್ಣಪುಟ್ಟ ಮಾಧ್ಯಮಸಂಸ್ಥೆಗಳೇನಲ್ಲ. ಅವು ನೂರಾರು ಕೋಟಿ ರೂ. ವ್ಯವಹಾರಗಳನ್ನು ನಡೆಸುವ ದೈತ್ಯ ಕಾರ್ಪೊರೇಟ್ ಸಂಸ್ಥೆಗಳಾಗಿವೆ.

ಇವೆಲ್ಲದರ ಹೊರತಾಗಿಯೂ, ಈ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಜುಜುಬಿ ವೇತನವನ್ನು ನೀಡಲಾಗುತ್ತಿದೆ ಹಾಗೂ ಕೆಲವು ಸಂದರ್ಭಗಳಲ್ಲಿ ಅವರನ್ನು ಪತ್ರಕರ್ತರಾಗಿಯೇ ಪರಿಗಣಿಸಲಾಗುವುದಿಲ್ಲ ಎನ್ನುವುದನ್ನು ಸಮೀಕ್ಷೆ ತಿಳಿಸುತ್ತದೆ. ಆಂಗ್ಲ ಭಾಷೇತರ ಸುದ್ದಿಮಾಧ್ಯಮ ಸಂಸ್ಥೆಗಳ ಪರವಾಗಿ ಕೆಲಸ ಮಾಡುವ ಹಲವಾರು ಪತ್ರಕರ್ತರು ಹಳ್ಳಿಗಳಲ್ಲಿ, ಸಣ್ಣಪಟ್ಟಣಗಳಲ್ಲಿ ಹಗಲೂ ರಾತ್ರಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ವೃತ್ತಿಪರ ವಿಷಯಗಳ ಜೊತೆಗೆ ವೈಯಕ್ತಿಕ ಸಮಸ್ಯೆಗಳಿಂದಲೂ ಅವರು ತೊಳಲಾಡುತ್ತಿರುತ್ತಾರೆ. ಅವರಲ್ಲಿ ಹೆಚ್ಚಿನವರಿಗೆ ಸ್ಥಿರವಾದ ಆದಾಯಮೂಲವಿರುವುದಿಲ್ಲ. ಯಾಕೆಂದರೆ ಅವರು ಹೆಚ್ಚಾಗಿ ಬಿಡಿಸುದ್ದಿ ವರದಿಗಾರರಾಗಿ, ಅಂಕಣಕಾರರಾಗಿ ಅಥವಾ ಪತ್ರಿಕಾ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತಾರೆ.

ಆದಾಗ್ಯೂ ಏನಾದರೂ ಘಟನೆ ಸಂಭವಿಸಿದಲ್ಲಿ, ಸ್ಥಳಕ್ಕೆ ತಲುಪುವವರಲ್ಲಿ ಅವರು ಮೊದಲಿಗರಾಗಿರುತ್ತಾರೆ. ಅವರಿಗೆ ತಳಮಟ್ಟದಲ್ಲಿ ಸಂಪರ್ಕವಿರುವುದರಿಂದ ಹಾಗೂ ತಾವು ವರದಿಯಲ್ಲಿನ ವ್ಯಕ್ತಿಗಳನ್ನು ನೇರವಾಗಿ ಸಂಧಿಸುವುದರಿಂದ ಅವರು ಹಲವಾರು ಅಪಾಯಕಾರಿ ಸವಾಲುಗಳನ್ನು ಎದುರಿಸುತ್ತಾರೆ. ಇದರ ಜೊತೆಗೆ ಅವರಿಗೆ ಯಾವುದನ್ನು ವರದಿ ಮಾಡಕೂಡದು ಎಂಬ ಬಗ್ಗೆಯೂ ಒತ್ತಡಗಳು ಬರುತ್ತವೆ. ಒಂದು ವೇಳೆ ಈ ಒತ್ತಡಗಳಿಗೆ ಮಣಿಯದಿದ್ದರೆ, ಅವರ ಪ್ರಾಣವನ್ನು ಅಪಾಯಕ್ಕೊಡ್ಡಿದಂತಾಗುತ್ತದೆ.

ಇನ್ನೊಂದೆಡೆ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ವರದಿ ಮಾಡುವ ಪತ್ರಕರ್ತರಿಗೆ ಇಂತಹ ನೈಜ ಬೆದರಿಕೆಗಳನ್ನು ದಿನಂಪ್ರತಿ ಎದುರಿಸುವಂತಹ ಪರಿಸ್ಥಿತಿ ಇರುವುದಿಲ್ಲ. ಹಾಗೆಂದು, ಇಂಗ್ಲಿಷ್‌ನಲ್ಲಿ ಬರೆಯುವ ಹಾಗೂ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಪತ್ರಕರ್ತರಿಗೆ ಈ ರೀತಿಯ ಬೆದರಿಕೆ ಅಥವಾ ಸವಾಲುಗಳು ಎದುರಾಗುವುದಿಲ್ಲವೆಂದು ಅರ್ಥವಲ್ಲ. ಆದರೆ ಇಂಗ್ಲಿಷೇತರ ಪತ್ರಿಕೆಗಳ ವರದಿಗಾರರು ಹಾಗೂ ಸ್ಥಳೀಯ ಪತ್ರಕರ್ತರಿಗೆ ಹೋಲಿಸಿದರೆ ಅವರಿಗೆ ಇಂತಹ ಬೆದರಿಕೆಗಳು ಎದುರಾಗುವುದು ತೀರಾ ಕಡಿಮೆ ಎಂದೇ ಹೇಳಬಹುದಾಗಿದೆ. ಇದಕ್ಕಿಂತಲೂ ಹೆಚ್ಚಾಗಿ ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ನಡೆಸುವ ಆಂಗ್ಲಭಾಷಾ ಪತ್ರಿಕೆಗಳ ಮೇಲೆ ಸಣ್ಣಪುಟ್ಟ ದಾಳಿ ಘಟನೆಗಳೂ ನಡೆದರೂ ಸಹ, ಅದು ದೇಶಾದ್ಯಂತ ಮಾಧ್ಯಮಗಳ ಗಮನಸೆಳೆಯುತ್ತದೆ.

ಪತ್ರಕರ್ತರು ಯಾರೇ ಆಗಿರಲಿ, ಅವರು ಯಾವುದೇ ಮಾಧ್ಯಮಸಂಸ್ಥೆಗೆ ಸೇರಿದವರೇ ಇರಲಿ, ಅವರೆಲ್ಲರನ್ನೂ ಸಮಾನ ದೃಷ್ಟಿಕೋನದೊಂದಿಗೆ ನೋಡುವುದು ಅಗತ್ಯವಾಗಿದೆ. ಹಲವಾರು ಪ್ರಕರಣಗಳಲ್ಲಿ ಬಿಡಿಸುದ್ದಿ ವರದಿಗಾರರು (ಸ್ಟ್ರಿಂಜರ್) ಹಾಗೂ ಸುದ್ದಿಯನ್ನು ಒದಗಿಸಿಕೊಟ್ಟವರ ಮೇಲೆ ದಾಳಿ ನಡೆದಾಗಲೆಲ್ಲಾ, ಅವರು ಕೆಲಸ ಮಾಡುತ್ತಿರುವ ಮಾಧ್ಯಮಸಂಸ್ಥೆಗಳೇ ಅವರನ್ನು ದೂರವಿರಿಸುತ್ತವೆ. ಶುಕ್ರವಾರ ಜಗತ್ತಿನಾದ್ಯಂತ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬೆದರಿಕೆ, ಪ್ರಾಣಾಪಾಯಗಳನ್ನು ಎದುರಿಸಿಯೂ, ವರದಿಗಳನ್ನು ಸಂಗ್ರಹಿಸುವ ಮತ್ತು ಎಲೆಯ ಮರೆಯ ಕಾಯಿಯಂತೆ ಯಾವುದೇ ವಿಧದಲ್ಲಿ ಗುರುತಿಸಲ್ಪಡದ ಗ್ರಾಮೀಣ ಪತ್ರಕರ್ತರನ್ನು ನೆನಪಿಸಿಕೊಳ್ಳುವ ಅಗತ್ಯವಿದೆ.ಉತ್ತಮ ಪತ್ರಿಕೋದ್ಯಮವು ಈಗಲೂ ಅಸ್ತಿತ್ವದಲ್ಲಿರುವುದಕ್ಕೆ ‘ಸ್ಟಾರ್ ವರದಿಗಾರರಾಗಲಿ ಹಾಗೂ ಆ್ಯಂಕರ್‌ಗಳಾಗಲಿ’ ಕಾರಣರಲ್ಲ. ಬದಲಾಗಿ ಅಸಂಖ್ಯಾತ ಹೆಸರಿಲ್ಲದ, ಗುರುತಿಸಲ್ಪಡದ ಇಂಗ್ಲಿಷೇತರ ಸುದ್ದಿಮಾಧ್ಯಮಗಳ ಸ್ಟ್ರಿಂಜರ್‌ಗಳು ಹಾಗೂ ಸುದ್ದಿಗಳು ಹಾಗೂ ವರದಿಗಳನ್ನು ನಿರ್ಭಿಡೆಯಿಂದ ಸಂಗ್ರಹಿಸುವ ಸ್ಥಳೀಯ ಪತ್ರಕರ್ತರು ಕಾರಣರಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)