varthabharthi

ನಿಮ್ಮ ಅಂಕಣ

ಇಂದು ಬಸವಣ್ಣ ಜಯಂತಿ

ದೇವಾಲಯ ಮತ್ತು ಬಸವಣ್ಣ

ವಾರ್ತಾ ಭಾರತಿ : 7 May, 2019
ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಶೋಷಿತವರ್ಗವನ್ನು ಸಂಘಟಿಸಿ ಸ್ವಸ್ಥ ಸಮಾಜದ ಕನಸು ಕಟ್ಟಿ, ನನಸಾಗಿಸುವ ಕಡೆ ಕ್ರಾಂತಿಯ ಹೆಜ್ಜೆಗಳನ್ನಿಟ್ಟ ಬಸವಣ್ಣ ಪುರೋಹಿತಶಾಹಿಯ ಎದುರು ಸೋಲುಣ್ಣಬೇಕಾಯಿತು. ಆದರೆ ಅವರು ಮುನ್ನಡೆಸಿದ ಚಳವಳಿಗೆ ಗೆಲುವಾಯಿತು. ಈಗಲೂ ಶೋಷಣೆಯ ಬಿರುಗಾಳಿ ಎದುರಾದಾಗ ನಾವು ತಬ್ಬಿಕೊಳ್ಳುವುದು ಬಸವಣ್ಣನೆಂಬ ಆಲದ ಮರವನ್ನೇ.


ಭಾರತ ತತ್ವ ನಿರೂಪಣೆಗಳಿಗೆ ಹೆಸರುವಾಸಿ. ಆದರೆ ಅವುಗಳ ಅನುಷ್ಠಾನಕ್ಕೆ ಅಷ್ಟಾಗಿ ನಿಷ್ಠೆ ತೋರದು. ಹನ್ನೆರಡನೆಯ ಶತಮಾನದಲ್ಲಿ ಪ್ರಚಲಿತಕ್ಕೆ ಬಂದ ಕಾಯಕ ತತ್ವವೂ ಅವುಗಳಲ್ಲಿ ಒಂದು. ಅದುವರೆಗೂ ಹರಿದುಬಂದ ಭಕ್ತಿಪಂಥಗಳ ಪ್ರವಾಹದಲ್ಲಿ ಕೊಚ್ಚಿ ಹೋಗದೆ ಭಿನ್ನವಾಗಿ ಕಾಣುವುದು ವಚನ ಚಳವಳಿ. ಅಂದಿನ ಸ್ಥಾಪಿತ ವೈದಿಕ ಧರ್ಮದ ಜಡತ್ವವನ್ನು ನೀಗಿಕೊಳ್ಳಲು ಈ ಚಳವಳಿ ನಾಂದಿ ಹಾಡಿತು ಎಂದು ಕೆಲವರ ಅಂಬೋಣವಾದರೂ ಅದರ ಮೂಲತತ್ವ ಕಾಯಕದಲ್ಲಿ ಕೀಳೆಂಬುದಿಲ್ಲ ಎಂಬುದನ್ನು ನಿರೂಪಿಸುವುದೇ ಆಗಿತ್ತು. ವರ್ಣಾಶ್ರಮ, ಜಾತಿಪದ್ಧತಿಗಳಿಂದ ಕಂಗಟ್ಟಿದ್ದ ಸಮಾಜದಲ್ಲಿ ತನ್ಮೂಲಕ ಸಮಸಮಾಜದ ಕನಸನ್ನು ಬಿತ್ತಿ ಲವಲವಿಕೆಯನ್ನು ತಂದಿದ್ದು ವಚನ ಚಳವಳಿ.

ವರ್ಣ, ವರ್ಗ ಸಮಾನತೆ, ಲಿಂಗ ಸಮಾನತೆಯನ್ನು ಮೊಟ್ಟಮೊದಲಿಗೆ ಪ್ರತಿಪಾದಿಸಿದವರು ವಚನಕಾರರು. ತಮ್ಮ ಚಿಂತನೆಗೆ ಭಾವ ಶುದ್ಧಿ, ಜ್ಞಾನ ಶುದ್ಧಿ ಅಗತ್ಯವೆಂದು ಸಾರಿದವರು. ಮೇಲುಕೀಳೆಂಬುದಿಲ್ಲ, ಹಾಲನೇಮ, ಅಂಬಲಿಯ ನೇಮ ಎರಡೂ ಸಮ ಎಂದು ಬಗೆದವರು. ಮೃದುವಚನವೆ ಸಕಲ ಜಪತಪಂಗಳಯ್ಯಿ ಎಂಬ ಸರಳ ದಿವ್ಯ ಮಂತ್ರವನ್ನು ಕಲಿಸಿದವರು. ಸ್ವರ್ಗ ನರಕಗಳೆಂಬ ಕೊಟ್ಟಣವ ಕುಟ್ಟುತ್ತಾ ಕೂಡದ ಜಂಗಮ್ಮ ತತ್ವವನ್ನು ಒತ್ತಿ ಹೇಳುತ್ತಾ ‘‘ಧರ್ಮವೆಂದರೆ ದೇವಲೋಕದತ್ತ ಮುಖಮಾಡುವುದಲ್ಲ, ಮನುಷ್ಯ ಲೋಕವನ್ನು ಹಸನಗೊಳಿಸುವುದು ಶರಣ ಧರ್ಮದ ಧ್ಯೇಯ’’ವೆಂದು ಸಾರಿದರು. ಆದರೆ ಅಂತಹ ಒಂದು ನಿಷ್ಕಳಂಕ ಜೀವನ ಮಾರ್ಗ ಸ್ವತಂತ್ರ ಧರ್ಮವಾಗಿ ನಿಲ್ಲಲು ಸಾಧ್ಯವಾಗದೆ ಕೇವಲ ಪ್ರಗತಿಪರರ ಚಟುವಟಿಕೆಯಾಗಿ ಉಳಿದುಹೋದದ್ದು ಇತಿಹಾಸದ ದೊಡ್ಡ ದುರಂತಗಳಲ್ಲೊಂದು. ಆದರೂ ಕನ್ನಡ ನೆಲದ ಧರ್ಮವಾಗಿ ಭಾಷೆಗೆ ಆ ಚಳವಳಿ ನೀಡಿದ ಸಮೃದ್ಧ ಕೊಡುಗೆಯನ್ನು ಅವರ ಕರುಣೆಯ ಕಂದಮ್ಮಗಳಾದ ನಾವು ಮರೆಯುವಂತಿಲ್ಲ.

ಯಾವುದೇ ಚಳವಳಿಗೆ ಪ್ರತಿಭಟನೆಯ ಕಿಡಿ ಅಗತ್ಯವಾಗಿ ಬೇಕು. ವಚನ ಚಳವಳಿಗೂ ತಾಕಿದ ಅಂತಹದ್ದೊಂದು ಕಿಡಿ ಸ್ಥಾವರಗೊಂಡಿದ್ದ ದೇವಾಲಯ ಸಂಸ್ಕೃತಿ ಎಂದು ಹೇಳಬಹುದು. ಹಾಗೆಂದರೆ ಅದು ಧಾರ್ಮಿಕ ಚಳವಳಿಯಾಗಿತ್ತು ಎಂದೇನೂ ಅಲ್ಲ. ಧಾರ್ಮಿಕತೆಯ ನೆಪದಲ್ಲಿ ಸಮಾಜವನ್ನು ಶೋಷಿಸುತ್ತಿದ್ದ ದೇವಾಲಯ ವ್ಯವಸ್ಥೆ ತಳವರ್ಗದ ಜನರಲ್ಲಿ ಕಿಚ್ಚು ಹಚ್ಚಿದರೆ ಆಶ್ಚರ್ಯವಿಲ್ಲ. ಅದರ ನಾಯಕತ್ವವನ್ನು ವಹಿಸಿದವನು ಬ್ರಾಹ್ಮಣ ಜಾತಿಯಲ್ಲಿಯೇ ಹುಟ್ಟಿ ಮಾನವತಾವಾದವನ್ನು ಮೆರೆದ ಬಸವಣ್ಣ. ಬಸವಣ್ಣ ವೈದಿಕ ಬ್ರಾಹ್ಮಣನಲ್ಲ, ಲಿಂಗಿ ಬ್ರಾಹ್ಮಣ ಅಂದರೆ ಶೈವ ಬ್ರಾಹ್ಮಣ ಎಂಬ ವಾದವನ್ನು ಇತ್ತೀಚೆಗೆ ವಿದ್ವಾಂಸರು ಮಂಡಿಸುತ್ತಿದ್ದಾರೆ. ಬ್ರಾಹ್ಮಣ ಎಂಬ ಗುಣವಾಚಕವನ್ನು ಸೇರಿಸಿ ಗುರುತಿಸಿಕೊಳ್ಳಲು ಅನೇಕ ಜಾತಿಗಳು (ಈಶಾನ್ಯ ಭಾರತ ಮತ್ತು ನೇಪಾಳದಲ್ಲಿ ಅಸ್ಪಶ್ಯವೆನಿಸಿರುವ ವಿಶ್ವಕರ್ಮವೂ ಸೇರಿದಂತೆ) ಹಾತೊರೆಯುತ್ತಿರುವಾಗ ಅದನ್ನು ಒಪ್ಪುವ ಅಗತ್ಯವಿಲ್ಲ. ‘‘ಆನು ಹಾರುವನೆಂದರೆ ಕೂಡಲಸಂಗಮ ನಗುವನಯ್ಯು’’ ಎಂಬ ಅಣ್ಣನ ವಚನವೇ ಈ ವಾದವನ್ನು ತಳ್ಳಿಹಾಕಿಬಿಡುತ್ತದೆ. ಉಚ್ಚಕುಲದಲ್ಲಿ ಹುಟ್ಟಿದನೆಂಬ ಕಷ್ಟವ ನೀಗಿಕೊಳ್ಳಲು ನಿರ್ಜಾತೀಕರಣಗೊಂಡವನು ಬಸವಣ್ಣ.

ಅಂದಿನ ಕಾಲದಲ್ಲಿ ದೇವಾಲಯಗಳೆಂದರೆ ಸಂಪತ್ತಿನ ಸಂಗ್ರಹಾಗಾರಗಳಾಗಿದ್ದವು. ಶಾಸನಗಳು ಹೇಳುವಂತೆ ದೇವಾಲಯಗಳು ತಾವೇ ನಾಣ್ಯಗಳನ್ನು ಟಂಕಿಸುವ ಅಧಿಕಾರ ಪಡೆದಿದ್ದವು. ಆಭರಣ ವ್ಯವಹಾರಗಳನ್ನು ಮಾಡುತ್ತಿದ್ದವು. ಕೆಲವು ದೇವಾಲಯಗಳಲ್ಲಿ ಸಾವಿರಾರು ಕೆಲಸಗಾರರಿದ್ದರು, ನೂರಾರು ಕುಶಲಕರ್ಮಿಗಳಿದ್ದರು. ಸಾಮಾನ್ಯ ಜನರಿಗೆ ಬಡ್ಡಿಗೆ ಹಣವನ್ನು ಕೊಡುತ್ತಿದ್ದ ದೇವಾಲಯಗಳ ಬಡ್ಡಿದರ ಶೇ. ಮೂವತ್ತರವರೆಗೂ ಇತ್ತು! ದೇವಾಲಯಗಳನ್ನು ನಿಯಂತ್ರಿಸುತ್ತಿದ್ದ ಪುರೋಹಿತಶಾಹಿ ರಾಜಕಾರ್ಯದಲ್ಲಿ ತೊಡಗುತ್ತಿದ್ದರು. ಆದರೆ ರಾಜರು ದೇವಾಲಯಗಳ ಉಸಾಬರಿಗೆ ಹೋಗುತ್ತಿರಲಿಲ್ಲ. ದೇವಾಲಯಗಳು ನ್ಯಾಯಾಲಯಗಳಾಗಿಯೂ ಕೆಲಸ ಮಾಡುತ್ತಿದ್ದವು. ಅಲ್ಲಿನ ಸ್ಥಾನಪತಿಗಳು ಸಾತ್ವಿಕ ಟ್ರಷ್ಟಿಗಳಾಗೇನೂ ಉಳಿದಿರಲಿಲ್ಲ. ಐಹಿಕ ಭೋಗದ ವ್ಯಸನಿಗಳಾಗಿದ್ದರು. ದೇವದಾಸಿ ಪದ್ಧ್ದತಿಯ ಮೂಲ ದೇವಾಲಯಗಳೇ ಎಂಬುದು ತಿಳಿದ ವಿಷಯವೇ ಆಗಿದೆ. ಅದರ ಪಳಿಯುಳಿಕೆಯಾಗಿ ಸಾಕ್ಷೀರೂಪದಲ್ಲಿ ಇಂದಿಗೂ ತಿರುಂವಾಕೂರಿನ ಪದ್ಮನಾಭಸ್ವಾಮಿ ದೇವಾಲಯ ನಿಂತಿದೆ. ಅಲ್ಲಿನ ಬಹು ಮಾಳಿಗೆಗಳಲ್ಲಿ ತುಂಬಿರುವ ಸುಮಾರು ಒಂದು ಲಕ್ಷ ಕೋಟಿ ರೂ.ಗಳ ನಿಧಿಯ ಬಳಕೆಗಾಗಿ ಸಾರ್ವಜನಿಕ ಅಹವಾಲು ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ತೀರ್ಪಿಗಾಗಿ ಕಾಯುತ್ತಿದೆ. ಬಸವಣ್ಣ ದೇವರನ್ನು ಉಳಿಸಿಕೊಂಡು ದೇವಾಲಯವನ್ನು ನಿರಾಕರಿಸಿದುದು ಈ ಕಾರಣಕ್ಕಾಗಿಯೇ ಇರಬೇಕು. ಮುಹಮ್ಮದ್ ಘಜನಿ 17 ಬಾರಿ ದೋಚಿದ ಕಾರಣವೂ ಸ್ಪಷ್ಟವಾಗಿಯೆ ಇದೆ.

ಇನ್ನು ತೆರಿಗೆ ವಿಷಯಗಳಿಗೆ ಬಂದಾಗ ಶಾಸನಗಳೇ ಹೇಳುವಂತೆ ಅಕ್ಕಸಾಲಿ, ನಾಯಿಂದ, ಅಗಸ, ಅಂಬಿಗ, ಕಮ್ಮಾರ, ಕುಂಬಾರ ಮೊದಲಾದವರು ತೆರಿಗೆ ಕೊಡಬೇಕಾಗಿತ್ತು. ಗಾಣದ ತೆರೆ, ನೂಲು ತೆರೆ, ಮಗ್ಗದ ತೆರೆ, ಬಣ್ಣದ ತೆರೆ, ಕುಲುಮೆದೆರೆ ಹೀಗೆ ಎಲ್ಲಾ ವೃತ್ತಿಯವರೂ ತೆರಿಗೆ ಕೊಡಬೇಕಾಗಿತ್ತು. ಹುಡುಗಿ ಮೈನೆರೆದರೆ, ಮಗ ಹುಟ್ಟಿದರೆ ತೆರಿಗೆ ತೆರಬೇಕಾಗಿತ್ತೆಂಬುದು ಸೋಜಿಗವೆನಿಸಿದರೂ ಸತ್ಯವೆಂಬುದುನ್ನು ಇತಿಹಾಸ ಹೇಳುತ್ತದೆ. ಇಂತಹ ತೆರಿಗೆಗಳನ್ನು ಕೊಡಲಾಗದೆ ಊರುಬಿಟ್ಟು ಹೋದವರು, ಅವಮಾನಿತರಾಗಿ ಮಡಿದವರು ಅದೆಷ್ಟೂ. ಇದಕ್ಕೆ ವಿರುದ್ಧವಾಗಿ ಸಂಪತ್ತನ್ನು ಅನುಭವಿಸಿದವರು ಅರ್ತಕರು, ಪುರೀಹಿತರು, ಅಧಿಕಾರಿಗಳು. ದಾನ ಶಾಸನಗಳು ಹೇಳುವಂತೆ ಅಗ್ರಹಾರ ಮತ್ತು ದೇವಸ್ಥಾನಗಳೇ ದಾನದ ಸಿಂಹ ಪಾಲನ್ನು ಪಡೆಯುತ್ತಿದ್ದವು.

ಇಂತಹ ಬರ್ಬರ ಅನ್ಯಾಯಗಳನ್ನು ನೋಡಿದ ಬಸವಣ್ಣ ಜನಿವಾರವನ್ನು ಕಿತ್ತು ಬಿಸುಟು ಅಗ್ರಹಾರದಿಂದ ಹೊರಬಂದದ್ದು ಆಶ್ಚರ್ಯವೆನಿಸುವುದಿಲ್ಲ. ಶೋಷಿತವರ್ಗವನ್ನು ಸಂಘಟಿಸಿ ಸ್ವಸ್ಥ ಸಮಾಜದ ಕನಸು ಕಟ್ಟಿ, ನನಸಾಗಿಸುವ ಕಡೆ ಕ್ರಾಂತಿಯ ಹೆಜ್ಜೆಗಳನ್ನಿಟ್ಟ ಬಸವಣ್ಣ ಪುರೋಹಿತಶಾಹಿಯ ಎದುರು ಸೋಲುಣ್ಣಬೇಕಾಯಿತು. ಆದರೆ ಅವರು ಮುನ್ನಡೆಸಿದ ಚಳವಳಿಗೆ ಗೆಲುವಾಯಿತು. ಈಗಲೂ ಶೋಷಣೆಯ ಬಿರುಗಾಳಿ ಎದುರಾದಾಗ ನಾವು ತಬ್ಬಿಕೊಳ್ಳುವುದು ಬಸವಣ್ಣನೆಂಬ ಆಲದ ಮರವನ್ನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)