varthabharthi

ಸಂಪಾದಕೀಯ

ಸಭ್ಯತೆಯ ಎಲ್ಲೆ ಮೀರಿದ ಮಾತು

ವಾರ್ತಾ ಭಾರತಿ : 7 May, 2019

ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಸೋಮವಾರ ಕೊನೆಗೊಂಡಿದೆ. ಉತ್ತರ ಭಾರತದ ಏಳು ರಾಜ್ಯಗಳ 51 ಕ್ಷೇತ್ರಗಳ ಮತದಾರರು ತಮ್ಮ ಮತ ಚಲಾಯಿಸಿದರು. ಚುನಾವಣಾ ಫಲಿತಾಂಶದ ದಿನ ಮೇ 23 ಸಮೀಪಿಸುತ್ತಿದೆ. ಈ ಹಂತದಲ್ಲಿ ಸೋಲಿನ ಭೀತಿಯಿಂದ ತತ್ತರಿಸಿ ಹೋಗಿರುವ ಪ್ರಧಾನಿ ನರೇಂದ್ರ ಮೋದಿಯವರು ತುಂಬ ಹತಾಶರಾಗಿ ಸೌಜನ್ಯದ ಎಲ್ಲೆ ಮೀರಿ ಮಾತಾಡುತ್ತಿದ್ದಾರೆ.ಅನೇಕ ಬಾರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದರೂ ಚುನಾವಣಾ ಆಯೋಗ ಯಾವ ಕ್ರಮವನ್ನ್ನೂ ಕೈಗೊಳ್ಳದೆ ಅಸಹಾಯಕ ಸ್ಥಿತಿಯಲ್ಲಿ ಕೈ ಚೆಲ್ಲಿ ಕುಳಿತಿದೆ.

ಶನಿವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮೋದಿಯವರು ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧಿಯವರ ಬಗ್ಗೆ ಆಡಿದ ಮಾತು ಅವರು ಈಗಿರುವ ಸ್ಥಾನಕ್ಕೆ ಶೋಭೆ ತರುವುದಿಲ್ಲ. 1991ರಲ್ಲಿ ಮಾನವ ಬಾಂಬ್ ಸ್ಫೋಟಕ್ಕೆ ಬಲಿಯಾಗಿ ಇತಿಹಾಸದ ಪುಟ ಸೇರಿರುವ ರಾಜೀವ್ ಗಾಂಧಿಯವರ ಬಗ್ಗೆ ‘‘ನಂಬರ್ 1 ಭ್ರಷ್ಟಾಚಾರಿಯಾಗಿ ರಾಜೀವ್ ಗಾಂಧಿ ಪ್ರಾಣ ಬಿಟ್ಟರು’’ ಎಂದು ಮೋದಿ ಆಡಿದ ಮಾತಿನ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಒಬ್ಬ ಸಜ್ಜನ, ಸುಸಂಸ್ಕೃತ ವ್ಯಕ್ತಿ ಆಡುವ ಮಾತು ಇದಲ್ಲ. ಅದೂ ಸುಮಾರು ಇಪ್ಪತ್ತೆಂಟು ವರ್ಷಗಳ ಹಿಂದೆ ಮೃತಪಟ್ಟ ಮಾಜಿ ಪ್ರಧಾನಿಯ ಬಗ್ಗೆ ಇಂತಹ ಮಾತು ಆಡಬಾರದಿತ್ತು.

ಸಾಮಾನ್ಯವಾಗಿ ಎಂದೋ ಸಾವನ್ನಪ್ಪಿದ ವ್ಯಕ್ತಿಯ ಬಗ್ಗೆ ಶತ್ರುವಾಗಿದ್ದರೂ ಯಾರೂ ಕೆಟ್ಟದಾಗಿ ಮಾತಾಡುವುದಿಲ್ಲ. ಆದರೆ ಮಾತನಾಡಲು ವಿಷಯಗಳಿಲ್ಲದ ಖಾಲಿ ತಲೆಗಳು ಮಾತ್ರ ಸತ್ತವರ ಗೋರಿ ಅಗೆಯಲು ಲಜ್ಜೆಗೆಟ್ಟು ನಿಲ್ಲುತ್ತವೆ. ಭಾರತದ ರಾಜಕೀಯದಲ್ಲಿ ಸತ್ತ ವ್ಯಕ್ತಿಯ ಬಗ್ಗೆ ಈ ರೀತಿ ಹಿಂದೆ ಯಾರೂ ಅಸಭ್ಯ ಭಾಷೆಯಲ್ಲಿ ಮಾತನಾಡಿರಲಿಲ್ಲ. ‘‘ಸತ್ತ ವ್ಯಕ್ತಿಯ ಬಗ್ಗೆ ಟೀಕಿಸುವುದು ಕ್ರೌರ್ಯದ ಪರಮಾವಧಿ’’ ಎಂದು ಪಿ.ಲಂಕೇಶ್ ಹೇಳುತ್ತಿದ್ದರು. ಆದರೆ ನಮ್ಮ ಪ್ರಧಾನಿ ಎಂದು ಹೇಳಿಕೊಳ್ಳಲು ನಾವು ನಾಚಿಕೆ ಪಡಬೇಕಾದ ವ್ಯಕ್ತಿ ಎಲ್ಲಿ ಬೇಕೆಂದಲ್ಲಿ ನಾಲಿಗೆ ಹರಿಬಿಡುತ್ತಿದ್ದಾರೆ.

ಸಾಮಾನ್ಯವಾಗಿ ಮೋದಿ ಭಕ್ತರು ಸಂಘ ಪರಿವಾರದಲ್ಲಿ ಮೆದುಳಿನ ತುಂಬ ವಿಷ ತುಂಬಿಕೊಂಡು ಅತ್ಯಂತ ಹೊಲಸು ಭಾಷೆಯಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಬೈಯುವುದು ಎಲ್ಲರಿಗೂ ಗೊತ್ತು. ಆದರೆ ಈಗ ಅವರ ಗುರುವೇ ತಮ್ಮ ಸೈಕೊಪಾತ್ ಶಿಷ್ಯರಂತೆ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ.

ಅಣಬೆ ತಿಂದು ಅಂಬಾನಿ, ಅದಾನಿಗಳ ಸೇವೆ ಮಾಡುವುದನ್ನು ಬಿಟ್ಟರೆ ದೇಶಕ್ಕೆ ಯಾವುದೇ ಕೊಡುಗೆ ನೀಡದ, ದೇಶದ ಆಡಳಿತ ವ್ಯವಸ್ಥೆಯನ್ನು ಎಷ್ಟು ಬೇಕೋ ಅಷ್ಟುಹಾಳು ಮಾಡಿದ ವ್ಯಕ್ತಿಗೆ ರಾಜೀವ್ ಗಾಂಧಿಯವರ ಬಗ್ಗೆ ಮಾತಾಡುವ ನೈತಿಕ ಹಕ್ಕಿಲ್ಲ. ಆಧುನಿಕ ಭಾರತದ ನಿರ್ಮಾಣದ ಕನಸನ್ನು ಸಾಕಾರಗೊಳಿಸುತ್ತಲೇ ದೇಶಕ್ಕಾಗಿ ಬಲಿದಾನ ಮಾಡಿದ ವ್ಯಕ್ತಿಯ ಬಗ್ಗೆ ಕೆಟ್ಟ ಮಾತುಗಳನ್ನು ಆಡುವವರು ತಾವು ಎಷ್ಟು ಅಸಭ್ಯರು ಎಂದು ತೋರಿಸಿಕೊಳ್ಳುತ್ತಿದ್ದಾರೆ.

ರಾಜೀವ್ ಗಾಂಧಿಯವರ ಬಗ್ಗೆ ಭ್ರಷ್ಟ ಎಂದು ಟೀಕಿಸುವ ಮುನ್ನ ಮೋದಿಯವರು ತಮ್ಮ ಮಾತಿಗೆ ಸಾಕ್ಷ್ಯಾಧಾರ ನೀಡಬೇಕಾಗಿತ್ತು. ವಾಸ್ತವವಾಗಿ ರಾಜೀವ್ ಗಾಂಧಿ ಮೇಲೆ ಬೊಫೋರ್ಸ್ ಪ್ರಕರಣದ ಆರೋಪ ಬಿಟ್ಟರೆ ಬೇರೆ ಆರೋಪಗಳಿರಲಿಲ್ಲ. ಬೊಫೋರ್ಸ್ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ರಾಜೀವ್ ಗಾಂಧಿಯವರನ್ನು ದೋಷಮುಕ್ತರನ್ನಾಗಿ ಮಾಡಿದೆ. ಈ ತೀರ್ಪಿನ ಬಗ್ಗೆ ಅಂದಿನ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿಲ್ಲ. ಇದರಿಂದಲೇ ರಾಜೀವ್ ಗಾಂಧಿ ಆರೋಪ ಮುಕ್ತ ಎಂದು ಗೊತ್ತಾಗುತ್ತದೆ. ಆದರೆ ಸದಾ ಸುಳ್ಳನ್ನೇ ನೂರು ಬಾರಿ ಹೇಳಿ ಅದನ್ನು ಸತ್ಯವೆಂದು ಜನರಿಗೆ ನಂಬಿಸಲು ಹೊರಟ ಗೊಬೆಲ್ಸ್ ಪರಿವಾರದವರು ಸದಾ ಜನರನ್ನು ದಾರಿ ತಪ್ಪಿಸುತ್ತಲೇ ಇರುತ್ತಾರೆ.

 ನರೇಂದ್ರ ಮೋದಿಯವರು ಆಡುತ್ತಿರುವ ಮಾತುಗಳಿಗೂ ಅವರ ಹುದ್ದೆಯ ಘನತೆಗೂ ಸಂಪರ್ಕ ತಪ್ಪಿದಂತೆ ಕಾಣುತ್ತಿದೆ. ಸದಾ ಪ್ರಚೋದನಕಾರಿ ಮಾತುಗಳನ್ನು ಆಡುವ ಮೋದಿಯವರು ಭಾರತ ಪರಮಾಣು ಬಾಂಬ್ ತಯಾರಿಸಿರುವುದು ದೀಪಾವಳಿಯಲ್ಲಿ ಪಟಾಕಿ ಸಿಡಿಸಲು ಅಲ್ಲ ಎಂದು ಹೇಳಿ ವ್ಯಾಪಕ ಖಂಡನೆಗೆ ಗುರಿಯಾದರು. ಆದರೂ ಅವರ ಭಾಷೆ ಸುಧಾರಿಸಿಲ್ಲ. ತಮ್ಮ ಕಣ್ಣೆದುರೇ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಪಿಎಂ ನಾಯಕ ಸೀತಾರಾಮ ಯೆಚೂರಿ ಸದನದಲ್ಲಿ ತರಾಟೆಗೆ ತೆಗೆದುಕೊಂಡಾಗ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳುವ ಮೋದಿಯವರು ಬಹಿರಂಗ ಸಭೆಗಳಲ್ಲಿ ತಮ್ಮ ಶೌರ್ಯ ಪ್ರದರ್ಶನ ಮಾಡುತ್ತಾರೆ. ಅಂತಲೇ ಖರ್ಗೆಯವರು ಮೋದಿಯವರ ಬಗ್ಗೆ ‘‘ಸದನದ ಒಳಗೆ ಇಲಿ, ಸದನದ ಹೊರಗೆ ಹುಲಿ’’ ಎಂದು ಹೇಳುತ್ತಾರೆ.

ಮೋದಿಯವರು ಪ್ರಧಾನಮಂತ್ರಿಯಾದ ಮೇಲೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಕುಸಿದಿದೆ. ದೇಶ ಆರ್ಥಿಕತೆ ಬಿಕ್ಕಟ್ಟಿಗೆ ಸಿಲುಕಿದೆ. ಅಭಿವೃದ್ಧಿ ದರ ಕುಂಠಿತಗೊಂಡಿದೆ. ಜನ ಸಾಮಾನ್ಯರ ಶಾಂತಿ ನೆಮ್ಮದಿಗೆ ಭಂಗ ಉಂಟಾಗಿದೆ. ಅದನ್ನು ಮುಚ್ಚಿಕೊಳ್ಳಲು ನರೇಂದ್ರ ಮೋದಿಯವರು ಸಭ್ಯತೆಯ ಗಡಿ ದಾಟಿ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಚುನಾವಣಾ ಆಯೋಗ ಈಗಲಾದರೂ ಎಚ್ಚೆತ್ತು ಕ್ರಮ ಕೈಗೊಳ್ಳದಿದ್ದರೆ ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ತಾನೇನು ಮಾತಾಡುತ್ತಿದ್ದೇನೆಂಬ ಅರಿವಿಲ್ಲವೆಂದಲ್ಲ, ಅವರಿಗೆ ಎಲ್ಲ ಗೊತ್ತಿದೆ. ಆದರೆ ತನ್ನ ಐದು ವರ್ಷಗಳ ಆಡಳಿತದ ವೈಫಲ್ಯವನ್ನು ಮುಚ್ಚಿಕೊಳ್ಳಲು ಜನರನ್ನು ದಾರಿ ತಪ್ಪಿಸಲು ಪ್ರಚೋದನಕಾರಿ ಮಾತುಗಳನ್ನಾಡುವುದು ಅವರ ತಂತ್ರವಾಗಿದೆ. ಸೈನಿಕರ ಹೆಸರಿನಲ್ಲಿ ವೋಟು ಕೇಳುವ ಕೆಳಮಟ್ಟಕ್ಕೆ ಇಳಿದ ಮೋದಿಯವರು ರವಿವಾರ ಮತ್ತೆ ಹುತಾತ್ಮರ ಪ್ರತಿ ಹನಿ ರಕ್ತಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಮಾತನ್ನು ಆಡಿದ್ದಾರೆ. ತಮ್ಮ ಚಿಲ್ಲರೆ ಚುನಾವಣಾ ರಾಜಕಾರಣಕ್ಕೆ ಯೋಧರ ಬಲಿದಾನವನ್ನು ಬಳಸಿಕೊಳ್ಳುವುದು ಸರಿಯಲ್ಲ. ಪಾಕಿಸ್ತಾನದ ಜೊತೆಗೆ ಯುದ್ಧಕ್ಕೆ ಜನರ ಅನುಮತಿ ಬೇಕಂತೆ. ಜನರ ಸಮಸ್ಯೆಗಳನ್ನು ಈಡೇರಿಸಲಾಗದ ಕೈಲಾಗದ ವ್ಯಕ್ತಿಗಳು ಮಾತ್ರ ಪ್ರಚಾರ ಸಭೆಗಳಲ್ಲಿ ಇಂತಹ ಉತ್ತರ ಕುಮಾರನ ಪೌರುಷ ತೋರಿಸುತ್ತಾರೆ.

ಮೋದಿಯೇನು ಯುದ್ಧ ವಿಮಾನವೇರಿ ಪಾಕಿಸ್ತಾನದ ಒಳಗೆ ನುಗ್ಗಿ ಬಾಂಬ್ ಹಾಕುವುದಿಲ್ಲ, ಅಂತಹ ಕಾರ್ಯಾಚರಣೆ ಮಾಡುವವರು ನಮ್ಮ ಸೈನಿಕರು. ಬಿಜೆಪಿ ಅಧಿಕಾರದಲ್ಲಿರಲಿ, ಕಾಂಗ್ರೆಸ್ ಅಧಿಕಾರದಲ್ಲಿರಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ದೇಶ ರಕ್ಷಣೆಯ ತಮ್ಮ ಕಾರ್ಯವನ್ನು ನಮ್ಮ ಯೋಧರು ಮಾಡುತ್ತಾರೆ. ಕಾರ್ಪೊರೇಟ್ ಕಂಪೆನಿಗಳ ಚೌಕಿದಾರನ ಅಗತ್ಯ ಈ ದೇಶಕ್ಕಿಲ್ಲ.

ಇಂಥ ವೀರಾವೇಶದ ಮಾತುಗಳಿಂದ ಅಸಭ್ಯ ಬೈಗುಳಗಳಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಮೋದಿಯವರು ತಮ್ಮ ಐದು ವರ್ಷಗಳ ಸಾಧನೆಗಳ ಬಗ್ಗೆ ಜನರಿಗೆ ವಿವರಿಸಲಿ. ಜನರಿಗೆ ನೀಡಿದ ಎಷ್ಟು ಭರವಸೆಗಳನ್ನು ಬಿಜೆಪಿ ಸರಕಾರ ಈಡೇರಿಸಿದೆ ಎಂಬ ಪ್ರಶ್ನೆಗೆ ಉತ್ತರ ನೀಡಲಿ. ಸೇಡು ತೀರಿಸಿಕೊಳ್ಳುವ, ಚುನಾವಣೆಗೆ ಸಂಬಂಧವೇ ಇಲ್ಲದ ಮಾತನ್ನು ಆಡಿ ಜನರನ್ನು ದಾರಿ ತಪ್ಪಿಸುವುದು ಬೇಡ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)