varthabharthi

ನಿಮ್ಮ ಅಂಕಣ

ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ಆರಂಭವಾಗಲಿ

ವಾರ್ತಾ ಭಾರತಿ : 7 May, 2019
-ಡ್ಯಾನಿಯಲ್ ಜೆ. ಹುಣಸನಹಳ್ಳಿ, ತರೀಕೆರೆ

ಮಾನ್ಯರೇ,

ರಾಜ್ಯದಲ್ಲಿ ಈ ಬಾರಿ ಬಿಸಿಲಿನ ಅಬ್ಬರ ಜೋರಾಗಿದ್ದು ಕೆರೆ-ಕಟ್ಟೆ ಹಾಗೂ ಅಣೆಕಟ್ಟೆಗಳ ನೀರಿನ ಪ್ರಮಾಣದಲ್ಲಿ ಸಾಕಷ್ಟು ಇಳಿಮುಖವಾಗಿದೆ. ಇನ್ನು ನೀರಿಗಾಗಿ ಮಹಾನಗರಗಳು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ನೀರಿನ ಹಾಹಾಕಾರ ಶುರುವಾಗಿದೆ. ನೀರಿನ ಸಮಸ್ಯೆಯನ್ನು ಬಗೆಹರಿಸಲು ಜನ ಮಳೆರಾಯನ ಮೊರೆ ಹೋಗುತ್ತಿದ್ದು, ಇದರ ಮಧ್ಯೆ ಹಳ್ಳಿಗಳಲ್ಲಿ ಜನತೆ ತಮ್ಮ ಮನೆ ಬಳಕೆಗಾಗಿ ಹಲವು ಕಿಲೋ ಮೀಟರ್‌ಗಳಷ್ಟು ದೂರ ಕ್ರಮಿಸಿ ನೀರನ್ನು ಹುಡುಕುತ್ತಿದ್ದಾರೆ.

ರಾಜ್ಯದಲ್ಲಿ ಕಳೆದ ಬಾರಿ ಕೆಲವೆಡೆ ಉತ್ತಮ ಮಳೆಯಿಂದಾಗಿ ಅನೇಕ ಅಣೆಕಟ್ಟೆಗಳು ಹಾಗೂ ಕೆರೆಕಟ್ಟೆಗಳು ಭರ್ತಿಗೊಂಡು ಜಲಾಶಯಗಳಿಂದ ನೀರು ಹೊರಕ್ಕೆ ಹರಿಯ ಬಿಡಲಾಗಿತ್ತು. ಆದರೆ ಕೆಲವೆಡೆ ಅಣೆಕಟ್ಟೆಗಳು ಸಂಪೂರ್ಣ ಭರ್ತಿಯಾಗದೆ ಗರಿಷ್ಠ ಮಟ್ಟದ ಏರಿಕೆ ಕಂಡಿದ್ದವು, ಈ ಬಾರಿ ಬೇಸಿಗೆಯ ಬಿಸಿಲ ಪ್ರಭಾವ ಹೆಚ್ಚಿದ ಕಾರಣದಿಂದಾಗಿ ಜಲಾಶಯಗಳ ನೀರಿನ ಮಟ್ಟದಲ್ಲಿ ಸಾಕಷ್ಟು ಕುಸಿತ ಕಂಡಿದೆ. ಕೆಲವೆಡೆ ಜಲಾಶಯಗಳಲ್ಲಿ ಹೂಳು ಸಂಗ್ರಹವಾಗಿದ್ದು, ಸರಕಾರ ಹೂಳು ತೆಗೆಯುವ ಕಾರ್ಯಕ್ಕೆ ಕೂಡಲೇ ಮುಂದಾಗಬೇಕಿದೆ. ಜಲಾಶಯಗಳ ಹೂಳು ತೆಗೆಯುವುದರಿಂದ ಅಧಿಕ ನೀರನ್ನು ಶೇಖರಿಸಲು ಸಹಕಾರಿಯಾಗುತ್ತದೆ. ಇನ್ನು ಒಂದು ತಿಂಗಳಲ್ಲಿ ಮುಂಗಾರು ರಾಜ್ಯಕ್ಕೆ ಆಗಮನ ನೀಡಲಿದ್ದು ಆ ಸಂದರ್ಭದಲ್ಲಿ ಹೂಳೆತ್ತುವುದು ಕಷ್ಟ ಸಾಧ್ಯ ಹಾಗೂ ಮುಂಗಾರು ಮಳೆ ಹೆಚ್ಚು ಬೀಳುವುದರಿಂದ ಇನ್ನಷ್ಟು ಕಸ ಕಡ್ಡಿಗಳು ಡ್ಯಾಂಗಳಲ್ಲಿ ಸಂಗ್ರಹವಾಗುವ ಸಾಧ್ಯತೆ ಇದೆ. ಆಗ ನೀರಿನ ಸಂಗ್ರಹಕ್ಕೂ ಕುತ್ತು ಬೀಳುವ ಸಾಧ್ಯತೆ ಇದೆ. ಹಾಗಾಗಿ ಜಲಾಶಯದ ಹೂಳೆತ್ತುವ ಕಾರ್ಯ ಕೂಡಲೇ ಆರಂಭಗೊಳ್ಳಲಿ. ಇವುಗಳ ಜೊತೆಗೆ ಕೆರೆ ಕಟ್ಟೆಗಳ ಅಭಿವೃದ್ಧಿಗೂ ಸರಕಾರ ಮುಂದಾದರೆ ಬೇಸಿಗೆ ಕಾಲದ ನೀರಿನ ಅಭಾವವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)