varthabharthi

ನಿಮ್ಮ ಅಂಕಣ

ವೈದ್ಯಕೀಯ ಸೀಟು: ಕನ್ನಡಿಗರಿಗೆ ಅನ್ಯಾಯವಾಗದಿರಲಿ

ವಾರ್ತಾ ಭಾರತಿ : 7 May, 2019
-ಸತೀಶ, ಇಂಗಳೇಶ್ವರ, ಮುಳಸಾವಳಗಿ

ಮಾನ್ಯರೇ,

ಇತ್ತೀಚಿನ ಕೆಲವು ವರ್ಷಗಳಿಂದ ವೈದ್ಯಕೀಯ ಶಿಕ್ಷಣ ಪದವಿ ಪ್ರವೇಶಿಸಲು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್)ಎನ್ನುವ ಏಕರೂಪ ಪರೀಕ್ಷೆಯನ್ನು ದೇಶಾದ್ಯಂತ ನಡೆಸಲಾಗುತ್ತದೆ. ಈ ಏಕರೂಪದ ಪ್ರವೇಶ ಪರೀಕ್ಷೆ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಮಾರಕವಾಗಿದೆ.ಏಕರೂಪದ ಕೌನ್ಸೆಲಿಂಗ್ ನಡೆಯುತ್ತಿರುವುದರಿಂದ ಕನ್ನಡ ನಾಡಿನ ವಿದ್ಯಾರ್ಥಿಗಳ ಸೀಟುಗಳು ಹೊರರಾಜ್ಯದವರ ಪಾಲಾಗುತ್ತಿವೆ. ಖಾಸಗಿ ಕಾಲೇಜುಗಳು ಕೂಡ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಮಣೆ ಹಾಕುತ್ತಿವೆ.ಇದರಿಂದ ಕನ್ನಡದ ಅಭ್ಯರ್ಥಿಗಳು ತೊಂದರೆಗೀಡಾಗುತ್ತಿದ್ದಾರೆ. ಸೀಟ್ ಮ್ಯಾಟ್ರಿಕ್ಸ್ ಪ್ರಕಟಗೊಂಡ ನಂತರ ಕರ್ನಾಟಕ ವೈದ್ಯಕೀಯ ಕಾಲೇಜುಗಳತ್ತ ಹೊರ ರಾಜ್ಯದ ವಿದ್ಯಾರ್ಥಿಗಳು ಮುಗಿಬಿದ್ದಿದ್ದಾರೆ.

ಕರ್ನಾಟಕದಲ್ಲಿ ದೇಶದ ಯಾವುದೇ ರಾಜ್ಯದ ವಿದ್ಯಾರ್ಥಿಗಳು ಬೇಕಿದ್ದರೂ ವೈದ್ಯಕೀಯ ಶಿಕ್ಷಣದ ಸೀಟನ್ನು ಪಡೆಯುವಂತಹ ನಿಯಮವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಡಿದೆ. ಇದರಿಂದಾಗಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿಯೇ ಸೀಟುಗಳು ಸಿಗದಂತಾಗಿದೆ. ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಉತ್ತರ ಪ್ರದೇಶ ಹೀಗೆ ಇನ್ನಿತರ ರಾಜ್ಯಗಳಲ್ಲಿ ತಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಮಾತ್ರ ಎಂಬಿಬಿಎಸ್, ಬಿಡಿಎಸ್ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಮೊದಲ ಆದ್ಯತೆ ನೀಡಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಮಣೆ ಹಾಕಲು ಮುಂದಾಗಿದ್ದಾರೆ. ಈ ಬೆಳವಣಿಗೆಯಿಂದ ನೀಟ್ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದ ಕನ್ನಡದ ವಿದ್ಯಾರ್ಥಿಗಳಿಗೂ ಕರ್ನಾಟಕದಲ್ಲಿ ವೈದ್ಯಕೀಯ ಸೀಟು ಸಿಗದಂತಾಗುತ್ತಿದೆ. ನಮ್ಮ ರಾಜ್ಯಕ್ಕೆ ಬಂದು ವಿದ್ಯಾಭ್ಯಾಸ ಮುಗಿಸಿಕೊಂಡು ಹೋಗುವ ಹೊರ ರಾಜ್ಯದ ವಿದ್ಯಾರ್ಥಿಗಳು ಅವರ ರಾಜ್ಯದಲ್ಲಿ ಕೆಲಸ ಮಾಡುತ್ತಾರೆಯೇ ಹೊರತು ಕರ್ನಾಟಕದ ರೋಗಿಗಳಿಗೆ ಸೇವೆ ಮಾಡುವುದಿಲ್ಲ. ವೈದ್ಯಕೀಯ ಸೀಟುಗಳ ಹಂಚಿಕೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)