varthabharthi

ನಿಮ್ಮ ಅಂಕಣ

ಪ್ರಾಜೆಕ್ಟ್‌ಗಳನ್ನು ನಿಲ್ಲಿಸಿ... ಪ್ರಕೃತಿ ವಿನಾಶ ತಪ್ಪಿಸಿ

ವಾರ್ತಾ ಭಾರತಿ : 8 May, 2019
ಕಾಲುವ ಮಲ್ಲಯ್ಯ, ಕನ್ನಡಕ್ಕೆ: ಕಸ್ತೂರಿ

ಕಳೆದ ಅರವತ್ತು ವರ್ಷಗಳಲ್ಲಿ ಅನೇಕ ಜೀವರಾಶಿಗಳು ಭೂಗೋಲದಿಂದ ಕಣ್ಮರೆಯಾಗಿವೆ. ಭೂತಾಪ ಮತ್ತೊಂದು ನಾಲ್ಕು ಡಿಗ್ರಿ ಹೆಚ್ಚಿದರೆ ಧ್ರುವಗಳಲ್ಲಿನ ಹಿಮ ಕರಗಿ ಭೂಗೋಲದಲ್ಲಿನ ಸಾಕಷ್ಟು ಭಾಗ ಸಮುದ್ರದ ಪಾಲಾಗುವ ಸಾಧ್ಯತೆ ಇದೆ. ಹೀಗೆಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ಭೂತಾಪ ಹೆಚ್ಚುವುದು, ಪರಿಸರ ನಾಶ ಹೀಗೇ ಮುಂದುವರಿದರೆ ಮತ್ತೊಂದು ಸಾವಿರವರ್ಷಗಳಲ್ಲಿ ಭೂಗೋಲದ ಮೇಲೆ ಮನುಷ್ಯನಿರಲಿ, ಬೇರೆ ಯಾವುದೇ ಜೀವಿ ಆಗಲಿ ಬದುಕುವ ಸಾಧ್ಯತೆ ಇಲ್ಲ ಎಂದು ವಿಶ್ವವಿಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಎಚ್ಚರಿಸಿದ್ದರು.


ಸೂರ್ಯನಿಂದ ಬೇರ್ಪಟ್ಟು ಉರಿಯುತ್ತಿರುವ ಅಗ್ನಿ ಗೋಲದಂತಿರುವ ಭೂಗೋಳ ಕೋಟ್ಯಂತರ ವರ್ಷಗಳ ಕಾಲ ತಂಪಾಗುತ್ತಾ ಅನೇಕ ಪರಿವರ್ತನೆಗಳ ಬಳಿಕ ಜೀವರಾಶಿಗಳಿಗೆ ನಿವಾಸ ಯೋಗ್ಯವಾಗಿ ಬದಲಾಗಿದೆ. ಜೀವರಾಶಿಗಳು ಬದುಕುವುದಕ್ಕೆ ಅಗತ್ಯವಾದ ಗಾಳಿ, ನೀರು, ಆಹಾರ ಪದಾರ್ಥಗಳು ಲಭ್ಯದಲ್ಲಿರುವ ಒಂದೇ ಒಂದು ಗ್ರಹ ಭೂಮಿ. ಪ್ರಕೃತಿ ಸಮತೋಲನ ಕಾಪಾಡಿಕೊಳ್ಳುವುದುಕ್ಕೋಸ್ಕರವೇ ಗುಡ್ಡಗಳು, ಕಾಡುಗಳು, ಸರೋವರಗಳು, ವೃಕ್ಷ ಜಂತುಜಾಲಗಳು ಈ ಭೂಗೋಳದ ಮೇಲೆ ಇವೆ. ಈ ಸಮತುಲ್ಯವಾದ ಭೂಗೋಳದ ಮೇಲೆ ಮೊದಲ ವ್ಯಕ್ತಿ ಆಫ್ರಿಕಾ ಖಂಡದಲ್ಲಿ ಹುಟ್ಟಿತು ಎಂದು ವಿಜ್ಞಾನಿಗಳು ಪರಿಶೋಧನೆಗಳ ಮೂಲಕ ತಿಳಿಸಿದ್ದಾರೆ. ಲಕ್ಷಾಂತರ ವರ್ಷಗಳು ಮನುಷ್ಯರು ಎಂತಹದೇ ಅಡ್ಡಗೋಡೆಗಳಿಲ್ಲದೇ ಕುಲ, ಮತ, ಭಾಷೆ, ಜಾತಿ ಭೇದಗಳು ಇಲ್ಲದೇನೇ ಬದುಕಿದರು. ಪ್ರಕೃತಿಯೊಂದಿಗೆ ಒಂದಾಗಿ ಜೀವಿಸಿದರು.

ಕ್ರಮೇಣ ಹಳೆಯ ಶಿಲಾಯುಗ, ಹೊಸ ಶಿಲಾಯುಗ, ಲೋಹಮುಗದಂಥವನ್ನು ದಾಟಿ ನಾಗರಿಕ ಸ್ಥಿತಿಗೆ ಬಂದರು. ಆ ಬಳಿಕ ದೇವರುಗಳನ್ನು, ಮತಗಳನ್ನು ಸೃಷ್ಟಿಸಿಕೊಂಡರು. ಭಾಷೆಗಳನ್ನು ಸೃಷ್ಟಿಸಿಕೊಂಡರು. ವಿವಿಧ ನಾಗರಿಕತೆಗಳನ್ನು ಸೃಷ್ಟಿಸಿಕೊಂಡರು. ವಸ್ತುವಿನಿಮಯ ಸಂಸ್ಕೃತಿ ದಾಟಿ ಹಣವನ್ನು ಸೃಷ್ಟಿಸಿಕೊಂಡರು. ಇವೆಲ್ಲದರ ಜೊತೆಗೆ ಕಷ್ಟಗಳನ್ನು ಕೊಂಡುತರುವ ಆಸೆಯ ಪೆಟ್ಟಿಗೆಯನ್ನು ಸೃಷ್ಟಿಸಿಕೊಂಡರು.

ಧರ್ಮ, ಆಡಳಿತ, ಹಣ, ಆಧಿಪತ್ಯಭಾವ, ಕೊನೆ ಇಲ್ಲದ ದಾಹಗಳು ಬರುವುದರೊಂದಿಗೆ ಯುದ್ಧಗಳು ಮೊದಲಾದವು. ರಾಜ್ಯಗಳು ಏರ್ಪಟ್ಟವು. ಧರ್ಮಗಳು ಸೃಷ್ಟಿಯಾದವು. ಭಾರತದಲ್ಲಿ ಮೇಲಿನವುಗಳಿಗೆ ಹೆಚ್ಚುವರಿಯಾಗಿ ‘ಜಾತಿ’ ಸೇರಿಸಲ್ಪಟ್ಟಿತು. ಇವುಗಳೊಂದಿಗೆ ಅನೇಕ ಸಂಶೋಧನೆಗಳೂ ನಡೆದವು. ಮನುಷ್ಯ ಜೀವಿತವನ್ನು ಸುಖಮಯಗೊಳಿಸಿ ಕೊಳ್ಳುವುದಕ್ಕೆ ಪ್ರಯಾಣ ಸೌಕರ್ಯಗಳು, ವಿದ್ಯುತ್, ರೇಡಿಯೊ ಟಿಲಿವಿಜನ್‌ನಂಥವು ಎಷ್ಟೋ ಕಂಡುಹಿಡಿದರು. ವೈಯಕ್ತಿಕ ಆಸ್ತಿಯ ಭಾವನೆ ಬಂದ ಬಳಿಕ ಲೂಟಿ ಹೆಚ್ಚಿತು. ಸ್ವಾರ್ಥ ಹೆಚ್ಚಿತು. ಸುಖದ ಬಯಕೆ ಮನುಷ್ಯನಿಗೆ ದುಃಖವನ್ನು ತಂದಿಟ್ಟಿತು. ಸ್ವಾರ್ಥ ಸುಖ ಲಾಲಸೆಗಳಿಂದ ಮನುಷ್ಯ ಪ್ರಕೃತಿ ವಿಧ್ವಂಸದಲ್ಲಿ ತೊಡಗುತ್ತಿದ್ದಾನೆ.

ಅಭಿವೃದ್ಧಿ ಮಹೋನ್ನತ ದೆಸೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿರುವ ಕಳೆದ 200 ವರ್ಷಗಳಲ್ಲಿ ವಿಶ್ವಾದ್ಯಂತ ಜರುಗಿದ ಪ್ರಕೃತಿ ವಿಧ್ವಂಸ ಲಕ್ಷಾಂತರ ವರ್ಷಗಳಲ್ಲಿ ನಡೆದಿದ್ದಕ್ಕಿಂತ ಎಷ್ಟೋ ಪಾಲು ಹೆಚ್ಚು ನಡೆದಿದೆ. ಲಕ್ಷಾಂತರ ವರ್ಷಗಳಿಂದ ಅನೇಕ ಅಡೆತಡೆಗಳನ್ನು ಭರಿಸಿಕೊಂಡು ನಿಂತ ಪ್ರಾಕೃತಿಕ ಸಮತೋಲನ ಈ ಎರಡು ಶತಮಾನಗಳ ಅವಧಿಯಲ್ಲೇ ಪೂರ್ತಿಯಾಗಿ ನಾಶವಾಗಿದೆ. ಕಾಡುಗಳನ್ನು ಕಡಿಯುವುದು. ರಸಾಯನಿಕಗಳ ಬಳಕೆ, ಪ್ಲಾಸ್ಟಿಕ್ ಬಳಕೆ, ಸ್ಫೋಟಕ ಪದಾರ್ಥಗಳ ವಿನಿಯೋಗ, ಅಣುಬಾಂಬ್ ಪ್ರಯೋಗಗಳು, ಯುದ್ಧಗಳು, ಅತಿ ಹೆಚ್ಚು ತ್ಯಾಜ್ಯಗಳು ಹೊರಹಾಕುವ ಉದ್ದಿಮೆಗಳು ಆಗಮಿಸುವುದು, ಓರೆನ್ ಪೊರೆಗೆ ರಂಧ್ರಗಳು ಏರ್ಪಡುವುದು, ಭೂಮಿಯ ದುರ್ಬಳಕೆಯಿಂದ ವಾಯು, ಜಲ, ಭೂಮಿ, ಆಹಾರ ಪದಾರ್ಥಗಳ ಕಲುಷಿತ, ಭೂತಾಪ ಹೆಚ್ಚುವುದು- ಇಂತಹ ಅನೇಕ ಕಾರಣಗಳಿಂದ ಭೂಗೋಲದ ಮೇಲೆ ಜೀವರಾಶಿಗಳ ಉಳಿವು ಪ್ರಶ್ನಾರ್ಥಕವಾಗುತ್ತವೆ.

ಕಳೆದ ಅರವತ್ತು ವರ್ಷಗಳಲ್ಲಿ ಅನೇಕ ಜೀವರಾಶಿಗಳು ಭೂಗೋಲದಿಂದ ಕಣ್ಮರೆಯಾಗಿವೆ. ಭೂತಾಪ ಮತ್ತೊಂದು ನಾಲ್ಕು ಡಿಗ್ರಿ ಹೆಚ್ಚಿದರೆ ಧ್ರುವಗಳಲ್ಲಿನ ಹಿಮ ಕರಗಿ ಭೂಗೋಲದಲ್ಲಿನ ಸಾಕಷ್ಟು ಭಾಗ ಸಮುದ್ರದ ಪಾಲಾಗುವ ಸಾಧ್ಯತೆ ಇದೆ. ಹೀಗೆಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ಭೂತಾಪ ಹೆಚ್ಚುವುದು, ಪರಿಸರ ನಾಶ ಹೀಗೇ ಮುಂದುವರಿದರೆ ಮತ್ತೊಂದು ಸಾವಿರವರ್ಷಗಳಲ್ಲಿ ಭೂಗೋಲದ ಮೇಲೆ ಮನುಷ್ಯನಿರಲಿ, ಬೇರೆ ಯಾವುದೇ ಜೀವಿ ಆಗಲಿ ಬದುಕುವ ಸಾಧ್ಯತೆ ಇಲ್ಲ ಎಂದು ವಿಶ್ವವಿಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಎಚ್ಚರಿಸಿದ್ದರು. ಇತ್ತೀಚೆಗಷ್ಟೇ ಮನುಷ್ಯನಿಗೆ ವಾಸಯೋಗ್ಯವಾದ ಬೇರೆ ಗ್ರಹ ಯಾವುದಾದರೂ ಇದೆಯೇನೋ ಹುಡುಕಿಕೊಳ್ಳಿ ಎಂದೂ ಆತ ಸೂಚಿಸಿದರು.

ಪ್ರಕೃತಿ ವಿಧ್ವಂಸದಿಂದಾಗುವ ಪ್ರಳಯ ಅತಿ ಸಮೀಪದಲ್ಲೇ ಇದೆ ಎಂದು ಪ್ರಸ್ತುತ ಬೇಸಿಗೆ ಬಿಸಿಲನ್ನು ನೋಡಿದರೆ ಅರ್ಥ ಆಗುತ್ತದೆ. ಬಿಸಿಲಿನಲ್ಲಿ ತಿರುಗುವ ಕಷ್ಟಜೀವಿಗಳಿಗೆ, ಬಿಸಿಲಿಗೆ ಹೋಗದಿದ್ದರೆ ಬದುಕಲಾರದ ಪರಿಸ್ಥಿತಿ ಇರುವ ಕೂಲಿಗಳಿಗೆ, ಮೈ ಮುರಿದು ದುಡಿಯಲೇಬೇಕಾದ ಬೆವರಿನ ಮಕ್ಕಳಿಗೆ ಈ ಕಷ್ಟಗಳೆಷ್ಟು ಘೋರವೆಂದು ಗೊತ್ತು. ಇವರು ಯಾರೂ ಪ್ರಕೃತಿಯನ್ನು ನಾಶ ಮಾಡಿದವರಲ್ಲ. ಪ್ರಕೃತಿಯನ್ನು ಕಾಪಾಡುವವರು ಪ್ರಕೃತಿಯಲ್ಲೊಂದಾಗಿ ಜೀವಿಸುವವರು. ಎಸಿ ಕಾರುಗಳು, ಆಕಾಶಯಾನಗಳು, ಆಕಾಶಮುಖೀ ಬಂಗಲೆಗಳು, ಎಸಿ ಕಾರ್ಯಾಲಯಗಳಲ್ಲಿ ಮಾತ್ರವೇ ಬದುಕುವ ಆಳುವವರಿಗೆ ಇವ್ಯಾವುವೂ ಅರ್ಥವಾಗವು. ಅರ್ಥ ಆದರೂ ಹಚ್ಚಿಕೊಳ್ಳರು. ತಾವು ಮಾಡುತ್ತಿರುವ ಕೃತ್ಯಗಳಿಂದ ಮಾನವಕುಲ ಅತಿ ಅಲ್ಪಾವಧಿಯಲ್ಲೇ ಅದೃಶ್ಯವಾಗುವ ಪರಿಸ್ಥಿತಿಗಳಿದ್ದರೂ, ನಮ್ಮ ಮುಖಂಡರಿಗೆ ತಾವು ಚುನಾವಣೆಯಲ್ಲಿ ಗೆಲ್ಲುವುದು ಹೇಗೆ ಎನ್ನುವುದೇ ಮುಖ್ಯ. ತಾವು ಆಳಬೇಕು ಎನ್ನುವುದೇ ಮುಖ್ಯ. ಸಾವಿರ ಲಕ್ಷ ಕೋಟಿಗಳ ಧನವನ್ನು ರಾಶಿಮಾಡಿಕೊಳ್ಳಬೇಕೆನ್ನುವುದೇ ಲಕ್ಷ. ಹುಸಿ ವಾಗ್ದಾನಗಳು, ಸೆಂಟಿಮೆಂಟ್‌ಗಳನ್ನು ಕೆರಳಿಸುವುದು, ದ್ವೇಷಭರಿತ ಭಾಷಣಗಳು, ಧರ್ಮಾಂಧತೆಯನ್ನು ಸಾಕಿ ಬೆಳೆಸುವುದು, ಕುಟುಂಬ ಕುಲ ಧರ್ಮಾಧಾರಿತ ಆಡಳಿತಗಳನ್ನು ಗಟ್ಟಿಯಾಗಿಸಿಕೊಳ್ಳುವುದೇ ಇವರಿಗೆ ಮುಖ್ಯ.

ಸಾರ್ವತ್ರಿಕ ಚುನಾವಣಾ ಪ್ರಚಾರ ಗಮನಿಸಿದರೆ ಯಾವುದೇ ಒಂದು ಪಾರ್ಟಿ ಆಗಲೀ, ನಾಯಕನಾಗಲೀ ಪ್ರಕೃತಿ ವಿಧ್ವಂಸದ ಕುರಿತು, ಅದನ್ನು ತಡೆಯಲು ಕೈಗೊಳ್ಳಲಿರುವ ಕ್ರಮಗಳ ಕುರಿತು ಮಾತನಾಡಿದ ದಾಖಲೆಗಳಿಲ್ಲ. ಇವರಿಗೆ ದೇಶ ಏನಾದರೇನು? ಮಾನವ ಕುಲ ಮಾಯವಾದರೇನು?. ಅಭಿವೃದ್ಧಿ ಹೆಸರಿನ ಮೇಲೆ, ಪ್ರಾಜೆಕ್ಟ್‌ಗಳ ಹೆಸರಿನ ಮೇಲೆ ಆಳುವ ವರ್ಗಗಳು ಪ್ರಕೃತಿ ವಿಧ್ವಂಸದಲ್ಲಿ ತೊಡಗಿವೆ.

ಭೂಗೋಲದ ಮೇಲಿರುವ ಒಟ್ಟು ಭೂಮಿಯಲ್ಲಿ ಶೇ.70ವರೆಗೂ (ಮೂರನೇ ಎರಡು ಭಾಗ) ಸಮುದ್ರವೇ ಇದೆ. ಉಳಿದ ಭೂಮಿಯಲ್ಲಿ ಕಾಡುಗಳು, ಗುಡ್ಡಗಳು, ನದಿಗಳು, ಸರೋವರಗಳು, ಕೆರೆಗಳು ಇತ್ಯಾದಿಗಳಿವೆ. ಮತ್ತೆ ಸ್ವಲ್ಪ ಭೂಮಿ ಕೆಲಸಕ್ಕೆ ಬರದ ಕಲ್ಲು ಮಣ್ಣುಗಳೊಂದಿಗೆ ಇರುವ ಭೂಮಿ. ಇವೆಲ್ಲಾ ಕಳೆದು ಉಳಿದ ಭೂಮಿಯಲ್ಲೇ ಮನೆಗಳು, ಊರುಗಳು, ನಗರಗಳು, ಪಟ್ಟಣಗಳು ರಾಜಧಾನಿಗಳು ... ಎಲ್ಲ ಇವೆ. ಇವೆಲ್ಲಾ ಹೋಗಿ ಉಳಿದ ಭೂಮಿಯಲ್ಲಿ ಬೆಳೆಗಳನ್ನು ಬೆಳೆಯಬೇಕಾಗಿದೆ. ಆಹಾರದ ಅಗತ್ಯಗಳು ತೀರಬೇಕಾಗಿದೆ.

ದಿನದಿನಕ್ಕೂ ಹೆಚ್ಚುತ್ತಿರುವ ಜನಸಂಖ್ಯೆ ಜನವಸತಿಗಳಲ್ಲಿ, ಕಾಂಕ್ರಿಟ್‌ವನಗಳ ಕಾರಣದಿಂದ ವ್ಯವಸಾಯ ಭೂಮಿ ಸವೆಯುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಬಂಗಾರದಂಥ ಬೆಳೆ ಬೆಳೆದ ಭೂಮಿಯನ್ನು ಉದ್ದಿಮೆಗಳು, ಎಸ್‌ಇಝಡ್‌ಗಳು, ರಸ್ತೆಗಳು ಆಕ್ರಮಿಸುತ್ತಾ ವ್ಯವಸಾಯ ಯೋಗ್ಯವಾದ ಭೂಮಿಯನ್ನು ಮತ್ತಷ್ಟು ಕುಗ್ಗಿಸುತ್ತಿವೆ.

ಮತ್ತೊಂದು ಕಡೆ ಹೆಚ್ಚುತ್ತಿರುವ ಜನಸಂಖ್ಯಾ ಅಗತ್ಯಗಳನ್ನು ತೀರಿಸುವುದಕ್ಕೆ ಇರುವ ಭೂಮಿಯಲ್ಲೇ ಹೆಚ್ಚಿನ ಬೆಳೆ ಬೆಳೆಯಬೇಕು. ಅದಕ್ಕಾಗಿ ರಾಸಾಯನಿಕ ಗೊಬ್ಬರಗಳು, ಕ್ರಿಮಿನಾಶಕಗಳು, ರಾಸಾಯನಿಕಗಳನ್ನು ಬಳಸುವುದರಿಂದ ಭೂಮಿ ಸವೆತಕ್ಕೆ ಗುರಿಯಾಗಿ ಕೆಲಸಕ್ಕೆ ಬಾರದ್ದಾಗಿ ಬದಲಾಗುತ್ತದೆ. ಪೂರ್ವಕಾಲದಲ್ಲಿ ರಾಜಧಾನಿಗಳನ್ನಾಗಲೀ, ಕೋಟೆಗಳನ್ನಾಗಲೀ ವ್ಯವಸಾಯ ಯೋಗ್ಯವಲ್ಲದ ಭೂಮಿಯಲ್ಲಿ ನಿರ್ಮಿಸುತ್ತಿದ್ದರು. ಕಲ್ಲು, ಮಣ್ಣು, ಗುಡ್ಡಗಳಿರುವ ಪ್ರಾಂತಗಳಲ್ಲಿ ಕಟ್ಟುತ್ತಿದ್ದರು. ನೀರಿನ ಅಗತ್ಯಗಳ ತೀರಿಸುವುದಕ್ಕೆ ಬಾವಿಗಳು, ಕೆರೆಕುಂಟೆಗಳು ಇರುತ್ತಿದ್ದವು. ಏತಗಳು, ರಾಟೆಗಳಿಂದ ನೀರು ತೋಡಲಾಗುತ್ತಿತ್ತು. ಬಾವಿಗಳಲ್ಲಿ ಕೈಗೆಟುಕುವಷ್ಟು ಆಳದಲ್ಲಿ ನೀರು ಇರುತ್ತಿದ್ದವು. ತೋಡಿದ ಕಡೆಗಳಲ್ಲೆಲ್ಲ ನೀರು ಇರುತ್ತಿದ್ದವು. ಭೂಪೊರೆಯ ಮೇಲೆಲ್ಲಾ ನೀರು ಇರುತ್ತಿದ್ದು, ಭೂತಾಪ ಅಷ್ಟಾಗಿ ಇರುತ್ತಿರಲಿಲ್ಲ. ವ್ಯವಸಾಯ ಭೂಮಿಯಲ್ಲಿ ಎಲ್ಲೆಂದರಲ್ಲಿ ನೀರು ಇಂಗುವುದಕ್ಕೆ ಹಳ್ಳಗಳನ್ನು ತೋಡಲಾಗುತ್ತಿತ್ತು. ಪ್ರತಿಮನೆಯಲ್ಲೂ ಮಳೆನೀರಿನ ಸಂಗ್ರಹಕ್ಕೆ ವ್ಯವಸ್ಥೆ ಇತ್ತು. ಭೂಮಿಯಲ್ಲಿ ಮಣ್ಣಿನ ಭಾಗ ಹೆಚ್ಚಾಗಿದ್ದುದರಿಂದ ಮಳೆ ನೀರು ಭೂಮಿಯೊಳಗೆ ಇಂಗುತ್ತಿತ್ತು. ಈ ಪ್ರಕ್ರಿಯೆಗಳೆಲ್ಲ ಜರುಗಿದ ಬಳಿಕ ಸಹ ಉಳಿದ ನೀರು ಕಾಲುವೆಗಳು, ಹೊಳೆಗಳ ಮೂಲಕ ಕೆರೆಕುಂಟೆಗಳಿಗೆ ಹೋಗಿ ಉಳಿದಿದ್ದು ನದಿಯಲ್ಲಿ ಬೆರೆಯುತ್ತಿತ್ತು- ಅಂದರೆ ಭೂಗರ್ಭವೆ ಅತಿದೊಡ್ಡ ಜಲಾಶಯವಾಗಿದ್ದಿತು.

ಕಾಲ ಕ್ರಮೇಣ ಇವೆಲ್ಲಕ್ಕೂ ಭಂಗ ಬಂದಿತು. ಭೂಗರ್ಭ ಜಲಾಶಯಗಳು ಎಟುಕದಷ್ಟು ದೂರಕ್ಕೆ ಹೋದವು. ಮನುಷ್ಯರ ತಪ್ಪುಗಳಿಂದ, ಸುಖಭೋಗ ಲಾಲಸೆಗಳಿಂದ, ಹಣದಾಸೆಯಿಂದ, ಅಧಿಕಾರ ದಾಹದಿಂದ ಭೂಮಿ, ನೀರು, ಗಾಳಿ ಕೊನೆಗೆ ಆಹಾರ ಸಹ-ಮಲಿನಗೊಂಡಿವೆ. ಸಮುದ್ರಗಳು ಕೂಡಾ ಕಲುಷಿತಗೊಂಡಿವೆ, ನದಿಗಳು ವಿಷಮಯವಾಗಿವೆ. ಇವೆಲ್ಲಾ ಭೂತಾಪವನ್ನು ವಿಪರೀತವಾಗಿ ಹೆಚ್ಚಿಸಿ ಮನುಷ್ಯನ ಉಳಿವನ್ನೇ ಪ್ರಶ್ನಾರ್ಥಕಗೊಳಿಸುತ್ತಿವೆ. ಇಂತಹ ಸಮಯದಲ್ಲಿ ಕಲುಷಿತತೆ, ಭೂತಾಪಗಳನ್ನು ಕುರಿತು ಒಂದಿಷ್ಟೂ ಚಿಂತಿಸದಿದ್ದರೆ ಇರುವ ತುಸು ಭೂಮಿಗೆ ನೀರು ತುಂಬಿಸಲು ಸಾಧ್ಯವೇ? ಪ್ರಾಜೆಕ್ಟ್‌ಗಳ ಹೆಸರಲ್ಲಿ ಸಾವಿರಾರು ಎಕರೆ ಭೂಮಿಯನ್ನು ನುಂಗಿಹಾಕಲಾಗಿದೆ. ವ್ಯವಸಾಯ ಭೂಮಿಯನ್ನು ಇನ್ನೂ ಕುಗ್ಗಿಸುವುದು ಸಮಂಜಸವೇ? ಪ್ರಾಜೆಕ್ಟ್‌ಗಳಡಿ ನೂರಾರು ಗ್ರಾಮಗಳು, ಲಕ್ಷಾಂತರ ಎಕರೆ ಭೂಮಿ, ಗಿರಿಜನರ ಸಂಸ್ಕೃತಿಗಳು ವಿಧ್ವಂಸಗೊಳ್ಳುತ್ತಿದ್ದರೆ ಲಕ್ಷಿಸುವವರು ಯಾರು? ಮುಖ್ಯವಾಗಿ ಪ್ರಕೃತಿ ವಿನಾಶವನ್ನು, ಭೂಭಾಗ ನೀರು ಪಾಲು ಆಗುವುದನ್ನು ತಡೆಯಬೇಡವೇ?

ಪ್ರಾಜೆಕ್ಟ್‌ಗಳು ಒಂದು ಮಟ್ಟಕ್ಕೆ ಬೇಕೇ ಬೇಕು. ಆದರೆ ಅವುಗಳಿಂದ ಎಷ್ಟು ಫಲವತ್ತಾದ ಭೂಮಿ ನಾಶವಾಗುತ್ತದೆ, ಇದುವರೆಗೆ ಸಾಗುವಳಿಗೆ ಇಲ್ಲದ ಎಷ್ಟು ಭೂಮಿ ಬೆಳೆಯಲು ಬರುತ್ತದೆ ಎಂಬುದನ್ನು ಗಮನಿಸಬೇಕು. ಎಷ್ಟು ಮಂದಿ ನಿರಾಶ್ರಿತರಾದರು? ಎಷ್ಟು ಮಂದಿ ರೈತರ ಬದುಕು ಸುಧಾರಿಸಲಿದೆ ಎಂಬುದನ್ನೂ ಅಧ್ಯಯನ ಮಾಡಬೇಕು. ಪ್ರಕೃತಿ ವಿನಾಶವನ್ನು, ಗಿರಿಜನರ ಬದುಕಿನ ಕೊರತೆಗಳನ್ನು ದೃಷ್ಟಿಯಲ್ಲಿಟ್ಟುಕೊಳ್ಳಬೇಕು. ಪ್ರಾಜೆಕ್ಟ್‌ಗಳ ಕಟ್ಟಿದರೂ ರೈತರ ಆತ್ಮಹತ್ಯೆಗಳು ನಿಲ್ಲಲಿಲ್ಲ. ಕನಿಷ್ಠ ಕುಡಿಯುವ ನೀರಿನ ಅಗತ್ಯಗಳು ಸಹ ತೀರಲಿಲ್ಲ. ಭೂಗರ್ಭ ಜಲಗಳು ಪಾತಾಳದೊಳಗೆ ಹೋಗಿವೆ. ಭೂ ಉಷ್ಣಾಗ್ರತೆ ಹೆಚ್ಚಿದೆ. ಪ್ರಾಜೆಕ್ಟ್‌ಗಳನ್ನು ಮಾತ್ರ ನಿರ್ಮಿಸುವುದರಿಂದ ಈ ಸಮಸ್ಯೆಗಳೆಲ್ಲಾ ಪರಿಹಾರ ಆಗುತ್ತವೆಯಾ? ಆಗಲಾರವು ಎಂದು ಕಾಲ ಹೇಳುತ್ತಿದೆ. ಪ್ರಕೃತಿವಿಧ್ವಂಸವನ್ನು ತಡೆಯದೇ ಹೋದರೆ ಪ್ರಾಜೆಕ್ಟ್‌ಗಳು ಪ್ರಜೆಗಳ ಆಹಾರ ಅಗತ್ಯಗಳನ್ನು, ಸಮಸ್ಯೆಗಳನ್ನು ಖಂಡಿತ ತೀರಿಸಲಾರವು. ಕೆಲವರ ಜೇಬುಗಳು ಮಾತ್ರ ತುಂಬುತ್ತವೆ. ನಾಯಕರೇ! ಪ್ರಕೃತಿ ವಿನಾಶವನ್ನು ತಡೆಯುವುದು ನಿಮ್ಮ ಆಡಳಿತ ಅಜೆಂಡಾದಲ್ಲಿ ಮೊದಲ ಆದ್ಯತೆಯಾಗಲಿ. ನಿಮಗೆ ಹಣ ಬಾರದೇ ಹೋಗಬಹುದು. ಆದರೆ ಜೀವರಾಶಿ ಕಣ್ಮರೆಯಾಗುವ ಪ್ರಕೃತಿಯಲ್ಲಿ ಭಾಗಿಯಾದ ಸಂತೃಪ್ತಿ ನಿಮ್ಮದು. ಇಲ್ಲವಾದರೆ ಪ್ರಕೃತಿಯಿಂದ ಕ್ಷಮೆ ಬೇಡಲೂ ಯಾರೂ ಇರುವುದಿಲ್ಲ.


ಕೃಪೆ. ಆಂಧ್ರಜ್ಯೋತಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)