varthabharthiಅನುಗಾಲ

ಪುಸ್ತಕಂ ಹಸ್ತ ಭೂಷಣಂ!

ವಾರ್ತಾ ಭಾರತಿ : 9 May, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ನನ್ನ ಕೈಗೆ ಸಿಕ್ಕಿದ ಯಾವುದೇ ಪುಸ್ತಕವನ್ನು ಸ್ಥೂಲವಾಗಿಯಾದರೂ ಗಮನಿಸಬೇಕೆನ್ನಿಸುತ್ತದೆ. ಜನಪ್ರಿಯತೆಯ ಆಧಾರದಲ್ಲಿ ಪುಸ್ತಕಗಳನ್ನೋದಲು ಯತ್ನಿಸಿದರೆ ಅನೇಕವು ಜಳ್ಳಾಗಿರುತ್ತವೆೆ. ಅವನ್ನು ಹೇಳಿದರೆ ನಾವು ಖ್ಯಾತನಾಮರ ವೈರಿಗಳಾಗುತ್ತೇವೆ. ಅನೇಕ ಒಳ್ಳೆಯ ಪುಸ್ತಕಗಳು ಜನಪ್ರಿಯವಾಗಿರುವುದೇ ಇಲ್ಲ. ಅವನ್ನು ಓದಿದಾಗ ಇವೇಕೆ ಹೀಗೆ ಉಳಿದುಹೋದವಲ್ಲ ಅನ್ನಿಸುತ್ತದೆ. ಆದರೆ ಇವು ಭವಿಷ್ಯದಲ್ಲಿ ಎಲ್ಲಾದರೂ ಲಭ್ಯವಿದ್ದರೆ ಅಹಲ್ಯೆಯ ಹಾಗೆ ಗೌರವದ ರಾಮಪಾದಸ್ಪರ್ಶವಾದೀತೆಂಬ ನಂಬಿಕೆಯೂ ಹುಟ್ಟುತ್ತದೆ.
ಒಂದು ಪುಸ್ತಕದ ಉಳಿವಿಗೆ ಈ ನಂಬಿಕೆಯೇ ಮುಖ್ಯವಲ್ಲವೇ?


ಪುಸ್ತಕಂ ಹಸ್ತ ಭೂಷಣಂ ಎಂಬ ಜನಪ್ರಿಯ ಮಾತಿದೆೆ. ಇದನ್ನು ಸಂದರ್ಭ ಸಹಿತ ವಿವರಿಸುವಷ್ಟು ಸಂಸ್ಕೃತ ಜ್ಞಾನ ನನಗಿಲ್ಲ. ಓದಿದರೆ ಮಾತ್ರ ಭೂಷಣವೆಂದಿದ್ದರೆ ಈ ಮಾತು ಹೆಚ್ಚು ಪ್ರಚಲಿತವಿರುತ್ತಿರಲಿಲ್ಲ. ಆದ್ದರಿಂದ ಕೈಯಲ್ಲಿ ಪುಸ್ತಕವನ್ನು ಹಿಡಿದರೆ ಪಂಡಿತರೆಂಬ ಉಲ್ಲೇಖಕ್ಕೆ ಪಾತ್ರರಾಗಬಹುದೇನೋ? ಇದಕ್ಕೆ ಬೇರೇನಾದರೂ ಗಂಭೀರ ಗೂಢಾರ್ಥವಿದ್ದರೆ ಮನ್ನಿಸಬೇಕು.

ನಮ್ಮ ದೇವಾನುದೇವತೆಗಳಲ್ಲಿ ಪುಸ್ತಕವನ್ನು ಕೈಯಲ್ಲಿ ಹಿಡಿದವರು ಕಡಿಮೆಯೇ. ಅವರೆಲ್ಲ ಯುದ್ಧಕ್ಕೆ ಹೊರಟವರಂತೆ ಒಂದಾದರೂ ಆಯುಧವನ್ನು ಹಿಡಿದವರೇ. ಆಧುನಿಕ ಕಾಲದಲ್ಲಿ ಬಾಂಬು ಹಿಡಿಸುವುದೂ ಉಂಟು. ಅಪವಾದವೆನ್ನುವಂತೆ ಸರಸ್ವತಿಯ ಕೈಯಲ್ಲಿ, ಕೆಲವೆಡೆ ಗಣಪತಿಯ ಮತ್ತು ದತ್ತಾತ್ರೇಯನ ಕೈಯಲ್ಲಿ ಭಕ್ತರು ಪುಸ್ತಕವನ್ನು ಹಿಡಿಸಿದ್ದಾರೆ. ಹಾಗೆ ನೋಡಿದರೆ ಬಹು ಹಿಂದಿನ ಕಾಲದ ಚಿತ್ರಗಳಲ್ಲಿ ತಾಳೆೆಗರಿಗಳಿದ್ದವು; ಆನಂತರ ಪುಸ್ತಕಗಳು ಬಂದವು. ದೇವರುಗಳೂ ಕಾಲಕ್ಕೆ ಹೊಂದಿಕೊಳ್ಳುತ್ತಾರಾದ್ದರಿಂದ ಅವರ ಕೈಯಲ್ಲಿ ಸಿಡಿ, ಕಂಪ್ಯೂಟರ್ ಮತ್ತಿತರ ವಿದ್ಯುನ್ಮಾನ ಪರಿಕರಗಳನ್ನು ಹಿಡಿಸಿದರೆ ಅಥವಾ ಕಿಂಡ್ಲ್ ಅಪ್ಲಿಕೇಷನ್‌ನ ಸಾಧನವಿದ್ದರೂ ಅಸಹಜವೇನಲ್ಲ; ಅಚ್ಚರಿಯಿಲ್ಲ. ನಮ್ಮ ನಾಯಕರ ಕೈಯಲ್ಲಿಯೂ ಅಭಿಮಾನಿಗಳು ಪುಸ್ತಕವನ್ನು ಹಿಡಿಸಿದರು. ಗಾಂಧಿ, ಅಂಬೇಡ್ಕರ್ ಹೀಗೆ ಹಿರಿಯರೆಲ್ಲರೂ ಪುಸ್ತಕದೊಂದಿಗೆ ನಾಲ್ಕು ರಸ್ತೆ ಸೇರುವಲ್ಲಿ, ಉದ್ಯಾನಗಳಲ್ಲಿ, ಕೊನೆಗೆ ಶಾಸನ ಸಭೆ, ಸಂಸತ್ತಿನಲ್ಲೂ ಮಿನುಗುತ್ತಾರೆ. ಅವರಿಗೂ ಓದಿನಿಂದ ವಿಶ್ರಾಂತಿ ಬೇಕೆಂದು ಈ ಚಿತ್ರ-ಶಿಲ್ಪನಿರ್ಮಾತೃಗಳಿಗೇಕೆ ಅನ್ನಿಸುವುದಿಲ್ಲ? ಈ ಶಾಶ್ವತ ಪಾಂಡಿತ್ಯದ ಕಷ್ಟ ದೇವರಿಗೂ ಮಹಾನುಭಾವರಿಗೂ.

ಕೈಯಲ್ಲಿ ಪುಸ್ತಕವನ್ನು ಹಿಡಿದು ಹೋದರೆ ಸಭೆ ಸಮಾರಂಭಗಳಲ್ಲಿ ಗೌರವ ಸಿಗುವುದಂತೂ ಖಂಡಿತ. ಕೆಲವರು ಸಮಾರಂಭದುದ್ದಕ್ಕೂ ಓದುತ್ತಲೇ ಇರುತ್ತಾರೆ. ಅದನ್ನು ಕಂಡ ತಕ್ಷಣ ನೋಟಕರಿಗೆ ಒಂದು ವಿಧದ ಕುತೂಹಲವುಂಟಾಗುತ್ತದೆ. ಅದಕ್ಕಾಗಿಯೇ ಪುಸ್ತಕವನ್ನು ಹಿಡಿದು ಭಾಗವಹಿಸುವವರೂ ಇದ್ದಾರೆ. ಹೀಗೆ ಪುಸ್ತಕವನ್ನು ಹಿಡಿದವರನ್ನು ಗೌರವದಿಂದ ಮಾತನಾಡಿಸುವವರೂ ಇದ್ದಾರೆ. ಪರಿಚಯವಿದ್ದರಂತೂ ಕೇಳುವುದೇ ಬೇಡ: ಯಾವ ಪುಸ್ತಕ ಅದು? ಎಂಬುದರೊಂದಿಗೆ ಅದನ್ನು ಕಿತ್ತು ತೆಗೆದುಕೊಳ್ಳುವ ಶೈಲಿಯಲ್ಲಿ ಮಾತು ಆರಂಭವಾಗುತ್ತದೆ. ಪರಿಚಯವಿಲ್ಲದಿದ್ದರೂ ಉಭಯಕುಶಲೋಪರಿ ಪರಿಚಯ ಮಾಡಿಕೊಂಡು ಇದು ಯಾವ ಪುಸ್ತಕ? ಎಂದು ಕೇಳಿ ಅವರು ಉತ್ತರಿಸುವ ಮೊದಲೇ ಒಮ್ಮೆ ಕೊಡಿ, ನೋಡಿಕೊಡುತ್ತೇನೆ ಎಂದು ಕೇಳುವವರುಂಟು. ಪುಟ ಮಗುಚಿ ಅಲ್ಲಲ್ಲಿ ಕಣ್ಣು ಹಾಯಿಸುವ ಭಂಗಿಯಲ್ಲಿ ಬಹಳ ಹೊತ್ತು ನೋಡುವುದುಂಟು. ಪುಸ್ತಕದ ಒಡೆಯ ಅಲ್ಲಿಂದ ಹೋಗುವಂತೆಯೇ ಇಲ್ಲ. ನೋಡಿ ಆದ ಮೇಲೆ ಕೊಡಿ ಎಂದು ಕೆಲವರು ಮುನ್ನೆಚ್ಚರಿಕೆಯನ್ನು ಹೇಳುವುದೂ ಉಂಟು. ಹೀಗೆ ಪಡೆದುಕೊಂಡವರ ಕುರಿತು ನೀವು ಜಾಗ್ರತೆ ವಹಿಸದಿದ್ದಲ್ಲಿ ಅವರಿಂದ ಇನ್ಯಾರೋ ಕೇಳಿ ಅಥವಾ ಕಿತ್ತುಕೊಂಡು ಮರೆಯಾಗುವುದುಂಟು. ನೀವು ಅಥವಾ ನಿಮ್ಮ ದೃಷ್ಟಿ ನಿಮ್ಮ ಪುಸ್ತಕವನ್ನು ಹಿಂಬಾಲಿಸುವುದು ಅನಿವಾರ್ಯವಾಗುತ್ತದೆ. ಈ ರಿಲೇ ಓಟ ಅಥವಾ ಸಂಗೀತ ಕುರ್ಚಿ ಆಟದಲ್ಲಿ ಪುಸ್ತಕವು ತನ್ನ ಮೂಲ ನೆಲೆಗೆ ತಲುಪಿದರೆ ಪುಣ್ಯ. ಬಸ್ಸಿನಲ್ಲಿ, (ರೈಲಿನಲ್ಲಿ ಹೇಗೋ ಗೊತ್ತಿಲ್ಲ!) ಮೊದಲ ಸೀಟಿನಿಂದ ಕೊನೆಯ ಸೀಟಿನ ವರೆಗೂ ಪುಸ್ತಕ ಅಡ್ಡಾಡಬಾರದೆಂದಿಲ್ಲ. ಅದು ಪುಸ್ತಕದ ಅದೃಷ್ಟ; ಮತ್ತು ಪುಸ್ತಕದ ಮಾಲಕನ ದುರದೃಷ್ಟ.

ಇನ್ನು ಕೆಲವು ಬಾರಿ ಹೀಗೆ ಓದುವುದಕ್ಕಲ್ಲದಿದ್ದರೂ ನಿಮ್ಮ ಪಕ್ಕದಲ್ಲಿ ಕುಳಿತವರು ನಿಮ್ಮ ಪುಸ್ತಕವನ್ನು ಕೇಳಿ ಪಡೆದು ಅದನ್ನು ತಮ್ಮ ಪರವಾಗಿ ಕರ್ಚೀಫಿನ ಬದಲು ಕುರ್ಚಿಯಲ್ಲಿ ಸ್ಥಾನ ಮೀಸಲಿರಿಸಿ ಹೋಗುವುದುಂಟು. ಯಾರೇ ಬಂದರೂ ನೀವು ಇಲ್ಲ್ಲಿ ಒಬ್ಬರಿದ್ದಾರೆ ಎಂದು ಹೇಳಬೇಕು. ಇಲ್ಲವಾದರೆ ಅವರು ನಿಮ್ಮ ಪುಸ್ತಕವನ್ನು ಮತ್ತೊಂದು ಕುರ್ಚಿಯಲ್ಲಿರಿಸಿ ನಿಮ್ಮಿಂದ ದೂರಮಾಡುತ್ತಾರೆ. ಪುಸ್ತಕಂ... ಪರಹಸ್ತಂ ಗತಃಗತಃ ಎಂದೇನೋ ಮಾತಿದೆಯಲ್ಲ ಅದು ಇಂತಹ ಸಂದರ್ಭಕ್ಕೂ ಅನ್ವಯಿಸುತ್ತದೆ. ಆದರೆ ಸಾಮಾನ್ಯವಾಗಿ ಅದನ್ನು ಹೇಳುವುದು ಎರವಲು ಒಯ್ಯುವವರಿಗೆ. ಅವರು ಮತ್ತೆ ಮರಳಿಸಲು ಮರೆಯುವುದೇ ಹೆಚ್ಚು. ನಾವು ಕೊಟ್ಟ ಪುಸ್ತಕವನ್ನು/ಗಳನ್ನು ಮರಳಿ ಪಡೆಯಲು ಸ್ವಲ್ಪ ಸಮಯ ಕಾಯುತ್ತೇವೆ. ಅವರು ಓದಬೇಕಲ್ಲ! ಆದರೆ ಆನಂತರ ಇಂದು ನಾಳೆ ಎಂದು ವಿಳಂಬವಾಗುವಾಗ ಕಿರಿಕಿರಿಯಾಗುತ್ತದೆ. ಅವರನ್ನು ಕೇಳುವುದು ಹೇಗೆ? ಕೇಳಿದರೆ ಹಣ ಸಾಲ ನೀಡಿದಂತೆ ಹಣವೂ ಇಲ್ಲ; ಸ್ನೇಹವೂ ಇಲ್ಲ. ಯಾವುದು ಹೆಚ್ಚು ಬೆಲೆ ಎಂಬುದರ ತಳಮಳದೊಂದಿಗೆ ಇನ್ನಷ್ಟು ಕಾಲ ಕಳೆಯುತ್ತದೆ. ಇಷ್ಟರಲ್ಲಿ ಪುಸ್ತಕಸಾಲಗಾರನಿಗೆ ತಾನು ಎರವಲು ತಂದದ್ದು ಮರೆತುಹೋದರೆ ನಿಮ್ಮ ಗತಿ ದುರ್ಗತಿ. ನನ್ನ ಕೆಲವು ಪುಸ್ತಕಗಳಿಗೆ ಈ ಗತಿ ಬಂದಿದೆ. ಅಲ್ಲೇನಾದರೂ ಯಾರಾದರೂ ಕೇಳಿದರೆ ಎಂಬ ಭೀತಿ.
ಇವೆಲ್ಲ ಪಾಟಲು ನೋಡಿ ಯಾವುದೇ ಸಭೆ ಸಮಾರಂಭಕ್ಕೂ ನಾನು ಪುಸ್ತಕವನ್ನು ಒಯ್ಯುವುದಿಲ್ಲ.

ಕೆಲವೊಮ್ಮೆ ನಿಮ್ಮ ಪ್ರೀತಿಯ ಪುಸ್ತಕವೊಂದು ನಿಮ್ಮ ಕೈತಪ್ಪಿಇನ್ಯಾರ ಕೈಗೋ ಸೇರಿದರೆ ಅದು ಮರಳುವ ವರೆಗೆ ನಿಮಗೆ ನೆಮ್ಮದಿಯಿಲ್ಲ. ನಾನು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದ ವಚನ ಸಾಹಿತ್ಯದ ಎಲ್ಲ ಹದಿನೈದು ಸಂಪುಟಗಳನ್ನು ಖರೀದಿಸಿದ್ದೆ. ಅದರಲ್ಲಿ ಮಧ್ಯೆ ಒಂದು ಸಂಪುಟವನ್ನು ಒಬ್ಬ ಮಿತ್ರರು ಯಾವುದೋ ಬರಹಕ್ಕೋ ಭಾಷಣಕ್ಕೋ ಬೇಕೆಂದು ಒಯ್ದರು. ಕೊಟ್ಟೆ. ಅನೇಕ ವರ್ಷಗಳಾದವು. ಅವರಲ್ಲಿ ಒಂದೆರಡು ಬಾರಿ ಕೇಳಿದೆ. ಅವರು ಮರೆತಂತೆ ‘‘ಹೌದಾ? ನಾನು ಯಾವಾಗ ತೆಕ್ಕೊಂಡದ್ದು? ಇಲ್ವಲ್ಲ! ಇನ್ಯಾರೋ ಇರಬೇಕು, ನಾನು ಸಾಮಾನ್ಯವಾಗಿ ಯಾವುದೇ ಪುಸ್ತಕವಾದರೂ ಮರಳಿಸುತ್ತೇನೆ; ಇಟ್ಟುಕೊಳ್ಳುವುದಿಲ್ಲ’’ ಎಂದರು. ಇವರ ಅಸಾಮಾನ್ಯ ಮರೆವಿಗೆ ಬಲಿ ಬಿದ್ದವರಲ್ಲಿ ನಾನೊಬ್ಬನಿರಬೇಕು. ನನ್ನ ಗ್ರಹಚಾರಕ್ಕೆ ಆ ಸಂಪುಟದಲ್ಲಿ ನನ್ನ ಹೆಸರೂ ಇದ್ದಂತಿಲ್ಲ. ಆದ್ದರಿಂದ ಅವರೇ ತಪಾಸಣೆ ಮಾಡಿದರೂ ಅದು ನನ್ನದೆಂಬುದಕ್ಕೆ ಆಧಾರವಿಲ್ಲ. ಅವರಲ್ಲಿರುವ ಪುಸ್ತಕಕ್ಕೂ ನನ್ನಲ್ಲಿರುವ ಇತರ ಸಂಪುಟಗಳಿಗೂ ತಾಳೆ ಹಾಕಿದರೆ ಮಾತ್ರ ಈ ರಹಸ್ಯ ಬಯಲಾದೀತು. ಈಗ ಅದು ಸುಮಾರು ಹನ್ನೆರಡು ವರ್ಷಗಳು ಕಳೆದಿರುವುದರಿಂದ ಪ್ರತಿಕೂಲ ಸ್ವಾಧೀನದ ಕಾನೂನಿನ ಆಧಾರದಲ್ಲಿ ಅವರದ್ದೇ ಎಂದು ತೀರ್ಮಾನ ಮಾಡಿದ್ದೇನೆ.

ನನಗೊಂದು ಅಪರೂಪದ ಅನುಭವವಾಯಿತು. ನನ್ನಿಂದ ಒಂದು ಪುಸ್ತಕ ಪಡೆದ ಮಿತ್ರರು ಅದನ್ನು ಮರಳಿಸಲಿಲ್ಲ. ಹಾಗೆ ಮರಳಿಸದಿರುವುದು ಅವರ ಉದ್ದೇಶವಿರಲಿಲ್ಲವೆಂಬುದು ಅವರನ್ನು ಬಲ್ಲ ನನಗೆ ಗೊತ್ತಿತ್ತು. ಆದರೆ ಅವರಲ್ಲಿ ಪುಸ್ತಕವನ್ನು ಮರಳಿಸಲು ನೆನಪಿಸಿ ಅವರ ಮನಸ್ಸಿಗೆ ಬೇಸರವುಂಟುಮಾಡಲು ನಾನು ಸಿದ್ಧನಿರಲಿಲ್ಲ. ಹೀಗೆ ಕೆಲವು ಕಾಲ ಕಳೆಯಿತು. ಒಮ್ಮೆ ಅವರಲ್ಲಿಗೆ ನಾನು ಹೊಗಿದ್ದಾಗ ಅವರ ಗ್ರಂಥಾಲಯವನ್ನು ವೀಕ್ಷಿಸುವ ಭಾಗ್ಯ ಸಿಕ್ಕಿತು. ನಾನೂ ನನ್ನ ಈ ಕಳೆದು ಹೋದ ಪುಸ್ತಕಶಿಶುವನ್ನು ಮರೆತೇಬಿಟ್ಟಿದ್ದೆ. ಅವರ ಬೀರುವಿನಲ್ಲಿ ಅತಿರಥ ಮಹಾರಥ ಪುಸ್ತಕಗಳ ನಡುವೆ ನನ್ನ ಈ ಪುಸ್ತಕವೂ ಇತ್ತು. ನಾನು ಅದನ್ನು ಆಕಸ್ಮಿಕವಾಗಿ ಕೈಗೆತ್ತಿಕೊಂಡು ನೋಡಿದರೆ ಅದು ನನ್ನದೇ! ಅದನ್ನು ಹೊತ್ತು ಹೊರಬಂದು ಅವರಲ್ಲಿ ಈ ಪುಸ್ತಕ ನಾನು ಕೊಂಡುಹೋಗಲೇ ಎಂದೆ. ಅವರು ಪಾಪ, ಮುಖ ಬಿಳಿಚಿಕೊಂಡು ಅದು ನಿಮ್ಮದೇ ಎಂದರು. ನಾವು ಆತ್ಮೀಯರಾದ್ದರಿಂದ ಅದು ಪ್ರಸಂಗಾವಧಾನತೆಯೆಂಬಂತೆ ದಾಟಿಹೋಯಿತು. ನನ್ನ ಪುಸ್ತಕ ಮರಳಿ ಮನೆಗೆ ಬಂತು. ಈಗ ನಾನು ಪುಸ್ತಕಗಳನ್ನು ಯಾರಿಗೂ ನೀಡುವುದಿಲ್ಲ. ಯಾರಿಂದಾದರೂ ತಂದರೆ ನನ್ನ ಆವಶ್ಯಕತೆ ಮುಗಿದಾಕ್ಷಣ ಮರಳಿಸಲು ಪ್ರಯತ್ನಿಸುತ್ತೇನೆ. ಪುಸ್ತಕಗಳನ್ನು ಕೊಂಡು ಓದಬೇಕು, ಕೊಂಡಾಡಬೇಕು ಎಂದೆಲ್ಲ ವಾಗ್ಝರಿ ಹರಿಸುವವರಿದ್ದಾರೆ. ನನಗೂ ಕೊಂಡು ಓದುವುದೆಂದರೆ ಇಷ್ಟ. ಆದರೆ ಎಷ್ಟು ಅಂತ ಖರೀದಿಸಬಹುದು? ಗಿರೀಶ್ ಕಾರ್ನಾಡ್ ಮನೆಯಲ್ಲಿ ಪುಸ್ತಕಗಳನ್ನಿರಿಸಲು ಕಪಾಟಿನಲ್ಲಿ (ಬೀರು ಎಂಬ ಪದವನ್ನು ನಾನು ಸಾಮಾನ್ಯವಾಗಿ ಬಳಸುವುದಿಲ್ಲ; ಏಕೆಂದರೆ ನಮ್ಮ ಕೆಲವು ಸಾಹಿತಿಗಳ ಬೀರುವಿನಲ್ಲಿ ಪುಸ್ತಕಗಳ ಬದಲು ಬೀರು, ವಿಃಸ್ಕಿಗಳೇ ಇರುವುದನ್ನು ಕಂಡಿದ್ದೇನೆ!) ಜಾಗ ಸಾಲದೆ ಮನೆಯ ಮಾಳಿಗೆಯನ್ನೇರುವ ಮೆಟ್ಟಲುಗಳಲ್ಲೂ ಪುಸ್ತಕಗಳನ್ನಿರಿಸಲಾಗಿದೆಯೆಂದು ಕೇಳಿದ್ದೇನೆ. ಪುಸ್ತಕ ಒಂದು ಹುಚ್ಚು.

ಕೊಂಡದ್ದೆಲ್ಲವನ್ನೂ ಓದಬಹುದೆಂಬ ವಿಶ್ವಾಸವಿಲ್ಲ. ಅನೇಕ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕದ ಕುರಿತು ಹೊಗಳಿಕೆಯ ಮಹಾಪೂರವಿರುತ್ತದೆ. ಪುಸ್ತಕ ವಿಮರ್ಶೆ ಒಂದು ರೀತಿಯ ಅಭಿನಂದನಾ ಭಾಷಣದಂತಿರುತ್ತದೆ. ಅದಾದ ಮೇಲೆ ಅಭಿಮಾನದ ಸಂಕೇತವಾಗಿಯೋ ಸಂಕೋಚದಿಂದಲೋ ಅನಿವಾರ್ಯತೆಯಿಂದಲೋ ಒಂದು ಪ್ರತಿ ಖರೀದಿಸುವ ಕ್ರಮವಿದೆ. ಹೀಗೆ ಖರೀದಿಸಿದ ಪುಸ್ತಕಗಳು ಚೆನ್ನಾಗಿರಲೇಬೇಕೆಂದಿಲ್ಲ. ಇನ್ನು ಕೆಲವೊಮ್ಮೆ ಐದಾರು ಇಲ್ಲವೇ ಹತ್ತು ಹನ್ನೆರಡು ಪುಸ್ತಕಗಳು ಒಟ್ಟಿಗೇ ಬಿಡುಗಡೆಯಾದಾಗ ಅವುಗಳಲ್ಲಿ ಒಂದನ್ನಾದರೂ ಖರೀದಿಸದಿದ್ದರೆ ಹಿಟ್ಟಿನ ಹುಂಜದ ಕೂಗು ಕೇಳಿದಂತೆ ಪಾಪಭೀತಿ ಎದುರಾಗುತ್ತದೆ. ಇಂತಹ ಪರಿಸ್ಥಿತಿಗೆ ಒಳಗಾಗಿ ಅಭಯರುಚಿ-ಅಭಯಮತಿಯರಂತೆ ಜನ್ಮಾಂತರ ಗಂಡಾಂತರವೆದುರಿಸಬೇಕಾಗುತ್ತದೆ. ಹಾಗೆಂದು ಪುಸ್ತಕ ಬಿಡುಗಡೆಗೆ ಹೋಗದಿರಲು ಮನಸ್ಸು ಬರುವುದಿಲ್ಲ. ಬೆಂಗಳೂರಿನಿಂದ ದೂರ ವಾಸಿಸುತ್ತಿರುವುದರಿಂದ ಅನುದಿನದ ಪುಸ್ತಕ ಬಿಡುಗಡೆಯ ಜಗನ್ನಾಥ ರಥಯಾತ್ರೆಗೆ ಸಿಕ್ಕಿ ನಾನು ನುಜ್ಜುಗುಜ್ಜಾಗುವುದು ತಪ್ಪಿದೆ. ಅಷ್ಟರ ಮಟ್ಟಿಗೆ ನನ್ನಲ್ಲಿ ಪುಸ್ತಕ ಸಂತೆ ಕಡಿಮೆಯಾಗಿದೆ.

ನನ್ನ ಕೆಲವು ಸಹೃದಯ ಮಿತ್ರ ಲೇಖಕರು ತಮ್ಮ ಪುಸ್ತಕಗಳನ್ನು ಕಳಿಸುತ್ತಾರೆ. ಕೆಲವರಿಗೆ ನನ್ನ ಮರ್ಜಿ ಗೊತ್ತಿದೆ. ತಕ್ಷಣ ಪುಸ್ತಕ ಸಿಕ್ಕಿದ ಬಗ್ಗೆ ತಿಳಿಸುತ್ತೇನೆ. ಆನಂತರ ಓದಿದ ಮೇಲೆ ತಿಳಿಸುತ್ತೇನೆ. ಇದಕ್ಕೆ ಕೆಲವು ವಾರವೋ, ತಿಂಗಳೋ, ವರ್ಷವೋ/ಗಳೋ ಆಗಬಹುದು. ನನ್ನನ್ನು ಗೊತ್ತಿದ್ದವರು ಸುಮ್ಮನಿರುತ್ತಾರೆ. ಇತರರು ನಾನು ಪ್ರಶಂಸಾಪತ್ರ ನೀಡಿಲ್ಲವೆಂದು ಆನಂತರ ತಮ್ಮ ಪುಸ್ತಕಗಳನ್ನು ಕಳಿಸುವುದಿಲ್ಲ. ನಾನು ಓದಿದ್ದೆಲ್ಲವೂ ಚೊಕ್ಕ ಬಂಗಾರವೆಂಬ ಮೈಡಾಸ್ ಪ್ರವೃತ್ತಿ ನನ್ನದಲ್ಲ. ಬಿಟ್ಟಿ ಸಿಕ್ಕಿದರೂ ಓದಲು ಅರ್ಹವಲ್ಲದ ಪುಸ್ತಕಗಳಿಗೆ ಏನು ವಿಧಿಸಬೇಕು? ಮೌನಂ ಪಂಡಿತ ಲಕ್ಷಣಂ! ಸುಳ್ಳು ಹೇಳುವುದಕ್ಕಿಂತ ಸುಮ್ಮನಿರುವುದೇ ವಾಸಿ. ಆದರೆ ಅವರು ಕೊಡುವಾಗ ಬೇಡವೆನ್ನುವುದು ಸೌಜನ್ಯವಲ್ಲ. ಒಂದು ಕಾರ್ಯಕ್ರಮದಲ್ಲಿ ಉತ್ಸಾಹಿ ವೃದ್ಧರೊಬ್ಬರು ತಮ್ಮ ಕೃತಿಯೊಂದನ್ನು ಕನ್ನಡದ ಖ್ಯಾತ ಸಾಹಿತಿಯೊಬ್ಬರಿಗೆ ಕೊಟ್ಟರು. ಅವರು ಅದನ್ನು ಸ್ವೀಕರಿಸಿ ಕಾರ್ಯಕ್ರಮ ಮುಗಿದು ಹೋಗುವಾಗ ಅದನ್ನು ತಾವು ಕುಳಿತ ಕುರ್ಚಿಯಲ್ಲೇ ಬಿಟ್ಟುಹೋದರು. ಆ ವೃದ್ಧರು ಪಾಪ, ಅಳುವುದೊಂದು ಬಾಕಿ. ತಮ್ಮ ಮನೆಯ ವರೆಗಾದರೂ ಆ ಖ್ಯಾತನಾಮರು ಪುಸ್ತಕವನ್ನು ಹೊತ್ತಿದ್ದರೆ ಈ ವೃದ್ಧರ ಜನ್ಮ ಪಾವನವಾಗುತ್ತಿತ್ತು!

ಎಲ್ಲ ಪುಸ್ತಕಗಳನ್ನೂ ಓದಲಾಗುವುದಿಲ್ಲ. ಸಮಯಾಭಾವವೂ ಇರುತ್ತದೆ. ಇಷ್ಟಕ್ಕೂ ಎಲ್ಲವನ್ನೂ ಓದಲು ಯಾರೂ ಶಕ್ತರಲ್ಲ. ನಾವು ಓದಿದ್ದು ಒಳ್ಳೆಯದಿದ್ದರಾಯಿತು. ಉಳಿದ ಪುಸ್ತಕಗಳು ಎಲ್ಲೋ ಯಾರೋ ಓದುತ್ತಾರೆಂದು ಸಮಾಧಾನದಿಂದ ಬದುಕುವುದೇ ಸುಖ.
ಇಷ್ಟಾದರೂ ನನ್ನ ಕೈಗೆ ಸಿಕ್ಕಿದ ಯಾವುದೇ ಪುಸ್ತಕವನ್ನು ಸ್ಥೂಲವಾಗಿಯಾದರೂ ಗಮನಿಸಬೇಕೆನ್ನಿಸುತ್ತದೆ. ಜನಪ್ರಿಯತೆಯ ಆಧಾರದಲ್ಲಿ ಪುಸ್ತಕಗಳನ್ನೋದಲು ಯತ್ನಿಸಿದರೆ ಅನೇಕವು ಜಳ್ಳಾಗಿರುತ್ತವೆೆ. ಅವನ್ನು ಹೇಳಿದರೆ ನಾವು ಖ್ಯಾತನಾಮರ ವೈರಿಗಳಾಗುತ್ತೇವೆ. ಅನೇಕ ಒಳ್ಳೆಯ ಪುಸ್ತಕಗಳು ಜನಪ್ರಿಯವಾಗಿರುವುದೇ ಇಲ್ಲ. ಅವನ್ನು ಓದಿದಾಗ ಇವೇಕೆ ಹೀಗೆ ಉಳಿದುಹೋದವಲ್ಲ ಅನ್ನಿಸುತ್ತದೆ. ಆದರೆ ಇವು ಭವಿಷ್ಯದಲ್ಲಿ ಎಲ್ಲಾದರೂ ಲಭ್ಯವಿದ್ದರೆ ಅಹಲ್ಯೆಯ ಹಾಗೆ ಗೌರವದ ರಾಮಪಾದಸ್ಪರ್ಶವಾದೀತೆಂಬ ನಂಬಿಕೆಯೂ ಹುಟ್ಟುತ್ತದೆ.
ಒಂದು ಪುಸ್ತಕದ ಉಳಿವಿಗೆ ಈ ನಂಬಿಕೆಯೇ ಮುಖ್ಯವಲ್ಲವೇ? ಅಂತಹ ಪುಸ್ತಕವನ್ನು ಕೈಗೆತ್ತಿಕೊಳ್ಳೋಣ. ಅದು ನಿಜಕ್ಕೂ ಹಸ್ತಭೂಷಣ. ಅದು ಪುಸ್ತಕದ ಪುಣ್ಯವಲ್ಲ; ಅದನ್ನೆತ್ತಿಕೊಂಡ ಕೈಯ ಪುಣ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)