varthabharthi

ನಿಮ್ಮ ಅಂಕಣ

ನಿಯಂತ್ರಣವಿಲ್ಲದ ಟ್ಯೂಶನ್ ದಂಧೆ!

ವಾರ್ತಾ ಭಾರತಿ : 9 May, 2019
-ಕೆ. ಎಸ್. ನಾಗರಾಜ್, ಹನುಮಂತನಗರ, ಬೆಂಗಳೂರು

ಮಾನ್ಯರೇ,

ಬೆಂಗಳೂರಿನಲ್ಲಿ 9ನೇ ತರಗತಿ ಪಾಸಾಗುತ್ತಿದ್ದಂತೆ 10ನೇ ತರಗತಿಗೆ ಮಕ್ಕಳನ್ನು ತಾವು ಓದುವ ಶಾಲೆಯಲ್ಲಿನ ಉಪಾಧ್ಯಾಯರು ನಡೆಸುವ ಟ್ಯೂಶನ್ ತರಗತಿಗಳಿಗೆ ಸೇರಿಸಲೇಬೇಕು ಈ ರೀತಿಯ ಒತ್ತಡವನ್ನು ಉಪಾಧ್ಯಾಯರು ಪೋಷಕರ ಮೇಲೆ ಹೇರುತ್ತಾರೆ. ಇನ್ನು ಪಿಯುಸಿ ತರಗತಿಗೆ ಸೇರುತ್ತಿದ್ದಂತೆಯೇ ಮತ್ತೆ ಟ್ಯೂಶನ್ ಹಾವಳಿ ಆರಂಭವಾಗುತ್ತದೆ. ವಿಶೇಷವಾಗಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗಾಗಿ ಟ್ಯುಟೋರಿಯಲ್‌ನವರು ನಡೆಸುವ ವಿಶೇಷ ತರಗತಿಗಳ ಸಂಖ್ಯೆಗೆ ಲೆಕ್ಕವಿಲ್ಲ. ಪ್ರತಿಯೊಂದು ವಿಷಯಕ್ಕೂ ವಿಶೇಷವಾದ ತರಗತಿ ಎಂದು ಹೇಳುತ್ತಾರೆ. ಸಿಇಟಿ, ನೀಟ್, ಗ್ಯಾಟ್, ಐಐಟಿ ಮುಂತಾದ ಪರೀಕ್ಷೆಗಳಿಗೆ ವಿಶೇಷವಾದ ತರಬೇತಿ ನೀಡುವ ಹೆಸರಿನಲ್ಲಿ ಮತ್ತಷ್ಟು ಹಣವನ್ನು ಸುಲಿಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಇವರು ಸಿಇಟಿ ಪ್ರವೇಶ ಪರೀಕ್ಷೆಯ ಹಿನ್ನೆಲೆಯಲ್ಲಿ ವಿಶೇಷವಾದ ಶಿಬಿರಗಳನ್ನು ಹದಿನೈದು ದಿನದ ಲೆಕ್ಕದಲ್ಲಿ ನಡೆಸಿ, ಇದಕ್ಕೆ 25 ಸಾವಿರದಿಂದ 50 ಸಾವಿರ ಪಡೆಯುತ್ತಾರೆ. ಇನ್ನು ಸಿಇಟಿ, ನೀಟ್ ಮುಂತಾದ ಕೋರ್ಸ್‌ಗಳಿಗೆ ಪ್ರಥಮ ಪಿಯುಸಿ ಮತ್ತು ಎರಡನೇ ಪಿಯುಸಿ ಲೆಕ್ಕದಲ್ಲಿ ಲಕ್ಷ ಲಕ್ಷ ಸುಲಿಯುತ್ತಾರೆ. ಆದರೆ ಇವರೆಲ್ಲರೂ ತಮ್ಮ ಸಂಸ್ಥೆಗಳಿಗೆ ಮಕ್ಕಳನ್ನು ದಾಖಲಿಸಿಕೊಳ್ಳುವುದು ಕನಿಷ್ಠ ತೊಂಬತ್ತು ಮೇಲ್ಪಟ್ಟ ಅಂಕಗಳು ಬಂದವರನ್ನು ಮಾತ್ರ. ಕಡಿಮೆ ಅಂಕ ಬಂದವರನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ಇನ್ನು ಇವರು ನಡೆಸುವ ತರಗತಿಗಳ ಕಟ್ಟಡದ ಸ್ಥಿತಿ ದೇವರೇ ಮೆಚ್ಚಬೇಕು. ಗಾಳಿ ಬೆಳಕಿನ ವ್ಯವಸ್ಥೆ ಇರುವುದಿಲ್ಲ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯೂ ಇರುವುದಿಲ್ಲ. ಪಾಠ ಮಾಡುವ ಉಪನ್ಯಾಸಕರು ಮಧ್ಯೆ ಮಧ್ಯೆ ಬದಲಾಗುತ್ತಾರೆ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡುವುದಿಲ್ಲ. ಇವರೆಲ್ಲರೂ ಗೂಗಲ್‌ನಲ್ಲಿ ಬರುವ ಮಾಹಿತಿಗಳನ್ನು ಆಧರಿಸಿ ಕಲಿಯಲು ಉಪದೇಶ ನೀಡುತ್ತಾರೆ. ಒಟ್ಟಾರೆಯಾಗಿ ಯಾವುದೇ ರೀತಿಯ ಸಾಮಾಜಿಕ ಕಳಕಳಿ ಇಲ್ಲದ ಮತ್ತು ಬಡವರು ಹಾಗೂ ಕೆಳವರ್ಗದ ಜನರ ಮಕ್ಕಳಲ್ಲಿ ಯಾವುದೇ ರೀತಿಯ ಮಮತೆಯನ್ನು ತೋರದೆ ಕೇವಲ ಹಣದ ಹಿಂದೆ ಬೀಳುತ್ತಿದ್ದಾರೆ. ಇವರು ನಡೆಸುತ್ತಿರುವ ಟ್ಯೂಶನ್ ದಂಧೆಗೆ ರಾಜ್ಯದಲ್ಲಿ ಯಾವುದೇ ಇಲಾಖೆಯ ನಿಯಂತ್ರಣ ಇಲ್ಲ. ಒಂದು ರೀತಿಯಲ್ಲಿ ಇವರು ಶಿಕ್ಷಣ ಕ್ಷೇತ್ರದಲ್ಲಿನ ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ಸಾಮಾಜಿಕ ನ್ಯಾಯದ ಪದದ ಅರ್ಥವೇ ಗೊತ್ತಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಇನ್ನಾದರೂ ಇವರ ಮೇಲೆ ನಿಯಂತ್ರಣ ಇಡಬೇಕಾಗಿದೆ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)