varthabharthi

ನಿಮ್ಮ ಅಂಕಣ

ಕನ್ನಡ ಕಡ್ಡಾಯವಾಗಲಿ

ವಾರ್ತಾ ಭಾರತಿ : 12 May, 2019
ಶಿವಕುಮಾರ್ ಹಾರಾಡಿ, ಮೈಸೂರು

ಮಾನ್ಯರೇ,

‘ವಾರ್ತಾಭಾರತಿ’ಯ ‘ಸರಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಶುಭಾಶಯ’ ಸಂಪಾದಕೀಯ ತುಂಬಾ ನೋವು ಕೊಟ್ಟಿತು. ನಮ್ಮ ರಾಜ್ಯ ನಿಂತಿರುವುದು ಪ್ರಾದೇಶಿಕ ಭಾಷೆಯ ತಳಹದಿಯಲ್ಲಿ. ಕನ್ನಡ ಭಾಷೆಯ ಆಧಾರದಲ್ಲಿ ಕರ್ನಾಟಕದ ಗಡಿ ನಿರ್ಮಾಣವಾಯಿತು. ಆದುದರಿಂದ ಕನ್ನಡ ಉಳಿದರೆ ಮಾತ್ರ ಕರ್ನಾಟಕ. ಕರ್ನಾಟಕ ಸರಕಾರದ ಅಡಿಯಲ್ಲಿ ಬರುವ ಸರಕಾರಿ ಶಾಲೆಗಳ ಹೊಣೆಗಾರಿಕೆ ಆ ಪ್ರಾದೇಶಿಕ ಭಾಷೆಯನ್ನು ಉಳಿಸುವುದು ಕೂಡ ಹೌದು. ಸರಕಾರ ಶಾಲೆಗಳಲ್ಲಿ ಬೇಕಾದರೆ ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸಲಿ. ಆದರೆ ಮಾಧ್ಯಮ ಮಾತ್ರ ಕನ್ನಡವಾಗಲಿ. ಕನ್ನಡ ಮಾಧ್ಯಮದಲ್ಲಿ ಕಲಿತ ಅದೆಷ್ಟೋ ಮಹನೀಯರು ಇಂಗ್ಲಿಷ್ ಭಾಷೆಯಲ್ಲಿ ಸಾಧನೆಯನ್ನು ಮಾಡಿದ್ದಾರೆ. ಕನ್ನಡ ಅಳಿದ ಮೇಲೆ ಸರಕಾರಿ ಶಾಲೆಗಳು ಇದ್ದೇನು ಪ್ರಯೋಜನ. ನಮ್ಮತನವನ್ನು ಕಳೆದುಕೊಂಡು ಇಂಗ್ಲಿಷ್ ಮಾತನಾಡುವ ಮೂಲಕ ಕನ್ನಡ ನಾಡು ಉಳಿಯುವುದಿಲ್ಲ. ಸರಕಾರ ಖಾಸಗಿ ಶಾಲೆಗಳಿಗೆ ಮೂಗುದಾರ ತೊಡಿಸಲಿ. ಅಲ್ಲಿ ಕನ್ನಡ ಕಡ್ಡಾಯಗೊಳಿಸಲಿ. ಹಾಗೆಯೇ ಕನ್ನಡ ಮಾಧ್ಯಮ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲಿ. ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸಲಿ. ಆದರೆ ಸರಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಬೇಡ. ಇದು ರಾಜ್ಯದ ಅಳಿದುಳಿದ ಕನ್ನಡವನ್ನೂ ನಾಶ ಮಾಡುತ್ತದೆ. ಹಾಗೆಯೇ ಸರಕಾರ ರಾಜ್ಯದ ಎಲ್ಲ ಇಲಾಖೆಗಳಲ್ಲಿ ಕನ್ನಡ ವ್ಯವಹಾರವನ್ನು ಕಡ್ಡಾಯಗೊಳಿಸಲಿ. ಕನ್ನಡ ಮಾಧ್ಯಮಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರಕಾರಿ ಇಲಾಖೆಗಳಲ್ಲಿ ಮೀಸಲಾತಿ ಸಿಗಲಿ. ಖಾಸಗಿ ವಲಯಕ್ಕೂ ಇದು ವಿಸ್ತರಿಸಲಿ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)