varthabharthi

ಕ್ರೀಡೆ

ಹಾಲಿ ಚಾಂಪಿಯನ್ ಚೆನ್ನೈಗೆ 1 ರನ್ ಅಂತರದಲ್ಲಿ ಸೋಲು

ಐಪಿಎಲ್ 2019: ಮುಂಬೈ ಚಾಂಪಿಯನ್

ವಾರ್ತಾ ಭಾರತಿ : 12 May, 2019

 ಚೆನ್ನೈ,ಮೇ: 12: ಐಪಿಎಲ್ ಟ್ವೆಂಟಿ-20 ಟೂರ್ನಿಯ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 1 ರನ್ ಅಂತರದಲ್ಲಿ ರೋಚಕ ಜಯ ದಾಖಲಿಸಿ ನಾಲ್ಕನೇ ಬಾರಿ ಚಾಂಪಿಯನ್ ಆಗಿ ದಾಖಲೆ ನಿರ್ಮಿಸಿದೆ. ರವಿವಾರ ಗೆಲುವಿಗೆ 150 ರನ್‌ಗಳ ಸವಾಲನ್ನು ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 148 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಮುಂಬೈ ಈ ಟೂರ್ನಿಯಲ್ಲಿ 4ನೇ ಬಾರಿ ಚೆನ್ನೈಗೆ ಸೋಲುಣಿಸಿತು. ಶೇನ್ ವಾಟ್ಸನ್ ಕೊನೆಯ ಓವರ್‌ನಲ್ಲಿ ರನೌಟ್ ಮತ್ತು ಶಾರ್ದುಲ್ ಠಾಕೂರ್ ಮಾಲಿಂಗರ ಕೊನೆಯ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬೀಳುವ ಮೂಲಕ ಚೆನ್ನೈ ಕೈಯಲ್ಲಿದ್ದ ಪಂದ್ಯ ಮುಂಬೈ ಮಡಿಲಿಗೆ ಜಾರಿತು.

ಶೇನ್ ವಾಟ್ಸನ್ 59 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 80 ರನ್ ಗಳಿಸಿ ಹೋರಾಟ ನಡೆಸಿದರೂ, ಅವರ ಹೋರಾಟ ಫಲ ನೀಡಲಿಲ್ಲ.

 19.4ನೇ ಓವರ್‌ನಲ್ಲಿ ಶೇನ್ ವಾಟ್ಸನ್ ರವೀಂದ್ರ ಜಡೇಜ ಜತೆ 1 ರನ್ ಗಳಿಸಿ ಇನ್ನೊಂದು ರನ್ ಗಳಿಸುವ ಯತ್ನದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ರನೌಟಾದರು. ಇದರೊಂದಿಗೆ ಚೆನ್ನೈ ತಂಡ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮುವ ಪ್ರಯತ್ನಕ್ಕೆ ಹಿನ್ನಡೆ ಉಂಟಾಯಿತು. 16ನೇ ಓವರ್‌ನಲ್ಲಿ ಮಾಲಿಂಗ 20 ರನ್ ಬಿಟ್ಟುಕೊಟ್ಟಿದ್ದರು. ಅದರಲ್ಲಿ 13ರನ್‌ಗಳನ್ನು ವಾಟ್ಸನ್ ಮತ್ತು 7 ರನ್‌ಗಳನ್ನು ಡ್ವೇಯ್ನಿ ಬ್ರಾವೊ ಬಾಚಿಕೊಂಡಿದ್ದರು. ಹೀಗಿದ್ದರೂ ಕೊನೆಯ ಓವರ್‌ನ್ನು ಮಾಲಿಂಗರಿಗೆ ನೀಡಿದ ರೋಹಿತ್ ಶರ್ಮಾ ಮುಂಬೈಗೆ ಚಾಂಪಿಯನ್ ಪಟ್ಟವನ್ನು ದೊರಕಿಸಿಕೊಟ್ಟರು.

ನಾಯಕ ಮಹೇಂದ್ರ ಸಿಂಗ್ 2 ರನ್(8ಎಸೆತ) ಗಳಿಸಿ ರನೌಟಾಗಿರುವುದು. ಸುರೇಶ್ ರೈನಾ 8ರನ್(14ಎ), ಡ್ವೇಯ್ನ ಬ್ರಾವೊ 15ರನ್, ಎಫ್‌ಡು ಪ್ಲೆಸಿಸ್ 26ರನ್ ಗಳಿಸಿದರು.

 ಜಸ್‌ಪ್ರೀತ್ ಬುಮ್ರಾ (14ಕ್ಕೆ 2) , ರಾಹುಲ್ ಚಹಾರ್(14ಕ್ಕೆ 1), ಕೃನಾಲ್ ಪಾಂಡ್ಯ (39ಕ್ಕೆ 1) ,ಮಾಲಿಂಗ (49ಕ್ಕೆ 1) ಚೆನ್ನೈ ತಂಡವನ್ನು ಕಟ್ಟಿ ಹಾಕಿದರು.

     ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 149 ರನ್ ಗಳಿಸಿತ್ತು. ಚೆನ್ನೈಗೆ ಕಠಿಣ ಸವಾಲು ವಿಧಿಸುವ ಪ್ರಯತ್ನಕ್ಕೆ ಮುಂಬೈಗೆ ಆರಂಭದಲ್ಲೇ ಹಿನ್ನಡೆ ಉಂಟಾಯಿತು. ನಾಯಕ ರೋಹಿತ್ ಶರ್ಮಾ ಅವರ ಲೆಕ್ಕಾಚಾರ ತಲೆಕೆಳಗಾಯಿತು. ಆದರೆ ಕೀರನ್ ಪೊಲಾರ್ಡ್ 25 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 41 ರನ್ ಸೇರಿಸಿ ತಂಡಕ್ಕೆ ಸ್ಪರ್ಧಾತ್ಮಕ ಸವಾಲು ಸೇರಿಸಲು ನೆರವಾದರು.

 ನಾಯಕ ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡಿ ಕಾಕ್ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್‌ಗೆ 4.5 ಓವರ್‌ಗಳಲ್ಲಿ 45 ರನ್ ಸೇರಿಸಿದರು.ಇವರ ಬ್ಯಾಟಿಂಗ್ ನೋಡಿದರೆ ಮುಂಬೈ ತಂಡದ ಬ್ಯಾಟಿಂಗ್ ಭರ್ಜರಿಯಾಗುವ ಸಾಧ್ಯತೆ ಕಂಡು ಬಂದಿತ್ತು. ಆದರೆ ತಂಡದ ಸಹ ಆಟಗಾರರು ಸ್ಫೋಟಕ ಬ್ಯಾಟಿಂಗ್ ನಡೆಸಲು ವಿಫಲರಾದರು. ಡಿ ಕಾಕ್ 17 ಎಸೆತಗಳಲ್ಲಿ 4 ಸಿಕ್ಸರ್ ಒಳಗೊಂಡ 29 ರನ್ ಸೇರಿಸಿದರು. ರೋಹಿತ್ ಶರ್ಮಾ 14 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 1 ಬೌಂಡರಿ ಒಳಗೊಂಡ 15 ರನ್ ಜಮೆ ಮಾಡಿದರು. ಸೂರ್ಯಕುಮಾರ್ ಯಾದವ್ 15 ರನ್, ಇಶಾನ್ ಕಿಶನ್ 23 ರನ್ ಕೊಡುಗೆ ನೀಡಿದರು. ಕೃನಾಲ್ ಪಾಂಡ್ಯ 7 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 16 ರನ್ ಗಳಿಸಿದರು. ರಾಹುಲ್ ಚಹಾರ್ ಮತ್ತು ಮಿಚೆಲ್ ಮೆಕ್ಲೀಗನ್ ಖಾತೆ ತೆರೆಯಲಿಲ್ಲ.

ಚೆನ್ನೈ ತಂಡದ ದೀಪಕ್ ಚಹಾರ್ 26ಕ್ಕೆ 3 ವಿಕೆಟ್, ಶಾರ್ದೂಲ್ ಠಾಕೂರ್ ಮತ್ತು ಇಮ್ರಾನ್ ತಾಹಿರ್ ತಲಾ 2 ವಿಕೆಟ್ ಪಡೆದರು.

ಧೋನಿ ಅತ್ಯಂತ ಯಶಸ್ವಿ ವಿಕೆಟ್‌ಕೀಪರ್

ತನ್ನ ಯಶಸ್ವ್ವಿ ವೃತ್ತಿಜೀವನದ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡ ಚೆನ್ನೈ ನಾಯಕ ಎಂ.ಎಸ್. ಧೋನಿ ಐಪಿಎಲ್ ಟೂರ್ನಿಯಲ್ಲಿ ಓರ್ವ ಯಶಸ್ವಿ ವಿಕೆಟ್‌ಕೀಪರ್ ಆಗಿ ಹೊರಹೊಮ್ಮಿದ್ದಾರೆ. ಧೋನಿಗೆ ಕೆಕೆಆರ್ ನಾಯಕ ಹಾಗೂ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಹೆಸರಲ್ಲಿರುವ ವಿಕೆಟ್‌ಕೀಪಿಂಗ್ ದಾಖಲೆ(182 ಪಂದ್ಯ, 131 ಬಲಿ, 101 ಕ್ಯಾಚ್, 30 ಸ್ಟಂಪಿಂಗ್)ಮುರಿಯಲು ಇನ್ನೆರಡು ದಾಂಡಿಗರನ್ನು ಔಟ್ ಮಾಡಬೇಕಾಗಿತ್ತು. ರವಿವಾರ ತಾನಾಡಿದ 191ನೇ ಐಪಿಎಲ್ ಪಂದ್ಯದಲ್ಲಿ ಮುಂಬೈ ಆರಂಭಿಕ ಕ್ವಿಂಟನ್ ಡಿಕಾಕ್(29)ಹಾಗೂ ನಾಯಕ ರೋಹಿತ್ ಶರ್ಮಾ(15) ಕ್ರಮವಾಗಿ ಠಾಕೂರ್ ಹಾಗೂ ಚಹಾರ್ ಬೌಲಿಂಗ್‌ನಲ್ಲಿ ವಿಕೆಟ್ ಹಿಂಬದಿ ನೀಡಿದ ಕ್ಯಾಚ್ ಪಡೆದ ಧೋನಿ ಐಪಿಎಲ್‌ನಲ್ಲಿ 132ನೇ ಬಲಿ(94 ಕ್ಯಾಚ್, 38 ಸ್ಟಂಪಿಂಗ್ಸ್) ಪಡೆದ ಮೊತ್ತ ಮೊದಲ ವಿಕೆಟ್‌ಕೀಪರ್ ಎನಿಸಿಕೊಂಡರು. ಈ ಮೂಲಕ ದಿನೇಶ್ ಕಾರ್ತಿಕ್‌ರ ದಾಖಲೆಯನ್ನು ಮುರಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)