varthabharthi


ವಿಶೇಷ-ವರದಿಗಳು

ಬ್ಯಾರೀಸ್ ವಿಶ್ವವಿದ್ಯಾನಿಲಯ ನಮ್ಮ ಮುಂದಿನ ಗುರಿ: ಸಯ್ಯದ್ ಮುಹಮ್ಮದ್ ಬ್ಯಾರಿ

ವಾರ್ತಾ ಭಾರತಿ : 13 May, 2019
ಸಂದರ್ಶನ : ಪುಷ್ಪರಾಜ್ ಬಿ.ಎನ್.

ಬ್ಯಾರೀಸ್ ಶಿಕ್ಷಣ ಸಂಸ್ಥೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಶತಮಾನದ ಛಾಪು ಮೂಡಿಸಿವೆ. ಕುಂದಾಪುರದ ಕಡಲ ಕಿನಾರೆಯಲ್ಲಿರುವ ಕೋಡಿ ಎಂಬ ಕುಗ್ರಾಮದ ಗುಡಿಸಲೊಂದರಲ್ಲಿ ಪ್ರಾರಂಭವಾದ ಬ್ಯಾರೀಸ್ ಶಿಕ್ಷಣಗಾಥೆ ಇಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸುಮಾರು ಎರಡು ಡಝನ್ ಶಿಕ್ಷಣ ಸಂಸ್ಥೆಗಳ ಮೂಲಕ ಪ್ರತಿವರ್ಷ ಸಾವಿರಾರು ಯುವಜನರ ಬದುಕು ರೂಪಿಸುತ್ತಿದೆ. ಉದ್ಯಮ ರಂಗದಲ್ಲೂ ಭಾರೀ ಹೆಸರು ಮಾಡಿರುವ ಬ್ಯಾರೀಸ್ ಗ್ರೂಪ್ ಶಿಕ್ಷಣದಲ್ಲಿ ವ್ಯಾಪಾರವಿಲ್ಲ ಎಂಬುದನ್ನು ಬಲವಾಗಿ ಪ್ರತಿಪಾದಿಸುತ್ತದೆ ಮತ್ತು ಅದೇ ನೀತಿಯನ್ನು ತನ್ನ ಸಂಸ್ಥೆಗಳಲ್ಲಿ ರಾಜಿಯಿಲ್ಲದೆ ಪಾಲಿಸುತ್ತಾ ಬಂದಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬ್ಯಾರೀಸ್ ಗ್ರೂಪ್‌ನದ್ದು ಬಹು ದೊಡ್ಡ ಹೆಸರು. ಬೆಂಗಳೂರು, ಮಂಗಳೂರುಗಳಲ್ಲಿ ಬ್ಯಾರೀಸ್ ನಿರ್ಮಿಸಿರುವ ಹಲವು ವಸತಿ, ವಾಣಿಜ್ಯ ಕಟ್ಟಡಗಳು ಅವುಗಳ ಆಕರ್ಷಕ ವಿನ್ಯಾಸ, ಉತ್ಕೃಷ್ಟ ಗುಣಮಟ್ಟ ಹಾಗೂ ಪರಿಸರ ಸ್ನೇಹಿ ನಿರ್ಮಾಣ ಶೈಲಿಯಿಂದಾಗಿ ಮನೆಮಾತಾಗಿವೆ. ಬೆಂಗಳೂರಿನ ಲೇಕ್ ಸೈಡ್ ಹ್ಯಾಬಿಟಾಟ್, ಮಂಗಳೂರಿನ ಹಿಸ್ ಗ್ರೇಸ್ ನಂತಹ ವಸತಿ ಸಮುಚ್ಚಯಗಳು ಆ ನಗರದ ಪ್ರಮುಖ ಹೆಗ್ಗುರುತುಗಳಾಗಿವೆ. ಪರಿಸರಕ್ಕೆ ಪೂರಕವಾಗಿ ನಿರ್ಮಾಣ ಮಾಡುವಲ್ಲಿ ಮುಂಚೂಣಿಯಲ್ಲಿರುವ ಬ್ಯಾರೀಸ್ ಗ್ರೂಪ್ ಹಲವು ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಪ್ರಶಸ್ತಿ, ಗೌರವಗಳಿಗೆ ಪಾತ್ರವಾಗಿದೆ. ಶಿಕ್ಷಣದ ಮೂಲಕ ಜಾಗತಿಕ ನಾಯಕರನ್ನು ರೂಪಿಸಬೇಕು ಎಂಬ ಉದಾತ್ತ ಗುರಿ ಮತ್ತು ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡಿದರೆ ಅದು ನಮ್ಮ ಮೋಕ್ಷಕ್ಕೆ ದಾರಿಯಾಗುತ್ತದೆ ಎಂಬ ಅಚಲ ನಂಬಿಕೆ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಅವರದ್ದು. ಅದಕ್ಕೆ ತಕ್ಕಂತೆ ಅವರ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಶಾಲೆಗಳು, ಪದವಿ ಪೂರ್ವ, ಪದವಿ, ಶಿಕ್ಷಕ ತರಬೇತಿ ಕಾಲೇಜುಗಳು ಭವಿಷ್ಯದ ನಾಯಕರನ್ನು ಬೆಳೆಸುವ ಗುರಿಯೊಂದಿಗೆ ಯಶಸ್ವಿಯಾಗಿ ಮುಂದುವರಿಯುತ್ತಿವೆ. ಬ್ಯಾರೀಸ್ ಸಮೂಹದ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT) ಹಾಗೂ ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್(BEADS)ಗಳು ಈಗ ತಾಂತ್ರಿಕ ಶಿಕ್ಷಣದಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳ ಆದ್ಯತೆಯ ಕಾಲೇಜುಗಳಾಗಿ ಖ್ಯಾತಿ ಪಡೆದಿವೆ.


ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ವೈಶಿಷ್ಟ ಹಾಗೂ ಸಾಧನೆಗಳ ಕುರಿತು ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.


> ಬ್ಯಾರೀಸ್ ಶಿಕ್ಷಣ ಸಂಸ್ಥೆಗಳಿಗೆ ಶತಮಾನದ ಇತಿಹಾಸವಿದೆ. ಉದ್ಯಮ ರಂಗದಲ್ಲೂ ಖ್ಯಾತಿ ಪಡೆದಿರುವ ಬ್ಯಾರೀಸ್ ಗ್ರೂಪ್ ಶಿಕ್ಷಣ ಕ್ಷೇತ್ರದ ಬಗ್ಗೆ ಇಷ್ಟು ಆಸಕ್ತಿ ವಹಿಸಲು, ಶ್ರಮ ವಹಿಸಲು ವಿಶೇಷ ಕಾರಣವೇನಾದರೂ ಇದೆಯೇ?

112 ವರ್ಷಗಳು. ಅಂದರೆ ಸುಮಾರು ಐದು ತಲೆಮಾರಿನಷ್ಟು ದೀರ್ಘ ಇತಿಹಾಸ ನಮ್ಮ ಸಂಸ್ಥೆಗಳಿಗೆ ಇದೆ. ನಮ್ಮ ಮುತ್ತಜ್ಜ ಕುಂದಾಪು ರದ ಕೋಡಿ ಎಂಬಲ್ಲಿ ಹುಲ್ಲಿನ ಗುಡಿಸಲಿನಲ್ಲಿ ಒಂದು ಶಾಲೆಯನ್ನು ಆರಂಭಿಸಿದರು. ನನ್ನ ಅಜ್ಜನ ಕಾಲದಲ್ಲಿ ಈ ಶಾಲೆ ಹುಲ್ಲಿನಿಂದ ಹಂಚಿನ ಛಾವಣಿಯ ಕಟ್ಟಡದ ಶಾಲೆಯಾಗಿ ಪರಿವರ್ತನೆಯಾಯಿತು. ಆ ಸಂದರ್ಭದಲ್ಲಿ ನಮ್ಮ ತಂದೆಯವರು ನಮ್ಮ ಇಡೀ ಕುಟುಂಬದಲ್ಲಿ ಹೆಚ್ಚು ಓದಿದವರಾಗಿದ್ದರು. ಅವರು ಈ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಾನು ಈ ಶಾಲೆಯಲ್ಲಿ ನನ್ನ ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದೇನೆ. ಈ ರೀತಿ ಶಿಕ್ಷಣ ಸಂಸ್ಥೆಗಳ ಜೊತೆ ನಮ್ಮ ಇಡೀ ಕುಟುಂಬ ಬೆಸೆದುಕೊಂಡಿದೆ. ಇಂದಿನ ಶಿಕ್ಷಣ ಕ್ಷೇತ್ರದ ಪೈಪೋಟಿಯ ಯುಗದಲ್ಲಿ ಸಾಕಷ್ಟು ಉದ್ಯಮಿಗಳು ತಾವು ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ ಬಳಿಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುತ್ತಾರೆ. ಆದರೆ ನಾವು ಶಿಕ್ಷಣ ಸಂಸ್ಥೆಗಳನ್ನು ಮೊದಲು ಆರಂಭಿಸಿದ್ದೇವೆ. ಬಳಿಕ ಉದ್ಯಮ ಕ್ಷೇತ್ರದಲ್ಲಿಯೂ ನಮ್ಮನ್ನು ತೊಡಗಿಸಿಕೊಂಡಿದ್ದೇವೆ. ಈ ರೀತಿ ಶಿಕ್ಷಣದ ಪರಂಪರೆ ನಮ್ಮ ಮುತ್ತಜ್ಜನ ಕಾಲದಿಂದ ನಮ್ಮಲ್ಲಿ ಬೆಳೆದು ಬಂದಿದೆ. ಮುಂದೆಯೂ ನಾವು ಇದ್ದರೂ ಇಲ್ಲದಿದ್ದರೂ ಪ್ರಪಂಚದ ಅಂತ್ಯದವರೆಗೂ ಈ ಪರಂಪರೆ ಮುಂದುವರಿಯಬೇಕು ಎನ್ನುವುದು ನಮ್ಮ ಕುಟುಂಬದ ಬಯಕೆ ಮತ್ತು ಪ್ರಾರ್ಥನೆ.


> ಈಗ ಶಿಕ್ಷಣ ರಂಗದಲ್ಲೂ ತೀವ್ರ ಪೈಪೋಟಿಯ ವಾತಾವರಣವಿದೆ. ಈ ಹಿನ್ನೆಲೆಯಲ್ಲಿ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳು ಇತರ ಶಿಕ್ಷಣ ಸಂಸ್ಥೆಗಳಿಗಿಂತ ಹೇಗೆ ಭಿನ್ನವಾಗಿದೆ?

ನಾವು ಆರಂಭದಿಂದಲೇ ಶಿಕ್ಷಣವನ್ನು ವಾಣಿಜ್ಯ ದೃಷ್ಟಿಕೋನದಿಂದ ನೋಡಿದವರಲ್ಲ. ಶಿಕ್ಷಣ ಉದ್ಯಮವಲ್ಲ ಎಂದು ಸ್ಪಷ್ಟವಾಗಿ ಘೋಷಿಸಿದವರು. ಈ ಎರಡು ಕ್ಷೇತ್ರಗಳು ಸಂಪೂರ್ಣ ಭಿನ್ನವಾದುದು. ವಿದ್ಯೆ ಸಮಾಜಕ್ಕೆ ಕೊಡುವಂತಹುದು, ಉದ್ಯಮ ಎಂದರೆ ತೆಗೆದುಕೊಳ್ಳುವಂತಹುದು. ಹುಟ್ಟಿದ ಮನುಷ್ಯನನ್ನು ಮಾನವನನ್ನಾಗಿ ಮಾಡುವುದು ವಿದ್ಯೆ. ಆದರೆ ಅಂತಹ ವಿದ್ಯೆಯನ್ನು ವಾಣಿಜ್ಯೀಕರಣಗೊಳಿಸಿ ಅದಕ್ಕೆ ಕೆಲವು ಸಾವಿರ ಬೆಲೆ ಕಟ್ಟಲು ನಾವಿರುವ ಸಮಾಜ ಪ್ರಾರಂಭಿಸಿದೆ. ಪರಿಣಾಮವಾಗಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು - ಎಲ್ಲರೂ ಈ ನೆಲೆಯಲ್ಲಿ ಯೋಚಿಸುತ್ತಿದ್ದಾರೆ. ಇದು ಇಂದಿನ ದುರಂತ. ವಿದ್ಯೆಯ ಮೌಲ್ಯಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ವಿದ್ಯಾ ಸಂಸ್ಥೆಯಲ್ಲಿ ಯಾವುದೇ ಡೊನೇಶನ್ ಆಗಲಿ ಕ್ಯಾಪಿಟೇಶನ್ ಶುಲ್ಕದ ಬಗ್ಗೆ ನಾವು ಯೋಚಿಸದೆ ಇಲ್ಲಿಯವರೆಗೆ ನಮ್ಮ ಶಿಕ್ಷಣ ಸಂಸ್ಥೆಗಳನ್ನು ನಡೆಸಿಕೊಂಡು ಬಂದಿದ್ದೇವೆ. ಮೊದಲು ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳನ್ನು, ಈಗ ಇಂಜಿನಿಯರಿಂಗ್ ಕಾಲೇಜನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ದೇವರ ಮೇಲಿರುವ ಅಚಲವಾದ ನಂಬಿಕೆಯಿಂದಾಗಿ ಸಮಾಜಮುಖಿಯಾಗಿ ಆರ್ಥಿಕ ಲಾಭದತ್ತ ನೋಡದೆ ನಮ್ಮ ಶಿಕ್ಷಣ ಸಂಸ್ಥೆಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. 


> ನೀವು ಶಿಕ್ಷಣ ಕ್ಷೇತ್ರದಲ್ಲಿರುವುದು ಲಾಭಕ್ಕಾಗಿ ಅಲ್ಲ ಎಂದು ಹೇಳುತ್ತೀರಿ.ಆದರೆ ಈಗ ಎಲ್ಲೆಡೆ ಶಿಕ್ಷಣ ಸಂಸ್ಥೆಗಳನ್ನು ಪಕ್ಕಾ ಉದ್ಯಮಗಳಂತೆ ನಡೆಸಲಾಗುತ್ತದೆ. ಹೀಗಿರುವಾಗ ಬ್ಯಾರೀಸ್ ಗ್ರೂಪ್ ಲಾಭಗಳಿಸದೆ ಹೇಗೆ ಬೆಳೆಯುತ್ತಿದೆ? ಹೇಗೆ ಹೊಸ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬೆಳೆಸುತ್ತಿದೆ?

ದೇವರ ದಯೆಯಿಂದ ನಮ್ಮೆಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ಇತರ ಉದ್ಯಮ ಸಂಸ್ಥೆಗಳು ನಡೆಯುತ್ತಾ ಬಂದಿದೆ ಎನ್ನುವುದು ನನ್ನ ನಂಬಿಕೆ. ನಾನು ಹೀಗೆ ಹೇಳುತ್ತಿರುವುದನ್ನು ನೋಡಿ ಕೆಲವರು ನಗುತ್ತಾರೆ. ಆದರೆ ದೇವರ ಮೇಲೆ ಅಚಲವಾದ ನಂಬಿಕೆ ಇಟ್ಟರೆ ನಾವು ಯಾವುದೇ ಕ್ಷೇತ್ರದಲ್ಲಿ ಮುಂದುವರಿಯಲು ಸಾಧ್ಯ. ನಮ್ಮ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ನೂರಾರು ಕೋಟಿ ರೂ.ಗಳ ಅಗತ್ಯವಿದೆ. ಕೆಲವೊಮ್ಮೆ ನಮ್ಮ ಬಳಿ ಒಂದು ಕೋಟಿ ರೂ.ನೂ ಇರುವುದಿಲ್ಲ. ಆದರೂ ದೇವರ ದಯೆಯಿಂದ ಕೈಗೆತ್ತಿಕೊಂಡ ಯೋಜನೆಗಳನ್ನು ನಮಗೆ ಪೂರ್ಣಗೊಳಿಸಲು ಸಾಧ್ಯವಾಗಿದೆ. ಅದೇ ನಂಬಿಕೆಯಿಂದ ನಮ್ಮ ಶಿಕ್ಷಣ ಸಂಸ್ಥೆಗಳೂ ನಡೆಯುತ್ತಿವೆ.


> ಕಳೆದೆರಡು ದಶಕಗಳಲ್ಲಿ ಎಲ್ಲರಿಗೂ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಲು ಆಸಕ್ತಿ ಹೆಚ್ಚು. ಹಲವು ಪ್ರಾಥಮಿಕ, ಪ್ರೌಢ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದ ಬ್ಯಾರೀಸ್ ಸಂಸ್ಥೆಯೂ ಇಂಜಿನಿಯರಿಂಗ್ ಕಾಲೇಜಿನ ಮೂಲಕ ಉನ್ನತ ಶಿಕ್ಷಣ ರಂಗಕ್ಕೆ ಬಂತು. ಇದಕ್ಕೆ ಕಾರಣವೇನು?

ನಾವು ಇಂಜಿನಿಯರಿಂಗ್ ಕಾಲೇಜು ಮಾಡಬೇಕು ಎಂದು ಹೊರಟಿದ್ದಲ್ಲ. ಮಂಗಳೂರಿನಲ್ಲಿ ನಮ್ಮ ಬ್ಯಾರೀಸ್ ಪಬ್ಲಿಕ್ ಸ್ಕೂಲ್ ಇದೆ. ಅದಕ್ಕಾಗಿ ವಿಶಾಲವಾದ ಸ್ಥಳದ ಅಗತ್ಯವಿತ್ತು. ಹಾಗೆ ಹುಡುಕಿಕೊಂಡು ಹೋದಾಗ ನಗರಕ್ಕಿಂತ ಸುಮಾರು 20 ಕಿ.ಮೀ. ದೂರದ ಇನೋಳಿಯಲ್ಲಿ ಸುಂದರವಾದ ಸ್ಥಳ ಸಿಕ್ಕಿತು. ಸೃಷ್ಟಿಯ ಸುಂದರ ಸಂರಚನೆಯಂತೆ ಇದ್ದ ಎತ್ತರವಾದ ಆ ಪ್ರದೇಶವನ್ನು ಕಂಡಾಗ ಖುಷಿಯಾಯಿತು. ಆ ಸಂದರ್ಭದಲ್ಲಿ ನಮಗೆ ಮಾರ್ಗದರ್ಶಕರಾಗಿದ್ದ ಹಿರಿಯ ರಾಜಕಾರಣಿ ಮಾಜಿ ಉನ್ನತ ಶಿಕ್ಷಣ ಸಚಿವ ದಿವಂಗತ ಬಿ.ಎ.ಮೊಹಿದೀನ್ ಸಾಹೇಬರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದೆ. ಅವರು ಆ ಸ್ಥಳವನ್ನು ನೋಡಿ ಇದು ಶಾಲೆಗೆ ಸೂಕ್ತವಲ್ಲ. ನೀನೇಕೆ ಇಲ್ಲಿ ಇಂಜಿನಿಯರಿಂಗ್ ಕಾಲೇಜು ಮಾಡಬಾರದು ಎಂದರು. ಹಾಗೆ ಅವರ ಮಾರ್ಗದರ್ಶನದಂತೆ ನಮ್ಮ ಇಂಜಿನಿಯರಿಂಗ್ ಕಾಲೇಜು ಆರಂಭವಾಯಿತು. ಈಗ ಯಶಸ್ವಿಯಾಗಿ ಒಂದು ವಿಶಿಷ್ಟ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ. ನಮ್ಮ ಎಲ್ಲಾ ಸಂಸ್ಥೆಗಳ ಬೆಳವಣಿಗೆಗೆ ಅವರ ಸಲಹೆ, ಸಹಕಾರ, ಕೊಡುಗೆಯನ್ನು ನಾವು ಮರೆಯಲು ಸಾಧ್ಯವಿಲ್ಲ. ಅಂತಹ ವ್ಯಕ್ತಿಗಳನ್ನು ನಾನು ಹಿಂದೆಯೂ ನೋಡಿಲ್ಲ. ಇನ್ನು ಮುಂದೆಯೂ ನೋಡಲು ಸಾಧ್ಯವಿಲ್ಲ ಎನ್ನುವುದು ನನ್ನ ಅಭಿಪ್ರಾಯ.


> ಉತ್ತಮ ಉದ್ಯೋಗಗಳಿಸುವಂತಹ, ಸ್ವ ಉದ್ಯೋಗ ಮಾಡಿಕೊಳ್ಳುವಂತಹ ಸಮರ್ಥ ಇಂಜಿನಿಯರ್‌ಗಳನ್ನು ರೂಪಿಸಲು ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT) ಯಾವ ರೀತಿಯಲ್ಲಿ ಅವರನ್ನು ತರಬೇತುಗೊಳಿಸುತ್ತದೆ?

ಅತ್ಯುತ್ತಮ ಶಿಕ್ಷಣ, ಆಯ್ದ ಕ್ಷೇತ್ರದಲ್ಲಿ ಆಳವಾದ ಜ್ಞಾನ ಹಾಗೂ ಸಮಗ್ರ ತರಬೇತಿ - ಇವೆರಡೂ ವಿದ್ಯಾರ್ಥಿಗಳಿಗೆ ಸಿಗಬೇಕು ಎಂಬುದು ನಮ್ಮ ಆಶಯ. ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳಿಸುವ ಜೊತೆಗೆ ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳು ಸಜ್ಜಾಗುವಂತೆ ಅವರನ್ನು ನಾವು ರೂಪಿಸುತ್ತೇವೆ. ಇಲ್ಲಿ ಶೈಕ್ಷಣಿಕ ಜ್ಞಾನದ ಜೊತೆಗೆ ನನ್ನ ಹಾಗೂ ಇತರ ಯಶಸ್ವಿ ಉದ್ಯಮಿಗಳ ಜೀವನಾನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತೇವೆ. ಬ್ಯಾರೀಸ್ ಗ್ರೂಪ್‌ಗೆ ಪ್ರತಿಷ್ಠಿತ ಉದ್ಯಮ, ಕೈಗಾರಿಕಾ ಸಂಸ್ಥೆಗಳೊಂದಿಗೆ ಬಾಂಧವ್ಯವಿದೆ. ಆ ಸಂಸ್ಥೆಗಳ ಪರಿಣತರ ಜೊತೆ ನಮ್ಮ ವಿದ್ಯಾರ್ಥಿಗಳಿಗೆ ಸಂವಾದ ಏರ್ಪಡಿಸಿ ಅವರ ಅನುಭವಗಳಿಂದ ಕಲಿಯುವಂತೆ ಮಾಡುತ್ತೇವೆ. ನಮಗೆ ದೇವರ ಮೇಲೆ, ನಮ್ಮ ಮೇಲೆ ಇರಬೇಕಾದ ನಂಬಿಕೆಯ ಬಗ್ಗೆ ಮನವರಿಕೆ ಮಾಡಿಸುತ್ತೇವೆ. ವಿದ್ಯಾರ್ಥಿಗಳಲ್ಲಿರುವ ಉದ್ಯಮಶೀಲತೆ ಅಥವಾ ಸಂಶೋಧನಾ ಗುಣವನ್ನು ಗುರುತಿಸಿ ಅದನ್ನು ಪೋಷಿಸಲು ತುಂಬು ಪ್ರೋತ್ಸಾಹ ಹಾಗೂ ತರಬೇತಿ ನೀಡುತ್ತೇವೆ. ಅವರಲ್ಲಿರುವ ಕಲ್ಪನೆಯ ಬಗ್ಗೆ ಸ್ಪಷ್ಟತೆ ಮೂಡಿಸಿ ಬೇಕಾದರೆ ನಮ್ಮ ಉದ್ಯಮಶೀಲತಾ ಫಂಡ್ ಮೂಲಕ ಅವರಿಗೆ ಆರ್ಥಿಕ ನೆರವನ್ನೂ ಒದಗಿಸುತ್ತೇವೆ. ಈ ಮೂಲಕ ಅವರೊಳಗಿನ ಉದ್ಯಮಿ ಅಥವಾ ಸಂಶೋಧಕರನ್ನು ಬೆಳೆಸುತ್ತೇವೆ. ನಮ್ಮ ಓರ್ವ ವಿದ್ಯಾರ್ಥಿನಿ ಈಗ ಬೆಂಗಳೂರಿನಲ್ಲಿ ನ್ಯೂ ಜನರೇಶನ್ ಐಟಿ ಕಂಪೆನಿ ಮಾಡಿದ್ದಾರೆ. ನಮ್ಮಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ಈ ರೀತಿಯ ಪ್ರೇರಣೆಯೊಂದಿಗೆ ಬೆಳೆದಿದ್ದಾರೆ.


> ನೀವೊಬ್ಬ ಯಶಸ್ವಿ ಉದ್ಯಮಿ ಕೂಡಾ ಹೌದು. ಮುಂದಿನ ಒಂದೆರಡು ದಶಕಗಳತ್ತ ನೋಡಿದರೆ ಇಂಜಿನಿಯರ್‌ಗಳಿಗೆ ಭವಿಷ್ಯವಿದೆ ಎಂದು ಅನಿಸುತ್ತಿದೆಯೇ?

ತಾಂತ್ರಿಕ ಜಗತ್ತು ಮಿತಿಯಿಲ್ಲದ್ದು. ಅಲ್ಲಿ ಬೆಳವಣಿಗೆ, ಆವಿಷ್ಕಾರ ಯಾವತ್ತೂ ನಿಲ್ಲದು. ಬೇಸಿಕ್ ಇಂಜಿನಿಯರಿಂಗ್‌ನಲ್ಲಿ ನೂತನ ತಂತ್ರಜ್ಞಾನ ಸೇರಿಕೊಂಡು ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಉದಾಹರಣೆಗೆ ಈಗ ಕಟ್ಟಡ ನಿರ್ಮಾಣಕ್ಕೆ ಕೇವಲ ಸಿವಿಲ್ ಇಂಜಿನಿಯರ್ ಮಾತ್ರವಲ್ಲ, ಆರ್ಕಿಟೆಕ್ಟ್, ಇಲೆಕ್ಟ್ರಿಕ್, ಇಲೆಕ್ಟ್ರಾನಿಕ್ಸ್ ಇತ್ಯಾದಿ ಇಂಜಿನಿಯರ್‌ಗಳೂ ಬೇಕಾಗುತ್ತಾರೆ. ಹೊಸ ತಂತ್ರಜ್ಞಾನದಿಂದ ವರ್ಷಗಳು ತಗಲುತ್ತಿದ್ದ ಕಟ್ಟಡ ನಿರ್ಮಾಣ ಈಗ ತಿಂಗಳುಗಳಲ್ಲೇ ಆಗುತ್ತಿದೆ. ಇದೇ ರೀತಿ ತಂತ್ರಜ್ಞಾನವನ್ನು ಬಳಸಿಕೊಂಡ ಬದಲಾವಣೆಗೆ ಪೂರಕವಾಗಿ ಇಂಜಿನಿಯರ್‌ಗಳು ತಮ್ಮ ಜ್ಞಾನವನ್ನು ಬಳಸಿಕೊಂಡರೆ ಇಂಜಿನಿಯರ್‌ಗಳಿಗೆ ಹೆಚ್ಚು ಅವಕಾಶವಿದೆ. ಐಟಿ ಕ್ಷೇತ್ರದಲ್ಲೂ ಯಾವುದೂ ಸ್ಥಿರ ಇಲ್ಲ. 10 ಸಾವಿರ ವರ್ಷಗಳಲ್ಲಿ ಆಗದೇ ಇದ್ದದ್ದು ಕಳೆದ 100 ವರ್ಷಗಳಲ್ಲಿ ಆಗಿದೆ. ಹಾಗಾಗಿ ಈ ನಿರಂತರ ಬದಲಾವಣೆ ಹಾಗೂ ಬೆಳವಣಿಗೆಗಳು ತಾಂತ್ರಿಕ ಕ್ಷೇತ್ರದಲ್ಲಿ ಉತ್ತಮ ಇಂಜಿನಿಯರ್‌ಗಳಿಗೆ ವಿಫುಲ ಅವಕಾಶಗಳನ್ನು ಒದಗಿಸುತ್ತದೆ.


> ಸಂಶೋಧನೆಯಲ್ಲಿ ತೊಡಗಿಕೊಳ್ಳುವ ಯುವ ಇಂಜಿನಿಯರ್‌ಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ? ಈ ನಿಟ್ಟಿನಲ್ಲಿ ಬಿಐಟಿ ಏನಾದರೂ ಮಾಡಿದೆಯೇ? 

ಒಳ್ಳೆಯ ಪ್ರಶ್ನೆ. ಬಹಳ ಬೇಸರದ ವಿಷಯವೆಂದರೆ ಪ್ರಪಂಚದ 100 ಅತ್ಯುತ್ತಮ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ 130 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದ ಒಂದೇ ಒಂದು ಸಂಸ್ಥೆಯ ಹೆಸರಿಲ್ಲ. ಸಂಶೋಧನೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳದೆ ಇದ್ದರೆ ನಾವು ಶಿಕ್ಷಣ ರಂಗದಲ್ಲಿ ನಾಯಕರಾಗಲು ಸಾಧ್ಯವಿಲ್ಲ. ಸಂಶೋಧನಾ ಕ್ಷೇತ್ರದಲ್ಲಿ ಮುಂದಿರುವವರೇ ಜಗತ್ತನ್ನು ಆಳುತ್ತಾರೆ. ಇದೇ ಕಾರಣದಿಂದ ಇಂದು ಅಮೆರಿಕ, ಇಸ್ರೇಲ್ ದೇಶಗಳು ಜಾಗತಿಕ ನಾಯಕರಾಗಿವೆ. ಪ್ರತಿ ಧರ್ಮವೂ 'ನೀನು ನೋಡು, ನೀನು ತಿಳಿ' ಎನ್ನುತ್ತದೆ. ನಮ್ಮ ಸಂಸ್ಥೆ ಆರಂಭದಿಂದಲೂ ಈ ವಿಚಾರದ ಬಗ್ಗೆ ಗಮನ ನೀಡುತ್ತಾ ಬಂದಿದೆ. ನಮ್ಮ ಸಂಸ್ಥೆಯ ಧ್ಯೇಯವೂ ಅದೇ ಆಗಿದೆ. ಸಂಶೋಧನೆಗೆ ಪರಿಶುದ್ಧ ಹೃದಯ ಮತ್ತು ಸ್ಪಷ್ಟ ಮನಸ್ಸು (purity of heart, clarity of mind) ಅತ್ಯಗತ್ಯ. ಅಂತಹ ವಾತಾವರಣವನ್ನು ನಾವು ಸೃಷ್ಟಿಸುತ್ತೇವೆ. ಕೇವಲ ಉದ್ಯೋಗ ಅರಸುವ ಇಂಜಿನಿಯರ್‌ಗಳಾಗದೆ ಹೊಸತನ್ನು ಜಗತ್ತಿಗೆ ಕೊಡುವ ಸಂಶೋಧಕರಾಗಿ ಎಂದು ನಾವು ವಿದ್ಯಾರ್ಥಿಗಳಿಗೆ ಹೇಳುತ್ತೇವೆ. ಅಂತಹ ಗುಣಗಳು ಕಂಡ ವಿದ್ಯಾರ್ಥಿಗಳಿಗೆ ನಾವು ತುಂಬು ಪ್ರೋತ್ಸಾಹ ನೀಡುತ್ತೇವೆ.


> ಬ್ಯಾರೀಸ್ ಆರ್ಕಿಟೆಕ್ಚರ್ ಕಾಲೇಜು ಕೂಡಾ ಇದೆ. ಆರ್ಕಿಟೆಕ್ಟ್ ಗಳು ಆಧುನಿಕ ಯುಗದ ಬದಲಾವಣೆಗೆ ಪೂರಕವಾಗಿ ಸ್ಪಂದಿಸುವ, ರಚನಾತ್ಮಕ ಬೆಳವಣಿಗೆಗೆ ಕೊಡುಗೆ ನೀಡುವಂತೆ ತರಬೇತುಗೊಳಿಸುವ ಯಾವ ಕಾರ್ಯಕ್ರಮಗಳು ನಿಮ್ಮಲ್ಲಿವೆ?

 ನಮ್ಮ ಸಂಸ್ಥೆಯ ಹೆಸರೇ ಸೂಚಿಸುವಂತೆ ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (BEADS). ಈ ಕಲ್ಪನೆ ಪ್ರಪಂಚದ ಬೇರೆ ಕಡೆ ಇಲ್ಲ. ದೇವರು ಅತ್ಯಂತ ದೊಡ್ಡ ಆರ್ಕಿಟೆಕ್ಟ್. ಆತನನ್ನು ಮೀರಿಸುವವರಿಲ್ಲ. ಇಂಡಿಯಾದಲ್ಲಿ ಒಂದು ಕಾಲದಲ್ಲಿ ಶ್ರೇಷ್ಠವಾದ ಆರ್ಕಿಟೆಕ್ಚರ್‌ಗಳಿದ್ದರು ಎನ್ನುವುದಕ್ಕೆ ತಾಜ್ ಮಹಲ್, ತಮಿಳು ನಾಡಿನ ಕೆಲವು ದೇವಾಲಯ, ಕುತುಬ್ ಮಿನಾರ್, ಗೋಲ್ ಗುಂಬಜ್ ಮೊದಲಾದವುಗಳು ಉದಾಹರಣೆಗಳಾಗಿವೆ. ಅಭಿವೃದ್ಧಿ ಅಂದರೆ ನಿಸರ್ಗಕ್ಕೆ ಪೂರಕವಾಗಿ ಯಾವುದೇ ಕಟ್ಟಡ ಅಥವಾ ನಿರ್ಮಾಣ ಮಾಡಬೇಕು. ಅದಕ್ಕೆ ನಾವು ಒತ್ತು ಕೊಡುತ್ತಿದ್ದೇವೆ. ನಮ್ಮ ಸೋಶಿಯಲ್ ಇನ್ಫ್ರಾಸ್ಟಕ್ಚರ್ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ದೇಶದಲ್ಲಿ ಈ ಬಗ್ಗೆ ಸಾಕಷ್ಟು ಗಮನ ನೀಡದೆ ಇರುವ ಕಾರಣ ಹಲವು ಸಮಸ್ಯೆಗಳು ಉಂಟಾಗಿದೆ. ಈ ನಿಟ್ಟಿನಲ್ಲಿ ಪರಿಸರ ಸ್ನೇಹಿ ನಿರ್ಮಾಣ ಉತ್ತೇಜಿಸುವ ಆರ್ಕಿಟೆಕ್ಟ್‌ಗಳನ್ನು ಸಮಾಜಕ್ಕೆ ನಾವು ಕೊಡುತ್ತೇವೆ. ಸ್ಥಳೀಯಾಡಳಿತ ಸಂಸ್ಥೆಗಳ ಜೊತೆ ಇಂತಹ ಕಾಲೇಜುಗಳ ಸಹಯೋಗ ದೊರೆತರೆ ಅದರಿಂದ ಸ್ಥಳೀಯರಿಗೆ ತುಂಬಾ ಪ್ರಯೋಜನವಿದೆ.


> ಬ್ಯಾರೀಸ್ ಗ್ರೂಫ್ ಅಧೀನದಲ್ಲಿ ಪೂರ್ವ ಪ್ರಾಥಮಿಕದಿಂದ ಸ್ನಾತಕೋತ್ತರ ಹಂತದ ಶಿಕ್ಷಣ ಸಂಸ್ಥೆಗಳಿವೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರ ಗುಣಮಟ್ಟವೇ ಈಗ ಕುಸಿಯುತ್ತಿದೆ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ? ನಿಮ್ಮ ಸಂಸ್ಥೆಗಳಲ್ಲಿ ಇದಕ್ಕೇನು ಮಾಡಿದ್ದೀರಿ?

ನಮ್ಮಲ್ಲಿರುವ 20ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ ನಾನು ನಮ್ಮ ಡಿಎಡ್ ಹಾಗೂ ಬಿಎಡ್ ಕಾಲೇಜುಗಳು ನನಗೆ ಅತ್ಯಂತ ಆಪ್ತವಾಗಿವೆ. ನನಗೆ ಸಮಯ ಸಿಕ್ಕಾಗಲೆಲ್ಲಾ ಅವರ ಜೊತೆ ಸ್ವಲ್ಪ ಸಮಯ ಕಳೆಯುತ್ತೇನೆ. ನಾನು ಅವರಿಂದ ಕಲಿಯುತ್ತೇನೆ. ನನ್ನ ಅನುಭವವನ್ನು ಅವರಿಗೆ ಹೇಳುತ್ತೇನೆ. ಒಬ್ಬ ಒಳ್ಳೆಯ ಶಿಕ್ಷಕನನ್ನು ರೂಪಿಸಿದರೆ ಆತ 2 ಸಾವಿರ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಾನೆ. ಈ ನಿಟ್ಟಿನಲ್ಲಿ ನಾವು ಹೆಚ್ಚಿ ನ ಗಮನಹರಿಸುತ್ತೇವೆ. ಶಿಕ್ಷಕರಿಗೆ ಹೊಸ ರೀತಿಯ ಬದಲಾವಣೆಯ ಬಗ್ಗೆ ತರಬೇತಿ ನೀಡುತ್ತೇವೆ. ಶಿಕ್ಷಕ ವೃತ್ತಿಯ ಮಹತ್ವ ಏನು ಎಂಬುದನ್ನು ಅವರಿಗೆ ತಿಳಿಹೇಳುತ್ತೇವೆ. ಮಾನವೀಯತೆ, ಜ್ಞಾನಾರ್ಜನೆಯ ಹಸಿವು, ತಂಡ ಸ್ಫೂರ್ತಿ, ಕಳಕಳಿ, ಮಮತೆ ಇವುಗಳನ್ನು ಅವರಲ್ಲಿ ಬೆಳೆಸುತ್ತೇವೆ. ವಿದ್ಯಾರ್ಥಿಗಳನ್ನು ಅರ್ಥ ಮಾಡಿಕೊಂಡು, ಅವರ ವಿಶ್ವಾಸ ಸಂಪಾದಿಸಿ ಅವರಿಗೆ ಕೇವಲ ಶಿಕ್ಷಕರಾಗದೆ, ಮನಮುಟ್ಟುವ ಮಾರ್ಗದರ್ಶಕರಾಗುವಂತೆ ಮಾಡಲು ಶಿಕ್ಷಕರಿಗೆ ವರ್ಷದಲ್ಲಿ ಮೂರು ಬಾರಿ ವಿಶೇಷ ತರಬೇತಿ ನೀಡುತ್ತೇವೆ.


> ನಿಮ್ಮ ಸಮೂಹದ ಇಕ್ರಾ ಅರೇಬಿಕ್ ಸ್ಕೂಲ್ ಕೂಡಾ ಧಾರ್ಮಿಕ ಶಿಕ್ಷಣ ಸಂಸ್ಥೆಯಾಗಿ ಯಶಸ್ವಿಯಾಗಿದೆ. ಈ ಬಗ್ಗೆ ಏನು ಹೇಳುತ್ತೀರಿ?
ಇಕ್ರಾ ಅರೇಬಿಕ್ ಸ್ಕೂಲ್ ಹೊಸ ಚಿಂತನೆಯೊಂದಿಗೆ ಮೂಡಿಬಂದಿದೆ. ಎರಡು ಹೆಸರಿನಲ್ಲಿ ಈ ಸ್ಕೂಲ್ ಆರಂಭಿಸಿದ್ದೇವೆ. ಆ ಎರಡು ಹೆಸರು 'ಐಎಎಸ್ (ಇಕ್ರಾ ಅರೇಬಿಕ್ ಸ್ಕೂಲ್)' ಮತ್ತು 'ಐಪಿಎಸ್ (ಇಕ್ರಾ ಪಬ್ಲಿಕ್ ಸ್ಕೂಲ್)' ಎಂದು. ಈ ಪೈಕಿ ಮೊದಲನೆಯದ್ದು ಯಶಸ್ವಿಯಾಗಿದೆ. ನಮ್ಮ ಗುರುಗಳ ನಿರ್ದೇಶನದಂತೆ ಇಲ್ಲಿ ಗುಣಮಟ್ಟದ ಧಾರ್ಮಿಕ ಶಿಕ್ಷಣವನ್ನು ನೀಡುತ್ತೇವೆ. ಇಲ್ಲಿನ ಧಾರ್ಮಿಕ ಶಿಕ್ಷಣ ಅವರ ಲೌಕಿಕ ಕಲಿಕೆಗೂ ಪೂರಕವಾಗಿದೆ. ಕುರ್‌ಆನ್ ಕಂಠಪಾಠ ಅವರ ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಮದ್ರಸಗಳಲ್ಲಿ ಹೆಚ್ಚಿನ ಮಕ್ಕಳು ಬಡವರು ಮತ್ತು ಬೇರೆಲ್ಲೂ ಸಲ್ಲದವರು ಇರುತ್ತಾರೆ ಎಂಬ ಭಾವನೆ ಇದೆ. ಇಲ್ಲಿ ಹಾಗಲ್ಲ ನಮ್ಮಲ್ಲಿ ಎಲ್ಲಾ ವರ್ಗಗಳ, ಬಡವರ, ಸ್ಥಿತಿವಂತ ಕುಟುಂಬಗಳ ಮಕ್ಕಳು ಬರುತ್ತಾರೆ. ಮದ್ರಸದಲ್ಲಿ ಉಚಿತ ಶಿಕ್ಷಣ ಎಂಬ ಕಲ್ಪನೆ ಇಲ್ಲಿಲ್ಲ. ಬಡ ಮಕ್ಕಳಿದ್ದರೂ ಅವರಿಗೆ ಹಣ ನೀಡಿ ಅವರೇ ಶುಲ್ಕ ಭರಿಸುವಂತೆ ಮಾಡುತ್ತೇವೆ. ಇಕ್ರಾ ವಿದ್ಯಾರ್ಥಿಗಳು ವೈದ್ಯರು, ಇಂಜಿನಿಯರ್‌ಗಳು, ಉದ್ಯಮಿಗಳಾಗಿ ಬೆಳೆದಿರುವುದು ನಮಗೆ ಹೆಮ್ಮೆಯ ವಿಷಯ.


> ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪೂರಕವಾದ ಕಾರ್ಯಕ್ರಮಗಳೇನಾದರೂ ತಮ್ಮ ಸಂಸ್ಥೆಯಲ್ಲಿದೆಯೇ?

ಈ ವಿಚಾರದಲ್ಲಿ ನಾವು ಸ್ವಲ್ಪ ಭಿನ್ನವಾಗಿ ಯೋಚನೆ ಮಾಡಿದ್ದೇವೆ. ನಾವು ಸ್ಪರ್ಧಾತ್ಮಕ ಎಂದು ಹೇಳಿ ವಿದ್ಯಾರ್ಥಿಗಳನ್ನು ರೋಬೋಟ್ ತರಹ ಮಾಡುವುದರ ಬಗ್ಗೆ ನಮಗೆ ಆಸಕ್ತಿ ಇಲ್ಲ. ಅಂಕಗಳಿಕೆ ಮುಖ್ಯ. ಆದರೆ ಅದುವೇ ಅಂತಿಮ ಗುರಿಯಾಗಿದ್ದರೆ ನಾನು ಇವತ್ತು ನಿಮ್ಮ ಮುಂದೆ ಬರಲು ಸಾಧ್ಯವಿರಲಿಲ್ಲ. ಗಳಿಕೆಗಾಗಿ ಕಲಿಕೆಯಲ್ಲ. ಕಲಿಕೆಗಾಗಿ ಮತ್ತು ಬದುಕಿಗಾಗಿ ಕಲಿಯಬೇಕು ಎನ್ನುವುದು ನಮ್ಮ ಗುರಿ.


> ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಂದಿನ ಯೋಜನೆಗಳು ಏನು?

 ನಾವು ನಿರಂತರ ಅಭಿವೃದ್ಧಿ ಹಾಗೂ ಶಿಕ್ಷಣದ ಗುಣಮಟ್ಟ ಹೆಚ್ಚಿಸುವತ್ತ ಗಮನ ಹರಿಸಿದ್ದೇವೆ. ನಮ್ಮ ಮುಂದೆ ಹಲವಾರು ಯೋಜನೆಗಳಿವೆ. ಮಂಗಳೂರಿನ ಬ್ಯಾರೀಸ್ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಏಳನೇ ತರಗತಿಯ ಬಳಿಕ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕಟ್ಟಡಗಳಲ್ಲಿ ತರಗತಿಯ ವ್ಯವಸ್ಥೆ ಮಾಡಿದ್ದೇವೆ. ಇದರಿಂದ ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಏಕಾಗ್ರತೆ ಮೂಲಕ ಕಲಿಕೆಯಲ್ಲಿ ಉತ್ತಮ ಪ್ರಗತಿ ಕಾಣಬಹುದು ಎನ್ನುವುದು ನಮ್ಮ ನಿರೀಕ್ಷೆ. ಇಕ್ರಾ ಅರೇಬಿಕ್ ಸ್ಕೂಲ್‌ಗಾಗಿ ಪ್ರತ್ಯೇಕ ಕ್ಯಾಂಪಸ್ ನಿರ್ಮಾಣ ಮಾಡಿ ಇಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಕಲಿಸುವ ಇಂಟಿಗ್ರೆಟೆಡ್ ಕಾಲೇಜು ಆರಂಭಿಸುವ ಉದ್ದೇಶವಿದೆ. ಇಲ್ಲಿ ಎಲ್ಲಾ ಧರ್ಮದವರಿಗೂ ಕಲಿಯುವ ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶ. ದಿವಂಗತ ಬಿ.ಎ.ಮೊಹಿದೀನ್ ಅವರ ಪ್ರೇರಣೆಯಿಂದ ಪ್ರಾರಂಭವಾಗಿರುವ ಸುಮಾರು 150 ಶಾಲೆಗಳಿವೆ. ಅವುಗಳನ್ನು ಒಂದು ವೇದಿಕೆಯಡಿ ತಂದು ಅಲ್ಲಿ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸುವ ಯೋಜನೆ ಇದೆ. ಬ್ಯಾರೀಸ್ ಸಮೂಹ ಸಂಸ್ಥೆಯ ಮೂಲಕ ಒಂದು ವಿಶ್ವ ವಿದ್ಯಾನಿಲಯ ಸ್ಥಾಪಿಸುವುದು ನಮ್ಮ ಮುಂದಿನ ಗುರಿಯಾಗಿದೆ. ಆ ಮೂಲಕ ನಮ್ಮ ಸಂಸ್ಥೆಗಳಿಗೆ ಸಂಬಂಧಿಸಿದ ಕೆಲವು ಸ್ವತಂತ್ರ ಪಠ್ಯಗಳನ್ನು ರೂಪಿಸಲು, ಧನಾತ್ಮಕ ನಿರ್ಧಾರಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆ. ಸತ್ಯ, ವಿಶ್ವಾಸ ಮತ್ತು ನೆಮ್ಮದಿ - ಈ ಮೂರು ಅಂಶಗಳನ್ನು ಆಧರಿತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದು ನಮ್ಮ ಪರಮ ಗುರಿ. ವ್ಯಕ್ತಿಯಾಗಲಿ, ಸಂಸ್ಥೆಯಾಗಲಿ, ಸತ್ಯವೇ ಅದರ ತಳಹದಿಯಾಗಿರಬೇಕು. ಯಾವುದೇ ಕೆಲಸದಲ್ಲಿ ಯಶಸ್ಸಿಗೆ ಸೃಷ್ಟಿಕರ್ತನ ಮೇಲಿನ ಅಚಲ ವಿಶ್ವಾಸ ನಮ್ಮ ದಾರಿಯಾಗಬೇಕು. ಶಿಕ್ಷಣ ಇಡೀ ಸಮಾಜದಲ್ಲಿ ಶಾಂತಿ, ನೆಮ್ಮದಿಗೆ ಕಾರಣವಾಗಬೇಕೇ ಹೊರತು ವೈಯಕ್ತಿಕ ಲಾಭದ ಮೂಲವಾಗಬಾರದು. ಈ ಅಂಶಗಳ ಆಧಾರದಲ್ಲಿ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳು ತಮ್ಮ ಮುಂದಿನ ಪಯಣವನ್ನು ಕ್ರಮಿಸಲಿವೆ.


> ಇತ್ತೀಚಿನ ದಿನಗಳಲ್ಲಿ ದೊಡ್ಡ ಸಂಖ್ಯೆಯ ಇಂಜಿನಿಯರಿಂಗ್ ಪದವೀಧರರು ಉದ್ಯೋಗ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಈಗಿನ ಇಂಜಿನಿಯರ್‌ಗಳು ಕೈಗಾರಿಕೆಗಳಿಗೆ ಬೇಕಾದ ಅರ್ಹತೆಯನ್ನು ಹೊಂದಿಲ್ಲ ಎನ್ನುವ ವರದಿಗಳೂ ಇವೆ. ಇಂತಹ ಸಂದರ್ಭದಲ್ಲಿ ಇಂಜಿನಿಯರಿಂಗ್ ಕಲಿಯಲು ಯಾವ ಕಾರಣವಿದೆ?

ಇಂಜಿನಿಯರಿಂಗ್ ಗತಕಾಲದಿಂದಲೂ ನಮ್ಮ ಬದುಕಿನೊಂದಿಗೆ ಇತ್ತು. ಈ ಜಗತ್ತು ಇರುವವರೆಗೂ ಇಂಜಿನಿಯರಿಂಗ್ ಇರುತ್ತದೆ, ಇರಲೇಬೇಕು. ಈಗ ಸಿವಿಲ್, ಮೆಕ್ಯಾನಿಕಲ್ ನಂತಹ ಮೂಲ ಇಂಜಿನಿಯರಿಂಗ್‌ಗಳ ಜೊತೆ ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕ್, ಐಟಿ ಇತ್ಯಾದಿ ಇಂಜಿನಿಯರಿಂಗ್‌ಗಳಿಗೂ ಬೇಡಿಕೆ ಇದೆ. ಆದರೆ ಹೆಸರಿಗೆ ಇಂಜಿನಿಯರ್‌ಗಳಾಗದೆ ತಾವು ಆಯ್ಕೆ ಮಾಡಿದ ವಿಷಯದಲ್ಲಿ ಪರಿಣತಿ ಸಾಧಿಸುವುದು ಬಹಳ ಮುಖ್ಯ. ಕೇವಲ ಪದವಿ, ಉದ್ಯೋಗ, ಯಾವುದರಲ್ಲಿ ಹೆಚ್ಚು ಸಂಬಳ ಸಿಗುತ್ತದೆ ಎನ್ನುವುದೇ ಈಗ ಮುಖ್ಯವಾಗುತ್ತಿದೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳು ಉತ್ತಮ ಇಂಜಿನಿಯರ್‌ಗಳಾಗುವಲ್ಲಿ ಎಡವುತ್ತಿದ್ದಾರೆ. ನಮ್ಮಲ್ಲಿ ಪರಿಣಿತರಾದ ಸಂಪನ್ಮೂಲ ವ್ಯಕ್ತಿಗಳಾದ ಉಪನ್ಯಾಸಕರಿದ್ದಾರೆ. ಅವರು ಉತ್ಕೃಷ್ಟ ಶೈಕ್ಷಣಿಕ ಜ್ಞಾನವನ್ನು ನೀಡುತ್ತಾರೆ. ನಾನೊಬ್ಬ ಸ್ಕೂಲ್ ಡ್ರಾಪ್ ಔಟ್. ಆದರೆ ನನಗೆ ಇಂಜಿನಿಯರಿಂಗ್ ಕ್ಷೇತ್ರದ ಸುಮಾರು 50 ವರ್ಷಗಳ ಅನುಭವ ಇದೆ. ಅದನ್ನು ನಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಜೊತೆ ಹಂಚಿಕೊಳ್ಳುತ್ತೇನೆ. ಹಾಗೆಯೇ ಸ್ಪರ್ಧಾತ್ಮಕ ಜಗತ್ತನ್ನು ಹೇಗೆ ಎದುರಿಸಿ ಯಶಸ್ವಿಯಾಗಬೇಕು ಎಂದು ಅವರಿಗೆ ಕಲಿಸಿಕೊಡುತ್ತೇವೆ. ಜೊತೆಗೆ ವಿದ್ಯಾರ್ಥಿಗಳು ಉತ್ತಮ ಗುಣ ನಡತೆಗಳನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತೇವೆ. ಇಂಜಿನಿಯರ್‌ಗಳು ಉತ್ತಮ ಮನುಷ್ಯರಾಗಿದ್ದಾಗ ಮಾತ್ರ ಅವರಿಂದ ಸಮಾಜಕ್ಕೆ ಒಳಿತಾಗುತ್ತದೆ. ಇಂಜಿನಿಯರ್‌ಗಳು ಭವಿಷ್ಯದ ಜನನಾಯಕರಾಗಬೇಕು. ಐಎಎಸ್, ಐಪಿಎಸ್ ಮೊದಲಾದ ಸರಕಾರದ ಸೇವೆಯ ಪರೀಕ್ಷೆಗಳನ್ನು ಎದುರಿಸಲು ಅವರನ್ನು ನಮ್ಮ ಸಂಸ್ಥೆಯಲ್ಲಿ ಪ್ರೋತ್ಸಾಹಿಸಲಾಗುತ್ತದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಒಂದು ರೀತಿಯ ಎನಲಿಟಿಕಲ್ ಮೈಂಡ್ ಇದೆ. ಈ ವಿಶ್ಲೇಷಕ ಗುಣವಿರುವ ವಿದ್ಯಾರ್ಥಿಗಳು ನಾಗರಿಕ ಸೇವೆಗೆ ಹೋದರೆ ಇದರಿಂದ ಸಮಾಜಕ್ಕೆ ಲಾಭ. ಈ ನಿಟ್ಟಿನಲ್ಲಿ ನಾವು ವಿದ್ಯಾರ್ಥಿಗಳನ್ನು ತರಬೇತುಗೊಳಿಸುತ್ತೇವೆ. ನಾಯಕನಾಗಲು ಶ್ರೀಮಂತರೇ ಆಗಬೇಕು ಎಂದಿಲ್ಲ ಎಂಬುದನ್ನು ನಮ್ಮ ವಿದ್ಯಾರ್ಥಿಗಳಿಗೆ ನಾವು ಕಲಿಸಿಕೊಡುತ್ತೇವೆ. ನಮ್ಮ ವಿದ್ಯಾರ್ಥಿಗಳು ಮುಂದೆ ಕೇವಲ ಕೆಲಸ ಹುಡುಕಿಕೊಂಡು ಹೋಗುವುದು ಮಾತ್ರವಲ್ಲ, ಇತರರಿಗೆ ಉದ್ಯೋಗ ನೀಡುವ ಉದ್ಯೋಗದಾತರಾಗಬೇಕು ಎನ್ನುವುದು ನಮ್ಮ ಗುರಿ. ಒಳ್ಳೆಯ ಕೌಶಲ್ಯವನ್ನು ಹೊಂದಿರುವ ಇಂಜಿನಿಯರ್‌ಗಳಿಗೆ ಇಂದಿಗೂ, ಎಂದೆಂದಿಗೂ ಬೇಡಿಕೆ ಇದೆ. ವಿದ್ಯಾರ್ಥಿಗಳು ಉದ್ಯೋಗ ಅರಸುವ ಸಂದರ್ಭದಲ್ಲಿ ಸಮರ್ಥವಾಗಿ ಸಂವಹನ ಮಾಡಲು ಸಾಧ್ಯವಾಗಬೇಕು. ಸ್ಪಷ್ಟವಾದ ಗುರಿ, ಆತ್ಮ ವಿಶ್ವಾಸ, ತುಲನಾತ್ಮಕ ಮನೋಭಾವ, ಉತ್ತಮ ವ್ಯಕ್ತಿತ್ವ ಹೊಂದಿರುವ ಇಂಜಿನಿಯರ್‌ಗಳು ಸಂದರ್ಶಕರ ಮೆಚ್ಚುಗೆಗೆ ಪಾತ್ರವಾಗಿ ಉದ್ಯೋಗ ಪಡೆಯಬಹುದು. ಈ ಗುಣಗಳನ್ನು ನಮ್ಮ ವಿದ್ಯಾರ್ಥಿಗಳಲ್ಲಿ ನಾವು ಬೆಳೆಸುತ್ತೇವೆ.


> ಪ್ರಾಥಮಿಕ ಶಾಲಾ ಹಂತದಲ್ಲಿ ಶಾಲೆಗಳಲ್ಲೇ ಧಾರ್ಮಿಕ ಶಿಕ್ಷಣ ನೀಡುವ ಬಗ್ಗೆ ಪೋಷಕರ ಒಲವು ಹೆಚ್ಚುತ್ತಿದೆ. ಈ ಬಗ್ಗೆ ನಿಮ್ಮ ನಿಲುವೇನು?

ಧಾರ್ಮಿಕ ಶಿಕ್ಷಣವೂ ಬಹಳ ಮುಖ್ಯ. ಸುಮಾರು 200 ವರ್ಷಗಳ ಹಿಂದೆ ಧಾರ್ಮಿಕ, ಲೌಕಿಕ ಎಂಬ ವಿಂಗಡನೆ ಇರಲಿಲ್ಲ. ಹಿಂದೆ ಗುರುಕುಲ ಮಾದರಿಯ ಶಿಕ್ಷಣದಲ್ಲಿ ಎಲ್ಲವೂ ಇತ್ತು. ಪರಿಪೂರ್ಣ ವ್ಯಕ್ತಿತ್ವವನ್ನು ಪಡೆಯಬೇಕು ಎನ್ನುವ ಗುರಿ ಇತ್ತು. ಬಳಿಕ ಲೌಕಿಕ ಮತ್ತು ಧಾರ್ಮಿಕ ಎಂದು ವಿಂಗಡಣೆಯಾಯಿತು. ಧರ್ಮದ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ವಿಂಗಡಣೆಯಾಗಬಾರದು. ಶಾಲೆಯಲ್ಲಿ ಧಾರ್ಮಿಕ ಶಿಕ್ಷಣ ಇರಲಿ. ಆದರೆ ಒಂದೊಂದು ಧರ್ಮಕ್ಕೆ ಒಂದೊಂದು ಶಾಲೆ ಎಂಬ ಕಲ್ಪನೆಯೇ ಸರಿಯಲ್ಲ. ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಎಲ್ಲ ಧರ್ಮದ ಮಕ್ಕಳು ಒಂದಾಗಿ ಕಲಿತರೆ ಅವರಿಗೆ ನಮ್ಮ ದೇಶದ ವೈವಿಧ್ಯತೆಯ ಸರಿಯಾದ ಪರಿಚಯವಾಗುತ್ತದೆ. ಉದಾಹರಣೆಗೆ ನಮ್ಮಲ್ಲಿ ಅರೇಬಿಕ್ ಕಲಿಯುವ ಹಿಂದೂ, ಸಂಸ್ಕೃತ ಕಲಿಯುವ ಮುಸ್ಲಿಮ್ ಮಕ್ಕಳೂ ಇದ್ದಾರೆ. ಶಿಕ್ಷಣ ನಮ್ಮನ್ನು ಒಂದು ಗೂಡಿಸಬೇಕು. ವಿಭಜಿಸುವಂತಾಗಬಾರದು. ಆಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ.


ಮದರ್ಸ್ ಲ್ಯಾಪ್ (ಅಮ್ಮನ ಮಡಿಲು) ವಿನೂತನ ವಿಭಾಗ

ಬ್ಯಾರೀಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಮದರ್ಸ್ ಲ್ಯಾಪ್ (ಅಮ್ಮನ ಮಡಿಲು) ಎಂಬ ಹೊಸ ವಿಭಾಗ ಪ್ರಾರಂಭಿಸಿದ್ದೇವೆ. ಅದು ಶಾಲೆಯಲ್ಲಿರುವ ಮಕ್ಕಳ ತಾಯಂದಿರು ಬಂದು ತಮ್ಮಲ್ಲಿರುವ ಪ್ರತಿಭೆ, ಕೌಶಲ್ಯವನ್ನು ಶಾಲೆಯ ಮಕ್ಕಳು ಹಾಗೂ ಶಿಕ್ಷಕರೊಂದಿಗೆ ಹಂಚಿಕೊಳ್ಳುವ ವೇದಿಕೆಯಾಗಲಿದೆ. ಪೋಷಕರು, ಮಕ್ಕಳು ಹಾಗೂ ಶಿಕ್ಷಕರ ನಡುವೆ ಬಾಂಧವ್ಯ ಬೆಳೆಯುವ ಜೊತೆಗೆ ತಾಯಂದಿರು ತಮ್ಮ ಪ್ರತಿಭೆಯನ್ನು ಸಮಾಜಕ್ಕೆ ಧಾರೆಯೆರೆಯಲು ಇದರಿಂದ ಸಾಧ್ಯವಾಗಲಿದೆ. 

- ಸಯ್ಯದ್ ಮುಹಮ್ಮದ್ ಬ್ಯಾರಿ


ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 

ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT)

www.bitmangalore.edu.in.

ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್(BEADS)

www.beads.edu.in

ಪ್ರಫುಲ್ಲ ಪಿ. ರಾಜ್: 9900066888, ಡಾ. ಮುಸ್ತಫ ಬಸ್ತಿಕೋಡಿ: 7259773300

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)