varthabharthi

ನಿಮ್ಮ ಅಂಕಣ

ಸರಕಾರಿ ಶಾಲಾ ಶಿಕ್ಷಕರಿಗೇಕೆ ಈ ಸಜೆ?

ವಾರ್ತಾ ಭಾರತಿ : 14 May, 2019
ತಲ್ಹ ಇಸ್ಮಾಯಿಲ್ ಬೆಂಗ್ರೆ, ಸೆಂಟರ್ ಫಾರ್ ಎಜುಕೇಷನಲ್ ರಿಸರ್ಚ್ ಆ್ಯಂಡ್ ಅನಾಲಿಸಿಸ್, ಬೆಂಗಳೂರು

ಮಕ್ಕಳು ಬೇಸಿಗೆ ರಜೆ ಮುಗಿದು ಶಾಲೆಗೆ ಹೋಗಬೇಕಾದ ಸಮಯ ಹತ್ತಿರಬಂದಾಗಲೇ, ಹೆತ್ತವರು ಮಕ್ಕಳಿಗಾಗಿ ಪುಸ್ತಕ, ಚೀಲ, ಶೂ, ಸಮ ವಸ್ತ್ರ ಮತ್ತು ಮಕ್ಕಳ ಶಾಲಾ ಫೀಸ್ ಹೀಗೆ ನಾನಾ ರೀತಿಯ ಸಿದ್ಧತೆಯಲ್ಲಿ ತೊಡಗಿಕೊಳ್ಳುತ್ತಾರೆ. ತೀರಾ ಬಡವರದ್ದು ಸರಕಾರಿ ಶಾಲೆ ಮತ್ತು ಬಡವ, ಮಾಧ್ಯಮ ವರ್ಗದ ಮತ್ತು ಸಿರಿವಂತರ ಮಕ್ಕಳು ಸೇರುವ ಶಾಲೆ, ಖಾಸಗಿ ಶಾಲೆ ಅಥವಾ ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮವಿರುವ ಕೇಂದ್ರೀಯ ವಿದ್ಯಾಲಯದಂತಹ ಶಾಲೆಗಳು. ಎನ್ನುವ ಅಲಿಖಿತ ನಿಯಮವಿದ್ದಂತೆ ಸಮಾಜದಲ್ಲಿ ಒಂದು ರೀತಿಯ ವಿಭಜನೆ ಸೃಷ್ಟಿಯಾಗಿದೆ.

 ರಾಜ್ಯದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಖಾಸಗೀಕರಣದತ್ತ ವಾಲಿ ಹಲವು ದಶಕವೇ ಕಳೆದಿದೆ. ಜನರಿಂದ ಆಯ್ಕೆಯದ ಜನಸಾಮಾನ್ಯರ ಸೇವಕರೆಂದುಕೊಂಡವರೇ ಜನಸಾಮಾನ್ಯರ ಹಿತದೃಷ್ಟಿ ಎಂದು ಕೊಂಡೇ ಸಾವಿರಾರು ಸರಕಾರಿ ಶಾಲೆಗಳನ್ನು ಮುಚ್ಚಿದಾಗ ಅದರ ವಿರುದ್ಧ ಪ್ರತಿಭಟಿಸಿದವರೇ ವಿರಳ. ಇನ್ನು ಸರಕಾರಿ ಶಾಲೆಗಳಲ್ಲಿ ತರಗತಿಗೆ ಶಿಕ್ಷಕರೇ ಬರುವುದಿಲ್ಲ ಎಂಬ ಆರೋಪ ಆಗಾಗ ಜನಸಾಮಾನ್ಯರು, ಜನ ಪ್ರತಿನಿಧಿಗಳಿಂದ ಮತ್ತು ಶಿಕ್ಷಣ ಪರ ಹೋರಾಟಗಾರರ ಬಾಯಿಯಿಂದ ಕೇಳುತ್ತಲೇ ಬಂದಿದ್ದೇವೆ. ಹೀಗೆ ಸರಕಾರಿ ಶಾಲೆಗಳಲ್ಲಿ ಶಿಕ್ಷಕರು ನಿರಂತರವಾಗಿ ತರಗತಿಗೆ ಬರುವುದೇ ಇಲ್ಲ ಎಂದಾಗ, ಪೋಷಕರು ಹೇಗೆ ತಾನೇ ಆ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುವರು? ಹಾಗಾದರೆ ಶಿಕ್ಷಕರು ಶಾಲೆಗೆ ಬರದೇ ಇರಲು ನಿಜವಾದ ಕಾರಣವಾದರೂ ಏನು ? ಎಂದು ಕೇಳಿದರೆ ಹೆಚ್ಚಿನ ಜನರಿಗೆ ಸರಿಯಾದ ಉತ್ತರ ಗೊತ್ತಿರಲು ಸಾಧ್ಯವಿಲ್ಲ. ಇನ್ನ್ನು ಸ್ವತಃ ಸರಕಾರಿ ಶಾಲಾ ಅಭಿವೃದ್ಧಿ ಸಮಿತಿಯವರಿಗೆ ಕೇಳಿದರೂ ಅವರೂ ಸರಿಯಾಗಿ ಉತ್ತರ ನೀಡಲಾರರು. ಆದರೆ ಅದರ ಉತ್ತರವೂ ಅತೀ ಸರಳ, ಸರಕಾರವು ಸರಕಾರಿ ಶಾಲಾ ಶಿಕ್ಷಕರನ್ನು ನಾನಾ ರೀತಿಯ ಕೆಲಸಗಳಿಗೆ ಬಳಸಿಕೊಳ್ಳುತ್ತದೆ ಎಂದು ತಿಳಿಯಬೇಕಾಗಿದೆ.

ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಆರ್‌ಟಿಇ ಕಾಯ್ದೆ 2009ರ ಪ್ರಕರಣ 27ರ ಅನ್ವಯ- ದಶವಾರ್ಷಿಕ ಜನಗಣತಿ, ವಿಪತ್ತು ಪರಿಹಾರ ಕಾರ್ಯಗಳು ಅಥವಾ ಸಂದರ್ಭಾನುಸಾರ ಸ್ಥಳೀಯ ಪ್ರಾಧಿಕಾರ ಅಥವಾ ರಾಜ್ಯ ವಿಧಾನ ಮಂಡಲ ಅಥವಾ ಸಂಸತ್ತು ಚುನಾವಣೆಗಳಿಗೆ ಸಂಬಂಧಿಸಿದ ಕರ್ತವ್ಯಗಳನ್ನು ಹೊರತು ಪಡಿಸಿ ಉಳಿದ ಯಾವುದೇ ಶಿಕ್ಷಣೇತರ ಉದ್ದೇಶಗಳಿಗಾಗಿ ಸರಕಾರಿ ಶಾಲಾ ಶಿಕ್ಷಕರನ್ನು ನಿಯೋಜಿಸಬಾರದು ಎಂದಾಗಿದೆ. ಆದರೆ, ಇಂದು ಸುಮಾರು 20ಕ್ಕಿಂತಲೂ ಹೆಚ್ಚಿನ ವಿಧದ ಕೆಲಸ ಕಾರ್ಯಗಳನ್ನು ಸರಕಾರಿ ಶಾಲಾ ಶಿಕ್ಷಕರು ಮಾಡಬೇಕಾದ ಅಗತ್ಯ ಇದೆ. ಸರಕಾರವು ಸರಕಾರಿ ಶಿಕ್ಷಕರನ್ನು ಆ ಕೆಲಸಗಳನ್ನು ನಿರ್ವಹಿಸುವಂತೆ ನಿರ್ಬಂಧಿಸುತ್ತಿರುವುದು ಖೇದನೀಯ ಸಂಗತಿ. ಹಾಗಿರುವಾಗ ಸರಕಾರಿ ಶಾಲಾ ಶಿಕ್ಷಕರೇ ಈ ಎಲ್ಲ ಕೆಲಸವನ್ನು ನಿರ್ವಹಿಸಬೇಕೆಂದು ಕಂಡು ಹಿಡಿದ ಭೂಪ ಯಾರು? ಸರಕಾರಿ ಶಿಕ್ಷಕರಲ್ಲದೆ ಬೇರೆ ಯಾರನ್ನಾದರೂ ಈ ಕೆಲಸಗಳಿಗೆ ಉಪಯೋಗಿಸಬಾರದೇ?

ಮೊದಲೇ ಶಿಕ್ಷಕರ ಕೊರತೆಯಿಂದ ತತ್ತರಿಸಿರುವ ಶಾಲೆಗಳಲ್ಲಿ, ಇರುವ ಅಲ್ಪಶಿಕ್ಷಕರಿಗೆ ಈ ರೀತಿ 20 ವಿಧದ ಕೆಲಸವನ್ನು ನೀಡಿದಾಗ, ಅವರು ಅದನ್ನು ನಿರ್ವಹಿಸುವಾಗಲೇ ಶಾಲಾ ಸಮಯ ಮುಗಿದು ಹೋಗಬಹುದು. ಶಿಕ್ಷಕರ ಮೇಲಧಿಕಾರಿಗಳಾಗಿರುವ ತಮ್ಮನ್ನೇ ಶಿಕ್ಷಣಾಧಿಕಾರಿಗಳೆಂದು ಹೇಳುವ ಬಿ.ಇ.ಒ, ಡಿಡಿಪಿಐ ಅಪರೂಪಕ್ಕೊಮ್ಮೆ ಶಾಲೆಗಳಿಗೆ ಭೇಟಿ ಕೊಡುತ್ತಾರೆ. ಅವರು ಹೋಗಿ ಶಾಲೆಯ ಲೆಕ್ಕಾಚಾರಗಳನ್ನು ತೆಗೆಯುವುದು ಮತ್ತು ಶಿಕ್ಷಕರನ್ನು ಮತ್ತು ಮಕ್ಕಳನ್ನು ಬೆದರಿಸುವಂತಹ ಕೆಲಸಗಳನ್ನು ಮಾಡುತ್ತಾರೆಯೇ ಹೊರತು ಬೇರೇನೂ ಮಾಡುವುದಿಲ್ಲ.

ಅಂದೊಮ್ಮೆ, ಶಾಲೆಗೆ ಬಿ.ಇ.ಒ.ರವರು ಬರುತ್ತಿದ್ದಾರೆಂಬ ಮಾಹಿತಿ ಪಡೆದು ನಾನು ಅವರನ್ನು ಸ್ವಾಗತಿಸಿ ಶಾಲೆಯ ಪರಿಸ್ಥಿತಿಯ ಬಗ್ಗೆ ವಿವರಿಸಿ, ಶಾಲಾ ಎಸ್.ಡಿ.ಎಂ.ಸಿ. ಸದಸ್ಯರನ್ನು ಭೇಟಿಯಾಗಲು ಹೇಳಿದೆ. ಅವರು ಶಾಲಾ ಎಸ್.ಡಿ.ಎಂ.ಸಿ.ಯನ್ನು ಭೇಟಿಯಾಗುವ ಗೋಜಿಗೇ ಹೋಗಲಿಲ್ಲ. ಬದಲಾಗಿ, ಪೊಲೀಸ್ ಅಧಿಕಾರಿಯ ರೀತಿ ವಿಚಾರಣೆ ಮಾಡಿ ಹೊರಡಲು ತಯಾರಾದರು. ಆಗ ನಾನು, ನೀವು ಈ ರೀತಿ ಶಿಕ್ಷಕರನ್ನು ವಿಚಾರಿಸುವುದಕ್ಕಿಂತ ಮುಂಚೆ ನೀವು ಅವರಿಗೆ ನೀಡಿರುವ ಸೌಲಭ್ಯಗಳು ಹಾಗೂ ಅವರಿಗೆ ಆಗುವ ತೊಂದರೆಗಳ ಕುರಿತು ವಿಚಾರಿಸಿ ತಕ್ಕುದಾದ ಪರಿಹಾರ ಸೂಚಿಸಬೇಕಿತ್ತಲ್ಲವೇ? ಎಂದು ಪ್ರಶ್ನಿಸಿದೆ. ಆಗ ಅವರು ಸಿಟ್ಟಿನಿಂದ ಅದು ನೀವು ಹೇಳ ಬೇಕಾಗಿಲ್ಲ ಎಂದರು. ಆಗ ನಾನು ಸ್ವಾಮಿ, ಅಮಾವಾಸೆಗೊಮ್ಮೆ ಹುಣ್ಣಿಮೆಗೊಮ್ಮೆ ಬರುವ ನೀವು ಏನು ಮಾಡುತ್ತಿದ್ದೀರೆಂದು ನನಗೆ ಚೆನ್ನಾಗಿ ಗೊತ್ತು. ಈ ಶಾಲೆಯ ಶಿಕ್ಷಕರ ಹುದ್ದೆ ಹಲವು ವರ್ಷಗಳಿಂದ ಖಾಲಿ ಇದೆ. ಬೋಧಕೇತರ ಸಿಬ್ಬಂದಿ ಶಾಲೆಯ ಎಲ್ಲಾ ದಾಖಲೆಯ ನಿರ್ವಹಣೆಯಿಂದ ಹಿಡಿದು ಶೌಚಾಲಯ ಶುಚಿಗೊಳಿಸುವ ತನಕ ಎಲ್ಲಾ ಕೆಲಸಗಳನ್ನು ಈ ಶಾಲೆಯ ಶಿಕ್ಷಕರು ಮತ್ತು ಮಕ್ಕಳೇ ಮಾಡಬೇಕು. ನನ್ನನ್ನು ದಿಟ್ಟಿಸಿ ನೋಡಿ ‘‘ನೋಡುವ ಸಾರ್, ಹೇಗಾದರೂ ಈ ಶಾಲೆಗೆ ತಡೆಗೋಡೆ ನಿರ್ಮಿಸಲು ಹೇಳುತ್ತೇನೆ’’ ಎಂದು ಹೋದವರು ಇಂದಿಗೂ ಪತ್ತೆಯೇ ಇಲ್ಲ.

ಅಕ್ಷರ ದಾಸೋಹ ಕಾರ್ಯಕ್ರಮ ಹಾಗೂ ಅದರ ದಾಖಲೆ ನಿರ್ವಹಣೆ, ಎಂದರೆ ಯಾವಾಗ ಎಷ್ಟು ಆಹಾರ ಸಾಮಗ್ರಿಗಳು ಬಂದವು, ಎಷ್ಟು ಖರ್ಚಾದವು ಅಥವಾ ಅಡುಗೆ ನಿರ್ವಾಹಕರ ಕುರಿತು ವಿವರವಾದ ಮಾಹಿತಿಯನ್ನಿಟ್ಟುಕೊಂಡಿರಬೇಕು. ಎರಡನೇಯದಾಗಿ ಕ್ಷೀರ ಭಾಗ್ಯ ಕಾರ್ಯಕ್ರಮ ಹಾಗೂ ದಾಖಲೆ ನಿರ್ವಹಣೆ, ಮೂರನೆಯದಾಗಿ ಒಂದೊಮ್ಮೆ ಆ ಶಾಲೆಯಲ್ಲಿ ಶಿಕ್ಷಕೇತರ ಹುದ್ದೆಗೆ ಸಿಬ್ಬಂದಿ ಇಲ್ಲದಿದ್ದರೆ, ಶೌಚಾಲಯ ಮತ್ತು ಕುಡಿಯುವ ನೀರಿನ ನಿರ್ವಹಣೆಯ ಕೆಲಸಗಳು... ಈ ರೀತಿಯ ಕೆಲಸಗಳು ದಿನನಿತ್ಯ ಮಾಡುವ ಕೆಲಸಗಳಾಗಿರುವುದರಿಂದ ಪ್ರತಿದಿನ ಶಿಕ್ಷಕರ ಬೋಧನೆಯ ಸಮಯದ ಒಂದು ಭಾಗವನ್ನು ಅವರು ಅದಕ್ಕಾಗಿ ಮೀಸಲಿಡಬೇಕಾಗುತ್ತದೆ. ಅಥವಾ ಒಬ್ಬ ಶಿಕ್ಷಕರಿಗೆ ಆ ಡ್ಯೂಟಿ ನೀಡಲಾಗುತ್ತದೆ. ಒಂದು ವೇಳೆ ಶೂ, ಬೈಸಿಕಲ್, ಸಮವಸ್ತ್ರ, ಪಠ್ಯಪುಸ್ತಕ ವಿತರಣೆ, ಮಾತ್ರೆ ವಿತರಣೆ, ಬ್ಯಾಂಕ್‌ನೊಂದಿಗೆ ಶಾಲೆಯ ವ್ಯವಹಾರದಂತಹ ಕೆಲಸಗಳಿದ್ದರೆ ಅಂದು ಮಕ್ಕಳ ಅರ್ಧದಿನ ಹಾಳಾದಂತೆಯೇ. ಏಕೆಂದರೆ ಈ ಎಲ್ಲಾ ಕೆಲಸಗಳಿಗೆ ಶಿಕ್ಷಕರು ಪೇಟೆಗೆ ಹೋಗಬೇಕು ಅಥವಾ ಶಾಲೆಗಿಂತ ತುಂಬಾ ದೂರ ಹೋಗಬೇಕು ಮತ್ತು ಈ ಕೆಲಸಗಳಿಗೆ ಬಹಳಷ್ಟು ಸಮಯ ಬೇಕಾಗುತ್ತದೆ ಎಂಬುವುದು ನಮಗೆ ಚೆನ್ನಾಗಿ ತಿಳಿದಿದೆ.

ಇನ್ನು ಜನಗಣತಿ, ಚುನಾವಣಾ ಕರ್ತವ್ಯ, ಮಕ್ಕಳ ಗಣತಿ ಎಂಬೆಲ್ಲ ಕೆಲಸಗಳಿಗೆ ತಿಂಗಳು ಗಟ್ಟಲೆ ಬೇಕಾಗುತ್ತದೆ. ಹೆಚ್ಚಿನಂಶ ರಜೆ ಅವಧಿಯಲ್ಲಿಯೇ ಶಿಕ್ಷಕರು ಈ ಕೆಲಸವನ್ನು ನಿರ್ವಹಿಸುತ್ತಾರೆ. ಅವರಿಗೆ ರಜೆ ಎಂಬುವುದು ಇಲ್ಲವೇ? ಅವರಿಗೆ ಕುಟುಂಬ ಇಲ್ಲವೇ? ಜನಪ್ರತಿನಿಧಿಗಳು ಅವರನ್ನು ಯಂತ್ರಗಳೆಂದು ಪರಿಗಣಿಸಿದ್ದಾರೆಯೇ? ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಜನಪ್ರತಿನಿಧಿಗಳು ಮತ್ತು ಸಮಾಜ ಈ ರೀತಿ ಅನ್ಯಾಯ ಮಾಡುವುದೇಕೆ?

ವಿವಿಧ ಅನುದಾನಗಳ ಸಮರ್ಪಕ ವೆಚ್ಚ ಹಾಗೂ ದಾಖಲೆ ನಿರ್ವಹಣೆ, ವೆಚ್ಚವಾದ ಅನುದಾನಗಳ ಲೆಕ್ಕಪತ್ರ ಹಾಗೂ ದಾಖಲೆ ನಿರ್ವಹಣೆಯಂತಹ ಕೆಲಸಗಳನ್ನು ಶಿಕ್ಷಕರಿಗೆ ನೀಡಲಾಗಿದೆ. ಕೆಲವರಂತೂ ಶಾಲೆ ಅಭಿವೃದ್ಧಿ ಹೊಂದಲಿಲ್ಲ ಎಂಬುವುದನ್ನು, ಶಿಕ್ಷಕರು ಶಾಲೆಯನ್ನು ಅಭಿವೃದ್ಧಿಗೊಳಿಸಲಿಲ್ಲ ಎಂದು ಶಿಕ್ಷಕರನ್ನು ದೂರುವವರೂ ಇದ್ದಾರೆ. ಹಾಗಿರುವಾಗ ಈ ಶಿಕ್ಷಕರ ಸಮಸ್ಯೆಗಳನ್ನು ಅವರು ನಿರ್ವಹಿಸಬೇಕಾಗಿರುವಂತಹ ಕೆಲಸಗಳಲ್ಲಿ ಕಡಿತಗೊಳಿಸಬೇಕಾದ ಹಾಗೂ ಆರ್‌ಟಿಇಯ ಪ್ರಕರಣ 27ರ ಅನ್ವಯ ಇರುವಂತಹ ಕೆಲಸಗಳನ್ನು ಕೂಡ ಒಂದು ವೇಳೆ ಸರಕಾರವು ಇತರರಿಗೆ ವಹಿಸಿಕೊಟ್ಟರೆ ಸರಕಾರಿ ಶಾಲಾ ಶಿಕ್ಷಕರಿಗೆ ಒಂದಿಷ್ಟು ನೆಮ್ಮದಿ ದೊರೆಯಬಹುದು.

ಸರಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ಪ್ರಧಾನವಾಗಿ ಕಲಿಕೆಗೆ ಮಾತ್ರ ತೊಡಗಿಸಿಕೊಂಡು ಎಲ್ಲಾ ರೀತಿಯ ಕಲಿಕೇತರ ಕೆಲಸಗಳಿಂದ ಅವರನ್ನು ಮುಕ್ತಗೊಳಿಸಬೇಕು ಎಂಬ ಬೇಡಿಕೆಯನ್ನು ಜಾರಿಗೆ ತರುವಂತೆ ಒತ್ತಡ ಹೇರುವ ಸಮಯ ಕೂಡಿ ಬಂದಿದೆ.

ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರೆಲ್ಲರೂ ಒಂದಾಗಿ, ‘‘ನನ್ನ ಮಗು ಹೋಗುವ ಶಾಲೆಯ ಶಿಕ್ಷಕರು ತರಗತಿಯಲ್ಲಿರಬೇಕೇ ಹೊರತು, ಊರಿನ ನಾನಾ ಕೆಲಸಗಳ ನಿರ್ವಹಣೆ ಹೊತ್ತು ಇಡೀ ಊರೇ ತಿರುಗುವ ಕೆಲಸವ ಮಾಡಬೇಕಾದವರಲ್ಲ’’ ಎಂಬ ಮಾತು ವ್ಯಕ್ತವಾಗಬೇಕು. ‘‘ಸರಕಾರಕ್ಕೆ ಸರಕಾರಿ ಕೆಲಸಗಳಿಗೆ ಜನ ಬೇಕಿದ್ದರೆ ಅದು ಯಾರನ್ನು ಬೇಕಾದರೂ ತೆಗೆದುಕೊಳ್ಳಲಿ, ಆದರೆ ನನ್ನ ಮಕ್ಕಳ ತರಗತಿಯ ಶಿಕ್ಷಕರನ್ನಲ್ಲ’’ ಎಂದು ಸ್ಪಷ್ಟವಾಗಿ ಹೇಳುವಂತಾಗಬೇಕು. ಆದೆ ರೀತಿ ಶಿಕ್ಷಕರೂ ‘‘ನನ್ನ ತರಗತಿಯ ಮಗುವಿನ ಕಲಿಕೆಯು ನನ್ನ ಜವಾಬ್ದಾರಿ, ಅದು ಇತರ ಎಲ್ಲ ಕೆಲಸಗಳಿಗಿಂತ ಮಿಗಿಲು ಮತ್ತು ಅತ್ಯಂತ ದೊಡ್ಡ ಜವಾಬ್ದಾರಿ ಎನ್ನುವುದನ್ನು ಮರೆಯಬಾರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)