varthabharthi

ಸಂಪಾದಕೀಯ

ಪ್ರಧಾನಿಗೆ ಶತ್ರುವಾಗುತ್ತಿರುವ ಅವರ ವಾಚಾಳಿತನ

ವಾರ್ತಾ ಭಾರತಿ : 14 May, 2019

‘ಮಾತುಗಾರಿಕೆಯ ಬಲದಿಂದ ನಾಯಕನಾದವನನ್ನು ಮಾತುಗಾರಿಕೆಯೇ ಕೆಳಗಿಳಿಸುತ್ತದೆ’ ಎಂಬ ಮಾತಿದೆ. ಬಣ್ಣದ ಮಾತುಗಳ ಮೂಲಕ ಅಧಿಕಾರ ಹಿಡಿದ ನರೇಂದ್ರ ಮೋದಿ ಕಳೆದ ಐದು ವರ್ಷಗಳನ್ನು ಭೀಕರ ಭಾಷಣಗಳ ಮೂಲಕವೇ ಮುಗಿಸಿದರು. ಜನರನ್ನು ಮಾತಿನ ಮೂಲಕ ವಿಸ್ಮತಿಗೆ ಕೆಡವಿದರು. ಇದೀಗ ಅವರ ನಿಜವಾದ ಬಂಡವಾಳ ಏನು ಎನ್ನುವುದನ್ನು ಅವರ ವಾಚಾಳಿತನವೇ ಬಹಿರಂಗಪಡಿಸುತ್ತಿದೆ. ‘ಬಾಲಕೋಟ್ ದಾಳಿ’ಗೆ ಸಂಬಂಧಿಸಿ ಅವರು ನೀಡಿದ ಹೇಳಿಕೆಗಳು ಅವರಿಗೇ ತಿರುಗುಬಾಣವಾಗಿದೆ. ‘‘ಕೆಟ್ಟ ಹವಾಮಾನದ ಕಾರಣ ವಾಯುದಾಳಿಯನ್ನು ಮುಂದೂಡುವ ಬಗ್ಗೆ ತಜ್ಞರು ಚಿಂತನೆ ನಡೆಸಿದ್ದರು. ಆದರೆ ನನ್ನ ‘ಅಪಕ್ವ ತಿಳುವಳಿಕೆ’ಯ ಆಧಾರದಲ್ಲಿ ನಾನು ಒಂದು ಸಲಹೆ ನೀಡಿದೆ. ಮೋಡವಿದ್ದರೆ ಒಳ್ಳೆಯದೇ ಆಯಿತು. ಆಗ ನಮ್ಮ ಯುದ್ಧ ವಿಮಾನಗಳು ಪಾಕಿಸ್ತಾನದ ರೇಡಾರ್‌ನಿಂದ ತಪ್ಪಿಸಿಕೊಳ್ಳಲು ಅನುಕೂಲವಾಗುತ್ತದೆ. ಕಾರ್ಯಕ್ರಮ ಮುಂದುವರಿಸಿ’’ ಎಂದು ಅವರು ಸೇನೆಗೆ ಆದೇಶ ನೀಡಿದ್ದರಂತೆ. ಮೊತ್ತ ಮೊದಲಾಗಿ ರೇಡಾರ್ ಕುರಿತಂತೆ ಮೋದಿಯ ತಿಳುವಳಿಕೆಯೇ ಅತ್ಯಂತ ಬೋಳೆತನದಿಂದ ಕೂಡಿದ್ದು. ಇಂತಹದೊಂದು ಹೇಳಿಕೆಯನ್ನು ಅವರು ಮಾಧ್ಯಮಗಳಿಗೆ ಸಂದರ್ಶನದ ಸಂದರ್ಭದಲ್ಲಿ ನೀಡುತ್ತಾರೆ ಎಂದಾದರೆ ಭಾರತದ ಘನತೆ ಏನಾಗಬೇಕು? ಅವರು ಸುಳ್ಳನ್ನೇ ಹೇಳಲಿ. ಆದರೆ ಅದಕ್ಕೆ ಮುನ್ನ ಸೂಕ್ತ ತಜ್ಞರ ಜೊತೆಗೆ ರೇಡಾರ್ ಕುರಿತಂತೆ, ಯುದ್ಧವಿಮಾನಗಳ ಕಾರ್ಯತಂತ್ರಗಳ ಬಗ್ಗೆ ವಿವರಗಳನ್ನು ಪಡೆದು ಬಳಿಕ ಮಾಧ್ಯಮಗಳ ಮುಂದೆ ಅದನ್ನು ಉರು ಹೊಡೆದು ಪ್ರಧಾನಿ ಸ್ಥಾನದ ಘನತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬಹುದಾಗಿತ್ತು. ಇದೀಗ ಮೋದಿ ಹಸಿ ಸುಳ್ಳು ಹೇಳುತ್ತಿದ್ದಾರೆ ಮಾತ್ರವಲ್ಲ, ಸೇನಾಕಾರ್ಯತಂತ್ರದ ಕುರಿತಂತೆ ಪ್ರಾಥಮಿಕ ಜ್ಞಾನವೂ ತನಗಿಲ್ಲ ಎನ್ನುವುದನ್ನು ದೇಶದ ಮುಂದೆ ಬಹಿರಂಗಪಡಿಸಿದ್ದಾರೆ. ಸೇನೆಯ ವಿಷಯದಲ್ಲಾಗಲಿ, ಆರ್ಥಿಕ ವಿಷಯದಲ್ಲಾಗಲಿ ಪ್ರಧಾನಿ ನೇರವಾಗಿ ಭಾಗವಹಿಸುವುದಿಲ್ಲ. ಪ್ರಧಾನಿ ಎಲ್ಲ ವಿಭಾಗಗಳಿಗೆ ಸಂಬಂಧಿಸಿ ಆಯಾ ಕ್ಷೇತ್ರದ ತಜ್ಞರನ್ನು ತನ್ನ ಬಳಿ ಇಟ್ಟುಕೊಂಡಿರುತ್ತಾರೆ ಮತ್ತು ಅವರಿಂದ ಸಲಹೆಗಳನ್ನು ಪಡೆಯುತ್ತಾ ಆ ಮೂಲಕ ಮುಂದೆ ಹೆಜ್ಜೆಯಿಡುತ್ತಾರೆ. ನೆಹರೂ, ಇಂದಿರಾಗಾಂಧಿ, ನರಸಿಂಹರಾವ್, ಮನಮೋಹನ್ ಸಿಂಗ್‌ರಂತಹ ಬೆರಳೆಣಿಕೆಯ ನಾಯಕರಿಗೆ ಕೆಲವು ವಿಷಯಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ವೈಯಕ್ತಿಕ ಅರ್ಹತೆಯಿತ್ತಾದರೂ ಅವರ ಬಳಿಯೂ ತಜ್ಞರ ದೊಡ್ಡ ಪಡೆಯೇ ಇತ್ತು. 92ರ ದಶಕದ ಆರ್ಥಿಕ ಸುಧಾರಣೆಯ ಸಂದರ್ಭದಲ್ಲಿ ಅಂದಿನ ಪ್ರಧಾನಿ ನರಸಿಂಹರಾವ್ ಬಳಿ, ಮನಮೋಹನ್ ಸಿಂಗ್‌ರಂತಹ ಆರ್ಥಿಕ ತಜ್ಞರಿದ್ದರು. ಉದಾರೀಕರಣದ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಈ ತಜ್ಞರು ಪ್ರಧಾನಿಗೆ ನೆರವು ನೀಡಿದ್ದರು. ಆದರೆ ಪ್ರಧಾನಿ ನರೇಂದ್ರ ನೋಟು ನಿಷೇಧ ಮಾಡುವ ಸಂದರ್ಭದಲ್ಲಿ ಆರ್ಥಿಕ ತಜ್ಞರ ಸಲಹೆಗಲನ್ನು ಸಂಪೂರ್ಣ ನಿರ್ಲಕ್ಷಿಸಿ, ಕಾರ್ಪೊರೇಟ್ ಶಕ್ತಿಗಳ ನಿರ್ದೇಶನದಂತೆ ಕಾರ್ಯನಿರ್ವಹಿಸಿ ದೇಶದ ಆರ್ಥಿಕತೆಯನ್ನು ಸರ್ವನಾಶ ಮಾಡಿದರು. ಇನ್ನು ಬಾಲಕೋಟ್ ದಾಳಿ ಪ್ರಕರಣ. ಮೊತ್ತ ಮೊದಲಾಗಿ ಬಾಲಕೋಟ್‌ನಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಸಫಲವಾಗಿಲ್ಲ ಎನ್ನುವ ಆರೋಪಗಳಿವೆ. ಈಗಾಗಲೇ ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಮಾಧ್ಯಮಗಳು ಬಾಲಕೋಟ್ ದಾಳಿ ತನ್ನ ಗುರಿ ತಪ್ಪಿದೆ ಎನ್ನುವುದನ್ನು ಸ್ಪಷ್ಟಪಡಿಸಿವೆ. ಈ ಬಗ್ಗೆ ಸೂಕ್ತ ಛಾಯಾಚಿತ್ರಗಳೂ ದೊರಕಿವೆ. ‘ಈ ದಾಳಿಯಲ್ಲಿ ಉಗ್ರರು ಮೃತಪಟ್ಟಿದ್ದಾರೆಯೇ?’ ಎನ್ನುವ ಪ್ರಶ್ನೆಗೆ ಸೇನೆ ಈವರೆಗೆ ಸ್ಪಷ್ಟವಾದ ಉತ್ತರವನ್ನೂ ನೀಡಿಲ್ಲ. ಬಾಲಕೋಟ್ ದಾಳಿಯಿಂದಾಗಿ ನಮ್ಮ ಯುದ್ಧವಿಮಾನವೊಂದು ನಾಶವಾಯಿತಲ್ಲದೆ, ಯೋಧನೊಬ್ಬ ಪಾಕಿಸ್ತಾನದ ಸೆರೆಯಾದರು. ಈ ಸಂದರ್ಭದಲ್ಲಿ ಪಾಕಿಸ್ತಾನ ಆ ಯೋಧನ ಜೊತೆಗೆ ಮೆರೆದ ಮಾನವೀಯತೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಬಾಲಕೋಟ್ ದಾಳಿಯಿಂದ ಭಾರತಕ್ಕೆ ಒಂದು ರೀತಿಯ ಮುಖಭಂಗವಾಗಿದೆ. ಅಂತಹ ಮುಖಭಂಗದ ಹಿಂದೆ ಯಾರಿದ್ದಾರೆ ಎನ್ನುವುದನ್ನು ಸ್ವತಃ ನರೇಂದ್ರ ಮೋದಿಯವರೇ ಬಹಿರಂಗಪಡಿಸಿದ್ದಾರೆ.

ಮಾಲಕನೊಬ್ಬ ತನ್ನ ರಕ್ಷಣೆಗೆ ತರಬೇತಿ ಪಡೆದ ಕೋತಿಯನ್ನು ಇಟ್ಟುಕೊಂಡ ಕತೆಯೊಂದಿದೆ. ರಾತ್ರಿ ಮಾಲಕನನ್ನು ಈ ಕೋತಿಯೇ ಖಡ್ಗ ಹಿಡಿದು ಕಾಯುತ್ತಿತ್ತು. ಸೊಳ್ಳೆಯೊಂದು ನಿದ್ದೆ ಮಾಡುತ್ತಿದ್ದ ಮಾಲಕನ ಕುತ್ತಿಗೆಯ ಮೇಲೆ ಕೂತಾಗ, ಕೋತಿ ಕತ್ತಿಯನ್ನು ಮಾಲಕನ ಕುತ್ತಿಗೆ ಬೀಸಿತಂತೆ. ಮೋದಿಯನ್ನು ಪ್ರಧಾನಿ ಮಾಡಿದ ಮತದಾರನ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇಲ್ಲವಾದರೆ ‘ಅಪಕ್ವ ತಿಳುವಳಿಕೆಯ ಆಧಾರ’ದಲ್ಲಿ ಸೇನೆಗೆ ತಾನು ಸಲಹೆ ನೀಡಿದೆ ಎಂದು ಮಾಧ್ಯಮಗಳಿಗೆ ಯಾವ ಸಂಕೋಚವೂ ಹೇಳಿಕೊಳ್ಳುತ್ತಿರಲಿಲ್ಲ. ಸೇನೆಗೆ ಸೂಚನೆ ನೀಡುವ ಅಧಿಕಾರ ಪ್ರಧಾನಿಗಿರಬಹುದು, ಆದರೆ ಅದಕ್ಕೆ ಬೇಕಾದ ತಿಳುವಳಿಕೆ ಅವರಿಗಿಲ್ಲ. ಅಪಕ್ವ ತಿಳುವಳಿಕೆಯ ಆಧಾರದಲ್ಲಿ ಶತ್ರು ದೇಶದೆಡೆಗೆ ಯುದ್ಧ ವಿಮಾನ ಹಾರಿಸುವುದಕ್ಕೆ ಮೋದಿ ಸಲಹೆ ನೀಡಿದ ಪರಿಣಾಮವಾಗಿಯೇ ಬಾಲಕೋಟ್ ಸರ್ಜಿಕಲ್ ಸ್ಟ್ರೈಕ್ ವಿಫಲವಾಯಿತೇ? ಎಂಬ ಪ್ರಶ್ನೆ ಈಗ ಎದ್ದಿದೆ. ಈ ದಾಳಿಯಲ್ಲಿ ಗಡಿಯಾಚೆಗೆ ಭಾರತದ ಯುದ್ಧ ವಿಮಾನಗಳು ಒಂದಿಷ್ಟು ಬಾಂಬ್‌ಗಳನ್ನು ಸುರಿದಿವೆೆ. ಆದರೆ ಅಲ್ಲಿ ಉಗ್ರರ ಯಾವುದೇ ಶಿಬಿರಗಳು ಇರಲಿಲ್ಲ ಎನ್ನುವುದನ್ನು ಈಗಾಗಲೇ ಮಾಧ್ಯಮಗಳು ಬಹಿರಂಗಪಡಿಸಿರುವುದರಿಂದ, ಬಾಲಕೋಟ್ ದಾಳಿಯ ವೈಫಲ್ಯ ಮತ್ತು ಆ ಬಳಿಕ ನಡೆದ ಎಲ್ಲ ಬೆಳವಣಿಗೆಗಳಿಗೂ ಪ್ರಧಾನಿ ಮೋದಿಯೇ ಕಾರಣ ಎನ್ನುವಂತಾಗಿದೆ. ಬಾಲಕೋಟ್ ದಾಳಿಯ ವೈಫಲ್ಯವನ್ನು ಮುಚ್ಚಿ ಹಾಕಿ, ದಾಳಿಯನ್ನು ಇನ್ನಷ್ಟು ರೋಚಕಗೊಳಿಸಿ ಜನರನ್ನು ಮೂರ್ಖರನ್ನಾಗಿಸುವ ಮೋದಿಯ ಪ್ರಯತ್ನ ಈ ಬಾರಿ ವಿಫಲವಾಗಿದೆ. ತಾನು ಹರೆಯದಲ್ಲಿ ಚಹಾ ಮಾರುತ್ತಿದ್ದೆ ಎನ್ನುವ ಸುಳ್ಳನ್ನು ನೂರು ಬಾರಿ ಹೇಳಿ ಜನರನ್ನು ಮೋಸ ಮಾಡಲು ಯಶಸ್ವಿಯಾಗಿದ್ದ ಮೋದಿ, ಇದೀಗ ಇನ್ನಷ್ಟು ಅತಿ ರಂಜಿತ ಸುಳ್ಳುಗಳನ್ನು ಹೇಳಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ‘‘ಡಿಜಿಟಲ್ ಕ್ಯಾಮರಾ ಮೂಲಕ ಹಿರಿಯ ನಾಯಕರ ಫೋಟೊಗಳನ್ನು ತೆಗೆದು ಅವುಗಳನ್ನು ಇಮೇಲ್ ಮೂಲಕ ಪತ್ರಿಕೆಗಳಿಗೆ ಕಳುಹಿಸುತ್ತಿದ್ದೆ’’ ಎನ್ನುವ ಹೇಳಿಕೆಯೂ ಮೋದಿಯವರಿಗೆ ತಿರುಗುಬಾಣವಾಗಿದೆ. 1988ರ ಕಾಲದಲ್ಲಿ ಭಾರತಕ್ಕೆ ಇನ್ನೂ ಇಮೇಲ್ ಪರಿಚಯವೇ ಆಗಿರಲಿಲ್ಲ. ಆಗ ಡಿಜಿಟಲ್ ಕ್ಯಾಮರಗಳೂ ಇರಲಿಲ್ಲ. ಇಮೇಲ್ ಭಾರತಕ್ಕೆ ಅಧಿಕೃತವಾಗಿ ಪರಿಚಯಿಸಲ್ಪಟ್ಟಿದ್ದು 1995ರಲ್ಲಿ. ಹೀಗಿರುವಾಗ 1988ರಲ್ಲಿ ಅಂದರೆ 7 ವರ್ಷಕ್ಕೂ ಮೊದಲು ಮೋದಿಯವರು ಇಮೇಲ್ ಕಳುಹಿಸುವುದು ಹೇಗೆ ಸಾಧ್ಯ? ಪ್ರಧಾನಿಯಾಗಿ ಯಾವ ಅಂಜಿಕೆಯೂ ಇಲ್ಲದೆ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳುತ್ತಾ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನವನ್ನು ಮೋದಿ ಹರಾಜಿಗಿಟ್ಟಿದ್ದಾರೆ. ಮೋದಿಯನ್ನು ಇಡೀ ವಿಶ್ವವೇ ತಮಾಷೆಯಾಗಿ ನೋಡುತ್ತಿದೆ ಮಾತ್ರವಲ್ಲ, ಅವರ ಮೂಲಕ ಭಾರತವೇ ತಮಾಷೆಯ ವಸ್ತುವಾಗುತ್ತಿದೆ. ಮೋದಿಯವರು ವಾಚಾಳಿತನವನ್ನು ನಿಲ್ಲಿಸದೇ ಇದ್ದರೆ, ಅವರ ನಾಲಗೆಯೇ ಅವರಿಗೆ ಶತ್ರುವಾಗಲಿದೆ ಮತ್ತು ಅವರನ್ನು ಅಧಿಕಾರಕ್ಕೇರಿಸಿದ ನಾಲಗೆಯೇ ಅವರನ್ನು ಕಸದ ಬುಟ್ಟಿಗೆ ಎಸೆಯಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)