varthabharthi

ಕ್ರೀಡೆ

1983ರಲ್ಲಿ ಭಾರತಕ್ಕೆ ಮೊದಲ ಬಾರಿ ವಿಶ್ವ ಚಾಂಪಿಯನ್ ಪಟ್ಟ

ಲಾರ್ಡ್ಸ್ ನಲ್ಲಿ ಲಾಯ್ಡ್ ಹ್ಯಾಟ್ರಿಕ್ ಕನಸು ಭಗ್ನ

ವಾರ್ತಾ ಭಾರತಿ : 14 May, 2019

ಎರಡು ವಿಶ್ವಕಪ್ ಪಂದ್ಯಾವಳಿಯಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದ್ದ ಭಾರತ ವಿಶ್ವಕಪ್‌ನ ಹ್ಯಾಟ್ರಿಕ್ ಸಾಧನೆಯ ಕನಸು ಕಾಣುತ್ತಿದ್ದ ಹಾಟ್ ಫೇವರಿಟ್ ತಂಡ ವೆಸ್ಟ್ ಇಂಡೀಸ್‌ನ್ನು 1983ರಲ್ಲಿ ಸೋಲಿಸಿ ಪ್ರಥಮ ಬಾರಿ ವಿಶ್ವ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ವೆಸ್ಟ್ ಇಂಡೀಸ್‌ನ ಏಕಸ್ವಾಮ್ಯಕ್ಕೆ ಕಡಿವಾಣ ಹಾಕಿತು. 1975 ಮತ್ತು 1979ರ ವಿಶ್ವಕಪ್‌ನ್ನು ಎತ್ತಿ ಹಿಡಿದಿದ್ದ ವೆಸ್ಟ್ ಇಂಡೀಸ್ ಸತತ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಹೊತ್ತು ಕ್ರೀಡಾಂಗಣಕ್ಕಿಳಿದಿತ್ತು. ಅಂತಿಮ ಗೆಲುವು ತಮ್ಮದೆಂದು ವಿಜಯೋತ್ಸವ ಆಚರಿಸಲು ಮೊದಲೇ ಸಿದ್ಧತೆ ನಡೆಸಿದ್ದ ವೆಸ್ಟ್ ಇಂಡೀಸ್‌ಗೆ ಕಪಿಲ್ ದೇವ್ ನಾಯಕತ್ವದ ಭಾರತ ತಂಡ ನೀಡಿದ್ದ ಆಘಾತದಿಂದ ಈ ತನಕ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿಶ್ವಕಪ್ ಗೆಲ್ಲಲು ಎಲ್ಲರಿಗೂ ಅವಕಾಶ ಇದೆ ಎನ್ನುವುದನ್ನು ಭಾರತ ತೋರಿಸಿಕೊಟ್ಟಿತು.

1983ರ ಜೂನ್ 25 ರಂದು ಲಂಡನ್‌ನ ಲಾರ್ಡ್ಸ್‌ಮೈದಾನದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಕಳಪೆ ತಂಡವೆಂದು ಬಿಂಬಿತವಾಗಿದ್ದ ಭಾರತದ ಎದುರು ವಿಂಡೀಸ್ ತಂಡ ಕೈ ಚೆಲ್ಲಿ ಕುಳಿತಿದ್ದನ್ನು ವಿಶ್ವದ ಕ್ರಿಕೆಟ್ ಪ್ರೇಮಿಗಳು ಬೆರಗುಗಣ್ಣಿನಿಂದ ನೋಡುತ್ತಿದ್ದರೆ, ಆಘಾತಕ್ಕೊಳಗಾದ ವಿಂಡೀಸ್‌ನ ಆಟಗಾರನೊಬ್ಬ ಮೈದಾನದಲ್ಲಿಯೇ ಮಂಡಿಯೂರಿ ಮುಖ ಕೆಳಗೆ ಹಾಕಿ ಗಂಟೆಗಟ್ಟಲೆ ಅದೇ ಭಂಗಿಯಲಿರುವುದು ಟಿವಿ ಕ್ಯಾಮರಾ ದಲ್ಲಿ ಸೆರೆಯಾಗಿತ್ತು. ಹಿಂದಿನ ಎರಡು ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಆಡಿದ್ದ ಒಟ್ಟು ಆರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದ್ದ ಭಾರತ 1983ರ ಟೂರ್ನಿಯಲ್ಲಿ ಪಾಲ್ಗೊಂಡಾಗ ಎಲ್ಲರೂ ಭಾರತವನ್ನು ಕಡೆಗಣಿಸಿದ್ದರು . ಭಾರತದ ಆಟಗಾರರು ಲಂಡನ್‌ಗೆ ವಿಮಾನವೇರುವಾಗ ಹಿಂದಿನಂತೆ ಇದೊಂದು ‘ಹನಿಮೂನ್ ’ ಪ್ರವಾಸ ಎಂದೇ ಕೆಲವರು ಲೇವಡಿ ಮಾಡಿದ್ದರು. ಆದರೆ ಭಾರತ ತಂಡದ ನಾಯಕ ಕಪಿಲ್ ದೇವ್ ವಿಶ್ವಕಪ್ ಗೆಲ್ಲುವ ಕನಸು ಕಂಡಿದ್ದರು. ತಂಡದ ಆಟಗಾರರನ್ನು ಪ್ರತಿಯೊಂದು ಹಂತದಲ್ಲೂ ಹುರಿದುಂಬಿಸಿದ ಕಪಿಲ್ ದೇವ್ ಅವರು ತಂಡ ಕಷ್ಟಕ್ಕೆ ಸಿಲುಕಿದಾಗ ನಾಯಕನ ಜವಾಬ್ದಾರಿಯನ್ನು ಅರಿತುಕೊಂಡು ನೆರವಾದರು. ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಮೂರನೆ ವಿಶ್ವಕಪ್‌ನಲ್ಲಿ ಆರಂಭದಲ್ಲಿ ನೀಡುತ್ತಿದ್ದ ಪ್ರದರ್ಶನವನ್ನು ಯಾವುದೇ ತಂಡ ಗಂಭೀರವಾಗಿ ಪರಿಗಣಿಸಿರಲಿಲ್ಲ ಆಸ್ಟ್ರೇಲಿಯದ ನಾಯಕ ಕಿಮ್ ಹ್ಯುಗ್ಸ್ ಮಾತ್ರ ಭಾರತ ತಂಡ ಅಪಾಯಕಾರಿ. ಅದೊಂದು ‘ಡಾರ್ಕ್ ಹಾರ್ಸ್’ ಎಂದು ಎಚ್ಚರಿಕೆ ನೀಡಿದ್ದರು. ಅವರ ಮಾತು ನಿಜವಾಯಿತು.‘ಬಿ’ ಗುಂಪಿನ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್‌ಗೆ ಆಘಾತ ನೀಡಿದ ಭಾರತ ಸೆಮಿ ಫೈನಲ್ ಹಾದಿಯಲ್ಲಿ ಘಟಾನುಘಟಿಗಳಿಗೆ ಶಾಕ್ ನೀಡಿತ್ತು. ಸೆಮಿಫೈನಲ್‌ನಲ್ಲಿ ಇಂಗ್ಲೆಂಡನ್ನು ಭಾರತ ತಂಡ , ಎ’ ಗುಂಪಿನಲ್ಲಿ ವೆಸ್ಟ್‌ಇಂಡೀಸ್ ತಂಡ ಪಾಕಿಸ್ತಾನವನ್ನು ಬಗ್ಗುಬಡಿದು ಫೈನಲ್ ತಲುಪಿತ್ತು.ಅಂತಿಮವಾಗಿ ಹ್ಯಾಟ್ರಿಕ್ ಕನಸು ಕಾಣುತ್ತಿದ್ದ ವಿಂಡೀಸ್ ತಂಡವನ್ನು 43 ರನ್‌ಗಳಿಂದ ಸೋಲಿಸಿ ವಿಶ್ವಕಪ್‌ನ್ನು ಲಾರ್ಡ್ಸ್‌ನಲ್ಲಿ ಎತ್ತಿ ಹಿಡಿಯಿತು.

  ಅಂದು ಭಾರತ ತಂಡದಲ್ಲಿ ಸಾಕಷ್ಟು ಆಲ್‌ರೌಂಡರ್‌ಗಳಿದ್ದರು.ಅಲ್ಲದೆ ಅವರ ಮಧ್ಯಮ ವೇಗದ ಬೌಲಿಂಗ್ ಇಂಗ್ಲೆಂಡ್‌ನ ಪಿಚ್‌ಗಳಿಗೆ ಹೇಳಿ ಮಾಡಿಸಿದಂತಿತ್ತು. ಹೀಗಾಗಿ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಆಡುವುದಕ್ಕೆ ಕಷ್ಟವಾಗಿತ್ತು, ಇವೆಲ್ಲಕ್ಕಿಂತಲೂ ಮಿಗಿಲಾಗಿ ಇಡೀ ತಂಡ ಕಪ್ ಗೆಲ್ಲುವ ಹುಮ್ಮಸ್ಸಿನೊಂದಿಗೆ ಆಡಿತ್ತು.

    ಗ್ರೂಪ್ ಹಂತದಲ್ಲಿ ಝಿಂಬಾಬ್ವೆ ಎದುರು ಭಾರತ ಸೋಲಿನ ಭೀತಿಯಲ್ಲಿದ್ದಾಗ ನಾಯಕ ಕಪಿಲ್ ದೇವ್ ಔಟಾಗದೆ 175 ರನ್(138 ಎಸೆತ,16 ಬೌಂಡರಿ,ಆರು ಸಿಕ್ಸರ್ )ಗಳ ಉಪಯುಕ್ತ ಕೊಡುಗೆ ನೀಡಿರುವುದು ತಂಡದ ಗೆಲುವಿಗೆ ಸಹಕಾರಿಯಾಯಿತು. ಭಾರತ ಈ ಪಂದ್ಯದಲ್ಲಿ ರೋಚಕ ಜಯ ಸಾಧಿಸಿ ಸೆಮಿಫೈನಲ್ ಹಾದಿಗೆ ಎದುರಾಗಿದ್ದ ಕಂಟಕವನ್ನು ನಿವಾರಿಸಿತ್ತು. ಅನಂತರ ಭಾರತ ತಂಡ ಟೂರ್ನಿಯುದ್ದಕ್ಕೂ ಹಿಂದಿರುಗಿ ನೋಡಲೇ ಇಲ್ಲ. ಝಿಂಬಾಬ್ವೆ ವಿರುದ್ಧದ ಈ ಗೆಲುವಿನೊಂದಿಗೆ ಭಾರತ ಸೆಮಿ ಫೈನಲ್ ಪ್ರವೇಶಿತ್ತು. ಈ ಗೆಲುವು ತಂಡದಲ್ಲಿ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿತ್ತು. ಹಲವು ಕ್ರಿಕೆಟ್ ವಿಶ್ಲೇಷಕರು ತವರು ನೆಲದಲ್ಲಿ ಇಂಗ್ಲೆಂಡ್‌ನಂತಹ ಬಲಿಷ್ಠ ತಂಡವನ್ನು ಸೋಲಿಸುವುದು ಸುಲಭದ ಮಾತಲ್ಲ ಎಂದು ಭಾರತವನ್ನು ಅಂತಿಮ ಕ್ಷಣದಲ್ಲಿಯೂ ನಿರ್ಲಕ್ಷಿಸಿದ್ದರು. ತಂಡ ವಿಶ್ವಕಪ್ ಗೆಲ್ಲುವಲ್ಲಿ ನಾಯಕ ಕಪಿಲ್ ದೇವ್‌ರ ಕಠಿಣ ಶ್ರಮ, ಸಾಹಸ ಇಂದಿಗೂ ನಿತ್ಯ ನೂತನ.

ಆತ್ಮ ವಿಶ್ವಾಸ ಹೊಂದಿದ್ದ ಭಾರತ ತಂಡ ಇಂಗ್ಲೆಂಡ್ ತಂಡವನ್ನು ತವರಿನಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿದಾಗಲೂ ಭಾರತ ಭವಿಷ್ಯದಲ್ಲಿ ಕಪ್ ಎತ್ತಿ ಹಿಡಿಯಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಮೊದಲ ಪಂದ್ಯದಲ್ಲಿ ಭಾರತವು ವಿಂಡೀಸನ್ನು ಸೋಲಿಸಿದ್ದು ತೀರಾ ಆಕಸ್ಮಿಕ. ಫೈನಲ್‌ನಲ್ಲಿ ವಿಂಡೀಸ್‌ನ ಎದುರು ಭಾರತದ ಆಟ ನಡೆಯದು. ವಿಂಡೀಸ್ ಹ್ಯಾಟ್ರಿಕ್ ಗಳಿಸುವುದು ಖಚಿತ ಎಂದು ಬಹುತೇಕ ಮಂದಿ ನಂಬಿದ್ದರು.

ಅಂತಿಮ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 183 ರನ್‌ಗಳಿಗೆ ಆಲೌಟಾಗಿತ್ತು. ವಿಂಡೀಸ್ ಈ ಸವಾಲನ್ನು ಲಘುವಾಗಿ ಪರಿಗಣಿಸಿತ್ತು. ಬ್ಯಾಟಿಂಗ್‌ನಲ್ಲಿ ಸ್ಫೋಟಕ ಪ್ರದರ್ಶನ ನೀಡುತ್ತಿದ್ದ ವಿಂಡೀಸ್‌ನ ದೈತ್ಯ ವಿವಿಯನ್ ರಿಚರ್ಡ್ಸ್ ಅವರು ಮದನ್‌ಲಾಲ್ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದರು. ಮೇಲಕ್ಕೆ ಹಾರಿದ ಚೆಂಡನ್ನು ನಾಯಕ ಕಪಿಲ್ ದೇವ್ ಓಡುತ್ತ ಬಂದು ಕ್ಯಾಚ್ ತೆಗೆದುಕೊಳ್ಳುವುದರೊಂದಿಗೆ ಭಾರತದ ಪಾಳಯದಲ್ಲಿ ವಿಜಯದ ಆಸೆ ಚಿಗುರೊಡೆದಿತ್ತು. ಅಂತಿಮವಾಗಿ ವೆಸ್ಟ್ ಇಂಡೀಸ್ 140 ರನ್‌ಗಳಿಗೆ ಆಲೌಟಾಗಿ 43 ರನ್‌ಗಳ ಅಂತರದಿಂದ ಸೋಲು ಅನುಭವಿಸುವುದರೊಂದಿಗೆ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಪ್ರಶಸ್ತಿ ಪಡೆಯುವ ಅವಕಾಶವನ್ನು ಕಳೆದುಕೊಂಡಿತು. ಭಾರತ ತಂಡದ ನಾಯಕ ಕಪಿಲ್ ದೇವ್ ಪ್ರುಡೆನ್ಸಿಯಲ್ ಕಪ್ ಮತ್ತು 20,000 ಮೊತ್ತದ ಆಸ್ಟ್ರೇಲಿಯನ್ ಡಾಲರ್ ನಗದು ಬಹುಮಾನವನ್ನು ಪಡೆದರು. ಫೈನಲ್‌ನಲ್ಲಿ 7 ಓವರ್‌ಗಳಲ್ಲಿ 12ಕ್ಕೆ 3 ವಿಕೆಟ್ ಉಡಾಯಿಸಿದ ಮೊಹಿಂದರ್ ಅಮರನಾಥರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದು ಬಂತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)