ಗಾಯಗೊಂಡರೂ ದಿಟ್ಟ ಪ್ರದರ್ಶನ ನೀಡಿದ ವಾಟ್ಸನ್: ಹರ್ಭಜನ್
ಹೊಸದಿಲ್ಲಿ, ಮೇ 14: ಮುಂಬೈ ಇಂಡಿಯನ್ಸ್ ವಿರುದ್ಧ ರವಿವಾರ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಕೇವಲ ಒಂದು ರನ್ನಿಂದ ಸೋತು ಪ್ರಶಸ್ತಿ ವಂಚಿತವಾಗಿರುವುದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ಹರ್ಭಜನ್ ಸಿಂಗ್ಗೆ ತೀವ್ರ ನಿರಾಶೆಯಾಗಿದೆ. ಆದರೆ, ಸಹ ಆಟಗಾರರ ಬದ್ಧತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾತ್ರವಲ್ಲ, ಬ್ಯಾಟಿಂಗ್ ವೇಳೆ ಗಾಯಗೊಂಡ ಹೊರತಾಗಿಯೂ ಶೇನ್ ವಾಟ್ಸನ್ ದಿಟ್ಟ ಪ್ರದರ್ಶನ ನೀಡಿರುವ ವಿಚಾರವನ್ನು ಬಹಿರಂಗಪಡಿಸಿದರು.
ತನ್ನ ವಿಕೆಟ್ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಮೇಲಕ್ಕೆ ಹಾರುವ ಯತ್ನದಲ್ಲಿ ವಾಟ್ಸನ್ ಮಂಡಿಭಾಗಕ್ಕೆ ಗಾಯವಾಗಿತ್ತು. ಈ ಗಾಯಕ್ಕೆ ಅವರು ಆರು ಹೊಲಿಗೆ ಹಾಕಿಸಿಕೊಂಡಿದ್ದರು ಎಂದು ವಾಟ್ಸನ್ರ ರಕ್ತ ಸೋರುತ್ತಿದ್ದ ಬಲಗಾಲಿನ ಚಿತ್ರವನ್ನು ಹರ್ಭಜನ್ ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದಾರೆ.
‘‘ರಕ್ತ ಸೋರುತ್ತಿರುವ ವಾಟ್ಸನ್ರ ಮೊಣಕಾಲನ್ನು ನೀವು ನೋಡಬಹುದೇ?...ಪಂದ್ಯ ಮುಗಿದ ಬಳಿಕ ಅವರು ಆ ಗಾಯಕ್ಕೆ ಆರು ಹೊಲಿಗೆ ಹಾಕಿಕೊಂಡಿದ್ದರು...ಮೇಲಕ್ಕೆ ಹಾರುವ ವೇಳೆ ಗಾಯವಾಗಿದೆ. ಆದರೆ, ಯಾರಿಗೂ ಆ ವಿಷಯವನ್ನು ಹೇಳದೇ ಬ್ಯಾಟಿಂಗ್ ಮುಂದುವರಿಸಿದ್ದಾರೆ’’ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದಿರುವ ಹರ್ಭಜನ್ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಗೆಲ್ಲಲು 150 ರನ್ ಗುರಿ ಪಡೆದಿದ್ದ ಚೆನ್ನೈ ಪರ ಆರಂಭಿಕ ಆಟಗಾರ ವಾಟ್ಸನ್ 59 ಎಸೆತಗಳಲ್ಲಿ 80 ರನ್ ಗಳಿಸಿದ್ದರು. ಕೊನೆಯ ಓವರ್ನಲ್ಲಿ ರನೌಟ್ ಆಗಿದ್ದರು. ಚೆನ್ನೈ 1 ರನ್ನಿಂದ ಪಂದ್ಯ ಸೋತಿತ್ತು