varthabharthi

ಕ್ರೀಡೆ

ಚಾಂಪಿಯನ್ ಭಾರತದ ಅಭಿಯಾನ ಸೆಮಿಫೆ ನಲ್ ನಲ್ಲಿ ಮುಕ್ತಾಯ

ಆಸೀಸ್ ಮಡಿಲಿಗೆ ಚೊಚ್ಚಲ ಕಪ್

ವಾರ್ತಾ ಭಾರತಿ : 15 May, 2019

ವಿಶ್ವಕಪ್ ನೆನಪು

ಭಾರತ ಮತ್ತು ಪಾಕಿಸ್ತಾನದ ಜಂಟಿ ಆತಿಥ್ಯದಲ್ಲಿ 1987ರಲ್ಲಿ ನಡೆದ ನಾಲ್ಕನೇ ವಿಶ್ವಕಪ್ ಹಲವು ಪ್ರಥಮಗಳನ್ನು ಕಂಡಿತು. ಸಾಂಪ್ರದಾಯಿಕವಾಗಿ ‘ಕ್ರಿಕೆಟ್ ಕಾಶಿ’ ಎಂದೇ ಪ್ರಖ್ಯಾತಿ ಪಡೆದಿರುವ ಇಂಗ್ಲೆಂಡ್‌ನಲ್ಲಿ ನಡೆಯುತ್ತಿದ್ದ ವಿಶ್ವಕಪ್ ಮೊದಲ ಬಾರಿಗೆ ಭಾರತ-ಪಾಕಿಸ್ತಾನದ ಉಪಖಂಡದಲ್ಲಿ ನಡೆಯಿತು.

 ನಾಲ್ಕನೆ ವಿಶ್ವಕಪ್‌ನಲ್ಲಿ 60 ಓವರ್‌ಗಳ ಬದಲಾಗಿ ಆ ದಿನಗಳಲ್ಲಿ ಉತ್ಕೃಷ್ಟ ಎನ್ನುವಂತಿದ್ದ ಸೀಮಿತ 50 ಓವರುಗಳ ಏಕದಿನ ಕ್ರಿಕೆಟ್ ವಿಧಾನವನ್ನು ಮೊದಲ ಬಾರಿ ಈ ಟೂರ್ನಿ ಮೂಲಕ ಜಾರಿಗೆ ತರಲಾಯಿತು.ಹಾಗೆಯೇ ಮೊದಲ ಬಾರಿ ತಟಸ್ಥ ಅಂಪೈರ್‌ಗಳನ್ನು ನೇಮಕ ಮಾಡಲಾಯಿತು.

ಮೊದಲ ಮೂರು ಟೂರ್ನಿಗಳು ಇಂಗ್ಲೆಂಡ್‌ನಲ್ಲಿ ನಡೆದಿದ್ದರಿಂದ ಮೊದಲ ಬಾರಿ ಭಾರತ ಮತ್ತು ಪಾಕಿಸ್ತಾನದ ಹವಾಮಾನ ಮತ್ತು ಇಲ್ಲಿನ ಪಿಚ್‌ಗಳಿಗೆ ಹಲವು ತಂಡಗಳಿಗೆ ಹೊಂದಿಕೊಳ್ಳುವುದು ದೊಡ್ಡ ಸವಾಲಾಗಿತ್ತು. ತವರಿನಲ್ಲಿ ನಡೆದ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಭಾರತ ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ದ ಮತ್ತು ಪಾಕಿಸ್ತಾನ ತಂಡವು ಆಸೀಸ್ ವಿರುದ್ದ ಸೋಲನುಭವಿಸಿತು. ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ತಂಡಗಳು ಫೈನಲ್ ಸಮರದಲ್ಲಿ ಪ್ರಶಸ್ತಿಗಾಗಿ ಕಾದಾಡಿದವು. ಅಲನ್ ಬಾರ್ಡರ್ ನೇತೃತ್ವದ ಆಸ್ಟ್ರೇಲಿಯ ತಂಡ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು 7 ರನ್‌ಗಳ ರೋಚಕ ಜಯ ದಾಖಲಿಸಿ ಚೊಚ್ಚಲ ಪ್ರಶಸ್ತಿ ಬಾಚಿಕೊಂಡಿತು. ಮೊದಲ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್‌ನ ಎದುರು ಸೋತು ಪ್ರಶಸ್ತಿ ವಂಚಿತವಾಗಿದ್ದ ಆಸ್ಟ್ರೇಲಿಯ ಕೋಲ್ಕತಾದ ಈಡನ್ ಗಾರ್ಡನ್‌ನಲ್ಲಿ ವಿಶ್ವ ಚಾಂಪಿಯನ್ ಕಿರೀಟ ಧರಿಸಿತು.

ಸಮಾನ ದು:ಖಿಗಳು: ನ.4ರಂದು ನಡೆದ ಸೆಮಿ ಫೈನಲ್‌ನಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯ ವಿರುದ್ದ 18 ರನ್‌ಗಳಿಂದ ಸೋತಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯ 8 ವಿಕೆಟ್ ನಷ್ಟಕ್ಕೆ 267(ಬೂನ್ 65, ವೆಲೆಟ್ 48ರನ್ ) ಮತ್ತು ಪಾಕಿಸ್ತಾನ ಆಲೌಟ್ 249(ಜಾವೇದ್ ಮಿಯಂದಾದ್ 70, ಇಮ್ರಾನ್ ಖಾನ್ 58) ರನ್ ಗಳಿಸಿತ್ತು. ಮುಂಬೈನಲ್ಲಿ ನವೆಂಬರ್ 5ರಂದು ನಡೆದ ಇಂಗ್ಲೆಂಡ್ ವಿರುದ್ದದ ಸೆಮಿ ಫೈನಲ್‌ನಲ್ಲಿ ಟಾಸ್ ಗೆದ್ದ ಭಾರತದ ನಾಯಕ ಕಪಿಲ್ ದೇವ್ ಸ್ಪಿನ್ನರ್‌ಗಳನ್ನು ಅತಿಯಾಗಿ ನಂಬಿ ಇಂಗ್ಲೆಂಡನ್ನು ಬ್ಯಾಟಿಂಗ್‌ಗೆ ಇಳಿಸಿದ್ದರು. ಇಂಗ್ಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ಗ್ರಹಾಂ ಗೂಚ್ ಶತಕ (115) ಮತ್ತು ನಾಯಕ ಮೈಕ್ ಗ್ಯಾಟಿಂಗ್ ಅರ್ಧಶತಕದ ನೆರವಿನಿಂದ (56) ಇಂಗ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 254 ರನ್ ಸಂಪಾದಿಸಿತ್ತು. ನಾಯಕ ಕಪಿಲ್ ದೇವ್ 38ಕ್ಕೆ 2 ಮತ್ತು ಮಣಿಂದರ್ ಸಿಂಗ್ 54ಕ್ಕೆ 3 ವಿಕೆಟ್ ಗಿಟ್ಟಿಸಿಕೊಂಡಿದ್ದರು.

ಗೆಲ್ಲಲು 255 ರನ್‌ಗಳ ಗುರಿ ಪಡೆದ ಭಾರತಕ್ಕೆ ಮುಹಮ್ಮದ್ ಅಝರುದ್ದೀನ್ ಅರ್ಧಶತಕ(64), ನಾಯಕ ಕಪಿಲ್ ದೇವ್ (30) ಗರಿಷ್ಠ ಕೊಡುಗೆ ನೀಡಿದರು. ಆದರೆ ಮಧ್ಯಮ ಕ್ರಮಾಂಕದ ಕೆಲ ಆಟಗಾರರ ಉತ್ತಮ ಪ್ರದರ್ಶನದ ಹೊರತಾಗಿಯೂ ಭಾರತ ತಂಡ ಇಂಗ್ಲೆಂಡ್‌ನ ಹೇಮಿಂಗ್ಸ್ (4-52) ಮತ್ತು ಫೊಸ್ಟರ್ (3-47)ದಾಳಿಗೆ ಸಿಲುಕಿ ತವರಿನ ಅಭಿಮಾನಿಗಳೆದುರು 45.3 ಓವರ್‌ಗಳಲ್ಲಿ 219 ರನ್‌ಗಳಿಗೆ ಆಲೌಟ್ ಆಗಿ 35 ರನ್‌ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು.ಇದರೊಂದಿಗೆ ಹಾಲಿ ಚಾಂಪಿಯನ್ ಭಾರತ ಇನ್ನೊಮ್ಮೆ ವಿಶ್ವಕಪ್ ಎತ್ತುವ ಅವಕಾಶ ಕಳೆದುಕೊಂಡಿತು. ಫೈನಲ್: ಈಡನ್ ಗಾರ್ಡನ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೇವಿಡ್ ಬೂನ್ ಸಿಡಿಸಿದ 75 ರನ್ ನೆರವಿನಿಂದ ಆಸ್ಟ್ರೇಲಿಯ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 253 ರನ್ ಕಲೆ ಹಾಕಿತ್ತು.ಆಸೀಸ್ ನೀಡಿದ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಇಂಗ್ಲೆಂಡ್ ಆರಂಭದಲ್ಲಿಯೇ ರಾಬಿನ್ಸನ್ ವಿಕೆಟ್ ಕಳೆದುಕೊಂಡಿತು. ಬಿಲ್ ಆಥೆಯ್ 58 ರನ್ ಮತ್ತು ಗ್ಯಾಟಿಂಗ್‌ರ 41ರನ್ ಮತ್ತು ಲ್ಯಾಂಬ್ 45 ರನ್ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಲು ಸಾಧ್ಯವಾಯಿತು. ಒಂದು ಹಂತದಲ್ಲಿ 135ಕ್ಕೆ ಮೂರು ವಿಕೆಟ್ ಕಳೆದುಕೊಂಡು ಸುಭದ್ರ ಸ್ಥಿತಿಯಲ್ಲಿದ್ದ ಇಂಗ್ಲೆಂಡ್‌ಗೆ ಅಪರೂಪಕ್ಕೆ ಸ್ಪಿನ್ ಬೌಲಿಂಗ್ ಮಾಡುತ್ತಿದ್ದ ಆಸೀಸ್ ನಾಯಕ ಬಾರ್ಡರ್ ಶಾಕ್ ನೀಡಿದರು. ಅವರ ಬೌಲಿಂಗ್‌ನಲ್ಲಿ ಗ್ಯಾಟಿಂಗ್ ರಿವರ್ಸ್ ಸ್ವೀಪ್‌ಗೆ ಯತ್ನಿಸಿ ವಿಕೆಟ್ ಕೀಪರ್ ಗ್ರೆಗ್ ಡೈಯರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಬಳಿಕ ಇಂಗ್ಲೆಂಡ್ ತಂಡದ ರನ್ ಗಳಿಕೆ ಕುಂಠಿತಗೊಂಡಿತು. ಅಂತಿಮ ಓವರ್‌ನಲ್ಲಿ ಇಂಗ್ಲೆಂಡ್‌ಗೆ ಗೆಲ್ಲಲು 17 ರನ್‌ಗಳ ಅಗತ್ಯವಿತ್ತು. ಅಲನ್ ಲ್ಯಾಂಬ್ ಗೆಲುವಿಗೆ ಸಾಕಷ್ಟು ಪ್ರಯತ್ನ ನಡೆಸಿದರೂ ಫಲ ನೀಡಲಿಲ್ಲ. ಅಂತಿಮವಾಗಿ ಏಳು ರನ್‌ಗಳಿಂದ ಆಸೀಸ್ ಫೈನಲ್ ಪಂದ್ಯವನ್ನು ಗೆದ್ದುಕೊಂಡು ಮೊದಲ ಬಾರಿ ವಿಶ್ವಕಪ್‌ನ್ನು ಎತ್ತಿ ಹಿಡಿಯಿತು.

ಪ್ರಮುಖ ಅಂಶಗಳು

►ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಮಧ್ಯೆ ನಡೆದ ಪಂದ್ಯದ ಅಂತಿಮ ಓವರ್‌ನಲ್ಲಿ ವಿಂಡೀಸ್‌ನ ಬೌಲರ್ ಕಾಟ್ನಿ ವಾಲ್ಶ್ ಪಾಕ್‌ನ ಅಂತಿಮ ಬ್ಯಾಟ್ಸ್‌ಮನ್ ಸಲೀಂ ಜಾಫರ್‌ರನ್ನು ರನೌಟ್ ಮಾಡುವ ಅವಕಾಶ ಇದ್ದರೂ, ರನೌಟ್ ಮಾಡದೇ ಬೆದರಿಸಿದರು. ಇದರ ಫಲವಾಗಿ ಪಾಕ್ ಒಂದು ವಿಕೆಟ್‌ನಿಂದ ಪಂದ್ಯವನ್ನು ಗೆದ್ದು ಕೊಂಡಿತು. ಆದರೆ ಸೆಮಿಫೈನಲ್ ತಲುಪುವ ವಿಂಡೀಸ್‌ನ ಕನಸು ಭಗ್ನಗೊಂಡಿತು. ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿ ಇಂತಹದ್ದೊಂದು ಅವಿಸ್ಮರಣೀಯ ಘಟನೆಗೂ ಸಾಕ್ಷಿಯಾಯಿತು.

►ಭಾರತದ ಚೇತನ್ ಶರ್ಮ ನ್ಯೂಝಿಲ್ಯಾಂಡ್ ವಿರುದ್ದದ ಪಂದ್ಯದಲ್ಲಿ ಹ್ಯಾಟ್ರಿಕ್ ಗಳಿಸಿದರು.

►ಭಾರತದ ಸುನೀಲ್ ಗವಾಸ್ಕರ್ ನ್ಯೂಝಿಲ್ಯಾಂಡ್ ವಿರುದ್ದ ಮೊದಲ ಅಜೇಯ ಶತಕ(103) ದಾಖಲಿಸಿದರು. ಆದರೆ ಸೆಮಿಫೈನಲ್‌ನಲ್ಲಿ 4 ರನ್ ಗಳಿಸಿ ಔಟಾದರು. ಭಾರತ ಸೆಮಿಫೈನಲ್‌ನಲ್ಲಿ ನಿರ್ಗಮಿಸಿದ ಬೆನ್ನಲ್ಲೆ ಗವಾಸ್ಕರ್ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದರು.

►ಇಂಗ್ಲೆಂಡ್‌ನ ಗ್ರಹಾಂ ಗೂಚ್ ಗರಿಷ್ಠ ರನ್(471) ಮತ್ತು ಆಸ್ಟ್ರೇಲಿಯದ ಕ್ರೇಗ್ ಮೆಕ್‌ಡರ್ಮೆಟ್ ಗರಿಷ್ಠ ವಿಕೆಟ್ ಸಂಪಾದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)