varthabharthi

ಕ್ರೀಡೆ

ಮೊದಲ ಮಹಿಳಾ ಮ್ಯಾಚ್ ರೆಫರಿ ಆಗಿ ಭಾರತದ ಜಿ.ಎಸ್.ಲಕ್ಷ್ಮೀ ಆಯ್ಕೆ

ವಾರ್ತಾ ಭಾರತಿ : 15 May, 2019

ದುಬೈ, ಮೇ 14: ಐಸಿಸಿಯ ಅಂತರ್‌ರಾಷ್ಟ್ರೀಯ ಮ್ಯಾಚ್ ರೆಫರಿಗಳ ಸಮಿತಿಗೆ ಭಾರತದ ಜಿ.ಎಸ್. ಲಕ್ಷ್ಮೀ ಆಯ್ಕೆಯಾಗಿದ್ದಾರೆ. ಮ್ಯಾಚ್ ರೆಫರಿ ಆಗಿ ಆಯ್ಕೆಯಾಗಿರುವ ಮೊದಲ ಮಹಿಳಾ ಅಧಿಕಾರಿಯೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಲಕ್ಷ್ಮೀ ಶೀಘ್ರವೇ ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಮ್ಯಾಚ್ ರೆಫರಿ ಆಗಿ ಕಾರ್ಯನಿರ್ವಹಿಸಲು ಅರ್ಹತೆ ಪಡೆದಿದ್ದಾರೆ.

 ಈ ತಿಂಗಳಾರಂಭದಲ್ಲಿ ಕ್ಲೈರ್ ಪೊಲೊಸಾಕ್ ಪುರುಷರ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಕಾರ್ಯನಿರ್ವಹಿಸಿದ ಮೊದಲ ಮಹಿಳಾ ಅಂಪೈರ್ ಆಗಿದ್ದರು. 51ರ ಹರೆಯದ ಲಕ್ಷ್ಮೀ 2008-09ರಲ್ಲಿ ಮೊದಲ ಬಾರಿ ದೇಶೀಯ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಮ್ಯಾಚ್ ರೆಫರಿ ಆಗಿ ಕೆಲಸ ಮಾಡಿದ್ದರು. ಆ ಬಳಿಕ 3 ಮಹಿಳಾ ಏಕದಿನ ಹಾಗೂ 3 ಟ್ವೆಂಟಿ-20 ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದರು.

‘‘ಐಸಿಸಿಯಿಂದ ಅಂತರ್‌ರಾಷ್ಟ್ರೀಯ ಸಮಿತಿಗೆ ಆಯ್ಕೆಯಾಗಿರುವುದು ನನ್ನ ಪಾಲಿಗೆ ದೊಡ್ಡ ಗೌರವ. ಭಾರತದಲ್ಲಿ ಕ್ರಿಕೆಟರ್ ಹಾಗೂ ಮ್ಯಾಚ್ ರೆಫರಿ ಆಗಿ ದೀರ್ಘ ಸಮಯ ಕಳೆದಿದ್ದೇನೆ. ಅಂತರ್‌ರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಆಟಗಾರ್ತಿಯಾಗಿ ಹಾಗೂ ಮ್ಯಾಚ್ ಅಧಿಕಾರಿಯಾಗಿ ತಾನು ಗಳಿಸಿರುವ ಅನುಭವವನ್ನು ಧಾರೆ ಎರೆಯುವ ವಿಶ್ವಾಸ ನನಗಿದೆ’’ ಎಂದು ಲಕ್ಷ್ಮೀ ಹೇಳಿದ್ದಾರೆ.

 ಅಂಪೈರ್‌ಗಳ ಐಸಿಸಿ ಡೆವಲಪ್‌ಮೆಂಟ್ ಪ್ಯಾನಲ್‌ಗೆ ಆಸ್ಟ್ರೇಲಿಯದ ಪೊಲೊಸಾಕ್‌ರೊಂದಿಗೆ ಅವರದೇ ದೇಶದ ಇಲೊಸ್ ಶೆರಿಡಾನ್ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಸಮಿತಿಯಲ್ಲಿ ಮಹಿಳೆಯರ ಸಂಖ್ಯೆ ಏಳಕ್ಕೇರಿದೆ.

 ಲಾರೆನ್ ಅಜೆನ್‌ಬಾಗ್, ಕಿಮ್ ಕಾಟ್ಟನ್, ಶಿವಾನಿ ಮಿಶ್ರಾ, ಸುಯ್ ರೆಡ್‌ಫೆರ್ನ್, ಮೇರಿ ವಾಲ್ಡ್ರೊನ್ ಹಾಗೂ ಜಾಕ್‌ಲಿನ್ ವಿಲಿಯಮ್ಸ್ ಅಂಪೈರ್ ಸಮಿತಿಯಲ್ಲಿರುವ ಇತರ ಅಧಿಕಾರಿಗಳಾಗಿದ್ದಾರೆ. ಅಂಪೈರ್‌ಗಳ ಅಭಿವೃದ್ಧಿ ಸಮಿತಿಯಲ್ಲಿದ್ದ ಮೊದಲ ಮಹಿಳಾ ಅಂಪೈರ್ ಕಾಥಿ ಕ್ರಾಸ್ ಕಳೆದ ವರ್ಷ ನಿವೃತ್ತಿಯಾಗಿದ್ದಾರೆ. ‘‘ನಾವು ನಮ್ಮ ಪ್ಯಾನಲ್‌ಗೆ ಲಕ್ಷ್ಮೀ ಹಾಗೂ ಶೆರಿಡಾನ್‌ರನ್ನು ಸ್ವಾಗತಿಸುತ್ತೇವೆ. ಮಹಿಳಾ ಅಧಿಕಾರಿಗಳನ್ನು ಹುರಿದುಂಬಿಸುವ ನಮ್ಮ ಬದ್ಧ್ದತೆಯ ದಿಟ್ಟ ಹೆಜ್ಜೆ ಇದಾಗಿದೆ. ಈ ಇಬ್ಬರು ಉಳಿದವರಿಗೆ ಮಾದರಿಯಾಗುವ ವಿಶ್ವಾಸ ನಮಗಿದೆ’’ ಎಂದು ಐಸಿಸಿ ಅಂಪೈರ್‌ಗಳು ಹಾಗೂ ರೆಫರಿಗಳ ಹಿರಿಯ ಮ್ಯಾನೇಜರ್ ಅಡ್ರಿಯಾನ್ ಗ್ರಿಫಿತ್ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)