varthabharthi

ಕ್ರೀಡೆ

ವಿಶ್ವಕಪ್‌ಗೆ ರಿಷಭ್ ಪಂತ್ ಲಭ್ಯವಿರುವುದಿಲ್ಲ: ಗಂಗುಲಿ

ವಾರ್ತಾ ಭಾರತಿ : 15 May, 2019

ಕೋಲ್ಕತಾ, ಮೇ 14: ಇಂಗ್ಲೆಂಡ್‌ನಲ್ಲಿ ಮೇ 30 ರಿಂದ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್‌ನಿಂದ ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಹೊರಗುಳಿಯಲಿದ್ದಾರೆ ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಸೋಮವಾರ ಪುನರುಚ್ಚರಿಸಿದ್ದಾರೆ. ರಾಷ್ಟ್ರೀಯ ಆಯ್ಕೆ ಸಮಿತಿಯು ಹಿರಿಯ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಬದಲಿಗೆ ರಿಷಭ್ ಪಂತ್‌ರನ್ನು ಎರಡನೇ ವಿಕೆಟ್‌ಕೀಪರ್ ಆಗಿ ವಿಶ್ವಕಪ್‌ಗೆ ಆಯ್ಕೆ ಮಾಡಿತ್ತು. ಇದೀಗ 21ರ ಹರೆಯದ ಪಂತ್ ವಿಶ್ವಕಪ್‌ನಲ್ಲಿ ಆಡಲಿರುವ ಭಾರತ ತಂಡದಿಂದ ಹೊರಗುಳಿಯುವುದು ನಿಶ್ಚಿತವಾಗಿದೆ. ರವಿವಾರ ಕೊನೆಗೊಂಡ 12ನೇ ಆವೃತ್ತಿಯ ಐಪಿಎಲ್ ಟಿ-20 ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಪಂತ್ 162.66ರ ಸ್ಟ್ರೈಕ್‌ರೇಟ್‌ನಲ್ಲಿ 37.53ರ ಸರಾಸರಿಯಲ್ಲಿ 16 ಪಂದ್ಯಗಳಲ್ಲಿ 488 ರನ್ ಗಳಿಸಿದ್ದಾರೆ. ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ಭಾರತದ ಇನ್ನೋರ್ವ ಆಟಗಾರ ಕೇದಾರ್ ಜಾಧವ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಮಧ್ಯೆ ನಡೆದಿದ್ದ ಐಪಿಎಲ್ ಪಂದ್ಯದ ವೇಳೆ ಭುಜನೋವಿಗೆ ತುತ್ತಾಗಿದ್ದರು. ಜೂ.5 ರಂದು ದಕ್ಷಿಣ ಆಫ್ರಿಕ ವಿರುದ್ದ ಭಾರತ ಆಡಲಿರುವ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಜಾಧವ್ ಲಭ್ಯತೆ ಬಗ್ಗೆ ಕಾದುನೋಡುವ ತಂತ್ರಕ್ಕೆ ವೈದ್ಯಕೀಯ ಸಿಬ್ಬಂದಿ ಮೊರೆಹೋಗಿದೆ. ಒಂದು ವೇಳೆ ಜಾಧವ್ ಫಿಟ್ನೆಸ್ ಪಡೆಯಲು ವಿಫಲರಾದರೆ ಅವರ ಜಾಗಕ್ಕೆ ಪಂತ್ ಹೆಸರು ಪ್ರಸ್ತಾವವಾಗುವುದೇ? ಎಂಬ ಪ್ರಶ್ನೆಗೆ ಉತ್ತರಿಸಿದ ಗಂಗುಲಿ.‘‘ಪಂತ್ ಗಾಯಗೊಂಡಿದ್ದಾರೆ. ಅವರು ಫಿಟ್ ಆಗುತ್ತಾರೊ, ಇಲ್ಲವೋ ಎಂದು ಹೇಳಲು ಕಷ್ಟವಾಗುತ್ತಿದೆ. ಜಾಧವ್ ಫಿಟ್ ಆಗುವ ವಿಶ್ವಾಸ ನನಗಿದೆ’’ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)