varthabharthi

ರಾಷ್ಟ್ರೀಯ

ಇಲ್ಲಿ ಎನ್‌ಡಿಎ ಕೂಟದ ಹಾಲಿ - ಮಾಜಿ ಪಕ್ಷಗಳ ಕದನ ಕುತೂಹಲ

ವಾರ್ತಾ ಭಾರತಿ : 15 May, 2019

ಕಾರಾಕಟ್: ಬಿಹಾರದ ಈ ಪ್ರತಿಷ್ಠಿತ ಕ್ಷೇತ್ರ ಎರಡು ಪ್ರಾದೇಶಿಕ ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರ ನಡುವಿನ ಜಿದ್ದಾ ಜಿದ್ದಿ ಹೋರಾಟದಿಂದಾಗಿ ರಾಷ್ಟ್ರದ ಗಮನ ಸೆಳೆದಿದೆ.

ಹಿಂದಿನ ಚುನಾವಣೆಯಲ್ಲಿ ಎನ್‌ಡಿಎ ಮಿತ್ರಪಕ್ಷವಾಗಿದ್ದ ಆರ್‌ಎಲ್‌ಎಸ್‌ಪಿ ರಾಷ್ಟ್ರೀಯ ಅಧ್ಯಕ್ಷ ಉಪೇಂದ್ರ ಕುಶ್ವಾಹ ಹಾಗೂ ಹೊಸದಾಗಿ ಎನ್‌ಡಿಎ ತೆಕ್ಕೆಗೆ ಸೇರಿರುವ ಸಂಯುಕ್ತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ನಿತೀಶ್ ಕುಮಾರ್ ನಡುವಿನ ಹೋರಾಟ ಇದು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಚುನಾವಣೆಗೆ ಸ್ಪರ್ಧಿಸಿಲ್ಲವಾದರೂ ತಮ್ಮ ಆಪ್ತ ಮಹಾಬಲಿ ಸಿಂಗ್ ಅವರನ್ನು ಕುಶ್ವಾಹ ವಿರುದ್ಧ ಕಣಕ್ಕಿಳಿಸಿದ್ದು, ತಮ್ಮ ಪ್ರತಿಷ್ಠೆಯನ್ನೇ ಪಣಕ್ಕಿಟ್ಟಿದ್ದಾರೆ. ಆದ್ದರಿಂದ ಇದು ಎರಡು ಪ್ರಾದೇಶಿಕ ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರ ನಡುವಿನ ಹೋರಾಟವಾಗಿ ಮಾರ್ಪಟ್ಟಿದೆ.

ಮಹಾ ಮೈತ್ರಿಕೂಟದ ಅಭ್ಯರ್ಥಿಯಾಗಿ ಈ ಬಾರಿ ಕುಶ್ವಾಹ ಕಾರಾಕಟ್‌ನಿಂದ ಕಣಕ್ಕಿಳಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಕೇವಲ 76 ಸಾವಿರ ಮತ ಗಳಿಸಿದ್ದ ಮಾಜಿ ಸಂಸದ ಮಹಾಬಲಿ ಸಿಂಗ್, ನಿತೀಶ್ ಅವರ ಜೆಡಿಯು ಅಭ್ಯರ್ಥಿ. 2014ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ತೆಕ್ಕೆಯಲ್ಲಿದ್ದ ಆರ್‌ಎಲ್‌ಎಸ್‌ಪಿಯ ಮುಖ್ಯಸ್ಥ ಕುಶ್ವಾಹ, ಆರ್‌ಜೆಡಿಯ ಕಾಂತಿ ಸಿಂಗ್ ಅವರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದರು.

2015ರ ವಿಧಾನಸಭಾ ಚುನಾವಣೆ ಬಳಿಕ ಜೆಡಿಯು, ಎನ್‌ಡಿಎ ತೆಕ್ಕೆಗೆ ಬಂದರೆ, ಆರ್‌ಎಲ್‌ಎಸ್‌ಪಿ ಹೊರಹೋಗಿತ್ತು. ಬಿಜೆಪಿ ಹಾಗೂ ಜೆಡಿಯು ಎರಡೂ ಪಕ್ಷಗಳ ಅಭ್ಯರ್ಥಿಗಳನ್ನು ಸೋಲಿಸುವ ಛಲದಿಂದ ಕುಶ್ವಾಹ, ಕಾರಾಕಟ್ ಮತ್ತು ಉಜಿಯಾರ್‌ಪುರ ಕ್ಷೇತ್ರಗಳಿಂದ ಕಣಕ್ಕೆ ಇಳಿದಿದ್ದಾರೆ. "ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವುದರಿಂದ ಯಾವ ಹಾನಿಯೂ ಇಲ್ಲ" ಎಂದು ಅವರು ಕಾರ್ಯಕರ್ತರಿಗೆ ಹೇಳಿದ್ದಾರೆನ್ನಲಾಗಿದೆ.

ಕಾರಾಕಟ್‌ನಲ್ಲಿ ಮಹಾಬಲಿ ಸ್ಪರ್ಧಿಸಿದ್ದರೆ, ರಾಜ್ಯ ಬಿಜೆಪಿ ಅಧ್ಯಕ್ಷ ನಿತ್ಯಾನಂದ ರಾಯ್ ಉಜಿಯಾರ್‌ಪುರ ಹುರಿಯಾಳು. ಉಜಿಯಾರ್‌ಪುರದಲ್ಲಿ ಮತದಾನ ಮುಗಿದಿದ್ದರೆ, ಕಾರಾಕಟ್‌ನಲ್ಲಿ ಮೇ 19ರಂದು ಮತದಾನವಿದೆ. "ಮಹಾಬಲಿಯವರ ಸೋಲು, ನಿತೀಶ್ ಅವರ ಸೋಲಾಗುತ್ತದೆ. ಆದ್ದರಿಂದ ಅವರ ಗೆಲುವಿಗೆ ಮುಖ್ಯಮಂತ್ರಿ ಟೊಂಕ ಕಟ್ಟಿದ್ದಾರೆ" ಎಂದು ಮಹಾಬಲಿಯವರ ಬೆಂಬಲಿಗರೊಬ್ಬರು ಸ್ಪಷ್ಟಪಡಿಸಿದ್ದಾರೆ.

ಮತದಾರರಲ್ಲಿ ಎನ್‌ಡಿಎ ಅಭ್ಯರ್ಥಿ ಹಾಗೂ ಕುಶ್ವಾಹ ಇಬ್ಬರ ಬಗೆಗೂ ಅಸಮಾಧಾನವಿದ್ದು, ಫಲಿತಾಂಶ ಕುತೂಹಲ ಕೆರಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)