varthabharthi

ರಾಷ್ಟ್ರೀಯ

ಪುಲ್ವಾಮಾ ದಾಳಿಯಲ್ಲಿ ಬದುಕಿ ಉಳಿದ ಯೋಧನ ಮಾನವೀಯ ಮುಖ ಇದು...

ವಾರ್ತಾ ಭಾರತಿ : 15 May, 2019

ಶ್ರೀನಗರ, ಮೇ 15: ಪುಲ್ವಾಮಾ ದಾಳಿಯಲ್ಲಿ ಬದುಕಿ ಉಳಿದ ಸಿಆರ್‌ಪಿಎಫ್ ಯೋಧನೊಬ್ಬ, ಪಾರ್ಶ್ವವಾಯು ಪೀಡಿತ ಕಾಶ್ಮೀರಿ ಬಾಲಕನಿಗೆ ಊಟ ಮಾಡಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೈಯಿಂದ ಪುಟ್ಟ ಬಾಲಕನ ಮುಖ ಒರೆಸಿದ ಯೋಧ ಆ ಬಳಿಕ ಬಾಲಕನಿಗೆ ನೀರು ಕುಡಿಸುತ್ತಾರೆ. ಶ್ರೀನಗರದ ನವಕಡಲ್ ಪ್ರದೇಶದಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ವೇಳೆ ಸಿಆರ್‌ಪಿಎಫ್ ಯೋಧ ಇಕ್ಬಾಲ್ ಸಿಂಗ್ ಅವರ ಈ ಮಾನವೀಯ ಮುಖ ಪರಿಚಯವಾಗಿದೆ. ಇಕ್ಬಾಲ್ ಸಿಂಗ್ ಇನ್ನೇನು ಊಟ ಮಾಡಬೇಕು ಅನ್ನುವಷ್ಟರಲ್ಲಿ ಕಟ್ಟಡದ ಕಬ್ಬಿಣದ ಮೆಟ್ಟಲುಗಳ ಮೇಲೆ ಕುಳಿತಿದ್ದ ಸ್ಥಳೀಯ ಬಾಲಕ ಅವರ ಗಮನ ಸೆಳೆದ. ಕಪ್ಪು ಕುರ್ತಾ ಹಾಗೂ ಪೈಜಾಮಾ ಧರಿಸಿದ್ದ ಪುಟ್ಟ ಬಾಲಕ ಹಸಿವು ಹಾಗೂ ಅಸಹಾಯಕತೆಯಿಂದ ಇರುವುದು ಕಂಡುಬಂತು.

ಫೆ. 14ರ ಜೆಇಎಂ ಅತ್ಮಹತ್ಯಾ ಬಾಂಬ್ ದಾಳಿಗೆ ಒಳಗಾಗಿದ್ದ ಸಿಆರ್‌ಪಿಎಫ್ ಯೋಧರ ತಂಡದಲ್ಲಿದ್ದ ಇಕ್ಬಾಲ್ ಸಿಂಗ್, ತಕ್ಷಣ ಬಾಲಕನಿಗೆ ಏನಾದರೂ ಸಹಾಯ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದರು. ತಮ್ಮ ಊಟದ ಬುತ್ತಿಯನ್ನು ತೆರೆದು ತಮಗಾಗಿ ತಂದಿದ್ದ ದಾಲ್‌ರೈಸ್ ಅನ್ನು ಬಾಲಕನಿಗೆ ಉಣಿಸಿದರು.

ಈ ಕುರಿತ ವೀಡಿಯೊ ಪೋಸ್ಟ್ ಆದ ಕೆಲವೇ ಕ್ಷಣಗಳಲ್ಲಿ ಯೋಧನ ಈ ಮಾನವೀಯ ಮುಖವನ್ನು ಪರಿಚಯಿಸುವ ವೀಡಿಯೊವನ್ನು ಕಾಶ್ಮೀರಿ ಯುವಕರು ಹಾಗೂ ಜಮ್ಮು ಕಾಶ್ಮೀರ ಪೊಲಿಸರು ಸೇರಿದಂತೆ 1000ಕ್ಕೂ ಹೆಚ್ಚು ಮಂದಿ ಷೇರ್ ಮಾಡಿದ್ದಾರೆ. ಯೋಧನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಇಕ್ಬಾಲ್ ಅವರ ಈ ನೆರವಿಗೆ ಸಿಆರ್‌ಪಿಎಫ್ ಮಹಾನಿರ್ದೇಶಕರು ಡಿಸ್ಕ್ ಮತ್ತು ಶ್ಲಾಘನಾ ಪ್ರಮಾಣಪತ್ರ ಘೋಷಿಸಿದ್ದಾರೆ.

"ಮಾನವೀಯತೆ ಎಲ್ಲ ಧರ್ಮಗಳ ತಾಯಿ. ಕರ್ತವ್ಯದಲ್ಲಿದ್ದ ಶ್ರೀನಗರ ವಲಯದ ಸಿಆರ್‌ಪಿಎಫ್ 49ನೇ ಬೆಟಾಲಿಯನ್‌ನ ಹೆಡ್‌ಕಾನ್‌ಸ್ಟೇಬಲ್, ಚಾಲಕ ಇಕ್ಬಾಲ್ ಸಿಂಗ್, ಕಾಶ್ಮೀರದ ನವಕಡಲ್‌ನಲ್ಲಿ ಪಾರ್ಶ್ವವಾಯು ಪೀಡಿತ ಬಾಲಕನೊಬ್ಬನಿಗೆ ಊಟ ಮಾಡಿಸಿದರು" ಎಂದು ಸಿಆರ್‌ಪಿಎಫ್ ಹ್ಯಾಂಡಲ್ ಟ್ವೀಟ್ ಮಾಡಿದೆ. ಕೊನೆಯಲ್ಲಿ ನಿನಗೆ ನೀರು ಬೇಕೇ? ಎಂದು ಪ್ರಶ್ನಿಸಿದ ಟ್ವೀಟ್‌ನಲ್ಲಿ ಶೌರ್ಯ ಮತ್ತು ಅನುಕಂಪ ಒಂದೇ ನಾಣ್ಯದ ಎರಡು ಮುಖಗಳು ಎಂದು ಬಣ್ಣಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಕೂಡಾ ಟ್ವೀಟ್ ಮೂಲಕ ಮಾನವೀಯತೆ ಮೆರೆದ ಯೋಧನಿಗೆ ಸೆಲ್ಯೂಟ್ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)