varthabharthi

ನಿಮ್ಮ ಅಂಕಣ

ಅಮೆರಿಕದ ಎದುರು ಉತ್ತರ ಕುಮಾರ?

ವಾರ್ತಾ ಭಾರತಿ : 15 May, 2019
ಕೆ. ಶ್ರೀನಿವಾಸ್, ಕನ್ನಡಕ್ಕೆ: ಕಸ್ತೂರಿ

ಪರ್ಷಿಯನ್ ಗಲ್ಫ್‌ನಲ್ಲಿ ಅಮೆರಿಕ ಭಾರೀ ಯುದ್ಧ ನೌಕೆಯನ್ನು, ಒಂದು ಟಾಸ್ಕ್ ಫೋರ್ಸ್‌ನ ನೆಲೆಗೊಳಿಸಿದೆ. ತನ್ನ ಹಿತಾಸಕ್ತಿಗಳಿಗೆ, ಮಿತ್ರರಿಗೆ, ಸೇನೆಗಳಿಗೆ ಹಾನಿ ಉಂಟಾಗಿಸಿದರೆ ಎಚ್ಚರಿಕೆ ಎಂದು ಧಮಕಿ ಹಾಕಿದೆ. ಅಮೆರಿಕದ ನಿರ್ಬಂಧಗಳು, ಕ್ರಮಗಳು ಎಲ್ಲ ಉಗ್ರವಾದಿ ಕೃತ್ಯಗಳೇ ಎಂದು ಇರಾನ್ ಟೀಕಿಸಿದೆ. ಮತ್ತೊಂದು ಯುದ್ಧ ಬಾರದೇ ಹೋಗಬಹುದು. ಆದರೆ ಅಲ್ಲಿ ಮಾತ್ರ ಹಸಿ ಹುಲ್ಲು ಹಾಕಿದರೂ ಭಗ್ಗೆನ್ನುತ್ತದೆ. ದೇಶಗಳೆಲ್ಲಾ ತಮ್ಮ ವೈಖರಿಗಳನ್ನು ಪ್ರದರ್ಶಿಸುವ ದಿಟ್ಟತನವನ್ನು ತೋರಬೇಕಾದ ಕಾಲ ಇದು. ಒಂದು ವೋಟನ್ನೂ ಪಡೆಯಲಾರದ ಈ ಅಂಶದ ಮೇಲೆ ನಮ್ಮ ಉತ್ತರಕುಮಾರರ ಪೌರುಷ ಪ್ರಕಟಗೊಳ್ಳುವುದುಂಟೇ?

ಅಲಿಪ್ತ ಚಳವಳಿ ಎಂಬ ಹೆಸರಿನಿಂದ ಯಾವುದೋ ನಿರ್ಮಾಣ ಕೊನೆ ಉಸಿರಿನೊಂದಿಗೋ, ನಾಮ ಮಾತ್ರವಾಗಿಯೋ ಇನ್ನೂ ಮುಂದುವರಿಯುತ್ತಲೇ ಇದೆ. ನಾಲ್ಕು ವರ್ಷಗಳಿಗೆ ಒಂದು ಸಲ ಸುಮಾರು ನೂರ ಇಪ್ಪತ್ತು ಸದಸ್ಯ ದೇಶದ ಪ್ರತಿನಿಧಿಗಳು ಮತ್ತೊಂದು ಇಪ್ಪತ್ತು ದೇಶಗಳ ಪರಿಶೀಲಕ ಪ್ರತಿನಿಧಿಗಳು ಒಂದು ಸಭೆ ನಡೆಸಿಕೊಂಡು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಮಸ್ಯೆಗಳನ್ನು ಚರ್ಚಿಸಿಕೊಳ್ಳುತ್ತಾರೆ.

ಕಳೆದ ಸಲ ಅಲಿಪ್ತ ಚಳವಳಿ ಸಭೆ (17ನೇ ನಾಮ್) ವೆನೆಝುವೆಲಾ ದೇಶದ ಒಂದು ದ್ವೀಪದಲ್ಲಿ ನಡೆಯಿತು. ಆ ದೇಶ ಈಗ ಎಷ್ಟು ತೊಂದರೆಯಲ್ಲಿದೆಯೆಂದು ಎಲ್ಲರಿಗೂ ತಿಳಿದಿರುವಂತಹದ್ದೇ. ಅವರಿಂದ ತೈಲ ಕೊಂಡಿರೋ ಹುಷಾರ್ ಎಂದು ಇತ್ತೀಚೆಗೆ ಅಮೆರಿಕ ಎಂಬ ವಿಶ್ವ ಪೊಲೀಸ್ ಚಾಟಿ ಝಳಪಿಸಿತು. ಆ ಚಾಟಿಯ ಗುರಿಯಲ್ಲಿ ನಾವು ಸಹ ಇದ್ದೇವೆನ್ನುವುದನ್ನು ಗುರುತಿಸಬೇಕು. ವೆನೆಝುವೆಲಾ ಆಮದುಗಳನ್ನು ರಿಲಯನ್ಸ್ ತಕ್ಷಣ ನಿಲ್ಲಿಸಿಬಿಟ್ಟಿತು. ಭಾರತ ಸರಕಾರವೂ ಅದೇ ಕೆಲಸ ಮಾಡುತ್ತಿದೆ.

16ನೇ ಅಲಿಪ್ತ ಚಳವಳಿ ಸಭೆ ಇರಾನ್‌ನಲ್ಲಿ 2012ರಲ್ಲಿ ನಡೆಯಿತು. ಅಮೆರಿಕ-ಇರಾನ್ ಮಧ್ಯೆ ಆಗ ಭಗ್ಗೆನ್ನುವ ಪರಿಸ್ಥಿತಿ. ಇರಾನ್‌ನಲ್ಲಿ ಸರಕಾರ ಬದಲಾಗಿ, ಅಮೆರಿಕದಲ್ಲಿ ಒಬಾಮಾರ ಶಾಂತಿ ಬಯಕೆಯಿಂದಾಗಿ, 2015ರ ಕಾಲಕ್ಕೆ ಉದ್ರಿಕ್ತತೆಗಳು ತಣ್ಣಗಾದವು. ಒಬಾಮಾ ಮಾಡಿದ್ದರಲ್ಲಿ ಒಳ್ಳೆಯದು ಏನಾದರೂ ಇದ್ದರೆ ಅದನ್ನು ಅಳಿಸುವುದೇ ಕೆಲಸವಾಗಿ ಇಟ್ಟುಕೊಂಡ ಡೊನಾಲ್ಡ್ ಟ್ರಂಪ್ ಇರಾನ್‌ನೊಂದಿಗಿನ ಒಪ್ಪಂದದಿಂದ ತಪ್ಪಿಸಿಕೊಂಡರು. ಒಪ್ಪಂದ ರದ್ದಿಗೆ 2019 ಮೇ 8ರ ಕಾಲಕ್ಕೆ ಸರಿಯಾಗಿ ವರ್ಷ ತುಂಬಿದೆ. ಈಗ ಮತ್ತೆ ಒಂದು ಪ್ರಪಂಚ ಸಂಕ್ಷೋಭೆ. ವರ್ಷದ ಕೆಳಗೆ ನಮಗೂ ಚೀನಾ, ಟರ್ಕಿ ಮತ್ತೆ ಕೆಲವು ದೇಶಗಳಿಗೆ ಇರಾನ್‌ನಿಂದ ತೈಲ ಕೊಂಡುಕೊಳ್ಳುವುದಕ್ಕೆ ಉದಾರವಾಗಿ ಕೊಟ್ಟ ಅನುಮತಿಯನ್ನು ರದ್ದು ಮಾಡಿ, ಇರಾನ್‌ನಿಂದ ತೈಲ ಕೊಂಡರೆ ನಿಮ್ಮ ಮೇಲೆ ಸಹ ನಿರ್ಬಂಧಗಳೇ ಎಂದು ಅಮೆರಿಕ ಎಚ್ಚರಿಸಿತು.

ಇದೆಲ್ಲಕ್ಕೆ ಅಲಿಪ್ತ ಚಳವಳಿಯೊಂದಿಗೆ ಏನೋ ಸಂಬಂಧ ಇದೆ ಎಂದಲ್ಲ. ಬರುವ ವರ್ಷ ಅಝರ್‌ಬೈಜಾನ್‌ನಲ್ಲಿ ನಾಮ್ ಸಭೆ ನಡೆದರೆ, ಆ ದೇಶ ಕೂಡಾ ಭವಿಷ್ಯದಲ್ಲಿ ವೆನೆಝುವೆಲಾ, ಇರಾನ್‌ನಂತೆ ಕಷ್ಟಪಡುತ್ತದೆ ಎಂದಲ್ಲ. ಅಲಿಪ್ತ ಚಳವಳಿ ಎನ್ನುವುದು ಎಷ್ಟು ದುರ್ಬಲವಾಗಿದೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಎಂದು ಕರೆದುಕೊಳ್ಳುವವು ಎಷ್ಟು ಆತ್ಮಾಭಿಮಾನ ರಾಹಿತ್ಯದಿಂದ ವರ್ತಿಸುತ್ತಿವೆಯೆಂದು ಈಗಿನ ಪರಿಣಾಮಗಳು ಹೇಳುತ್ತಿವೆ. ‘‘ನೀನ್ಯಾರು ಹೇಳುವುದಕ್ಕೆ? ನಿನಗೆ ಕೋಪ ಬಂದರೆ ನೀನು ಇರಾನ್ ಜೊತೆ ವ್ಯಾಪಾರ ಮಾಡಬೇಡ, ನನ್ನನ್ನು ಮಾಡಬೇಡ ಎನ್ನುತ್ತೀ ಯಾಕೆ?’’ ಎಂದು ಟರ್ಕಿ ಅಮೆರಿಕವನ್ನು ನಿಂದಿಸುತ್ತಿದೆ. ‘‘ಅಮೆರಿಕದ ವ್ಯವಸ್ಥೆಗಳೊಂದಿಗೊ, ಡಾಲರ್‌ನೊಂದಿಗೊ ಸಂಬಂಧ ಇಲ್ಲದೇ, ಐರೋಪ್ಯ ದೇಶಗಳ ರೀತಿಯಲ್ಲಿ ಹೇಗೆ ಇರಾನ್‌ನೊಂದಿಗೆ ಲೇವಾದೇವಿಗಳನ್ನು ಮಾಡಬೇಕೆಂದು ಆಲೋಚಿಸುತ್ತಿದ್ದೇವೆ’’ ಎಂದು ಸಹ ಹೇಳಿದೆ. ಇರಾನ್‌ನೊಂದಿಗೆ ತಮ್ಮ ವಾಣಿಜ್ಯ ವ್ಯವಹಾರವನ್ನು ನಿಯಂತ್ರಿಸುವ ಅಧಿಕಾರ ಅಮೆರಿಕಕ್ಕೆ ಇಲ್ಲ ಎಂದು ಚೀನಾ ಸಾರಿ ಹೇಳಿದೆ. ಹೀಗಿರುವಾಗ ಅಲಿಪ್ತ ಚಳವಳಿ ವ್ಯವಸ್ಥಾಪಕ ಸದಸ್ಯ ದೇಶ ಭಾರತ ಏನು ಮಾಡುತ್ತಿದೆ? ನಿರ್ಬಂಧಗಳಿಂದ ತೈಲದ ವಿಷಯದಲ್ಲಿ ಏರ್ಪಡುವ ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಪ್ರಯತ್ನಿಸುತ್ತಿದೆ ಅಧಿಕೃತವಾಗಿ.

ಒಂಬತ್ತು ವರ್ಷಗಳ ಕೆಳಗೆ ಇರಾನ್‌ನಲ್ಲಿ ಜರುಗಿದ ಅಲಿಪ್ತ ಚಳವಳಿ ಸಭೆಗೆ ಪ್ರಧಾನಮಂತ್ರಿಯೊಂದಿಗೆ ಹೋದ ಪತ್ರಕರ್ತರ ತಂಡಲ್ಲಿ ಈ ಬರಹಗಾರ ಕೂಡಾ ಇದ್ದ. ಅದೊಂದು ವಿಶೇಷವಾದ, ವಿಭಿನ್ನವಾದ ಅನುಭವ. ಪರಿಚಿತ ಜಗತ್ತಿಗೆ ತಲೆ ಕೆಳಗಾದ ರೂಪ. ಅಮೆರಿಕ, ಇಸ್ರೇಲ್ ಸೇರಿ ಪಿತೂರಿ ಮಾಡಿ ತಮ್ಮ ಅಣು ವಿಜ್ಞಾನಿಗಳನ್ನು ಕೊಂದರು ಎಂದೂ, ಆಯಾ ವಿಜ್ಞಾನಿಗಳು ಯಾವ್ಯಾವ ವಾಹನಗಳಲ್ಲಿ ಪ್ರಯಾಣಿಸುತ್ತಿರುವಾಗ ಅವರ ಮೇಲೆ ದಾಳಿಗಳು ನಡೆದಿದೆಯೋ ಆ ವಾಹನಗಳನ್ನು, ಧ್ವಂಸ ರೂಪದಲ್ಲಿ ಅಲಿಪ್ತ ಚಳವಳಿ ಪ್ರಾಂಗಣದಲ್ಲಿ ಪ್ರದರ್ಶಿಸಿದರು. ಆ ವಿಜ್ಞಾನಿಗಳ ಚಿತ್ರಪಟಗಳನ್ನು ಹೆಜ್ಜೆ ಹೆಜ್ಜೆಗೂ ನೇತಾಡಿಸಿದ್ದರು. ವಿಶ್ವಕ್ಕೆ ಮಹಮಾರಿಯಾಗಿ ಪರಿಣಮಿಸಿರುವ ಭಯೋತ್ಪಾದನೆ ಬಗ್ಗೆ ಬೋರ್ಡ್ ಇಟ್ಟು ಒಂದು ದೊಡ್ಡ ಹಾಲ್‌ನಲ್ಲಿ ಛಾಯಾಚಿತ್ರ, ವೀಡಿಯೊ ಪ್ರದರ್ಶನ ಏರ್ಪಾಟು ಮಾಡಿದ್ದರು. ಆ ಪ್ರದರ್ಶನದ ತುಂಬಾ ಅಮೆರಿಕ, ಇಸ್ರೇಲ್ ದುಷ್ಕೃತ್ಯಗಳೇ.

ಭಾರತ ದೇಶವನ್ನು, ಭಾರತೀಯ ಪ್ರತಿನಿಧಿಗಳನ್ನು ಅಂದಿನ ಇರಾನ್ ಸುಪ್ರೀಂ ನಾಯಕತ್ವ, ರಾಜಕೀಯ ನಾಯಕತ್ವ ಅಷ್ಟೊಂದು ಗೌರವಿಸುವುದು ಆಶ್ಚರ್ಯ ಉಂಟು ಮಾಡಿತು. ಆ ದೇಶ ಅಷ್ಟರಲ್ಲೇ ಅಮೆರಿಕ ನಿರ್ಬಂಧಗಳಿಂದ ಕುಗ್ಗಿ ಹೋಗುತ್ತಿತ್ತು. ವಿಂಡೋಸ್ ಕೆಲಸ ಮಾಡದು. ಗೂಗಲ್ ಕೆಲಸ ಮಾಡದು. ಒಂದು ಕ್ರೆಡಿಟ್ ಕಾರ್ಡು ಕೂಡಾ ಕೆಲಸ ಮಾಡದು. ಆ ದೇಶಕ್ಕೆ ಆಹಾರ ಬೇಕು. ಅದರ ಬಳಿ ತೈಲ ಇದೆ. ಭಾರತ ದೇಶಕ್ಕೆ ತೈಲ ಮಾರಿ, ಗೋಧಿ ತೆಗೆದುಕೊಳ್ಳುವುದು ಒಂದು ತಕ್ಷಣದ ಒಪ್ಪಂದ. ಆ ಒಪ್ಪಂದಕ್ಕೋಸ್ಕರವೇ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಜೊತೆಗೆ ಹೋದ ಅಧಿಕಾರಿ ತಂಡವೂ, ಪತ್ರಕರ್ತರ ತಂಡದಲ್ಲಿನ ಸದಸ್ಯರೂ ಆತುರದಿಂದ ಎದುರು ನೋಡಿದರು. ಇರಾನ್‌ನಿಂದ ಭೂಗರ್ಭ ತೈಲದ ಪೈಪ್‌ಲೈನ್, ಛಾ ಬಹಾರ್ ಹಡಗಿನ ಬಂದರು ನಿರ್ಮಾಣ ನಿರ್ವಹಣೆಯಲ್ಲಿ ಪಾಲುದಾರಿಕೆಯೂ ಭಾರತ ಅಂದು ಆಶಿಸಿದ ದೀರ್ಘಕಾಲಿಕ ಪ್ರಯೋಜನಗಳು. ಎಷ್ಟೋ ಮುಖ್ಯವಾದ ಈ ಪ್ರಯೋಜನಗಳನ್ನು ಸಾಧಿಸುವ ಕ್ರಮದಲ್ಲಿ ಕೂಡಾ ಅಂದಿನ ಭಾರತ ಸರಕಾರ ಪ್ರಪಂಚ ಪ್ರಭುಗಳನ್ನು ನೋಯಿಸದಂತೆ ವ್ಯವಹರಿಸಲು ಪ್ರಯತ್ನಿಸಿತು. ಇರಾನ್ ತೀವ್ರ ಪ್ರಕಟನೆಗಳನ್ನು ಮಾಡಿದ ಸಂದರ್ಭದಲ್ಲ್ಲೂ ಅದರೊಂದಿಗೆ ತಾನು ಕಾಣಿಸದಂತೆ ಎಚ್ಚರ ವಹಿಸಿತು.

ಅಲಿಪ್ತ ಚಳವಳಿಯಲ್ಲಿ ಕೇಂದ್ರ ಪಾತ್ರ ವಹಿಸಿದ ಭಾರತೀಯ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾದ್ದರಿಂದ, ಆ ಪಾರ್ಟಿಯಲ್ಲಿ ಇನ್ನೂ ಹಳೆ ವಾಸನೆಗಳು ಕಾಣಿಸುತ್ತವೆ. 1991ರ ಬಳಿಕ, ಭಾರತೀಯ ವಿದೇಶಾಂಗ ನೀತಿಯಲ್ಲಿ ಕೂಡಾ ಬದಲಾವಣೆಗಳು ಆದದ್ದು ನಿಜವೇ ಆದರೂ, ನಮ್ಮನ್ನು ಆತ್ಮಸಖರೆಂದು ಅಮೆರಿಕ ಭಾವಿಸುವ ಮಟ್ಟಿಗೆ ಬದಲಾವಣೆ ಬರಲಿಲ್ಲ. ಈಗಲೂ ಅಮೆರಿಕನ್ ವಿದೇಶಾಂಗ ತಜ್ಞರಲ್ಲಿ ಭಾರತದ ವಿಷಯದಲ್ಲಿ ಒಂದು ಅಪನಂಬಿಕೆ ವ್ಯಕ್ತವಾಗುತ್ತಲೇ ಇದೆ. 2012ರ ಕಾಲದ ಇರಾನ್ ನಾಮ್ ಸಮ್ಮೇಳನದ ಸಮಯದಲ್ಲೂ, ಭಾರತ ಹಳೇ ಶೈಲಿಯನ್ನು, ಮತ್ತೆ ತುಸು ನವೀನ ಅವಕಾಶವಾದದ ತಂತ್ರವನ್ನು ಪ್ರದರ್ಶಿಸಿತು. 2014ರಲ್ಲಿ ನಮ್ಮ ದೇಶದಲ್ಲಿ ಬಂದ ಹೊಸ ಸರಕಾರಕ್ಕೆ ಈ ಅಲಿಪ್ತ ಚಳವಳಿಯ ಭಾರ ಇರಲಿಲ್ಲ. ಇಂದಿರಾ, ಮನಮೋಹನ್ ಸಿಂಗ್ ಅವರಂತೆ ಇವರಿಗೆ ಇಸ್ರೇಲ್‌ನೊಂದಿಗೆ ರಹಸ್ಯವಾಗಿ ವ್ಯವಹರಿಸಬೇಕಾದ ಅಗತ್ಯ ಇರಲಿಲ್ಲ. ಎಲ್ಲಾ ಬಹಿರಂಗವೇ. ಪ್ರತಾಪವೆಲ್ಲಾ ಉಪಖಂಡದ ನೆರೆಹೊರೆ ದೇಶಗಳ ಮೇಲೇನೆ. ವಿಶ್ವದ ಪಾಳೆಗಾರನ ಎದುರು ಉತ್ತರ ಕುಮಾರ ಬಾಲ ಮುದುರಿಕೊಳ್ಳುತ್ತಾನೆ.

ಅತ್ತ ರಶ್ಯಾದೊಂದಿಗೊ, ಇತ್ತ ಚೀನಾದೊಂದಿಗೊ ವಿಧವಿಧವಾದ ವೇದಿಕೆಗಳನ್ನು ಹಂಚಿಕೊಳ್ಳುವುದೇ ಹೊರತು, ಸಾರಾಂಶದಲ್ಲಿ ಸ್ವತಂತ್ರ ವೈಖರಿ ಬೇಕೆಂಬ ತುಡಿತ ಇಲ್ಲ. ದಕ್ಷಿಣ ಏಶ್ಯಾದಲ್ಲಿ ತನ್ನ ಪರವಾಗಿ ಚೀನಾಗೆ ಗಟ್ಟಿ ವೈರಿಯಾಗಿ ಭಾರತ ವ್ಯವಹರಿಸಬೇಕೆಂದು ಅಮೆರಿಕ ಬಯಸುತ್ತದೆ. ಆ ಜವಾಬ್ದಾರಿ ನಿರ್ವಹಿಸುವುದಕ್ಕೆ ಹಾತೊರೆಯುತ್ತಿರುವ ನಮ್ಮ ಪ್ರಭುಗಳು, ತಕ್ಕ ಪ್ರತಿಫಲವನ್ನಾದರೂ ಸಾಧಿಸುತ್ತಾರಾ ಅಂದರೆ ಅದೂ ಇಲ್ಲ. ಅಮೆರಿಕ ಹಿತಾಸಕ್ತಿಗಳಿಗೆ ಭಂಗ ಉಂಟಾದಾಗ ಅದರ ದೃಷ್ಟಿಯಲ್ಲಿ ಚೀನಾ ಆದರೂ ಒಂದೇ, ಭಾರತ ಆದರೂ ಒಂದೇ. ವೆನೆಝುವೆಲಾ, ಇರಾನ್ ಎರಡರ ವಿಷಯದಲ್ಲೂ ಅಮೆರಿಕದ ಎಚ್ಚರಿಕೆಗಳನ್ನು ಪಡೆದ ದೇಶಗಳಲ್ಲಿ ಭಾರತ, ಚೀನಾ ಎರಡೂ ಇದೆ.

ಇರಾನ್‌ನೊಂದಿಗೆ ನಾವು ಲೇವಾದೇವಿ ನಿಲ್ಲಿಸಿಬಿಟ್ಟರೆ, ಕೇವಲ ತೈಲ ಸಮಸ್ಯೆ ಮಾತ್ರವೇ ಅಲ್ಲ, ವ್ಯವಸಾಯ ರಂಗದಲ್ಲೂ ಸಮಸ್ಯೆಗಳು ತಲೆ ಎತ್ತುತ್ತವೆ. ಗೋಧಿ ರಫ್ತು ಮಾತ್ರವೇ ಅಲ್ಲ, ರಾಸಾಯನಿಕ ಗೊಬ್ಬರದ ಕೊರತೆಯೂ ಏರ್ಪಡುತ್ತದೆ. ಮತ್ತೇಕೆ ಭಾರತ ಅಮೆರಿಕದೊಂದಿಗೆ ಗಟ್ಟಿಯಾಗಿ ವ್ಯವಹರಿಸುತ್ತಿಲ್ಲ? ತಾವು ವೀರಾಧಿವೀರರೆಂದು, ತಮ್ಮ ಕೈಗಳಲ್ಲಿ ದೇಶ ಭದ್ರವಾಗಿರುತ್ತದೆ ಎಂದು ಬಡಾಯಿ ಕೊಚ್ಚುವುದೇಕೆ?

ಇರಾನ್ ಮಹಾಶಾಂತಿ ಪ್ರಿಯ ದೇಶ ಎಂದೂ, ಆ ದೇಶದಲ್ಲಿ ಉತ್ತಮ ಆಡಳಿತ ಹಾಸಿ ಹಬ್ಬಿದೆ ಎಂದು ಅಂದುಕೊಳ್ಳಬೇಕಾಗಿಲ್ಲ. ಆ ಮಾತಿಗೆ ಬಂದರೆ ಭಾರತಕ್ಕೆ ಸಹ ಅಂತಹ ಯೋಗ್ಯತಾ ಪತ್ರ ಯಾರೂ ಕೊಡುವುದಿಲ್ಲ. ಆ ದೇಶ ಅಣುರಂಗದಲ್ಲಿ ಸಂಶೋಧನೆಗಳನ್ನು ನಿರ್ವಹಿಸುತ್ತಾ ಇತ್ತು. ನಮ್ಮ ದೇಶ ಸಹ ಒಂದೊಮ್ಮೆ ಆ ಹಂತವನ್ನು ದಾಟಿ ಬಂದಿದೆ.

ಇಸ್ರೇಲ್ ಬೊಬ್ಬೆಗಳಿಂದ, ಆ ಸಂಶೋಧನಾ ಕಾರ್ಯಕ್ರಮವನ್ನು ನಿಲ್ಲಿಸಬೇಕೆಂದು ಒತ್ತಡ ತಂದರು. ನಿರ್ಬಂಧಗಳನ್ನು ಹಾಕಿದರು. 2015ರ ಕಾಲದ ಒಪ್ಪಂದದಿಂದಾಗಿ ನಿರ್ಬಂಧಗಳು ತೊಲಗಿ ಇರಾನ್ ನಿರಾಳವಾಗಿ ಉಸಿರಾಡಿತು. ಚಾಚೂ ತಪ್ಪದೆ ಒಪ್ಪಂದದಲ್ಲಿನ ಪ್ರತಿ ಅಂಶವನ್ನು ಪಾಲಿಸಿತು. ಆದರೂ ಟ್ರಂಪ್‌ಗೆ ತೃಪ್ತಿ ಇಲ್ಲ. ಒಪ್ಪಂದದಿಂದ ತಪ್ಪಿಸಿಕೊಂಡರು. ಹಾಗಿದ್ದೂ ಈ ವರ್ಷಾವಧಿಯಲ್ಲಿ ಇರಾನ್ ಒಪ್ಪಂದದಲ್ಲಿನ ಅಂಶಗಳಿಗೆ ಕಟ್ಟು ಬಿದ್ದೇ ಇದೆ. ಇತ್ತೀಚೆಗೆ ಮಾತ್ರ (ಮೇ 8) ಇರಾನ್, ತಾನು ಇನ್ನು ಮುಂದೆ ಒಪ್ಪಂದದಲ್ಲಿನ ಎಲ್ಲಾ ಅಂಶಗಳಿಗೂ ಕಟ್ಟು ಬೀಳುವುದಿಲ್ಲ ಎಂದು ಘೋಷಿಸಿತು. ಪರ್ಷಿಯನ್ ಗಲ್ಫ್‌ನಲ್ಲಿ ಅಮೆರಿಕ ಭಾರೀ ಯುದ್ಧ ನೌಕೆಯನ್ನು, ಒಂದು ಟಾಸ್ಕ್ ಫೋರ್ಸ್‌ನ ನೆಲೆಗೊಳಿಸಿದೆ. ತನ್ನ ಹಿತಾಸಕ್ತಿಗಳಿಗೆ, ಮಿತ್ರರಿಗೆ, ಸೇನೆಗಳಿಗೆ ಹಾನಿ ಉಂಟಾಗಿಸಿದರೆ ಎಚ್ಚರಿಕೆ ಎಂದು ಧಮಕಿ ಹಾಕಿದೆ. ಅಮೆರಿಕದ ನಿರ್ಬಂಧಗಳು, ಕ್ರಮಗಳು ಎಲ್ಲ ಉಗ್ರವಾದಿ ಕೃತ್ಯಗಳೇ ಎಂದು ಇರಾನ್ ಟೀಕಿಸಿದೆ. ಮತ್ತೊಂದು ಯುದ್ಧ ಬಾರದೇ ಹೋಗಬಹುದು. ಆದರೆ ಅಲ್ಲಿ ಮಾತ್ರ ಹಸಿ ಹುಲ್ಲು ಹಾಕಿದರೂ ಭಗ್ಗೆನ್ನುತ್ತದೆ. ದೇಶಗಳೆಲ್ಲಾ ತಮ್ಮ ವೈಖರಿಗಳನ್ನು ಪ್ರದರ್ಶಿಸುವ ದಿಟ್ಟತನವನ್ನು ತೋರಬೇಕಾದ ಕಾಲ ಇದು.

ಒಂದು ವೋಟನ್ನೂ ಪಡೆಯಲಾರದ ಈ ಅಂಶದ ಮೇಲೆ ನಮ್ಮ ಉತ್ತರಕುಮಾರರ ಪೌರುಷ ಪ್ರಕಟಗೊಳ್ಳುವುದುಂಟೇ?

ಕೃಪೆ: ಆಂಧ್ರ ಜ್ಯೋತಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)