varthabharthi

ಕರ್ನಾಟಕ

ಮೇ 16 ರಿಂದ ಆಗುಂಬೆ ಘಾಟಿಯಲ್ಲಿ ಲಘು ವಾಹನ ಸಂಚಾರಕ್ಕೆ ಅನುಮತಿ

ವಾರ್ತಾ ಭಾರತಿ : 15 May, 2019

ಶಿವಮೊಗ್ಗ, ಮೇ 15:  ಆಗುಂಬೆ ಘಾಟಿಯಲ್ಲಿ ದುರಸ್ತಿ ಕಾರ್ಯ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮೇ 16ರಿಂದ ಲಘು ವಾಹನಗಳಾದ ಮಿನಿ ಬಸ್‍ಗಳು, ಜೀಪು, ವ್ಯಾನು, ಕಾರುಗಳು ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಆದೇಶಿಸಿದ್ದಾರೆ.

ಕಾಂಕ್ರಿಟ್ ಕಾಮಗಾರಿಯು ಕ್ಯೂರಿಂಗ್ ಆಗಲು 18 ದಿನಗಳ ಅವಶ್ಯಕತೆ ಇರುವುದರಿಂದ ಇನ್ನುಳಿದ ಎಲ್.ಸಿ.ವಿ ವಾಹನಗಳಿಗೆ ಜೂನ್ ಒಂದರಿಂದ ಅನುಮತಿ ನೀಡಲಾಗುವುದು. ಅದುವರೆಗೆ ಸದರಿ ವಾಹನಗಳು ತೀರ್ಥಹಳ್ಳಿ-ಮಾಸ್ತಿಕಟ್ಟೆ-ಹೊಸಂಗಡಿ-ಸಿದ್ದಾಪುರ-ಕುಂದಾಪುರ-ಉಡುಪಿ ಹಾಗೂ ತೀರ್ಥಹಳ್ಳಿ-ಕೊಪ್ಪ-ಶೃಂಗೇರಿ-ಮಾಳಾಘಾಟ್-ಕಾರ್ಕಳ-ಉಡುಪಿ ಮೂಲಕ ಸಂಚರಿಸಲು ಅವಕಾಶ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಮಗಾರಿ: ಕಳೆದ ಮುಂಗಾರು ಮಳೆ ಅವಧಿಯಲ್ಲಿ ಆಗುಂಬೆ ಘಾಟಿ ರಸ್ತೆಯ ಕೆಲ ಭಾಗಗಳಲ್ಲಿ ಭೂ ಕುಸಿತ ಉಂಟಾಗಿತ್ತು. ಇದರಿಂದ ವಾಹನಗಳ ಸಂಚಾರದ ಮೇಲೆ ಪರಿಣಾಮ ಬೀರಿತ್ತು. ಮತ್ತೊಂದೆಡೆ ಆಗುಂಬೆ ಘಾಟಿ ಮಾರ್ಗವೂ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿತ್ತು. 

ಈ ಎಲ್ಲ ಕಾರಣಗಳಿಂದ ಘಾಟಿ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿಯನ್ನು ಕಳೆದ ಕೆಲ ತಿಂಗಳುಗಳಿಂದ ಕೈಗೆತ್ತಿಕೊಳ್ಳಲಾಗಿದೆ. ಈ ಕಾರಣದಿಂದ ಆಗುಂಬೆ ಘಾಟಿ ಮಾರ್ಗದಲ್ಲಿ ವಾಹನಗಳ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಬದಲಿ ಮಾರ್ಗದ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. 

ಇದೀಗ ಕಾಮಗಾರಿ ಪೂರ್ಣ ಹಂತಕ್ಕೆ ತಲುಪಿರುವುದರಿಂದ ಲಘು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಹಂತಹಂತವಾಗಿ ಎಲ್ಲ ಮಾದರಿ ವಾಹನಗಳ ಸಂಚಾರಕ್ಕೆ ರಸ್ತೆ ಮುಕ್ತಗೊಳಿಸುವ ಸಾಧ್ಯತೆಗಳಿವೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)