varthabharthi

ಬೆಂಗಳೂರು

ಬೆಂಗಳೂರು: ನಗರದಲ್ಲಿ ಗುಡುಗು, ಗಾಳಿ ಸಹಿತ ಮಳೆ; ಜನಜೀವನ ಅಸ್ತವ್ಯಸ್ಥ

ವಾರ್ತಾ ಭಾರತಿ : 15 May, 2019

ಬೆಂಗಳೂರು, ಮೇ 15: ನಗರದ ಹಲವೆಡೆ ಗುಡುಗು, ಗಾಳಿ ಸಹಿತ ಮಳೆಯಾಗಿದ್ದು, ಹಲವು ಕಡೆ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಬುಧವಾರ ಸುರಿದ ಗುಡುಗು-ಸಿಡಿಲು ಮಳೆಯಿಂದಾಗಿ ನಗರದ ವಿವಿಧ ಕಡೆಗಳಲ್ಲಿ ನೀರು ನುಗ್ಗಿದೆ. ಗಾಳಿಗೆ ಮರಗಳು ಉರುಳಿ ಬಿದ್ದಿದ್ದು, ವಾಹನ ಸಂಚಾರ ಅಸ್ತವ್ಯಸ್ಥಗೊಂಡು ವಾಹನ ಸವಾರರು ಪರದಾಡುವಂತಾಯಿತು.

ಬೆಂಗಳೂರಿನಲ್ಲಿ ಬುಧವಾರ ಸಂಜೆಯಿಂದ ಆರಂಭವಾದ ಮಳೆ ನಿರಂತರವಾಗಿ ಸುರಿದಿದೆ. ನಗರದ ಹಲವೆಡೆ ರಸ್ತೆಗಳಲ್ಲಿ ನೀರು ತುಂಬಿಕೊಂಡ ಕಾರಣ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಕಾಲುವೆಗಳು ಉಕ್ಕಿ ಹರಿದು ವಸತಿ ಬಡಾವಣೆಗಳಿಗೆ ನೀರು ನುಗ್ಗಿದ ದೃಶ್ಯ ಸಾಮಾನ್ಯವಾಗಿತ್ತು.

ವಾಯು ಮೇಲ್ಮೈ ಸುಳಿಯಿಂದ ಹವಾಮಾನ ವೈಪರೀತ್ಯವಾಗಿದೆ. ಹೀಗಾಗಿ ಎಲ್ಲಡೆ ಮಳೆ ಸುರಿಯುತ್ತಿದ್ದು, ಬೆಂಗಳೂರು ನಗರದ ಮಲ್ಲೇಶ್ವರಂ, ನಾಗವಾರ, ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಶಿವಾಜಿನಗರ, ಪೀಣ್ಯ, ಹಲಸೂರು, ಯಶವಂತಪುರ, ರಾಜಾಜಿನಗರ, ಕೋರಮಂಗಲ, ಬನಶಂಕರಿ, ಅಶೋಕ ನಗರ, ಗೊರಗುಂಟೆಪಾಳ್ಯ, ಬಾಗಲಗುಂಟೆ, ಜಕ್ಕಸಂದ್ರ, ಸಂಜಯನಗರ, ಹೆಬ್ಬಾಳ, ಗಾಯತ್ರಿ ನಗರ, ಜಯನಗರ ಸೇರಿದಂತೆ ಹಲವೆಡೆ ಮಳೆರಾಯ ಆರ್ಭಟ ಮಾಡಿದೆ.

ಆಲಿಕಲ್ಲು ಮಳೆ: ಬೆಂಗಳೂರಿನ ವಿದ್ಯಾರಣ್ಯಪುರ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಾಗಿದ್ದು, ಉಳಿದ ಕಡೆ ಸಾಧಾರಣ ಮಳೆಯಾಗಿದೆ. ಮುಂದಿನ 3 ದಿನಗಳ ಕಾಲ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ಮಳೆಯ ಅಬ್ಬರ ಮುಂದುವರೆದಿದ್ದು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಯಾದಗಿರಿ, ಕೋಲಾರ, ಚಿಕ್ಕಬಳಾಪುರ, ಚಾಮರಾಜನಗರ, ಬೀದರ್, ಕೊಪ್ಪಳ, ರಾಯಚೂರು ಸೇರಿ ರಾಜ್ಯದ ಹಲವೆಡೆ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ರಾಜ್ಯಾದ್ಯಂತ ಜೂನ್ ಮೊದಲ ವಾರದಿಂದ ಮುಂಗಾರು ಮಳೆ ಆರಂಭವಾಗಲಿದ್ದು, ಮುಂಗಾರು ಆರಂಭಕ್ಕೂ ಮುನ್ನ ಹಲವೆಡೆ ಗುಡುಗು ಸಹಿತ ಮಳೆಯಾಗುವುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ನಗರದಲ್ಲಿ ಮಳೆಗಾಲಕ್ಕೂ ಮೊದಲೇ ಬಿಬಿಎಂಪಿಯಿಂದ ವಿವಿಧ ಹಂತದಲ್ಲಿ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಆದರೂ, ಹಲವು ಕಡೆಗಳಲ್ಲಿ ಬಡಾವಣೆಗಳಿಗೆ ನೀರು ನುಗ್ಗಿದ್ದು, ಜನರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ನಗರದಲ್ಲಿ ಗಾಳಿ-ಮಳೆಗೆ ತಡೆಯಲಾಗದ ಮರಗಳ ತೆರವು ಕಾರ್ಯ ಸಮರ್ಪಕವಾಗಿ ನಿರ್ವಹಿಸದೇ ಇರುವುದರಿಂದ ಹಲವು ಕಡೆಗಳಲ್ಲಿ ಮರಗಳು ಬುಡಸಮೇತ ಕಿತ್ತು ಬರುತ್ತಿದೆ.

ಮೇ 22ರಂದು ಮುಂಗಾರು ಮಾರುತಗಳು ಅಂಡಮಾನ್ ಮತ್ತು ನಿಕೋಬರ್ ದ್ವೀಪಗಳನ್ನು ಪ್ರವೇಶಿಸಲಿವೆ. ಈ ಮೂಲಕ ದಕ್ಷಿಣ ಭಾರತವನ್ನು ಪ್ರವೇಶಿಸಲಿರುವ ಮಾರುತಗಳು ಜೂ.4 ಕ್ಕೆ ಕೇರಳ ಪ್ರವೇಶವಾಗಲಿದೆ. ಮುಂಗಾರು ಮಾರುತ ನಿಧಾನಗತಿಯ ಚಲನೆಯಿಂದಾಗಿ 3-4 ದಿನ ತಡವಾಗಿ ರಾಜ್ಯಕ್ಕೆ ಆಗಮಿಸಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)