varthabharthi

ಕರಾವಳಿ

ಖಾಸಗಿ ಭೂಮಿ ಮಾಲಕರಿಂದ ಪಾಲುಗಾರಿಕೆಗೆ ಆಹ್ವಾನ

ಗೇಲ್ ಗ್ಯಾಸ್ ಸಂಸ್ಥೆಯಿಂದ ಮಂಗಳೂರಿನಲ್ಲಿ 100 ಸಿಎನ್‌ಜಿ ಸ್ಟೇಷನ್ ಸ್ಥಾಪನೆಗೆ ಪ್ರಸ್ತಾವ

ವಾರ್ತಾ ಭಾರತಿ : 15 May, 2019

ಎ.ಕೆ. ಜನ 

ಮಂಗಳೂರು, ಮೇ 15: ನಗರದಲ್ಲಿ ಸಾರ್ವಜನಿಕರು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಸ್ಟೇಷನ್‌ಗಳ ಸ್ಥಾಪನೆ (ಸಿಎನ್‌ಜಿ)ಗೆ ಮೂಲ ಸೌಕರ್ಯವನ್ನು ಒದಗಿಸುವ ಮೂಲಕ ಗೇಲ್ ಗ್ಯಾಸ್ ಸಂಸ್ಥೆಯ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ‘ಹಚ್ಚ ಹರಿದ್ರ ದಕ್ಷಿಣ ಕನ್ನಡ’ ಎಂಬ ಯೋಜನೆಯಲ್ಲಿ ಪಾಲುದಾರಿಕೆಯನ್ನು ಪಡೆಯಬಹುದಾಗಿದೆ.

ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಈ ಯೋಜನೆಯಡಿ ಮಂಗಳೂರು ನಗರದಲ್ಲಿ 100 ಸಿಎನ್‌ಜಿ ಸ್ಟೇಷನ್‌ಗಳನ್ನು ತೆರೆಯಲು ಗೇಲ್ ಸಂಸ್ಥೆಯು ತೀರ್ಮಾನಿಸಿದೆ. ಗೇಲ್ ದೇಶದ ಸರಕಾರಿ ಸ್ವಾಮ್ಯದ ಅತಿದೊಡ್ಡ ನೈಸರ್ಗಿಕ ಅನಿಲ ಸಂಸ್ಕರಣ ಹಾಗೂ ವಿತರಣಾ ಕಂಪೆನಿಯಾಗಿದೆ.

ಮಂಗಳೂರು ನಗರದಲ್ಲಿ ನೈಸರ್ಗಿಕ ಅನಿಲ ಸ್ಟೇಷನ್‌ಗಳಿಗೆ ವೌಲಭೂತ ಸೌಕರ್ಯವನ್ನು ನಿರೀಕ್ಷಿಸುವ ಮೂಲಕ ಗೇಲ್ ಗ್ಯಾಸ್ ಲಿಮಿಟೆಡ್, ಭೂ ಮಾಲಕರ ಜೊತೆ ಪಾಲುದಾರಿಕೆ ವ್ಯವಹಾರಕ್ಕೆ ಮುಂದಾಗಿದೆ. ಭೂ ಮಾಲಕರು ಹಾಗೂ ಆಸಕ್ತರು ಸಿಎನ್‌ಜಿ ಸ್ಟೇಷನ್ ತೆರೆಯಲು ಮುಂದಾಗುವ ಮೂಲಕ ಹಸಿರು ಮಂಗಳೂರು ಅಭಿವೃದ್ಧಿಗೆ ಸಹಕಾರ ನೀಡಬಹುದು ಎಂದು ಸಂಸ್ಥೆಯ ಸಿಇಒ ಎ.ಕೆ. ಜನ ತಿಳಿಸಿದ್ದಾರೆ.

‘‘ಮಂಗಳೂರಿನ ಜನರು ಅಗ್ಗದ ಹಾಗೂ ಸ್ವಚ್ಛವಾದ ನೈಸರ್ಗಿಕ ಅನಿಲವನ್ನು ಪಡೆಯಲು ಸಿಎನ್‌ಜಿ ಮೂಲಸೌಕರ್ಯಕ್ಕೆ ಉತ್ತೇಜನ ನೀಡಬೇಕಾಗಿದೆ. ಭೂಮಿ ಹೊಂದಿರುವ ಆಸಕ್ತರು ಗೇಲ್ ಸಂಸ್ಥೆಯ ಜೊತೆಗೆ ಪಾಲುದಾರರಾಗಿದ್ದುಕೊಂಡು ಸಾರಿಗೆ ಕ್ಷೇತ್ರಕ್ಕೆ ಸ್ವಚ್ಛ ಇಂಧನವನ್ನು ಒದಗಿಸುವ ‘ಹಚ್ಚ ಹರಿದ್ರ ದಕ್ಷಿಣ ಕನ್ನಡ’ ಎಂಬ ಸಂಸ್ಥೆಯ ಯೊೀಜನೆಯೊಂದಿಗೆ ಕೈ ಜೋಡಿಸಬಹುದಾಗಿದೆ.

ಈ ಅವಕಾಶದ ಪ್ರಕಾರ, ಗೇಲ್ ಗ್ಯಾಸ್ ಸಂಸ್ಥೆಯ ವಿವೇಚನೆಯಂತೆ ಖಾಸಗಿ ಭೂ ಮಾಲಕರು ಪೆಟ್ರೋಲ್ ಪಂಪ್‌ಗಳು ಹಾಗೂ ಸಂಬಂಧಿತ ವಾಣಿಜ್ಯ ಚಟುವಟಿಕೆಗಳಂತಹ ಸಿಎನ್‌ಜಿ ಸ್ಟೇಷನ್‌ಗಳನ್ನು ಸ್ಥಾಪಿಸಲು ತಮ್ಮ ಸಂಪೂರ್ಣ ಭೂಮಿಯನ್ನು ಅಭಿವೃದ್ಧಿಪಡಿಸಬೇಕಿದೆ. ಕಂಪೆನಿಯು ನೀಡಲಾಗುವ ಮಾರ್ಗಸೂಚಿಯಂತೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸೈಟ್‌ಗಳ ಆಯ್ಕೆಯ ಬಳಿಕ ಲೀಸ್ ಆಧಾರದಲ್ಲಿ ಭೂಮಾಲಕರು 10 ಅಥವಾ ಅಧಿಕ ವರ್ಷಗಳ ಅವಧಿಗೆ ಸಿಎನ್‌ಜಿ ಸ್ಟೇಷನ್ ರಚಿಸುವ ಕುರಿತಂತೆ ಒಪ್ಪಂದವನ್ನು ಮಾಡಿಕೊಳ್ಳಬೇಕಾಗುತ್ತದೆ.

ಸಿಎನ್‌ಜಿ ಪರಿಕರಗಳು (ಕಂಪ್ರೆಸ್ಸರ್/ಕಾಸ್‌ಕೇಡ್/ಡಿಸ್ಪೆನ್ಸರ್, ಮೊದಲಾದವುಗಳು) ಗೇಲ್ ಗ್ಯಾಸ್ ಸಂಸ್ಥೆಯಿಂದ ಸ್ಥಾಪಿಸಲ್ಪಡುತ್ತವೆ. ಜೊತೆಗೆ ಅಗ್ನಿ ಮತ್ತು ಸುರಕ್ಷತೆಗೆ ಸಂಬಂಧಿಸಿದ ಎಲ್ಲ ರೀತಿಯ ಕಾನೂನುಬದ್ಧ ನಿಯಮಗಳು/ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ. ಇಲ್ಲವಾದಲ್ಲಿ, ಸಿಎನ್‌ಜಿ ಸ್ಟೇಷನ್ ಆರಂಭಿಸುವುದಕ್ಕೆ ಸಂಬಂಧಿಸಿ ಭೂ ಬಳಕೆಗೆ ಸಂಬಂಧಿಸಿದ ಅನುಮತಿ, ಪರವಾನಿಗೆ ಮೊದಲಾದವುಗಳ ವೆಚ್ಚವನ್ನು ಡೀಲರ್‌ಗಳೇ ವಹಿಸಲಿರುವರು. ಸಿಎನ್‌ಜಿ ರಿಟೇಲ್ ಔಟ್‌ಲೆಟ್ ಸೇರಿದಂತೆ ಸಲಕರಣೆಗಳ ದಿನನಿತ್ಯ ನಿರ್ವಹಣೆಯೊಂದಿಗೆ ಸಾಮಾನ್ಯ ನಿರ್ವಹಣೆಯೂ ನೇಮಕ ಮಾಡಲಾದ ಡೀಲರ್‌ನ ಜವಾಬ್ದಾರಿಯಾಗಿರುತ್ತದೆ. ಡೀಲರ್‌ಗೆ ನಿಗದಿತ ಡೀಲರ್ ಕಮಿಷನ್ ಆಧಾರದಲ್ಲಿ ಗೇಲ್ ಗ್ಯಾ್ನಿಂದ ಕಮಿಷನ್ ನೀಡಲಾಗುವುದು.

ಬಂದರು ನಗರಿ ಮಂಗಳೂರಿನಲ್ಲಿ ಈಗಾಗಲೇ ಸಂಸ್ಥೆಯಿಂದ ಸಿಎನ್‌ಜಿ ಸ್ಟೇಷನ್‌ಗಳನ್ನು ಸ್ಥಾಪಿಸಲು ಹಲವು ಪ್ರದೇಶಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ, ಕೆಪಿಟಿ ಜಂಕ್ಷನ್‌ನಿಂದ ಎನ್‌ಎಂಪಿಟಿ ಕಚೇರಿ (ಉಡುಪಿ ಕಡೆಗೆ ಸಾಗುವ ಎನ್‌ಎಚ್ 66), ಎನ್‌ಎಂಪಿಟಿ ಕಚೇರಿಯಿಂದ ಮುಲ್ಕಿ (ಎನ್‌ಎಚ್ 66), ಕೆಪಿಟಿ ಜಂಕ್ಷನ್‌ನಿಂದ ನಂತೂರು ಜಂಕ್ಷನ್ (ಬೆಂಗಳೂರು ಸಾಗುವ ಎನ್‌ಎಚ್ 66), ನಂತೂರು ಜಂಕ್ಷನ್‌ನಿಂದ ಅಡ್ಯಾರ್ (ಬೆಂಗಳೂರು ಸಾಗುವ ಎನ್‌ಎಚ್ 73), ಅಡ್ಯಾರ್‌ನಿಂದ ಬಿಸಿರೋಡ್, ನಂತೂರು ಜಂಕ್ಷನ್‌ನಿಂದ ಮೂಡುಬಿದರೆ, ನಂತೂರು ಜಂಕ್ಷನ್‌ನಿಂದ ಸ್ಟೇಟ್‌ಬ್ಯಾಂಕ್ ಸರ್ಕಲ್, ಬಲ್ಮಠದಿಂದ ತಲಪಾಡಿ- ಟೋಲ್ ಗೇಟ್ (ಕೇರಳ ಗಡಿವರೆಗೆ), ತೊಕ್ಕೊಟ್ಟು ಜಂಕ್ಷನ್‌ನಿಂದ ಉಳ್ಳಾಲ (ಅಬ್ಬಕ್ಕ ಸರ್ಕಲ್), ತೊಕ್ಕೊಟ್ಟು ಜಂಕ್ಷನ್‌ನಿಂದ ಮುಡಿಪು, ಕೊಟ್ಟಾರ ಚೌಕಿಯಿಂದ ಲೇಡಿಹಿಲ್, ಕೂಳೂರು ಜಂಕ್ಷನ್‌ನಿಂದ ಕಾವೂರು ಜಂಕ್ಷನ್, ಕಾವೂರು ಜಂಕ್ಷನ್‌ನಿಂದ ಬಜ್ಪೆ, ಕಾವೂರು ಜಂಕ್ಷನ್‌ನಿಂದ ಕೆಪಿಟಿ ಜಂಕ್ಷನ್, ಕಾವೂರು ಜಂಕ್ಷನ್‌ನಿಂದ ಭಾರತ್ ಮಾಲ್ (ಕಾವೂರು ಬಿಜೈ ರಸ್ತೆ).

ರಾಷ್ಟ್ರೀಯ ಹೆದ್ದಾರಿಯಲ್ಲಿ ಒದಗಿಸಲಾಗುವ ಭೂಮಿಯು ಟೋಲ್ ಬ್ರಿಡ್ಜ್/ ಎನ್‌ಎಚ್- ಎಸ್‌ಎಚ್‌ಎಂಡಿಆರ್‌ನ 1 ಕಿ.ಮೀ. ವ್ಯಾಪ್ತಿಗೊಳಪಡಬಾರದು ಮತ್ತು ಕನಿಷ್ಠ ಇರುವ ಸಮೀಪದ ಸಿಎನ್‌ಜಿ ಸ್ಟೇಷನ್‌ನಿಂದ 1 ಕಿ.ಮೀ. ದೂರದಲ್ಲಿರಬೇಕು. ಭೂಮಿಯ ಗಾತ್ರವು ಕನಿಷ್ಠ 800 ಚದರ ಮೀಟರ್‌ನೊಂದಿಗೆ ಫ್ರಂಟೇಜ್ 25 ಮೀಟರ್ ಆಗಿರಬೇಕು.

ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬೋರ್ಡ್‌ನ 9ನೇ ಸುತ್ತಿನ ಬಿಡ್ಡಿಂಗ್‌ನಲ್ಲಿ ದ.ಕ.ದಲ್ಲಿ ನಗರ ಗ್ಯಾಸ್ ಪೂರೈಕೆ ಯೋಜನೆಯ ಅಧಿಕಾರವನ್ನು ಗೇಲ್ ಗ್ಯಾಸ್ ಕಂಪೆನಿ ತನ್ನದಾಗಿಸಿಕೊಂಡಿದೆ.

ಈ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ ಸಾರಿಗೆ ಕ್ಷೇತ್ರಕ್ಕೆ ಸಂಕುಚಿತ ನೈಸರ್ಗಿಕ ಅನಿಲ, ಮನೆಗಳು, ಕೈಗಾರಿಕೆಗಳು ಮತ್ತು ವಾಣಿಜ್ಯ ಘಟಕಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲ ಪೂರೈಕೆ ಮಾಡಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯ 4,861 ಚದರ ಕಿ.ಮೀ. ಪ್ರದೇಶದಲ್ಲಿ ಈ ಯೋಜನೆ ವ್ಯಾಪಿಸಲಿದ್ದು, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಪುತ್ತೂರು ಮತ್ತು ಸುಳ್ಯ ತಾಲೂಕುಗಳು ಈ ಯೋಜನೆಗೊಳಪಡಲಿವೆ. 25 ವರ್ಷಗಳ ಅವಧಿಗೆ ಈ ಯೋಜನೆಯ ಮೂಲ ಹೂಡಿಕೆ 1,972 ಕೋಟಿ ರೂ. ಆಗಿವೆ. ದ.ಕ.ದಲ್ಲಿ ಒಟ್ಟು 3.50 ಲಕ್ಷ ಮನೆಗಳಿಗೆ ನೈಸರ್ಗಿಕ ಗ್ಯಾಸ್ ಸಂಪರ್ಕ, 100 ಸಿಎನ್‌ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಕೇಂದ್ರಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ಹೆಚ್ಚಿನ ಮಾಹಿತಿಯು ಗೇಲ್ ಸಂಸ್ಥೆಯ ವೆಬ್‌ಸೈಟ್www.gailgas.com ನಲ್ಲಿ ಲಭ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)