varthabharthi

ಕರ್ನಾಟಕ

ಉಪಚುನಾವಣೆ ಬಳಿಕ ಕಾಂಗ್ರೆಸ್ ಮೂರು ಹೋಳು: ಗೋವಿಂದ ಕಾರಜೋಳ

ವಾರ್ತಾ ಭಾರತಿ : 15 May, 2019

ಹುಬ್ಬಳ್ಳಿ, ಮೇ 15: ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭೆ ಉಪಚುನಾವಣೆ ಬಳಿಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಪರಸ್ಪರ ಕಿತ್ತಾಡಿಕೊಂಡು ಕಾಂಗ್ರೆಸ್ ಮೂರು ಹೋಳಾಗಲಿದೆ ಎಂದು ಮುಧೋಳ ಶಾಸಕ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ.ಜಿ. ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಹಾಗೂ ಎಂ.ಬಿ. ಪಾಟೀಲ, ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಮೂರು ಭಾಗಗಳಾಗಿ ಕಾಂಗ್ರೆಸ್ ಒಡೆಯಲಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ದೇಶಪಾಂಡೆ, ಸಿದ್ದರಾಮಯ್ಯ ಪ್ರಬಲ ಆಕಾಂಕ್ಷಿಗಳಾಗಿದ್ದು, ಇವರ ನಡುವೆ ಈಗಲೇ ಕಚ್ಚಾಟ ಶುರುವಾಗಿದೆ. ದಲಿತ ಸಿಎಂ ಮಾಡುವೆ ಎಂದಿದ್ದ ಸಿದ್ದರಾಮಯ್ಯ ಇದೀಗ ತನ್ನ ಶಿಷ್ಯರ ಮೂಲಕ ಲಾಬಿ ನಡೆಸಿದ್ದಾರೆ ಎಂದು ತಿಳಿಸಿದರು.

ದಾಖಲೆಯಲ್ಲಿ ಗೆಲುವು ಸಾಧಿಸಿದ್ದೇನೆ, ನನಗೂ ಮುಖ್ಯಮಂತ್ರಿ ಹುದ್ದೆ ಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳುತ್ತಿದ್ದಾರೆ. ಈ ಮಧ್ಯೆ ಡಿಕೆ ಶಿವಕುಮಾರ್ ಸಹ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ಉಪಚುನಾವಣೆ ಬಳಿಕ ಇದು ಮತ್ತಷ್ಟು ತೀವ್ರಗೊಳ್ಳಲಿದ್ದು, ಈ ಸಂಘರ್ಷವೆ ಸರಕಾರ ಪತನಗೊಳ್ಳಲು ಕಾರಣವಾಲಿದೆ ಎಂದು ಅವರು ವಿಶ್ಲೇಷಿಸಿದರು.

ದೇವರಾಜ ಅರಸು ಗರಡಿಯಲ್ಲಿ ಬೆಳೆದಿರುವ ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ ಹೇಳಿಕೆ ಕಾಂಗ್ರೆಸ್ ನಾಯಕರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಅವರ ಮೇಲೆ ಎಲ್ಲರೂ ಮುಗಿಬೀಳುತ್ತಿದ್ದಾರೆ ಎಂದು ಟೀಕಿಸಿದ ಅವರು, ಭೂ ಮಾಫಿಯಾದವರಿಗೆ ಬೆಂಗಾವಲಾಗಿ ನಿಂತುಕೊಂಡಿರುವ ಸಿದ್ದರಾಮಯ್ಯ, ಸಾಮಾಜಿಕ ನ್ಯಾಯ ಪಾಲಿಸಿದ ದೇವರಾಜ ಅರಸು ಅವರ ಜತೆ ಹೋಲಿಸಿಕೊಳ್ಳಬೇಡಿ ಎಂದು ಅವರು ಕುಟುಕಿದರು.

ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, ಉಪಚುನಾವಣೆ ಗೆಲ್ಲಲು ಡಿ.ಕೆ. ಶಿವಕುಮಾರ್ ಮತ್ತು ಎಂ.ಬಿ.ಪಾಟೀಲ ಅವರು 50 ಕೋಟಿ ರೂ. ಬಂಡವಾಳ ಹೂಡಿದ್ದಾರೆ. ಈ ಹಣ ಹಂಚಲು ಬೆಂಗಳೂರು, ಕನಕಪುರದಿಂದ 500ಕ್ಕೂ ಹೆಚ್ಚು ಜನರನ್ನು ಕರೆತಂದಿದ್ದಾರೆ ಎಂದು ಆರೋಪಿಸಿದರು.
ಹೊರಗಿನವರ ಮೂಲಕ ಹಣ ಹಂಚುತ್ತಿರುವುದನ್ನು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪಿಸಿ ತಿರುಗಿಬಿದ್ದಿದ್ದಾರೆ. ಅವರೆಲ್ಲರೂ ಈಗ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ನವರು ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಿಲ್ಲ. ಹರ್ಲಾಪುರದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡರೂ ಸಿಎಂ ಆದಿಯಾಗಿ ಸಚಿವರಾರು ಆ ಕುಟುಂಬದವರಿಗೆ ಸಾಂತ್ವನ ಹೇಳಲಿಲ್ಲ. ಇದಕ್ಕೆ ಸಮಯ ಸಿಗುತ್ತಿಲ್ಲವೇ ಎಂದು ಪ್ರಶ್ನಿಸಿದರು.

'ಎಸಿ ರೂಮ್‌ನಿಂದ ಪರಿಹಾರ ಸಾಧ್ಯವಿಲ್ಲ'
ರಾಜ್ಯದಲ್ಲಿ ತೀವ್ರ ಬರಗಾಲ ತಾಂಡವವಾಡುತ್ತಿದೆ. ಕುಡಿಯುವ ನೀರು ಸೇರಿ ಬರ ಪರಿಹಾರ ಕಾಮಗಾರಿ ಕೈಗೊಳ್ಳದ ಮುಖ್ಯಮಂತ್ರಿ ಕೇವಲ ವೀಡಿಯೋ ಸಂವಾದ ಮೂಲಕ ಸಭೆ ಮಾಡಿದರೆ ಸಾಲದು, ಹಳ್ಳಿಗಳಿಗೆ ಹೋಗಿ ಸಮಸ್ಯೆ ಅರಿಯಬೇಕು. ಸಿಎಂ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ನಿರ್ದೇಶನ ನೀಡಿದರೆ, ಅಧಿಕಾರಿಗಳೂ ಎಸಿಯಲ್ಲಿ ಕುಳಿತು ನಿರ್ವಹಣೆ ಮಾಡುತ್ತಾರೆ. ಇದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ರಾಜ್ಯದಲ್ಲಿ 3 ಸಾವಿರಕ್ಕೂ ಅಧಿಕ ಹಳ್ಳಿಗಳ ಜನರು ಕುಡಿಯುವ ನೀರಿಗೆ ಪರಿತಪಿಸುತ್ತಿದ್ದಾರೆ. ಜಾನುವಾರುಗಳಿಗೆ ನೀರಿನ ತೊಂದರೆ ಕಾಡುತ್ತಿದೆ. ಹಳ್ಳಿಗಳಿಗೆ ಹೋದೆ ಮಾತ್ರ ಪರಿಹಾರ ಕಲ್ಪಿಸಲು ಸಾಧ್ಯ.
-ಗೋವಿಂದ ಕಾರಜೋಳ, ಮುಧೋಳ ಶಾಸಕ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)