varthabharthi

ಬೆಂಗಳೂರು

ಭಡ್ತಿ ಮೀಸಲಾತಿ ಪಟ್ಟಿಯನ್ನು 30ದಿನದೊಳಗೆ ಪೂರ್ಣಗೊಳಿಸಲು ರಾಜ್ಯಪಾಲರ ಆದೇಶ

ವಾರ್ತಾ ಭಾರತಿ : 15 May, 2019

ಬೆಂಗಳೂರು, ಮೇ 15: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸರಕಾರಿ ನೌಕರರಿಗೆ ಭಡ್ತಿಯಲ್ಲಿ ಮೀಸಲಾತಿ ನೀಡುವ ಸಂಬಂಧ ರಾಜ್ಯ ಸರಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿದ ಬೆನ್ನಲ್ಲೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಂ.ಆರ್.ಗಾಯತ್ರಿ ಅವರು ರಾಜ್ಯ ಸಿವಿಲ್ ಸೇವಾ ಅಧಿನಿಯಮ 1973ರ ಸೆಕ್ಷನ್‌ಗಳ ಪ್ರಕಾರ ತಾತ್ಕಾಲಿಕ, ಅಂತಿಮ ಜೇಷ್ಠತಾ ಪಟ್ಟಿಗಳನ್ನು ಗರಿಷ್ಠ ಮೂವತ್ತು ದಿನಗಳೊಳಗಾಗಿ ಪೂರ್ಣಗೊಳಿಸಬೇಕೆಂದು ಸರಕಾರದ ಸ್ವಾಯತ್ತ ಸಂಸ್ಥೆಗಳಿಗೆ ಆದೇಶ ನೀಡಿದ್ದಾರೆ.

ಲೋಕಸಭಾ ಸಾರ್ವತ್ರಿಕ ಚುನಾವಣೆ ಕಾರ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿ, ನೌಕರರು ಸದರಿ ಚುನಾವಣೆಗಳ ಮಾದರಿ ನೀತಿ ಸಂಹಿತೆ ಅವಧಿ ಪೂರ್ಣಗೊಂಡ ನಂತರ ನೇಮಕ ಮಾಡಿರುವ ಸ್ಥಳಕ್ಕೆ ವರದಿ ಮಾಡಿಕೊಳ್ಳತಕ್ಕದ್ದು, ವಿಧಾನಸಭೆ ಉಪಚುನಾವಣೆ ಘೋಷಣೆಯಾಗಿರುವ ಧಾರವಾಡ ಹಾಗೂ ಕಲಬುರಗಿ ಜಿಲ್ಲೆಗಳು ಮತ್ತು ಚುನಾವಣೆ ಘೋಷಣೆಯಾಗಿರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ಥಳಕ್ಕೆ ಅಥವಾ ಅಂತಹ ಸ್ಥಳದಿಂದ ಅಧಿಕಾರಿ, ನೌಕರರ ಸ್ಥಳ ನಿಯುಕ್ತಿ ಆದೇಶಗಳನ್ನು ಮಾದರಿ ನೀತಿ ಸಂಹಿತೆ ಅವಧಿ ಪೂರ್ಣಗೊಂಡ ನಂತರ ಹೊರಡಿಸಬೇಕೆಂದು ರಾಜ್ಯಪಾಲರ ಆದೇಶದ ಅನುಸಾರ ಸರಕಾರದ ಅಧೀನ ಕಾರ್ಯದರ್ಶಿಗಳು ಆದೇಶ ನೀಡಿದ್ದಾರೆ.

ಸರಕಾರದ ಎಲ್ಲ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಯವರು ಅವರ ಆಡಳಿತ ವ್ಯಾಪ್ತಿಗೊಳಪಡುವ ಸ್ವಾಯತ್ತ ಸಂಸ್ಥೆಗಳು, ವಿವಿಗಳು, ಸಾರ್ವಜನಿಕ ಉದ್ದಿಮೆಗಳು, ಆಯೋಗ, ನಿಗಮ, ಮಂಡಳಿಗಳು ಸ್ಥಳೀಯ ಸಂಸ್ಥೆಗಳು ಮತ್ತು ಸರಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳಿಗೆ ಈ ಆದೇಶವನ್ನು ಪಾಲಿಸಲು ಸೂಚನೆಗಳನ್ನು ನೀಡಲು ತಿಳಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)