varthabharthi

ರಾಷ್ಟ್ರೀಯ

ಬಂಗಾಳದ ಮೇಲೆ ಆರೆಸ್ಸೆಸ್-ಬಿಜೆಪಿಯಿಂದ ವ್ಯವಸ್ಥಿತ ಆಕ್ರಮಣ: ಸೀತಾರಾಂ ಯಚೂರಿ

ವಾರ್ತಾ ಭಾರತಿ : 15 May, 2019

ಹೊಸದಿಲ್ಲಿ, ಮೇ 15: ಬಂಗಾಳ ಮತ್ತದರ ತತ್ವಗಳ ಮೇಲೆ ಬಿಜೆಪಿ ಮತ್ತು ಆರೆಸ್ಸೆಸ್ ವ್ಯವಸ್ಥಿತವಾಗಿ ಆಕ್ರಮಣ ನಡೆಸುತ್ತಿವೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಆರೋಪಿಸಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೋಲ್ಕತಾದಲ್ಲಿ ನಡೆಸಿದ ರೋಡ್‌ಶೋ ಸಂದರ್ಭ ನಡೆದ ಹಿಂಸಾಚಾರದಲ್ಲಿ ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರರ ಪ್ರತಿಮೆಗೆ ಹಾನಿಯಾಗಿರುವುದನ್ನು ಉಲ್ಲೇಖಿಸಿದ ಯಚೂರಿ, ಈಶ್ವರಚಂದ್ರರ ವಿಚಾರಧಾರೆಯನ್ನು ಬಿಜೆಪಿ ಸದಾ ವಿರೋಧಿಸುತ್ತಾ ಬಂದಿದೆ ಎಂದರು.

  ಇಲ್ಲಿ ಪ್ರತಿಮೆಯ ಮೇಲಷ್ಟೇ ಅಲ್ಲ, ಬಂಗಾಳದ ಮೇಲೆಯೇ ವ್ಯವಸ್ಥಿತ ದಾಳಿ ನಡೆಸಲಾಗುತ್ತಿದೆ. ಬಂಗಾಳ ನವೋದಯದ ಮಹೋನ್ನತ ಸಂಕೇತವೊಂದರ ಮೇಲೆ ಮಾತ್ರ ಬಿಜೆಪಿ-ಆರೆಸ್ಸೆಸ್ ದಾಳಿ ನಡೆದದ್ದಲ್ಲ, ಈ ಪ್ರಗತಿವಿರೋಧಿಗಳು ಯಾವಾಗಲೂ ಈಶ್ವರಚಂದ್ರರ ವಿಚಾರಧಾರೆಯ ವಿರೋಧಿಗಳಾಗಿದ್ದಾರೆ. ಆದರೆ ಇದಕ್ಕೆಲ್ಲಾ ಬಂಗಾಳ ಬಗ್ಗುವುದಿಲ್ಲ ಎಂದು ಯಚೂರಿ ಟ್ವೀಟ್ ಮಾಡಿದ್ದಾರೆ.

ವಿದ್ಯಾಸಾಗರ ಎಂಬ ಹೆಸರೇ ಸಾಗರದಷ್ಟು ಜ್ಞಾನ ಇರುವವ ಎಂಬರ್ಥ ನೀಡುತ್ತದೆ. ಬಂಗಾಳದ ನವೋದಯದ ಮಹಾನ್ ಗುರುತಾಗಿರುವ ಇವರು ಅಭಿವೃದ್ಧಿ, ಸುಧಾರಣೆ ಮತ್ತು ಜ್ಞಾನೋದಯದ ಪರವಾಗಿದ್ದರು. ಅವರ ಚಿಂತನೆಗಳನ್ನು ನಾಶಗೊಳಿಸಲು ಸಂಘ ಪರಿವಾರ ಯಾಕೆ ಬಯಸಿದೆ ಎಂಬುದು ಸ್ಪಷ್ಟವಾಗಿದೆ. ಮಂಗಳವಾರ ನಡೆದ ಹಿಂಸಾಚಾರ ಘಟನೆಗೆ ಬಿಜೆಪಿ ಹಾಗೂ ಟಿಎಂಸಿ ಪರಸ್ಪರರ ಮೇಲೆ ದೋಷಾರೋಪಣೆ ಮಾಡುತ್ತಿದೆ. ಆದರೆ ಈ ಘಟನೆ ಬಂಗಾಳದ ಹೃದಯಕ್ಕೆ ಘಾಸಿ ಎಸಗಿದೆ ಎಂದು ಯಚೂರಿ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)