varthabharthi

ಕರ್ನಾಟಕ

ಐವರ ಬಂಧನ: ಎಸ್ಪಿ ಹರೀಶ್‌ಪಾಂಡೆ

ಚಿಕ್ಕಮಗಳೂರು: ಬಾಲಕಿಯರೊಂದಿಗೆ ಮಾತನಾಡಿದ ಯುವಕರಿಬ್ಬರ ಮೇಲೆ ಹಲ್ಲೆ

ವಾರ್ತಾ ಭಾರತಿ : 15 May, 2019

ಚಿಕ್ಕಮಗಳೂರು, ಮೇ 15: ನಗರದ ಗೌರಿ ಕಾಲುವೆ ನಿವಾಸಿಗಳಾಗಿರುವ ಇಬ್ಬರು ಅಪ್ರಾಪ್ತ ಬಾಲಕಿಯರೊಂದಿಗೆ ಮಾತನಾಡಿದ ಯುವಕರಿಬ್ಬರ ಮೇಲೆ ಯುವಕರ ಗುಂಪೊಂದು ದಾಳಿ ನಡೆಸಿ ಥಳಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ 5 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹರೀಶ್‌ಪಾಂಡೆ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ಸಂಜೆ ನಗರದ ಗೌರಿ ಕಾಲುವೆ ನಿವಾಸಿಗಳಾದ ಇಬ್ಬರು ಬಾಲಕಿಯರನ್ನು ಅದೇ ಬಡಾವಣೆಯ ಇಬ್ಬರು ಯುವಕರು ಕಾರಿನಲ್ಲಿ ಕರೆದೊಯ್ದು ನಗರದ ಹೊರವಲಯದಲ್ಲಿರುವ ಗಾಲ್ಫ್ ಕ್ಲಬ್ ಹತ್ತಿರ ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ಒಂದು ಕೋಮಿನ ಯುವಕರು ಸೇರಿ ಯುವಕರೊಂದಿಗೆ ವಾಗ್ವಾದ ನಡೆಸಿದ್ದಲ್ಲದೇ ಹಿಡಿದು ಥಳಿಸಿದ್ದರು. ಇದರಿಂದ ಹೆದರಿದ ಯುವಕರು ಬಾಲಕಿಯರನ್ನು ಗೌರಿಕಾಲುವೆಯ ಅವರ ಮನೆಗೆ ಕಾರಿನಲ್ಲೇ ಕರೆತಂದು ಬಿಟ್ಟಿದ್ದಾರೆ. ಈ ವೇಳೆ ಯುವಕರನ್ನು ಮತ್ತೆ ಗೌರಿ ಕಾಲುವೆ ಬಡಾವಣೆಯಲ್ಲಿಯೇ ಅಡ್ಡಹಾಕಿ ಥಳಿಸಿದ ಹಲ್ಲೆಕೋರರು ಕಾರನ್ನು ಜಖಂಗೊಳಿಸಿದ್ದರು ಎಂದು ಎಸ್ಪಿ ತಿಳಿಸಿದರು.

ಸ್ಥಳದಲ್ಲಿ ಗಂಭೀರ ಪರಿಸ್ಥಿತಿ ನಿರ್ಮಾಣವಾಗುವ ಸಂಭವ ಇದ್ದ ಕಾರಣಕ್ಕೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಬಿಗಡಾಯಿಸಿದ್ದ ಪರಿಸ್ಥಿತಿಯನ್ನು ರಾತ್ರಿಯೇ ಹತೋಟಿಗೆ ತಂದಿದ್ದೇವೆ. ಮುಂಜಾಗ್ರತಾ ಕ್ರಮವಾಗಿ ನಗರಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ ಎಂದು ಎಸ್ಪಿಹರೀಶ್ ಪಾಂಡೆ, ಹಲ್ಲೆಗೊಳಗಾದ ಯುವಕರಿಗೆ ಗಂಭೀರ ಗಾಯಗಳಾಗಿಲ್ಲ. ಓರ್ವನಿಗೆ ಬೆನ್ನಿಗೆ ಥಳಿಸಿದ ಬರೆಗಳು ಬಿದ್ದಿವೆ. ಮತ್ತೊಬ್ಬನಿಗೆ ಮುಖ ಊದಿಕೊಂಡಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಪ್ರಕರಣದಲ್ಲಿದ್ದ ಬಾಲಕಿಯರು ಅಪ್ರಾಪ್ತರಾಗಿದ್ದಾರೆ. ಈ ಕಾರಣಕ್ಕೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದ ಅವರು, ಯುವಕರ ಮೇಲೆ ಹಲ್ಲೆ ಮಾಡಿದವರ ಪೈಕಿ ಮತ್ತೊಂದು ಕೋಮಿನ 5 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅದರಲ್ಲಿ 3 ಮಂದಿ ವಯಸ್ಕರು, ಇಬ್ಬರು ಅಪ್ರಾಪ್ತರಾಗಿದ್ದಾರೆ. ಮೂವರನ್ನು ಪೊಲೀಸ್ ವಶಕ್ಕೆ ಪಡೆದು ಉಳಿದ ಇಬ್ಬರು ಅಪ್ರಾಪ್ತರನ್ನು ಬಾಲಮಂದಿರಕ್ಕೆ ಕಳುಹಿಸಿಕೊಡಲಾಗುವುದು. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದೆ. ಅವರನ್ನು ಶೀಘ್ರದಲ್ಲಿಯೇ ಬಂಧಿಸಿ ಕಠಿಣ ಕ್ರಮ ಜರಗಿಸಲಾಗುವುದು ಎಂದು ಎಸ್ಪಿ ಹರೀಶ್ ಪಾಂಡೆ ಹೇಳಿದರು.

ಜಿಲ್ಲೆಯಲ್ಲಿ ಅಪರಾಧ, ಅಪಘಾತ ಪ್ರಕರಣಗಳನ್ನು ಪತ್ತೆ ಹಚ್ಚಲು ಅನುಕೂಲವಾಗುವಂತೆ ಜಿಲ್ಲೆಯ ವಿವಿಧ 66 ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಯೋಜನೆ ರೂಪಿಸಲಾಗಿದೆ. ಈ ಪೈಕಿ ನಗರದ 28 ಸ್ಥಳಗಳಲ್ಲಿ ಒಂದು ತಿಂಗಳೊಳಗಾಗಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ನಗರದ ಪ್ರಮುಖ 6 ಸ್ಥಳಗಳಲ್ಲಿ ವಿಶೇಷವಾದ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಈ ಕ್ಯಾಮರಾಗಳು ವಾಹನಗಳ ನಂಬರ್ ಪ್ಲೇಟ್‌ಗಳಲ್ಲಿರುವ ಸಂಖ್ಯೆಗಳನ್ನು ಸುಲಭವಾಗಿ ಪತ್ತೆ ಹಚ್ಚಲಿವೆ.
- ಹರೀಶ್ ಪಾಂಡೆ, ಎಸ್ಪಿ

ಗಾಂಜಾ ಮಾರಾಟ ಜಾಲ ಪತ್ತೆಗೆ ತಂಡ: ಎಸ್ಪಿ
ನಗರದಲ್ಲಿ ಕೆಲವು ಚಿಲ್ಲರೆ ಗಾಂಜಾ ವ್ಯಾಪಾರಿಗಳು ಕಾರ್ಯಾಚರಣೆ ಮಾಡುತ್ತಿರುವ ಶಂಕೆ ಇದೆ. ನಗರಕ್ಕೆ ಗಾಂಜಾ ಪೂರೈಸುತ್ತಿರುವ ಸಗಟು ಗಾಂಜಾ ವ್ಯಾಪಾರಿಗಳನ್ನು ಪತ್ತೆ ಹಚ್ಚಲು ತಂಡ ರಚನೆ ಮಾಡಿ ಕ್ರಮಕೈಗೊಳ್ಳಲಾಗುವುದು. ಗೋಗಳ್ಳರ ಪತ್ತೆಗೆ ಜಿಲ್ಲೆಯಲ್ಲಿ ಈಗಾಗಲೇ ಪೊಲೀಸ್ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಅಕ್ರಮವಾಗಿ ಸಾಗಿಸುತ್ತಿದ್ದ 9 ಹಸುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಹರೀಶ್ ಪಾಂಡೆ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)